ಕತ್ತೆ ಮೇಲೆ ಚಾಡಿಕೋರನ ಮೆರವಣಿಗೆ..ಸೆಗಣಿಯಲ್ಲಿ ಬಡಿದಾಟ..ಏನಿದು ಆಚರಣೆ..?
ಚಾಮರಾಜನಗರ, ನವೆಂಬರ್ 14: ಚಾಮರಾಜನಗರ ಜಿಲ್ಲೆಯ ಗಡಿಭಾಗವಾದ ತಮಿಳುನಾಡಿನ ತಾಳವಾಡಿ ಫಿರ್ಕಾ ವ್ಯಾಪ್ತಿಯ ಗುಮಟಾಪುರ ಗ್ರಾಮದಲ್ಲಿ ದೀಪಾವಳಿ ಪ್ರಯುಕ್ತ ನಡೆಯುವ ಜಾತ್ರೆ ವಿಭಿನ್ನ ಮತ್ತು ವಿಶಿಷ್ಟವಾಗಿದೆ. ದೀಪಾವಳಿಯ ಕೊನೆಯ ದಿನವಾದ ಬಲಿಪಾಡ್ಯಮಿಯ ಮಾರನೆಯ ದಿನ ನಡೆಯುವ ಹಬ್ಬಾಚರಣೆ ಗಮನಾರ್ಹವಾಗಿದೆ.
ಇಲ್ಲಿ ಸೆಗಣಿಯಲ್ಲಿ ಬಡಿದಾಡುವುದು ಎದ್ದು ಕಂಡರೂ ಅದರಾಚೆಗೆ ಚಾಡಿಕೋರನಿಗೆ ಮುಕ್ತಿ ಕಾಣಿಸಿದರೆ ಊರವರೆಲ್ಲರೂ ಒಟ್ಟಾಗಿ ಬಾಳಲು ಸಾಧ್ಯ ಎಂಬ ಸಂದೇಶವಿರುವುದನ್ನು ತಳ್ಳಿಹಾಕುವಂತಿಲ್ಲ. ಊರಿನಲ್ಲಿ ಚಾಡಿಕೋರರಿದ್ದರೆ ಅಲ್ಲಿ ನೆಮ್ಮದಿ ನೆಲೆಸಲು ಸಾಧ್ಯವಿಲ್ಲ. ಕಾರಣ ಒಬ್ಬರ ವಿಚಾರವನ್ನು ಮತ್ತೊಬ್ಬರಿಗೆ ತಿಳಿಸಿ ಜನರ ನಡುವೆ ಸಂಘರ್ಷವನ್ನು ತಂದಿಡುತ್ತಾರೆ. ಇದರಿಂದ ಸಮಾಜದ ಸ್ವಾಸ್ಥ್ಯ ಕೆಡುತ್ತದೆ. ಇಂತಹ ಮನಸ್ಥಿತಿಯನ್ನು ದೂರ ಮಾಡುವುದು ಈ ಹಬ್ಬದಲ್ಲಿ ಕಂಡು ಬರುತ್ತದೆ.

ಚಾಡಿಕೋರನನ್ನು ಕತ್ತೆ ಮೇಲೆ ಕೂರಿಸಿ ಆತನಿಗೆ ಬೈಯ್ಯುತ್ತಾ ಮೆರವಣಿಗೆ ನಡೆಸುವುದು ಹಬ್ಬದ ಆಚರಣೆಯ ಪ್ರಮುಖ ಭಾಗವಾಗಿದೆ.
ಹಿಂದಿನ ಕಾಲದಲ್ಲಿ ಚಾಡಿಕೋರರಿಂದಾಗಿ ಊರಿಗೆ ಊರೇ ಹೊಡೆದಾಡಿಕೊಂಡ ನಿದರ್ಶನಗಳು ಬಹಳಷ್ಟಿವೆ. ಹೀಗಾಗಿ ಅಂತಹ ಚಾಡಿಕೋರನನ್ನು ಹುಡುಕಿ ಆತ ಮಾಡಿದ ತಪ್ಪಿಗಾಗಿ ಕತ್ತೆ ಮೇಲೆ ಮೆರವಣಿಗೆ ನಡೆಸುತ್ತಾ ಆತ ಮಾಡಿದ ಪಾಪದ ಕೆಲಸಕ್ಕೆ ಜನರೆಲ್ಲರೂ ಬೈದು ಮುಂದೆ ಆತ ಅಂತಹ ಕೆಲಸ ಮಾಡದಂತೆ, ಜೊತೆಗೆ ಜನ ಕೂಡ ಆತನ ಮಾತನ್ನು ನಂಬಿ ಜಗಳವಾಡದೆ ಎಲ್ಲರೂ ಒಟ್ಟಾಗಿ ಇರಲು ಇಂತಹದೊಂದು ಆಚರಣೆಯನ್ನು ಹಿರಿಯರು ತಂದಿರ ಬಹುದೇನೋ?
ಬಲಿಪಾಡ್ಯಮಿ ಮಾರನೇ ದಿನ ನಡೆಯುವ ಜಾತ್ರೆ
ಇವತ್ತು ಗುಮಟಾಪುರದಲ್ಲಿ ಹಬ್ಬದ ಆಚರಣೆ ವೇಳೆ ನಡೆಯುವ ಎರಡು ಪದ್ಧತಿಯನ್ನು ಗಮನಿಸಿದರೆ ಇದು ಗೊತ್ತಾಗಿ ಬಿಡುತ್ತದೆ. ಒಂದು ಚಾಡಿಕೋರನ ಕತ್ತೆ ಮೆರವಣಿಗೆ ಮತ್ತೊಂದು ಸೆಗಣಿಯ ಬಡಿದಾಟ. ಬಹುಶಃ ಚಾಡಿಕೋರನಿಂದಲೇ ಜನ ಸೆಗಣಿಯಲ್ಲಿ ಬಡಿದಾಡಿಕೊಂಡಿರ ಬಹುದೇನೋ ಅದು ಏನೇ ಇರಲಿ.

ಇವತ್ತು ಗುಮಟಾಪುರದಲ್ಲಿ ಹಬ್ಬವನ್ನು ಖುಷಿಯಾಗಿ ಆಚರಿಸುತ್ತಾರೆ. ಸೆಗಣಿಯಲ್ಲಿ ಬಡಿದುಕೊಂಡರೂ ಅದರಲ್ಲೂ ಖುಷಿಯಿದೆ. ಇಲ್ಲಿನವರು ಇದನ್ನು ಗೋರೆಹಬ್ಬ ಎಂದು ಕರೆಯುತ್ತಾರೆ. ಪ್ರತಿವರ್ಷ ದೀಪಾವಳಿಯ ಬಲಿಪಾಡ್ಯಮಿ ಹಬ್ಬವಾದ ಮಾರನೇ ದಿನ ಆಚರಣೆ ನಡೆಯುತ್ತದೆ.
ಈ ಹಬ್ಬಕ್ಕಾಗಿ ಕೆಲವು ದಿನಗಳ ಹಿಂದಿನಿಂದಲೇ ತಯಾರಿ ಆರಂಭವಾಗುತ್ತದೆ. ಜನರೆಲ್ಲರೂ ಸೇರಿ ತಮ್ಮ ದನಗಳ ಸೆಗಣಿಯನ್ನು ಗ್ರಾಮದ ದೇವಸ್ಥಾನದ ಬಳಿ ಸುರಿದು ಗುಡ್ಡೆ ಮಾಡುತ್ತಾರೆ. ಇದೇ ವೇಳೆ ಮಕ್ಕಳು ಮನೆಗಳಿಂದ ಬೇಡಿ ತಂದ ಎಣ್ಣೆಯಿಂದ ಪೂಜೆ ಸಲ್ಲಿಸುತ್ತಾರೆ. ನಂತರ ಸಮೀಪದಲ್ಲಿಯೇ ಇರುವ ಕಾರಪ್ಪ ದೇವರಿಗೂ ಪೂಜೆ ನಡೆಯುತ್ತದೆ. ಇದೇ ವೇಳೆಗೆ ಗ್ರಾಮಸ್ಥರೆಲ್ಲ ಸೇರಿ ಚಾಡಿಕೋರನನ್ನು ತಯಾರಿ ಮಾಡುತ್ತಾರೆ. ಆತನಿಗೆ ಆತನಿಗೆ ಹುಲ್ಲಿನಿಂದ ತಯಾರಿಸಿದ್ದ ಮೀಸೆಯನ್ನು, ಗಡ್ಡವನ್ನು ಕಟ್ಟಿ ಕತ್ತೆ ಮೇಲೆ ಕೂರಿಸಲಾಗುತ್ತದೆ.
ಕತ್ತೆ ಮೇಲೆ ಚಾಡಿಕೋರನ ಮೆರವಣಿಗೆ
ಬಳಿಕ ಚಾಡಿಕೋರನನ್ನು ಗ್ರಾಮದ ಕೆರೆಯಿಂದ ಬೀರೇಶ್ವರನ ದೇವಸ್ಥಾನದವರೆಗೂ ಮೆರವಣಿಗೆಯಲ್ಲಿ ಅಶ್ಲೀಲ ಪದಗಳಿಂದ ನಿಂದಿಸುತ್ತಾ ಕರೆತರಲಾಗುತ್ತದೆ. ಮೆರವಣಿಗೆ ಬಳಿಕ ಆತನ ಹುಲ್ಲಿನ ಮೀಸೆ ಹಾಗೂ ಗಡ್ಡ ತೆಗೆದು ಸಗಣಿ ರಾಶಿಯಲ್ಲಿ ಇರಿಸಿ ಬೀರೇಶ್ವರನಿಗೆ ಪೂಜೆ ಸಲ್ಲಿಸಿದ ನಂತರ ಸೆಗಣಿಯಲ್ಲಿ ಹೊಡೆದಾಟ ಆರಂಭವಾಗುತ್ತದೆ.

ಈ ವೇಳೆ ಗ್ರಾಮದ ಯುವಕರು ಸೆಗಣಿಯನ್ನು ಉಂಡೆ ಮಾಡಿಕೊಂಡು ಒಬ್ಬರಿಗೊಬ್ಬರು ಹೊಡೆದಾಡಿಕೊಳ್ಳುತ್ತಾರೆ. ಇನ್ನು ಕೆಲವರು ಸೆಗಣಿ ರಾಶಿಯಲ್ಲಿ ಉರುಳಾಡುತ್ತಾರೆ. ಇದಾದ ಬಳಿಕ ಚಾಡಿಕೋರ ಗುಡ್ಡದಲ್ಲಿ ಹಿಡಿಕಟ್ಟೆಗಳಿಂದ ಗೊಂಬೆಯೊಂದನ್ನು ನಿರ್ಮಿಸಿ ಸುಡಲಾಗುತ್ತದೆ. ಆ ನಂತರ ಸಗಣಿಯಾಟದಲ್ಲಿ ಭಾಗವಹಿಸಿದ್ದ ಯುವಕರು ಕೆರೆಗೆ ತೆರಳಿ ಸ್ನಾನ ಮಾಡಿ ಮನೆಗಳಿಗೆ ತೆರಳುತ್ತಾರೆ. ಅಲ್ಲಿಗೆ ಹಬ್ಬದ ಆಚರಣೆಯೂ ಮುಗಿದು ಹೋಗುತ್ತದೆ.
ಸೆಗಣಿ ಹಬ್ಬದ ಆಚರಣೆ ಬಗ್ಗೆ ದಂತಕಥೆಯೊಂದು ಪ್ರಚಲಿತದಲ್ಲಿರುವುದನ್ನು ನಾವು ಕಾಣಬಹುದಾಗಿದೆ. ಅದು ಏನೆಂದರೆ ಗುಮಟಾಪುರ ಗೌಡರ ಮನೆಗೆ ಜೋಳಿಗೆ ಹಿಡಿದು ಬಂದಿದ್ದ ವ್ಯಕ್ತಿಯೊಬ್ಬ ಕೆಲಸಕ್ಕೆ ಸೇರಿಕೊಂಡಿದ್ದನಂತೆ. ಅವನು ಸತ್ತ ಬಳಿಕ ಆ ಜೋಳಿಗೆಯನ್ನು ಗೌಡರು ತಿಪ್ಪೆ ಎಸೆದರಂತೆ. ಒಂದು ದಿನ ಗೌಡರು ಅದೇ ಮಾರ್ಗವಾಗಿ ಎತ್ತಿಗಾಡಿಯಲ್ಲಿ ಹೋಗುವಾಗ ಗಾಡಿ ತಿಪ್ಪೆ ಮೇಲೆ ಹಾದು ಹೋಗುತ್ತಿದ್ದಂತೆಯೇ ತಿಪ್ಪೆಯಲ್ಲಿ ಎಸೆಯಲಾಗಿದ್ದ ಜೋಳಿಗೆಯು ಗಾಡಿ ಚಕ್ರಕ್ಕೆ ಸಿಲುಕಿ ಗಾಡಿ ಮುಂದೆ ಹೋಗದೆ ಅಲ್ಲಿಯೇ ನಿಂತು ಬಿಡುತ್ತದೆ.
ದೋಷ ನಿವಾರಣೆಗೆ ಸೆಗಣಿ ಹಬ್ಬ ಆಚರಣೆ
ಈ ಘಟನೆಯಿಂದ ಅಚ್ಚರಿಯಿಂದ ಗೌಡರು ಗಾಡಿಯಿಂದ ಕೆಳಗಿಳಿದ ನೋಡಿದಾಗ ಎತ್ತಿನಗಾಡಿಗೆ ಸಿಕ್ಕಿಹಾಕಿಕೊಂಡಿರುವ ಜೋಳಿಗೆ ಕಾಣಿಸುತ್ತದೆ. ಅಷ್ಟೇ ಅಲ್ಲದೆ ಆ ಜೋಳಿಗೆಯನ್ನು ತಾನೇ ತಿಪ್ಪೆಗೆ ಎಸೆದಿದ್ದು ನೆನಪಾಗುತ್ತದೆ. ತಿಪ್ಪೆಗುಂಡಿ ಬಳಿಯೇ ಇದ್ದ ಶಿವಲಿಂಗಕ್ಕೆ ಗಾಡಿ ತಾಗಿ ಶಿವಲಿಂಗದಿಂದ ರಕ್ತ ಬರುತ್ತದೆ. ಅಂದು ರಾತ್ರಿ ಮಲಗಿದ್ದ ಗೌಡರಿಗೆ ಕನಸಿನಲ್ಲಿ ದೇವರು ಕಾಣಿಸಿಕೊಂಡು ಈ ದೋಷ ನಿವಾರಣೆಗಾಗಿ ಗ್ರಾಮದಲ್ಲಿ ಗುಡಿಯೊಂದನ್ನು ನಿರ್ಮಿಸಬೇಕು.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸೆಗಣಿ ಹಬ್ಬ ಆಚರಿಸುವಂತೆ ಸೂಚಿಸಿದರಂತೆ ಅಂದಿನಿಂದ ಆಚರಣೆ ನಡೆದುಕೊಂಡು ಬಂದಿದೆಯಂತೆ. ಅದು ಏನೇ ಇರಲಿ ತಲತಲಾಂತರದಿಂದ ಹಬ್ಬ ನಡೆಯುತ್ತಾ ಬಂದಿದ್ದು, ಹಿರಿಯರು ಆಚರಿಸಿಕೊಂಡು ಬಂದಿದ್ದ ಅವತ್ತಿನ ಸಂಪ್ರದಾಯವನ್ನು ಇವತ್ತಿಗೂ ಮುಂದುವರೆಸಿಕೊಂಡು ಹೋಗಲಾಗುತ್ತಿದೆ. ಇಲ್ಲಿ ಯಾವುದೇ ಬೇಧ ಭಾವವಿಲ್ಲದೆ ಜನರೆಲ್ಲರೂ ಒಟ್ಟಿಗೆ ಕಲೆತು ಹಬ್ಬ ಆಚರಣೆ ಮಾಡುವುದು ವಿಶೇಷವಾಗಿದೆ.












Click it and Unblock the Notifications