ಪಾಕಿಸ್ತಾನದಲ್ಲಿ ಇಂಧನ ಬಿಕ್ಕಟ್ಟು: ದೇಶವ್ಯಾಪಿ ಪೆಟ್ರೋಲ್ ಬಂಕ್ ಬಂದ್ ಎಚ್ಚರಿಕೆ, ಶೆಹಬಾಜ್ ಸರ್ಕಾರಕ್ಕೆ 15 ದಿನಗಳ ಗಡುವು
ಇಸ್ಲಾಮಾಬಾದ್: ಹಣಕಾಸಿಲ್ಲದೇ ಬೆಲೆ ಏರಿಕೆಯಿಂದ ಈಗಾಗಲೇ ತತ್ತರಿಸಿರುವ ನೆರೆಯ ಪಾಕಿಸ್ತಾನದಲ್ಲಿ ಇದೀಗ ಮತ್ತೊಂದು ದೊಡ್ಡ ಸಂಕಷ್ಟ ಎದುರಾಗಿದೆ. ಪಶ್ಚಿಮ ಏಷ್ಯಾದಲ್ಲಿನ ಅಮೆರಿಕ-ಇರಾನ್ ಸಂಘರ್ಷ ಹಾಗೂ ಜಾಗತಿಕ ತೈಲ ವ್ಯಾಪಾರದ ಜೀವನಾಡಿಯಾದ ಹಾರ್ಮುಜ್ ಜಲಸಂಧಿಯ ಮೇಲಿನ ನಿರ್ಬಂಧಗಳ ಪರಿಣಾಮವಾಗಿ ಪಾಕಿಸ್ತಾನದಲ್ಲಿ ಇಂಧನ ಬಿಕ್ಕಟ್ಟು ತಾರಕಕ್ಕೇರಿದೆ.
ಈ ನಡುವೆ, ಪ್ರಧಾನಿ ಶೆಹಬಾಜ್ ಶರೀಫ್ ನೇತೃತ್ವದ ಸರ್ಕಾರದ ನೀತಿಗಳಿಂದ ಬೇಸತ್ತಿರುವ ಪಾಕಿಸ್ತಾನ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್, ತಮ್ಮ ಬೇಡಿಕೆಗಳನ್ನ ಈಡೇರಿಸಲು ಸರ್ಕಾರಕ್ಕೆ 15 ದಿನಗಳ ಗಡುವು ನೀಡಿದೆ. ಈ ಗಡುವಿನೊಳಗೆ ಸಮಸ್ಯೆ ಬಗೆಹರಿಸದಿದ್ದರೆ ದೇಶವ್ಯಾಪಿ ಪೆಟ್ರೋಲ್ ಬಂಕ್‌ಗಳನ್ನ ಬಂದ್ ಮಾಡುವುದಾಗಿ ಖಡಕ್ ಎಚ್ಚರಿಕೆ ನೀಡಿದೆ.

ದೈನಂದಿನ ಇಂಧನ ದರ ಪರಿಷ್ಕರಣೆಯಿಂದ ಬಂಕ್ ಮಾಲೀಕರಿಗೆ ಭಾರಿ ನಷ್ಟ!
ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿನ ಏರಿಳಿತದ ನೆಪವೊಡ್ಡಿ ಪಾಕಿಸ್ತಾನ ಸರ್ಕಾರವು ಕಳೆದ ಜುಲೈ ತಿಂಗಳಿನಿಂದ ತೈಲ ಮತ್ತು ಅನಿಲ ನಿಯಂತ್ರಣ ಪ್ರಾಧಿಕಾರದ (OGRA) ಮೂಲಕ ದೈನಂದಿನ ಇಂಧನ ದರ ಪರಿಷ್ಕರಣೆ ವ್ಯವಸ್ಥೆಯನ್ನ ಜಾರಿಗೆ ತಂದಿತ್ತು. ಆದರೆ, ಪ್ರತಿ 24 ಗಂಟೆಗೊಮ್ಮೆ ಪೆಟ್ರೋಲ್ ಮತ್ತು ಡೀಸೆಲ್ ದರ ಬದಲಾಗುತ್ತಿರುವುದರಿಂದ ಬಂಕ್ ಮಾಲೀಕರು ತೀವ್ರ ಆರ್ಥಿಕ ನಷ್ಟ ಅನುಭವಿಸುವಂತಾಗಿದೆ.
ಕರಾಚಿ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪಿಪಿಡಿಎ ಅಧ್ಯಕ್ಷ ಮಲಿಕ್ ಖುದಾ ಬಕ್ಷ್, "ನವೆಂಬರ್ 4ರಂದು ಪ್ರತಿ ಲೀಟರ್‌ಗೆ 369.60 ಪಾಕಿಸ್ತಾನಿ ರೂಪಾಯಿ ಇದ್ದ ಪೆಟ್ರೋಲ್ ದರ, ನವೆಂಬರ್ 24ರ ವೇಳೆಗೆ 322 ರೂಪಾಯಿಗೆ ಇಳಿದಿದೆ. ಪ್ರತಿದಿನ ದರ ಬದಲಾಗುವುದರಿಂದ ದಾಸ್ತಾನು ನಿರ್ವಹಣೆ ಹಾಗೂ ಬಂಡವಾಳ ಉಳಿಸಿಕೊಳ್ಳುವುದು ಅಸಾಧ್ಯವಾಗಿದೆ. ಇದರ ನಡುವೆ ಕೆಲವು ತೈಲ ಸಂಸ್ಕರಣಾಗಾರಗಳು ಮತ್ತು ಖಾಸಗಿ ಕಂಪನಿಗಳು ಪೆಟ್ರೋಲ್, ಡೀಸೆಲ್ ಪೂರೈಕೆಯನ್ನು ಕಡಿತಗೊಳಿಸಿವೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನ ಪೆಟ್ರೋಲ್ ಬಂಕ್ ಬಂದ್ ತಪ್ಪಿಸಲು ಡೀಲರ್‌ಗಳು ಇಟ್ಟಿರುವ ಪ್ರಮುಖ ಬೇಡಿಕೆಗಳೇನು?
ಪೆಟ್ರೋಲ್ ಬಂಕ್ ಬಂದ್ ಆಗುವುದನ್ನ ತಪ್ಪಿಸಲು ಹಾಗೂ ಬಂಕ್ ಮಾಲೀಕರನ್ನ ನಷ್ಟದಿಂದ ಪಾರು ಮಾಡಲು ಪಿಪಿಡಿಎ ಸರ್ಕಾರದ ಮುಂದೆ ನಾಲ್ಕು ಪ್ರಮುಖ ಬೇಡಿಕೆಗಳನ್ನು ಇಟ್ಟಿದೆ:
1. ತಿಂಗಳಿಗೊಮ್ಮೆ ದರ ಪರಿಷ್ಕರಣೆ: ಪ್ರತಿದಿನದ ದರ ಬದಲಾವಣೆ ಪದ್ಧತಿಯನ್ನ ತಕ್ಷಣವೇ ರದ್ದುಗೊಳಿಸಿ, ಹಿಂದಿನಂತೆ ಪ್ರತಿ 30 ದಿನಗಳಿಗೊಮ್ಮೆ ಮಾತ್ರ ಪೆಟ್ರೋಲ್ ಮತ್ತು ಡೀಸೆಲ್ ದರ ಪರಿಷ್ಕರಿಸುವ ನೀತಿ ಜಾರಿಗೆ ತರಬೇಕು.
2. ಶೇ. 8ರಷ್ಟು ಕಮಿಷನ್: ವಿದ್ಯುತ್ ಬಿಲ್, ಸಿಬ್ಬಂದಿ ವೇತನ ಸೇರಿದಂತೆ ನಿರ್ವಹಣಾ ವೆಚ್ಚ ಹೆಚ್ಚಾಗಿರುವುದರಿಂದ ಬಂಕ್ ಮಾಲೀಕರಿಗೆ ನೀಡುವ ಕಮಿಷನ್ ಅನ್ನು ಚಿಲ್ಲರೆ ಮಾರಾಟ ದರದ ಶೇ. 8ಕ್ಕೆ ಹೆಚ್ಚಿಸಬೇಕು.
3. ನೀತಿ ನಿರೂಪಣೆಯಲ್ಲಿ ಸಮಾಲೋಚನೆ: ಪೆಟ್ರೋಲಿಯಂ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಯಾವುದೇ ಹೊಸ ನೀತಿ ಅಥವಾ ನಿಯಂತ್ರಣ ಮುಕ್ತ ನಿರ್ಧಾರ ಕೈಗೊಳ್ಳುವ ಮುನ್ನ ಬಂಕ್ ಮಾಲೀಕರ ಸಂಘದೊಂದಿಗೆ ಕಡ್ಡಾಯವಾಗಿ ಚರ್ಚಿಸಬೇಕು.
4. ಸರ್ಕಾರದ ನಿಯಂತ್ರಣ: ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ನಿಗದಿಪಡಿಸುವ ಅಧಿಕಾರ ಸರ್ಕಾರದ ಬಳಿಯೇ ಇರಬೇಕು.
ಶೆಹಬಾಜ್ ಶರೀಫ್ ಸರ್ಕಾರದ ಮುಂದಿರುವ ದೊಡ್ಡ ಸವಾಲು
ಈ ಹಿಂದೆಯೂ ಪೆಟ್ರೋಲಿಯಂ ಸಚಿವರ ಭರವಸೆಯ ಮೇರೆಗೆ ಡೀಲರ್‌ಗಳು ಮುಷ್ಕರವನ್ನ ಮುಂದೂಡಿದ್ದರು. ಆಗಸ್ಟ್‌ನಲ್ಲಿ ಸರ್ಕಾರ ಕಮಿಷನ್ ಅನ್ನು ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಿಸಿದ್ದರೂ, ಶೇ. 8ರಷ್ಟು ಮಾರ್ಜಿನ್ ಬೇಡಿಕೆ ಇನ್ನೂ ಈಡೇರಿಲ್ಲ.
ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಪಾಕಿಸ್ತಾನದ ಜನತೆಗೆ, ಒಂದು ವೇಳೆ 15 ದಿನಗಳ ಬಳಿಕ ದೇಶವ್ಯಾಪಿ ಪೆಟ್ರೋಲ್ ಬಂಕ್‌ಗಳು ಬಂದ್ ಆದರೆ ಸಾರಿಗೆ ಮತ್ತು ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಳ್ಳಲಿದೆ. ಈ ಪರಿಸ್ಥಿತಿಯನ್ನ ಶೆಹಬಾಜ್ ಶರೀಫ್ ಸರ್ಕಾರ ಹೇಗೆ ನಿಭಾಯಿಸಲಿದೆ ಎಂಬುದು ಈಗ ಕುತೂಹಲ ಮೂಡಿಸಿದೆ.




Click it and Unblock the Notifications
