ವಾಹನ ಸವಾರರೇ ಎಚ್ಚರ; ಮೈಲೇಜ್ ಡ್ರಾಪ್ ಮಾತ್ರವಲ್ಲ, ನಿಮ್ಮ ಬೈಕ್-ಕಾರನ್ನ ಸೈಲೆಂಟಾಗಿ ಕೊಲ್ಲುತ್ತಿದ್ಯಾ E20 ಪೆಟ್ರೋಲ್?
ದೇಶಾದ್ಯಂತ ಪರಿಸರ ಸ್ನೇಹಿ ಮತ್ತು ಕಚ್ಚಾ ತೈಲ ಆಮದು ಕಡಿಮೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಶೇ. 20 ರಷ್ಟು ಎಥನಾಲ್ ಮಿಶ್ರಿತ 'E20 ಪೆಟ್ರೋಲ್' ಈಗ ಹಳೆಯ ವಾಹನಗಳ ಮಾಲೀಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಆರಂಭದಲ್ಲಿ ಕೇವಲ ಮೈಲೇಜ್ ಕಡಿಮೆ ಆಗುತ್ತಿದೆ ಎಂಬ ದೂರುಗಳಿದ್ದವು, ಆದರೆ ಇತ್ತೀಚಿನ ಹೊಸ ಸಮೀಕ್ಷೆಯೊಂದು ವಾಹನಗಳ ಎಂಜಿನ್‌ನ ಆಯಸ್ಸೇ ಕ್ಷೀಣಿಸುತ್ತಿದೆ ಎಂಬ ಆತಂಕಕಾರಿ ವಿಷಯವನ್ನು ಹೊರಹಾಕಿದೆ. ಈ ಇಂಧನವು ಹಳೆಯ ವಾಹನಗಳ ಆಂತರಿಕ ಬಿಡಿಭಾಗಗಳನ್ನು ನಿಶ್ಯಬ್ದವಾಗಿ ತಿನ್ನುತ್ತಿದ್ದು, ವಾಹನಗಳ ಬಾಳಿಕೆ ಕಡಿಮೆ ಮಾಡುತ್ತಿದೆ ಎಂಬ ಸತ್ಯವನ್ನು ಬಹಿರಂಗಪಡಿಸಿದೆ.
ಸಮೀಕ್ಷೆ ಹೇಳಿದ್ದೇನು?
E20 ಪೆಟ್ರೋಲ್‌ನಿಂದ ಭಾರತೀಯ ಹಳೆಯ ವಾಹನಗಳ ಮೇಲಾಗುತ್ತಿರುವ ಭೀಕರ ಆರ್ಥಿಕ ಮತ್ತು ತಾಂತ್ರಿಕ ಪರಿಣಾಮಗಳನ್ನು ರಿವೀಲ್ ಮಾಡಿದೆ. ಖ್ಯಾತ ಸಾರ್ವಜನಿಕ ಆಭಿಪ್ರಾಯ ಸಮೀಕ್ಷಾ ಸಂಸ್ಥೆಯಾದ 'ಲೋಕಲ್‌ಸರ್ಕಲ್ಸ್' (LocalCircles) ಇತ್ತೀಚೆಗೆ ದೇಶದ 305 ಜಿಲ್ಲೆಗಳಲ್ಲಿ ವಿಸ್ತಾರವಾದ ಅಧ್ಯಯನ ನಡೆಸಿದೆ. 2023ಕ್ಕಿಂತ ಮುಂಚೆ ತಯಾರಾದ, ಅಂದರೆ E20 ಇಂಧನಕ್ಕೆ ಹೊಂದಿಕೊಳ್ಳದ (Non-E20-compatible) 44,000ಕ್ಕೂ ಹೆಚ್ಚು ಪೆಟ್ರೋಲ್ ಕಾರು ಮತ್ತು ಬೈಕ್‌ಗಳ ಮಾಲೀಕರನ್ನು ಈ ಸಮೀಕ್ಷೆಗೆ ಒಳಪಡಿಸಲಾಗಿತ್ತು. ಇದರಲ್ಲಿ ಹೊರಬಿದ್ದಿರುವ ಅಂಕಿ-ಅಂಶಗಳು ಆಟೋಮೊಬೈಲ್ ವಲಯವನ್ನೇ ಬೆಚ್ಚಿಬೀಳಿಸುವಂತಿವೆ.

ಸಮೀಕ್ಷೆಯಲ್ಲಿ ಭಾಗವಹಿಸಿದ ಶೇಕಡಾ 55 ರಷ್ಟು ವಾಹನ ಸವಾರರು, 2025ರ ಆರಂಭದಿಂದ ತಮ್ಮ ವಾಹನಗಳಲ್ಲಿ ಅತಿಯಾದ ಸವೆತ ಮತ್ತು ಪದೇ ಪದೇ ಗ್ಯಾರೇಜ್‌ಗಳಿಗೆ ಅಲೆಯುವ ತೊಂದರೆ ಎದುರಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಮೇ 2026ರಲ್ಲಿ ನಡೆದಿದ್ದ ಸಮೀಕ್ಷೆಯಲ್ಲಿ ಕೇವಲ ಶೇ. 29ರಷ್ಟು ಜನ ಮಾತ್ರ ರಿಪೇರಿ ಸಮಸ್ಯೆಯ ಬಗ್ಗೆ ಹೇಳಿದ್ದರು. ಆದರೆ ಕೇವಲ ಒಂದು ತಿಂಗಳ ಅಂತರದಲ್ಲಿ, ಅಂದರೆ ಜೂನ್ 2026ರ ಸಮೀಕ್ಷೆ ವೇಳೆಗೆ ಈ ದೂರುಗಳ ಪ್ರಮಾಣ ಶೇ. 55ಕ್ಕೆ ತಲುಪಿದೆ. ಸಮಸ್ಯೆ ವರದಿ ಮಾಡಿದವರಲ್ಲಿ ಶೇ. 24ರಷ್ಟು ಜನ ತಮಗಾಗುತ್ತಿರುವ ಆರ್ಥಿಕ ಹೊರೆಯನ್ನು 'ಮೇಜರ್ ರಿಪೇರಿ' ಎಂದು ಉಲ್ಲೇಖಿಸಿದ್ದಾರೆ. ಇನ್ನು ಶೇ. 21ರಷ್ಟು ಜನ ಮಧ್ಯಮ ಗಾತ್ರದ ಹಾನಿಯಾಗಿದೆ ಎಂದಿದ್ದಾರೆ. ಕೇವಲ ಶೇ. 38 ರಷ್ಟು ಜನರಿಗೆ ಮಾತ್ರ ಯಾವುದೇ ಅಸಹಜ ಬದಲಾವಣೆ ಕಂಡುಬಂದಿಲ್ಲ.
ಎಥನಾಲ್ ಹಳೆಯ ಎಂಜಿನ್‌ಗಳಿಗೆ ಮಾರಕವಾಗುತ್ತಿರುವುದು ಹೇಗೆ?
ವರದಿಯ ಪ್ರಕಾರ, ಭಾರತದಲ್ಲಿ ಕಳೆದ 15 ವರ್ಷಗಳಲ್ಲಿ ಮಾರಾಟವಾಗಿರುವ ಒಟ್ಟು ಪೆಟ್ರೋಲ್ ವಾಹನಗಳಲ್ಲಿ ಕೇವಲ ಶೇಕಡಾ 20ರಷ್ಟು ಮಾತ್ರ E20 ಇಂಧನಕ್ಕೆ ತಕ್ಕಂತೆ ವಿನ್ಯಾಸಗೊಂಡಿವೆ. ಉಳಿದ ಶೇ. 80ರಷ್ಟು ವಾಹನಗಳು ಕೇವಲ E5 (ಶೇ. 5) ಅಥವಾ E10 (ಶೇ. 10) ಇಂಧನವನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿವೆ. ಇವುಗಳಿಗೆ E20 ಹಾಕಿದಾಗ ಏನಾಗುತ್ತದೆ ಎಂಬ ತಾಂತ್ರಿಕ ವಿವರ ಇಲ್ಲಿದೆ.
ತುಕ್ಕು ಹಿಡಿಯುವ ಸಮಸ್ಯೆ
ಎಥನಾಲ್ ಮೂಲತಃ ಹೈಗ್ರೋಸ್ಕೋಪಿಕ್ (Hygroscopic) ಗುಣ ಹೊಂದಿದೆ. ಅಂದರೆ ಇದು ಗಾಳಿಯಲ್ಲಿರುವ ತೇವಾಂಶ ಮತ್ತು ನೀರನ್ನು ಅತ್ಯಂತ ವೇಗವಾಗಿ ಹೀರಿಕೊಳ್ಳುತ್ತದೆ. ಪೆಟ್ರೋಲ್ ಟ್ಯಾಂಕ್‌ನಲ್ಲಿ ನೀರು ಮತ್ತು ಎಥನಾಲ್ ಮಿಶ್ರಣಗೊಂಡಾಗ ಅದು ಆಮ್ಲೀಯವಾಗಿ ಬದಲಾಗುತ್ತದೆ. ಇದರಿಂದಾಗಿ ಹಳೆಯ ವಾಹನಗಳ ಕಬ್ಬಿಣದ ಪೆಟ್ರೋಲ್ ಟ್ಯಾಂಕ್, ಇಂಧನ ಪಂಪ್ (Fuel Pump) ಮತ್ತು ಇಂಜೆಕ್ಟರ್‌ಗಳ ಒಳಭಾಗದಲ್ಲಿ ತುಕ್ಕು ಹಿಡಿಯಲು ಆರಂಭವಾಗುತ್ತದೆ. ಹಳೆಯ ಇಂಜಿನ್‌ಗಳಲ್ಲಿ ಬಳಸಿರುವ ಇಂಧನ ಪೈಪ್‌ಗಳು, ಸೀಲ್‌ಗಳು ಮತ್ತು ಗ್ಯಾಸ್ಕೆಟ್‌ಗಳನ್ನು ಕೇವಲ ಶುದ್ಧ ಪೆಟ್ರೋಲ್ ತಡೆದುಕೊಳ್ಳುವ ರಬ್ಬರ್ ಹಾಗೂ ಪ್ಲಾಸ್ಟಿಕ್‌ನಿಂದ ಮಾಡಲಾಗಿರುತ್ತದೆ. ಶೇ. 20ರಷ್ಟು ತೀವ್ರತೆ ಇರುವ ಎಥನಾಲ್ ನಿರಂತರವಾಗಿ ಹರಿದಾಗ, ಈ ರಬ್ಬರ್ ಬಿಡಿಭಾಗಗಳು ಕಾಲಕ್ರಮೇಣ ಮೆತ್ತಗಾಗಿ, ಕರಗಿ ಕೊನೆಗೆ ಇಂಧನ ಸೋರಿಕೆಗೆ ಕಾರಣವಾಗುತ್ತಿವೆ. ಇದು ವಾಹನಗಳಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಳ್ಳುವ ಅಪಾಯವನ್ನೂ ಹೆಚ್ಚಿಸುತ್ತದೆ.
ಮೈಲೇಜ್ ಕಮ್ಮಿ, ಜೇಬಿಗೆ ಕತ್ತರಿ
ವಾಹನಗಳ ಸವೆತ ಒಂದೆಡೆಯಾದರೆ, ವಾಹನ ಸವಾರರ ದೈನಂದಿನ ಬಜೆಟ್‌ಗೆ ಮೈಲೇಜ್ ಕುಸಿತ ದೊಡ್ಡ ಹೊಡೆತ ನೀಡಿದೆ. ಸಮೀಕ್ಷೆಯ ಅನ್ವಯ, ಶೇ. 66ರಷ್ಟು ಹಳೆಯ ವಾಹನ ಮಾಲೀಕರು 2025ರ ಆರಂಭಕ್ಕೆ ಹೋಲಿಸಿದರೆ ತಮ್ಮ ಗಾಡಿಯ ಮೈಲೇಜ್‌ನಲ್ಲಿ ಶೇ. 10ಕ್ಕಿಂತಲೂ ಅಧಿಕ ಕುಸಿತ ಕಂಡಿದ್ದಾರೆ. ಇದರಲ್ಲಿ ಶೇ. 23ರಷ್ಟು ಜನರಿಗಂತೂ ಬರೋಬ್ಬರಿ ಶೇ. 20 ಕ್ಕೂ ಅಧಿಕ ಮೈಲೇಜ್ ಲಾಸ್ ಆಗಿದೆ. ಇನ್ನುಳಿದ ಶೇ. 23ರಷ್ಟು ಜನರಿಗೆ ಮೈಲೇಜ್ ಕಡಿಮೆಯಾಗಿದೆ.
ಎಥನಾಲ್‌ನ ಎನರ್ಜಿ ಡೆನ್ಸಿಟಿ (Energy Density) ಶುದ್ಧ ಪೆಟ್ರೋಲ್‌ಗಿಂತ ಶೇಕಡಾ 30ರಷ್ಟು ಕಡಿಮೆ ಇರುತ್ತದೆ. ಅಂದರೆ ಒಂದು ಲೀಟರ್ ಎಥನಾಲ್ ಕೊಡುವ ಶಕ್ತಿಗಿಂತ ಒಂದು ಲೀಟರ್ ಪೆಟ್ರೋಲ್ ಕೊಡುವ ಶಕ್ತಿ ಹೆಚ್ಚು. ಆದ್ದರಿಂದ ಎಂಜಿನ್ ತನ್ನ ಹಳೆಯ ಪರ್ಫಾರ್ಮೆನ್ಸ್ ಕಾಯ್ದುಕೊಳ್ಳಲು ಹೆಚ್ಚು ಇಂಧನವನ್ನು ಬಳಸಬೇಕಾಗುತ್ತದೆ. ಆಧುನಿಕ ಕಾರುಗಳಲ್ಲಿರುವಂತೆ ಪರಿಸ್ಥಿತಿಗೆ ತಕ್ಕಂತೆ ಇಂಧನ ದಹನವನ್ನು ನಿಯಂತ್ರಿಸುವ ಸ್ಮಾರ್ಟ್ 'ಅಡಾಪ್ಟಿವ್ ಎಂಜಿನ್ ಮ್ಯಾನೇಜ್‌ಮೆಂಟ್' ತಂತ್ರಜ್ಞಾನ ಹಳೆಯ ಗಾಡಿಗಳಲ್ಲಿ ಇಲ್ಲದಿರುವುದರಿಂದ ಮೈಲೇಜ್ ಕುಸಿಯುತ್ತಿದೆ.
ಈಗ ಎದುರಾಗಿರುವ ಆತಂಕ ಕೇವಲ ಮೈಲೇಜ್ ಮತ್ತು ರಿಪೇರಿ ವೆಚ್ಚ ಮಾತ್ರವಲ್ಲ, ಮುಂದಿನ ದಿನಗಳಲ್ಲಿ ಈ ಹಳೆಯ ವಾಹನಗಳು ರಸ್ತೆಗೆ ಇಳಿಯಲು ಯೋಗ್ಯವಾಗಿ ಉಳಿಯುತ್ತವೆಯೇ ಎಂಬುದು. ಏಕೆಂದರೆ, ಸರ್ಕಾರ ಇತ್ತೀಚೆಗಷ್ಟೇ ಎಥನಾಲ್ ಮಿಶ್ರಿತ ಇಂಧನಗಳನ್ನು ಪರಿಚಯಿಸಲು ಬೇಕಾದ ತಾಂತ್ರಿಕ ಕಾನೂನು ಚೌಕಟ್ಟನ್ನು ಅಧಿಕೃತವಾಗಿ ಪ್ರಕಟಿಸಿದೆ. ಇದರರ್ಥ ಸದ್ಯದಲ್ಲೇ ಪೆಟ್ರೋಲ್ ಬಂಕ್‌ಗಳಲ್ಲಿ ಎಥನಾಲ್ ಪ್ರಮಾಣ ಮತ್ತಷ್ಟು ಹೆಚ್ಚಾಗಲಿದೆ. ಸಾಮಾನ್ಯ ಪೆಟ್ರೋಲ್ ಸಿಗದೆ, ಕೇವಲ ಹೈ-ಎಥನಾಲ್ ಪೆಟ್ರೋಲ್ ಮಾತ್ರ ಸಿಗುವ ಅನಿವಾರ್ಯತೆ ನಿರ್ಮಾಣವಾದರೆ, ದೇಶದ ಕೋಟ್ಯಂತರ ಹಳೆಯ ಬೈಕ್ ಮತ್ತು ಕಾರುಗಳನ್ನು ಮಾಲೀಕರು ಅನಿವಾರ್ಯವಾಗಿ ಗುಜರಿಗೆ ಹಾಕಬೇಕಾದ ದಿನಗಳು ದೂರವಿಲ್ಲ ಎನ್ನುತ್ತಾರೆ ಆಟೋಮೊಬೈಲ್ ತಜ್ಞರು.













Click it and Unblock the Notifications