ಚಿಕ್ಕಮಗಳೂರು: ಪಟಾಕಿ ಸಿಡಿದು ಯುವಕ ದಾರುಣ ಸಾವು
ಚಿಕ್ಕಮಗಳೂರು, ನವೆಂಬರ್ 15: ಪಟಾಕಿ ಸಿಡಿದು ಯುವಕ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಸುಣ್ಣದಹಳ್ಳಿಯಲ್ಲಿ ನಡೆದಿದೆ. ಪ್ರದೀಪ್ (30) ಮೃತ ದುರ್ದೈವಿ.
ದೀಪಾವಳಿ ಸಂಭ್ರಮಾಚರಣೆಯ ಸಂದರ್ಭದಲ್ಲಿ ಅಡಕೆ ಗೋಟು (ಕಲ್ಲು ಆಟಂಬಾಂಬ್) ಪಟಾಕಿಯನ್ನು ಮೃತ ಪ್ರದೀಪ್ ಖುರ್ಚಿಯ ಕೆಳಗೆ ಇಟ್ಟುಕೊಂಡು ಕುಳಿತಿದ್ದ. ಈ ವೇಳೆ ಬೇರೆ ಪಟಾಕಿಯ ಕಿಡಿ ಸಿಡಿದು ಕಲ್ಲು ಆಟಂಬಾಂಬ್ ಸ್ಫೋಟಗೊಂಡಿದೆ. ಪಟಾಕಿ ಸಿಡಿದ ರಭಸಕ್ಕೆ ಪ್ರದೀಪ್ ನೆಲದಿಂದ 5 ಅಡಿ ಹಾರಿ ಕೆಳಗೆ ಬಿದ್ದಿದ್ದಾರೆ.

ದೇಹದ ಸೂಕ್ಷ್ಮ ಜಾಗಕ್ಕೆ ಬಲವಾದ ಪೆಟ್ಟು ಬಿದ್ದ ಪರಿಣಾಮ ಯುವಕ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಪ್ರದೀಪ್ ಜೊತೆಗಿದ್ದ ಮತ್ತೋರ್ವ ಯುವಕನಿಗೆ ಗಂಭೀರ ಗಾಯವಾಗಿದ್ದು, ಸ್ಥಳದಲ್ಲಿದ್ದ ಮೂವರು ಮಕ್ಕಳು ಸಹ ಗಾಯಗೊಂಡಿದ್ದಾರೆ. ಕೂಡಲೇ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಕಲ್ಲು ಆಟಂ ಬಾಂಬ್ ಸಿಡಿದ ರಭಸಕ್ಕೆ ಮನೆಯ ಗಾಜುಗಳು ಪುಡಿ-ಪುಡಿಯಾಗಿವೆ. ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ತರೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೈಕ್‌ಗೆ ತರಕಾರಿ ತುಂಬಿದ ಲಾರಿ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು
ಚಿಕ್ಕಮಗಳೂರು: ಬೈಕ್‌ಗೆ ತರಕಾರಿ ತುಂಬಿದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಿದರಹಳ್ಳಿಯ ಗ್ರಾಮದಲ್ಲಿ ನಡೆದಿದೆ. ಬಾಳೆಹಳ್ಳಿ ಗ್ರಾಮದ ಯುವಕ ಮಂಜುನಾಥ್ (30) ಮೃತ ದುರ್ದೈವಿ.
ತರಕಾರಿ ತುಂಬಿಕೊಂಡು ರಾಷ್ಟ್ರೀಯ ಹೆದ್ದಾರಿ 173ರ ಮೂಲಕ ಮಂಗಳೂರಿಗೆ ಹೋಗುತ್ತಿದ್ದ ಲಾರಿ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ತಂದೆಯ ಜೊತೆ ಬೈಕಿನಲ್ಲಿ ಹೋಗುತ್ತಿದ್ದ ಮಂಜುನಾಥ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಅಪಘಾತ ನಡೆದ ರಭಸಕ್ಕೆ 1ಕಿಮೀ ವರೆಗೆ ಲಾರಿ ಮೃತ ವ್ಯಕ್ತಿಯನ್ನು ಎಳೆದೊಯ್ದುಕೊಂಡು ಹೋಗಿದೆ ಎನ್ನಲಾಗಿದೆ. ಮೂಡಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications