ವರ್ಕ್ ಫ್ರಮ್ ಹೋಮ್ ರದ್ದಾದ ಸಿಟ್ಟಿಗೆ ಕೆಲಸ ನಿಲ್ಲಿಸಿದ ಟೆಕ್ಕಿ.. ಆದ್ರೂ ಸಿಕ್ತು ಪ್ರಮೋಷನ್!
2020ರಿಂದ ರಿಮೋಟ್ ವರ್ಕ್ ಅಂದರೆ ವರ್ಕ್ ಫ್ರಮ್ ಹೋಮ್ ಮಾಡುತ್ತಿದ್ದ ಸಾಫ್ಟ್‌ವೇರ್ ಉದ್ಯೋಗಿಯೊಬ್ಬನ ಕಥೆ ಇದು. 2026ರ ಆರಂಭದಲ್ಲಿ ಆತನ ಕಂಪನಿಯ ಆಡಳಿತ ಮಂಡಳಿಯಲ್ಲಿ ಕೆಲವು ಬದಲಾವಣೆಗಳಾದವು. ಆತ ಕೆಲಸ ಮಾಡುತ್ತಿದ್ದ ಅತ್ಯುತ್ತಮ ತಂಡವನ್ನು ಬೇರೆ ಬೇರೆ ಮಾಡಲಾಯಿತು. ಹೊಸ ಅಧಿಕಾರಿಗಳು ಬಂದರು, ಜೊತೆಗೆ 'ಕಡ್ಡಾಯವಾಗಿ ಕಚೇರಿಗೆ ಮರಳಬೇಕು' ಎಂಬ ಕಠಿಣ ಆದೇಶವೂ ಬಂತು. ಅಲ್ಲಿಂದ ಆತ ಮಾನಸಿಕವಾಗಿ ತನ್ನ ಕೆಲಸದಿಂದ ದೂರವಾದ.
ರೆಡ್ಡಿಟ್‌ನಲ್ಲಿ ವೈರಲ್ ಆದ ಕಥೆ
ರೆಡ್ಡಿಟ್‌ನಲ್ಲಿ ವೈರಲ್ ಆಗಿರುವ ಪೋಸ್ಟ್ ಪ್ರಕಾರ, ಕಚೇರಿಗೆ ಹೋಗಬೇಕಾದ ದಿನಗಳಲ್ಲಿ ಮಾತ್ರ ಆತ ಬಹಳ ಚುರುಕಾಗಿ ಕಾಣಿಸಿಕೊಳ್ಳುತ್ತಿದ್ದ. ಸಹೋದ್ಯೋಗಿಗಳೊಂದಿಗೆ ಬೆರೆಯುವುದು, ಮೀಟಿಂಗ್‌ಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದು ಮತ್ತು ತಾನು ಕೆಲಸ ಮಾಡುತ್ತಿದ್ದೇನೆ ಎಂದು ಎಲ್ಲರ ಕಣ್ಣಿಗೆ ಕಾಣುವಂತೆ ನೋಡಿಕೊಳ್ಳುತ್ತಿದ್ದ. ಆದರೆ ಮನೆಯಿಂದ ಕೆಲಸ ಮಾಡುವ ದಿನ? ಆತ ದಿನಕ್ಕೆ ಕೇವಲ ಒಂದು ಗಂಟೆ ಮಾತ್ರ ಇಮೇಲ್‌ಗಳಿಗೆ ಉತ್ತರಿಸುತ್ತಿದ್ದ. ಉಳಿದ ಸಮಯವನ್ನು ಸ್ನೇಹಿತರೊಂದಿಗೆ 'ಓಲ್ಡ್ ಸ್ಕೂಲ್ ರೂನ್‌ಸ್ಕೇಪ್' ಎಂಬ ವಿಡಿಯೋ ಗೇಮ್ ಆಡುತ್ತಾ ಕಳೆಯುತ್ತಿದ್ದ.

ಅಚ್ಚರಿಯೆಂದರೆ, ಕೆಲವೇ ವಾರಗಳಲ್ಲಿ ಆತನಿಗೆ ಬಡ್ತಿ ಮತ್ತು ಸಂಬಳದ ಹೆಚ್ಚಳವೂ ಸಿಕ್ಕಿತು! ಆತನ ಹೊಸ ಮ್ಯಾನೇಜರ್ ಆತನನ್ನು "ಅತ್ಯುತ್ತಮ ಮತ್ತು ಬುದ್ಧಿವಂತ" ಉದ್ಯೋಗಿ ಎಂದು ಬಣ್ಣಿಸಿದರು. ಆತ ತನ್ನ ಕೆಲಸದ ರೀತಿಯನ್ನು ಬದಲಿಸಿರಲಿಲ್ಲ, ಬದಲಿಗೆ ಹೊಸ ಮ್ಯಾನೇಜ್‌ಮೆಂಟ್ ಕಣ್ಣಿಗೆ ತಾನು ಹೇಗೆ ಕಾಣಿಸಿಕೊಳ್ಳಬೇಕು ಎಂಬ ತಂತ್ರವನ್ನು ಬದಲಾಯಿಸಿದ್ದ ಅಷ್ಟೇ.
ಇದು ಒಬ್ಬನ ಕಥೆಯಲ್ಲ, ಐಟಿ ವಲಯದ ನೈಜ ಚಿತ್ರಣ
ಇದು ಕೇವಲ ಒಬ್ಬ ವ್ಯಕ್ತಿಯ ಕಥೆಯಲ್ಲ, ಅಂಕಿಅಂಶಗಳೂ ಇದನ್ನೇ ಹೇಳುತ್ತಿವೆ. 2023 ರ ಗ್ಯಾಲಪ್ ಸಮೀಕ್ಷೆಯ ಪ್ರಕಾರ, ಅಮೆರಿಕದ ಶೇಕಡಾ 50 ರಷ್ಟು ಉದ್ಯೋಗಿಗಳು ತಮ್ಮ ಕೆಲಸದಲ್ಲಿ ಆಸಕ್ತಿ ಕಳೆದುಕೊಂಡಿದ್ದಾರೆ. ಇದರಿಂದ ಕಂಪನಿಗಳಿಗೆ ಬರೋಬ್ಬರಿ 1.9 ಟ್ರಿಲಿಯನ್ ಡಾಲರ್ ನಷ್ಟವಾಗುತ್ತಿದೆ. ಅಮೆರಿಕನ್ ಜರ್ನಲ್ ಆಫ್ ಮ್ಯಾನೇಜ್‌ಮೆಂಟ್ ಅಧ್ಯಯನದ ಪ್ರಕಾರ, ಕಚೇರಿಯ ಆಡಳಿತ ಬದಲಾದಾಗ ಅಥವಾ ಪುನರ್‌ರಚನೆಗೊಂಡಾಗ ಉದ್ಯೋಗಿಗಳಲ್ಲಿ 'ಕ್ವೈಟ್ ಕ್ವಿಟ್ಟಿಂಗ್' ಪ್ರವೃತ್ತಿ ಹೆಚ್ಚಾಗುತ್ತದೆ. ಈ ಟೆಕ್ಕಿಯ ಹಳೆಯ ಮ್ಯಾನೇಜರ್‌ಗೆ ಆತನ ಶ್ರಮದ ಅರಿವಿತ್ತು, ಆದರೆ ಹೊಸ ಮ್ಯಾನೇಜ್‌ಮೆಂಟ್‌ಗೆ ಅದು ತಿಳಿದಿರಲಿಲ್ಲ. ಹೀಗಾಗಿ ಆತ ಕೆಲಸದ ಬಗ್ಗೆ ತಲೆಕೆಡಿಸಿಕೊಳ್ಳುವುದನ್ನೇ ಬಿಟ್ಟ.
ಕಾರ್ಪೊರೇಟ್ ಕಂಪನಿಗಳ ಅಸಲಿ ಮುಖ
ಕಾರ್ಪೊರೇಟ್ ಕಂಪನಿಗಳು ಉದ್ಯೋಗಿಗಳ ಸಾಮರ್ಥ್ಯವನ್ನು ಹೇಗೆ ಅಳೆಯುತ್ತವೆ ಎಂಬುದನ್ನು ಈ ಘಟನೆ ಎತ್ತಿ ತೋರಿಸುತ್ತದೆ. ಈ ಉದ್ಯೋಗಿ ಮನೆಯಲ್ಲಿ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ಆದರೆ ಕಚೇರಿಯಲ್ಲಿ ಆತ ಸಕ್ರಿಯವಾಗಿ ಕಾಣಿಸಿಕೊಂಡಿದ್ದೇ ಆತನಿಗೆ ವರದಾನವಾಯಿತು. ಆತನ ಕೆಲಸದ ಔಟ್‌ಪುಟ್ ಗಿಂತ, ಕಚೇರಿಯಲ್ಲಿನ ಆತನ ಭೌತಿಕ ಉಪಸ್ಥಿತಿಯನ್ನು ಮ್ಯಾನೇಜ್‌ಮೆಂಟ್ ಹೆಚ್ಚು ಗಮನಿಸಿತು.
ಕಚೇರಿಗೆ ಮರಳುವ ನೀತಿಯನ್ನು ಸಮರ್ಥಿಸಿಕೊಳ್ಳುವ ಕಂಪನಿಗಳಲ್ಲಿ ಈ ದೋಷ ಹೆಚ್ಚಾಗಿ ಕಂಡುಬರುತ್ತದೆ. ಯಾರು ಕಚೇರಿಯಲ್ಲಿ ಮ್ಯಾನೇಜರ್‌ಗಳ ಕಣ್ಣಿಗೆ ಕಾಣುವಂತೆ ಆಕ್ಟಿವ್ ಆಗಿರುತ್ತಾರೋ, ಅವರು ಮನೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವವರಿಗಿಂತ ಹೆಚ್ಚು ಲಾಭ ಪಡೆಯುತ್ತಾರೆ. ಈ ಉದ್ಯೋಗಿ 'ಕ್ಯಾಚ್-ಅಪ್ ಡೇಸ್' ಎಂದು ಹೇಳಿಕೊಂಡು, ಎರಡು ವಾರಗಳ ಕೆಲಸವನ್ನು ಒಂದೇ ದಿನದಲ್ಲಿ ಮುಗಿಸಿ ಯಾರಿಗೂ ಅನುಮಾನ ಬಾರದಂತೆ ನೋಡಿಕೊಳ್ಳುತ್ತಿದ್ದ.
ಯುವ ಉದ್ಯೋಗಿಗಳ ಮೇಲಿನ ಪ್ರಭಾವ
ಸಾಂಕ್ರಾಮಿಕ ರೋಗದ ಸಮಯದಲ್ಲಿ ಸಿಕ್ಕಿದ್ದ 'ರಿಮೋಟ್ ವರ್ಕ್' ಸ್ವಾತಂತ್ರ್ಯವನ್ನು ಕಸಿದುಕೊಂಡಿದ್ದೇ ಈ ಕ್ವೈಟ್ ಕ್ವಿಟ್ಟಿಂಗ್ ಟ್ರೆಂಡ್‌ಗೆ ಮುಖ್ಯ ಕಾರಣ ಎಂದು ಗ್ಯಾಲಪ್ ಸಮೀಕ್ಷೆ ಹೇಳುತ್ತದೆ. ಅದರಲ್ಲೂ ವಿಶೇಷವಾಗಿ ಮಿಲೆನಿಯಲ್ ಮತ್ತು ಜನ್ ಜೀ ಉದ್ಯೋಗಿಗಳಿಗೆ ಇದು ದೊಡ್ಡ ಹೊಡೆತ ನೀಡಿದೆ. ಅವರು ಫಲಿತಾಂಶ ಆಧಾರಿತ ಫ್ಲೆಕ್ಸಿಬಲ್ ಕೆಲಸಕ್ಕೆ ಒಗ್ಗಿಕೊಂಡಿದ್ದಾರೆ. ಏಕಾಏಕಿ ಕಚೇರಿಯ ಒಂದು ನಿರ್ದಿಷ್ಟ ಕುರ್ಚಿಯಲ್ಲಿ ಕೂತು ಕೆಲಸ ಮಾಡಬೇಕು ಎಂಬ ನಿಯಮ ಅವರಿಗೆ ಶಿಕ್ಷೆಯಂತೆ ಕಾಣುತ್ತಿದೆ. ತಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತಿಲ್ಲ ಎಂದಾಗ, ಜನರು ಕೆಲಸ ಮಾಡುವುದನ್ನು ನಿಲ್ಲಿಸುತ್ತಾರೆ.
"ಕೆಲಸವನ್ನು ಅತಿಯಾಗಿ ಗಂಭೀರವಾಗಿ ತೆಗೆದುಕೊಳ್ಳಬಾರದು ಎಂಬುದನ್ನು ಇದು ಕಲಿಸಿತು" ಎನ್ನುತ್ತಾನೆ ಆತ. ಇದು ಕೆಲವರಿಗೆ ವಿಚಿತ್ರ ಎನಿಸಿದರೂ, ತಮ್ಮ ನಿಷ್ಠೆಗೆ ತಕ್ಕ ಗೌರವ ಸಿಗದ ಲಕ್ಷಾಂತರ ಉದ್ಯೋಗಿಗಳಿಗೆ ಇದೊಂದು ಕಾಮನ್ ಸೆನ್ಸ್‌ನಂತೆ ಕಾಣುತ್ತಿದೆ.












Click it and Unblock the Notifications