ಬೆಂಗಳೂರು ಏರ್‌ಪೋರ್ಟ್ ಲೌಂಜ್ ಆಹಾರದಲ್ಲಿ ಹುಳು ಪತ್ತೆ? ಅದು ಹುಳುವಲ್ಲ, ಮೊಳಕೆ ಕಾಳು ಎಂದ ಆಡಳಿತ ಮಂಡಳಿ
ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (KIA) ಟರ್ಮಿನಲ್-2ರಲ್ಲಿರುವ 080 ಇಂಟರ್‌ನ್ಯಾಷನಲ್ ಲೌಂಜ್‌ನಲ್ಲಿ ನೀಡಲಾದ ಆಹಾರದಲ್ಲಿ ಹುಳುಗಳು ಪತ್ತೆಯಾಗಿವೆ ಎಂದು ಪ್ರಯಾಣಿಕರೊಬ್ಬರು ಮಾಡಿರುವ ಆರೋಪ ಸೋಶಿಯಲ್ ಮೀಡಿಯಾಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು.
ಆದರೆ, ಈ ವಿವಾದಕ್ಕೆ ತಕ್ಷಣವೇ ಸ್ಪಂದಿಸಿರುವ ವಿಮಾನ ನಿಲ್ದಾಣದ ಆಡಳಿತ ಮಂಡಳಿ (BIAL), ಅಡುಗೆಮನೆ ಪರಿಶೀಲನೆ ನಡೆಸಿದ ಬಳಿಕ "ಆಹಾರದಲ್ಲಿ ಕಂಡುಬಂದಿದ್ದು ಹುಳುಗಳಲ್ಲ, ಬದಲಾಗಿ ಬೇಯಿಸಿದ ಮೊಳಕೆ ಕಟ್ಟಿದ ಬೇಳೆ" ಎಂದು ಸ್ಪಷ್ಟನೆ ನೀಡಿದೆ.

ಜರ್ಮನಿ ವಿಮಾನ ಏರುವ ಮುನ್ನ ಆಘಾತ: 080 ಇಂಟರ್‌ನ್ಯಾಷನಲ್ ಲೌಂಜ್ ವಿರುದ್ಧ ದೂರು
ನವೆಂಬರ್ 23ರಂದು ಬೆಂಗಳೂರಿನ ನಿವಾಸಿ ರಾಜೀವ್ ತಿವಾರಿ ಎಂಬುವವರು ಎಕ್ಸ್‌ನಲ್ಲಿ ಆಹಾರದ ಫೋಟೋಗಳನ್ನ ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದರು. ತಮ್ಮ ಪುತ್ರಿ ಜರ್ಮನಿಗೆ ತೆರಳುವ ವಿಮಾನ ಏರುವ ಮುನ್ನ ಟರ್ಮಿನಲ್-2ರ 080 ಇಂಟರ್‌ನ್ಯಾಷನಲ್ ಲೌಂಜ್‌ನಲ್ಲಿ ಊಟ ಮಾಡಿದ್ದರು. ಸ್ವಲ್ಪ ಊಟ ಸೇವಿಸಿದ ಬಳಿಕ ಅದರಲ್ಲಿ ಹುಳುಗಳು ಕಾಣಿಸಿಕೊಂಡವು ಎಂದು ಅವರು ದೂರಿದ್ದರು.
Maggots found in food at the 080 International Lounge, T2 Bengaluru Airport, right before my daughter’s flight to Germany. She ate some before realizing it was spoilt. Unacceptable hygiene! @BLRAirport @fssaiindia must inspect immediately. Photos attached. https://t.co/O9Jrvp0oaP
— Rajiv Tiwari (@RajivT1311) November 23, 2026
"ಬೆಂಗಳೂರು ಏರ್‌ಪೋರ್ಟ್ ಟಿ2 ಲೌಂಜ್‌ನ ಆಹಾರದಲ್ಲಿ ಹುಳುಗಳು ಪತ್ತೆಯಾಗಿವೆ. ಆಹಾರ ಕೆಟ್ಟುಹೋಗಿದೆ ಎಂದು ತಿಳಿಯುವ ಮುನ್ನವೇ ನನ್ನ ಮಗಳು ಸ್ವಲ್ಪ ತಿಂದಿದ್ದಾಳೆ. ಇದು ನಿಜವಾಗಲೂ ಒಪ್ಪಲಾಗುವುದಿಲ್ಲ" ಎಂದು ಬರೆದುಕೊಂಡಿದ್ದ ತಿವಾರಿ, ಬೆಂಗಳೂರು ವಿಮಾನ ನಿಲ್ದಾಣ ಹಾಗೂ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವನ್ನ (FSSAI) ಟ್ಯಾಗ್ ಮಾಡಿ ತಕ್ಷಣ ತನಿಖೆ ನಡೆಸುವಂತೆ ಒತ್ತಾಯಿಸಿದ್ದರು.
ಹುಳುವಲ್ಲ, ಮೊಳಕೆ ಕಟ್ಟಿದ ಬೇಳೆ: ಬಿಐಎಎಲ್ ಸ್ಪಷ್ಟನೆಯಲ್ಲಿ ಏನಿದೆ?
ಪ್ರಯಾಣಿಕರ ಪೋಸ್ಟ್ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕೃತ ತಂಡವು ಲೌಂಜ್‌ನ ಅಡುಗೆಮನೆ ಹಾಗೂ ಆಹಾರ ಪದಾರ್ಥಗಳನ್ನ ಪರಿಶೀಲಿಸಿತು. ಬಳಿಕ ನವೆಂಬರ್ 24ರಂದು ಎಕ್ಸ್ ಮೂಲಕವೇ ಬಿಐಎಎಲ್ ಸ್ಪಷ್ಟನೆ ನೀಡಿದ್ದು, ಪ್ರಯಾಣಿಕರ ಆರೋಪವನ್ನ ನಿರಾಕರಿಸಿದೆ.
@RajivT1311 Hello @RajivT1311, the relevant teams have investigated and found that the dish was prepared using sprouted dal, and the cooked germinated lentil may have been mistaken for a foreign object. The well-being of passengers is our priority, and we continuously conduct strict (1/2)
— BLR Airport (@BLRAirport) November 24, 2026
"ನಮ್ಮ ಸಂಬಂಧಪಟ್ಟ ತಂಡಗಳು ಈ ದೂರಿನ ಬಗ್ಗೆ ತನಿಖೆ ನಡೆಸಿವೆ. ಆ ಖಾದ್ಯವನ್ನ ಮೊಳಕೆ ಕಟ್ಟಿದ ಬೇಳೆ ಬಳಸಿ ತಯಾರಿಸಲಾಗಿತ್ತು. ಬೇಯಿಸಿದ ಮೊಳಕೆ ಬೇಳೆಯು ನೋಡಲು ಬೇರೆ ಹುಳುವಿನಂತೆ ಕಂಡು ತಪ್ಪು ತಿಳುವಳಿಕೆ ಉಂಟಾಗಿರಬಹುದು" ಎಂದು ವಿಮಾನ ನಿಲ್ದಾಣದ ಆಡಳಿತ ಮಂಡಳಿ ವಿವರಿಸಿದೆ.
ಆಹಾರ ಸುರಕ್ಷತೆಗೆ ಮೊದಲ ಆದ್ಯತೆ ಎಂದ ವಿಮಾನ ನಿಲ್ದಾಣದ ಆಡಳಿತ ಮಂಡಳಿ
ಪ್ರಯಾಣಿಕರ ಆರೋಗ್ಯ ಮತ್ತು ಆಹಾರ ಸುರಕ್ಷತೆಗೆ ತಾವು ಸದಾ ಮೊದಲ ಆದ್ಯತೆ ನೀಡುವುದಾಗಿ ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ ಭರವಸೆ ನೀಡಿದೆ. "ವಿಮಾನ ನಿಲ್ದಾಣದ ಎಲ್ಲಾ ಲೌಂಜ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಉನ್ನತ ಮಟ್ಟದ ಶುಚಿತ್ವ ಹಾಗೂ ಗುಣಮಟ್ಟವನ್ನ ಕಾಯ್ದುಕೊಳ್ಳಲು ನಿರಂತರವಾಗಿ ಕಠಿಣ ತಪಾಸಣೆ (Audits) ನಡೆಸಲಾಗುತ್ತಿದೆ. ಮುಂದೆಯೂ ಆಹಾರ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು" ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನ ನಿಲ್ದಾಣವು ಮೊಳಕೆ ಬೇಳೆ ಎಂದು ಸ್ಪಷ್ಟನೆ ನೀಡಿದ್ದರೂ, ಪ್ರಯಾಣಿಕರ ಈ ದೂರು ಲೌಂಜ್‌ಗಳಲ್ಲಿ ನೀಡುವ ಆಹಾರದ ಗುಣಮಟ್ಟದ ಕುರಿತು ನೆಟ್ಟಿಗರಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ.




Click it and Unblock the Notifications
