ಶಿವಮೊಗ್ಗ: ಗೋಪೂಜೆ ದಿನ ಚಿನ್ನದ ಸರ ನುಂಗಿ ಮೇವು ಬಿಟ್ಟ ಹಸು, ಮುಂದಾಗಿದ್ದೇನು?
ಶಿವಮೊಗ್ಗ, ನವೆಂಬರ್ 28: ಹಸುವೊಂದು ತನ್ನ ಆಹಾರದ ಜೊತೆ ಚಿನ್ನದ ಸರ ನುಂಗಿ ಮಾಲೀಕ ಅದರ ಸಗಣಿಯಲ್ಲಿ ಪ್ರತಿದಿನವೂ ಚಿನ್ನದ ಸರ ಹುಡುಕುವ ಹಾಸ್ಯ ದೃಶ್ಯವನ್ನು ನೀವು ಸಿನಿಮಾದಲ್ಲಿ ನೋಡಿರಬಹುದು. ಶಿವಮೊಗ್ಗದಲ್ಲಿ ಅಂತಹದ್ದೇ ಘಟನೆ ನಡೆದಿದ್ದು, ಇದೀಗ ಹಸು ನುಂಗಿದ ಚಿನ್ನದ ಸರವನ್ನು ಮಾಲೀಕರು ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ದೀಪಾವಳಿ, ಗೋಪೂಜೆ ಹಬ್ಬದ ದಿನಗಳಲ್ಲಿ ಗಡಿಬಿಡಿ-ಗೊಂದಲಗಳು ಸಹಜ. ಇದೇ ಗಡಿಬಿಡಿಯಲ್ಲಿ ಗೋಪೂಜೆ ವೇಳೆ ಪೂಜೆಗಿಟ್ಟಿದ್ದ ಚಿನ್ನದ ಸರವನ್ನು ಮನೆಯ ಹಸು ನುಂಗಿದ ಘಟನೆ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮತ್ತಿಮನೆ ಗ್ರಾಮದ ಶ್ಯಾಮ ಉಡುಪ ಎಂಬುವವರಿಗೆ ಸೇರಿದ ಮನೆಯ ಹಸುವು ಗೋಪೂಜೆ ವೇಳೆ ಚಿನ್ನದ ಸರವನ್ನು ನುಂಗಿದೆ.

ಗೋಪೂಜೆ ವೇಳೆ ಇಟ್ಟಿದ್ದ ಸರ ಏಕಾಏಕಿ ಮಾಯವಾಗಿತ್ತು. ಸರ ಕಾಣದನ್ನು ಕಂಡು ಶ್ಯಾಮ ಉಡುಪ ಕುಟುಂಬಸ್ಥರು ಹುಡುಕಾಡಿದ್ದಾರೆ. ಎಲ್ಲೇ ಹುಡುಕಿದರೂ ಸರ ಸಿಗದ ಕಾರಣ ಹಸು ನುಂಗಿರುವುದಾಗಿ ಖಚಿತ ಪಡಿಸಿಕೊಂಡಿದ್ದಾರೆ. ಪ್ರಸಾದದ ಜೊತೆ ಚಿನ್ನದ ಸರವನ್ನೂ ಹಸು ನುಂಗಿರಬಹುದು ಎಂದು ತೀರ್ಮಾನಿಸಿದರು.
ಈ ವಿಚಾರವನ್ನು ಅಲ್ಲಿಗೆ ಬಿಟ್ಟಿದ್ದ ಶ್ಯಾಮ ಉಡುಪ ಕುಟುಂಬಸ್ಥರು ಹಸುವಿಗೆ ಹಿಂಸೆ ಮಾಡದೇ ಚಿನ್ನದ ಸರದ ಆಸೆ ಬಿಟ್ಟಿದ್ದರು. ಆದರೆ ಈ ಘಟನೆ ಆದ ಬಳಿಕ ನಡೆದ ಬೆಳವಣಿಗೆ ಹಸುವಿನ ಮಾಲೀಕರ ಮನೆಯಲ್ಲಿ ಭಯ ಹುಟ್ಟಿಸಿತ್ತು. ಚಿನ್ನದ ಸರ ನುಂಗಿದ್ದ ಹಸು ಮೇವು ತಿನ್ನುವುದನ್ನು ಕಡಿಮೆ ಮಾಡಿತ್ತು. ಅನ್ನ ನೀರು ದೂರ ಇಟ್ಟಿದ್ದ ಹಸುವಿನ ವರ್ತನೆ ಮನೆಯವರಲ್ಲಿ ಆತಂಕ ಹೆಚ್ಚಿಸಿದ್ದು, ಹಸುವಿನ ಪ್ರಾಣಕ್ಕೆ ಕುತ್ತು ತರಬಹುದು ಎಂದು ಚಿಕಿತ್ಸೆಗೆ ಮುಂದಾಗಿದ್ದಾರೆ.
ಶ್ಯಾಮ ಉಡುಪ ಪಶು ವೈದ್ಯ ಡಾ. ಆನಂದ ಅವರನ್ನು ಭೇಟಿಯಾಗಿ ನಡೆದ ಘಟನೆಯನ್ನು ವಿವರಿಸಿದ್ದಾರೆ. ಬಳಿಕ ಡಾ. ಆನಂದ ಅವರ ತಂಡ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಹಸುವಿನ ಹೊಟ್ಟೆಯೊಳಗಿಂದ ಚಿನ್ನದ ಸರವನ್ನು ಹೊರ ತೆಗೆಯುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ. ಶಸ್ತ್ರಚಿಕಿತ್ಸೆ ಬಳಿಕ ಹಸು ಆರೋಗ್ಯದಿಂದ ಇದ್ದು, ಚಿನ್ನದ ಸರ ಕೂಡ ಶ್ಯಾಮ ಉಡುಪ ಅವರಿಗೆ ವಾಪಸ್ ಸಿಕ್ಕಿದೆ. ಹಸುವಿನ ಆರೋಗ್ಯ ಸುಧಾರಣೆಗೆ ನೆರವಾದ ಡಾ. ಆನಂದ ಅವರಿಗೆ ಶ್ಯಾಮ ಉಡುಪ ಕುಟುಂಬಸ್ಥರು ಧನ್ಯವಾದ ತಿಳಿಸಿದ್ದಾರೆ.












Click it and Unblock the Notifications