ಮಿಸ್ ಯೂನಿವರ್ಸ್ ಆದ ಪ್ಯೂಟೋ ರಿಕಾ ಇರೋದೆಲ್ಲಿ? 6 ಬಾರಿ ವಿಶ್ವಸುಂದರಿ ಪಟ್ಟ ಮುಡಿಗೇರಿಸಿಕೊಂಡ ಈ ದೇಶದ ಸ್ಪೆಷಾಲಿಟಿ ಏನು?
ಸ್ಯಾನ್ ಜುವಾನ್: 75ನೇ ಆವೃತ್ತಿಯ ಪ್ರತಿಷ್ಠಿತ ಮಿಸ್ ಯೂನಿವರ್ಸ್ 2026ರ ಕಿರೀಟವನ್ನ ಪ್ಯೂರ್ಟೊ ರಿಕೊದ ಸುಂದರಿ ಜೆನಿಫರ್ ಬ್ಯಾರೆಟೊ ಮುಡಿಗೇರಿಸಿಕೊಂಡಿದ್ದಾರೆ. ತವರು ನೆಲದಲ್ಲೇ ನಡೆದ ಸ್ಪರ್ಧೆಯಲ್ಲಿ ಅವರು ವಿಶ್ವಸುಂದರಿ ಪಟ್ಟ ಅಲಂಕರಿಸಿದ್ದು, ಈ ಮೂಲಕ ಪ್ಯೂರ್ಟೊ ರಿಕೊ ಬರೋಬ್ಬರಿ 6ನೇ ಬಾರಿಗೆ ಮಿಸ್ ಯೂನಿವರ್ಸ್ ಕಿರೀಟ ಗೆದ್ದು ಇತಿಹಾಸ ನಿರ್ಮಿಸಿದೆ.
ಈ ಗೆಲುವಿನ ಬೆನ್ನಲ್ಲೇ ಜಗತ್ತಿನಾದ್ಯಂತ ಗೂಗಲ್‌ನಲ್ಲಿ ಪ್ಯೂರ್ಟೊ ರಿಕೊ ಎಲ್ಲಿದೆ?' ಹಾಗೂ ಪ್ಯೂರ್ಟೊ ರಿಕೊ ವಿಶೇಷತೆ ಏನು ಎಂಬ ಹುಡುಕಾಟ ಜೋರಾಗಿದೆ.

ಪ್ಯೂರ್ಟೊ ರಿಕೊ ಎಲ್ಲಿದೆ? ಇದು ಸ್ವತಂತ್ರ ದೇಶವೇ ಅಥವಾ ಅಮೆರಿಕದ ಭಾಗವೇ?
ಭೌಗೋಳಿಕವಾಗಿ ಪ್ಯೂರ್ಟೊ ರಿಕೊ ಎಲ್ಲಿದೆ? ಎಂದು ನೋಡುವುದಾದರೆ, ಇದು ಕೆರಿಬಿಯನ್ ಸಮುದ್ರದಲ್ಲಿರುವ ಒಂದು ಸುಂದರ ದ್ವೀಪಸಮೂಹವಾಗಿದೆ. ಡೊಮಿನಿಕನ್ ರಿಪಬ್ಲಿಕ್‌ನ ಪೂರ್ವಕ್ಕೆ ಮತ್ತು ವರ್ಜಿನ್ ದ್ವೀಪಗಳ ಪಶ್ಚಿಮಕ್ಕೆ ಈ ದ್ವೀಪವಿದೆ. ಇದರ ರಾಜಧಾನಿ ಸ್ಯಾನ್ ಜುವಾನ್ (San Juan).
ಕುತೂಹಲಕಾರಿ ಸಂಗತಿಯೆಂದರೆ, ಪ್ಯೂರ್ಟೊ ರಿಕೊ ಸ್ವತಂತ್ರ ದೇಶವಲ್ಲ. ಬದಲಾಗಿ ಇದು ಅಮೆರಿಕದ ಆಡಳಿತಕ್ಕೆ ಒಳಪಟ್ಟಿರುವ ಪ್ರದೇಶ. ಇಲ್ಲಿನ ಸುಮಾರು 32 ಲಕ್ಷ ಜನರು ಅಮೆರಿಕದ ಪೌರತ್ವ ಹೊಂದಿದ್ದಾರೆ ಮತ್ತು ಇಲ್ಲಿನ ಕರೆನ್ಸಿ ಕೂಡ ಅಮೆರಿಕನ್ ಡಾಲರ್.
ಇಷ್ಟಾದರೂ, ಒಲಿಂಪಿಕ್ಸ್ ಹಾಗೂ ಮಿಸ್ ಯೂನಿವರ್ಸ್‌ನಂತಹ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪ್ಯೂರ್ಟೊ ರಿಕೊ ತನ್ನದೇ ಆದ ಪ್ರತ್ಯೇಕ ತಂಡ ಹಾಗೂ ಪ್ರತಿನಿಧಿಯನ್ನ ಕಳುಹಿಸುವ ವಿಶೇಷ ಅಧಿಕಾರ ಹೊಂದಿದೆ. ಇಲ್ಲಿ ಸ್ಪ್ಯಾನಿಷ್ ಮತ್ತು ಇಂಗ್ಲೀಷ್ ಅಧಿಕೃತ ಭಾಷೆಗಳಾಗಿವೆ.
ರಾತ್ರಿ ಹೊಳೆಯುವ ಸಮುದ್ರದಿಂದ ಸಂಗೀತದವರೆಗೆ: ಈ ಕೆರಿಬಿಯನ್ ದ್ವೀಪದ ಸ್ಪೆಷಾಲಿಟಿ ಏನು?
ಪುಟ್ಟ ಕೆರಿಬಿಯನ್ ದ್ವೀಪವಾಗಿದ್ದರೂ ಪ್ಯೂರ್ಟೊ ರಿಕೊ ತನ್ನ ಪ್ರಕೃತಿ ಸೌಂದರ್ಯ ಮತ್ತು ವಿಶಿಷ್ಟ ಸಂಸ್ಕೃತಿಯಿಂದ ಜಗತ್ತಿನ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಈ ದ್ವೀಪದ ಪ್ರಮುಖ ವಿಶೇಷತೆಗಳು ಹೀಗಿವೆ:
* ರಾತ್ರಿ ಹೊಳೆಯುವ ಸಮುದ್ರ (Bioluminescent Bays): ಪ್ರಪಂಚದಲ್ಲೇ ಅತ್ಯಂತ ಪ್ರಕಾಶಮಾನವಾಗಿ ಹೊಳೆಯುವ ಐದು ಬಯೋಲ್ಯುಮಿನೆಸೆಂಟ್ ಕೊಲ್ಲಿಗಳ ಪೈಕಿ ಮೂರು ಪ್ಯೂರ್ಟೊ ರಿಕೊದಲ್ಲಿವೆ. ಇಲ್ಲಿನ ನೀರಿನಲ್ಲಿರುವ ಸೂಕ್ಷ್ಮಜೀವಿಗಳಿಂದಾಗಿ ರಾತ್ರಿ ವೇಳೆ ಸಮುದ್ರದ ನೀರು ನೀಲಿ ಬಣ್ಣದಲ್ಲಿ ಮಿನುಗುತ್ತದೆ.
* ವಿಶ್ವಸುಂದರಿಯರ ತವರೂರು: ಕೇವಲ 32 ಲಕ್ಷ ಜನಸಂಖ್ಯೆ ಹೊಂದಿದ್ದರೂ, ಮಿಸ್ ಯೂನಿವರ್ಸ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಕಿರೀಟ ಗೆದ್ದ 3ನೇ ಪ್ರದೇಶ ಇದಾಗಿದೆ. ಅಮೆರಿಕ (9) ಹಾಗೂ ವೆನೆಜುವೆಲಾ (7) ಬಳಿಕ ಪ್ಯೂರ್ಟೊ ರಿಕೊ (6) ಸ್ಥಾನ ಪಡೆದಿದೆ.
* ಎಲ್ ಯುಂಕೆ ಮಳೆಕಾಡು (El Yunque Rainforest): ಅಮೆರಿಕದ ರಾಷ್ಟ್ರೀಯ ಅರಣ್ಯ ವ್ಯವಸ್ಥೆಯಲ್ಲಿರುವ ಏಕೈಕ ಉಷ್ಣವಲಯದ ಮಳೆಕಾಡು (Tropical Rainforest) ಇಲ್ಲಿಯೇ ಇದೆ.
* ಸಾಲ್ಸಾ ಸಂಗೀತ ಮತ್ತು ಓಲ್ಡ್ ಸ್ಯಾನ್ ಜುವಾನ್: ಜಗತ್ಪ್ರಸಿದ್ಧ ಸಾಲ್ಸಾ ಹಾಗೂ ರೆಗ್ಗೀಟನ್ ಸಂಗೀತದ ತವರು ಇದಾಗಿದೆ. ಅಲ್ಲದೆ, 500 ವರ್ಷಗಳ ಇತಿಹಾಸವಿರುವ ಬಣ್ಣಬಣ್ಣದ ಓಲ್ಡ್ ಸ್ಯಾನ್ ಜುವಾನ್ ನಗರ ಮತ್ತು ಬಕಾರ್ಡಿ ರಮ್ ತಯಾರಿಕೆಗೆ ಈ ದ್ವೀಪ ಹೆಸರುವಾಸಿಯಾಗಿದೆ.
ಮಿಸ್ ಯೂನಿವರ್ಸ್ 2026 ಫೈನಲ್‌ನಲ್ಲಿ ನಡೆದಿದ್ದೇನು?
ನವೆಂಬರ್ 24ರಂದು ಸ್ಯಾನ್ ಜುವಾನ್‌ನಲ್ಲಿ ನಡೆದ ಮಿಸ್ ಯೂನಿವರ್ಸ್ 2026ರ ಗ್ರ್ಯಾಂಡ್ ಫಿನಾಲೆಯಲ್ಲಿ 27 ವರ್ಷದ ಜೆನಿಫರ್ ಬ್ಯಾರೆಟೊ ವಿಜೇತರಾಗಿ ಹೊರಹೊಮ್ಮಿದರು. 2001ರಲ್ಲಿ ಡೆನಿಸ್ ಕ್ವಿನೋನೆಸ್ ಬಳಿಕ ತವರು ನೆಲದಲ್ಲೇ ಕಿರೀಟ ಗೆದ್ದ ಎರಡನೇ ಪ್ಯೂರ್ಟೊ ರಿಕೊ ಸುಂದರಿ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.
ಡೊಮಿನಿಕನ್ ರಿಪಬ್ಲಿಕ್‌ನ ಮೆಲಿಸ್ಸಾ ನುನೆಜ್ ಮೊದಲ ರನ್ನರ್-ಅಪ್, ವೆನೆಜುವೆಲಾದ ಕ್ಲಾರಾ ವೆಗಾಸ್ ಎರಡನೇ ರನ್ನರ್-ಅಪ್, ಫಿಲಿಪೈನ್ಸ್‌ನ ಬಿಯಾ ಮಿಲನ್ ಮೂರನೇ ಹಾಗೂ ನ್ಯೂಜಿಲೆಂಡ್‌ನ ಜಾರ್ಜಿಯಾ ವಾಡಿಂಗ್ಟನ್ ನಾಲ್ಕನೇ ರನ್ನರ್-ಅಪ್ ಆಗಿ ಹೊರಹೊಮ್ಮಿದರು. 2027ರ ಮಿಸ್ ಯೂನಿವರ್ಸ್ ಸ್ಪರ್ಧೆಗೆ ಕೋಸ್ಟಾ ರಿಕಾ ಆತಿಥ್ಯ ವಹಿಸಲಿದೆ ಎಂದು ಇದೇ ವೇಳೆ ಘೋಷಿಸಲಾಯಿತು.




Click it and Unblock the Notifications
