ಗೌರಿ ಹಿಂದೂ ಅಲ್ಲ, ನನ್ನ ಮೂವರು ಪತ್ನಿಯರೂ ಧರ್ಮ ಬದಲಾಯಿಸಿಲ್ಲ: ಲವ್ ಜಿಹಾದ್ ಎಂದವರಿಗೆ ಅಮೀರ್ ಖಾನ್ ತಿರುಗೇಟು
ಬಾಲಿವುಡ್‌ನ ಸ್ಟಾರ್ ನಟ ಅಮೀರ್ ಖಾನ್ ಇತ್ತೀಚೆಗಷ್ಟೇ ಮುಂಬೈನ ತಮ್ಮ ನಿವಾಸದಲ್ಲಿ ಗೆಳತಿ ಗೌರಿ ಸ್ಪ್ರ್ಯಾಟ್ ಅವರೊಂದಿಗೆ ಸರಳವಾಗಿ ವಿವಾಹವಾಗಿದ್ದರು. ಆದರೆ ಈ ಮದುವೆ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಇವರ ಮದುವೆಯನ್ನು "ಲವ್ ಜಿಹಾದ್" ಎಂದು ಕರೆದಿದ್ದರು. ಜೊತೆಗೆ ಅಮೀರ್ ಖಾನ್ ಅವರನ್ನು ಲವ್ ಜಿಹಾದ್‌ನ "ಬ್ರ್ಯಾಂಡ್ ಅಂಬಾಸಿಡರ್" ಎಂಬ ಆರೋಪ ಹೊರಿಸಿದ್ದರು. ತಮ್ಮ ಮೇಲಿನ ಈ ಆರೋಪಗಳಿಗೆ ನಟ ಅಮೀರ್ ಖಾನ್ ತಿರುಗೇಟು ನೀಡಿದ್ದಾರೆ.
ನಮ್ಮದು ಎಲ್ಲರನ್ನೂ ಒಳಗೊಳ್ಳುವ ವಿಶಾಲ ಮನಸ್ಸಿನ ಕುಟುಂಬ
ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ವಿವಾದದ ಬಗ್ಗೆ ಮಾತನಾಡಿರುವ ಅಮೀರ್, ತಮ್ಮ ಕುಟುಂಬದಲ್ಲಿ ಧರ್ಮದ ಆಧಾರದ ಮೇಲೆ ಎಂದಿಗೂ ತಾರತಮ್ಯ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಮ್ಮದು ಎಲ್ಲರನ್ನೂ ಒಳಗೊಳ್ಳುವ ಅತ್ಯಂತ ವಿಶಾಲ ಮನೋಭಾವದ ಕುಟುಂಬ. ನನ್ನ ಇಬ್ಬರು ಸಹೋದರಿಯರು ಹಿಂದೂ ಪುರುಷರನ್ನ ಮದುವೆಯಾಗಿದ್ದಾರೆ. ನನ್ನ ಮಗಳು ಕೂಡ ಹಿಂದೂ ಹುಡುಗನನ್ನೇ ವರಿಸಿದ್ದಾಳೆ. ಇನ್ನು ನನ್ನ ಸೋದರಸಂಬಂಧಿ ಮನ್ಸೂರ್ ಕ್ರಿಶ್ಚಿಯನ್ ಮಹಿಳೆಯನ್ನು ಮದುವೆಯಾಗಿದ್ದಾನೆ" ಎಂದು ತಮ್ಮ ಕುಟುಂಬದಲ್ಲಿರುವ ಅಂತರ್ಧರ್ಮೀಯ ವಿವಾಹಗಳ ಉದಾಹರಣೆ ನೀಡಿದ್ದಾರೆ ಅಮೀರ್.

ಗೌರಿ ಹಿಂದೂ ಅಲ್ಲ
ತಮ್ಮ ವೈಯಕ್ತಿಕ ಜೀವನ ಹಾಗೂ ಪತ್ನಿಯರ ಧರ್ಮ ಬದಲಾವಣೆಯ ಕುರಿತು ಹರಿದಾಡುತ್ತಿರುವ ಸುಳ್ಳು ಸುದ್ದಿಗಳ ಬಗ್ಗೆ ಅಮೀರ್ ಖಾನ್ ಸತ್ಯ ಏನೆಂಬುದನ್ನು ಬಿಚ್ಚಿಟ್ಟಿದ್ದಾರೆ. ನನ್ನ ಮೊದಲ ಪತ್ನಿ ರೀನಾ ದತ್ತಾ ಆಗಲಿ, ಎರಡನೇ ಪತ್ನಿ ಕಿರಣ್ ರಾವ್ ಆಗಲಿ ಅಥವಾ ನನ್ನ ಈಗಿನ ಪತ್ನಿ ಗೌರಿ ಆಗಲಿ, ಯಾರೂ ನನ್ನನ್ನು ಮದುವೆಯಾಗುವಾಗ ತಮ್ಮ ಧರ್ಮವನ್ನು ಬದಲಾಯಿಸಿಲ್ಲ. ನಮ್ಮದು ಕಾನೂನುಬದ್ಧ ವಿವಾಹಗಳು. ಟ್ರೋಲ್ ಮಾಡುವವರಿಗೆ ನಿಜಾಂಶವೇ ಗೊತ್ತಿಲ್ಲ. ನನ್ನ ಮೂರನೇ ಪತ್ನಿ ಗೌರಿ ಹಿಂದೂ ಧರ್ಮದವರೇ ಅಲ್ಲ, ಆಕೆ ಮೂಲತಃ ಕ್ರಿಶ್ಚಿಯನ್. ಆಕೆ ಕೂಡ ಅಷ್ಟಾಗಿ ಧರ್ಮದ ಆಚರಣೆಗಳನ್ನು ಮಾಡುವವಳಲ್ಲ ಎಂದು ತಿರುಗೇಟು ನೀಡಿದ್ದಾರೆ.
ನನ್ನ ಜೀವನದ ಯಾವುದೇ ಹಂತದಲ್ಲೂ ಧರ್ಮ ಎಂಬುದು ಮದುವೆಗೆ ಷರತ್ತಾಗಿರಲಿಲ್ಲ. ಕಾಲ ಉರುಳಿದಂತೆ ಸಮಾಜದಲ್ಲಿ ಸೃಷ್ಟಿಯಾಗುತ್ತಿರುವ ಇಂತಹ ವಿಚಿತ್ರ ವಿವಾದಗಳನ್ನು ನೋಡಿದರೆ ಜೀವನ ನಿಜಕ್ಕೂ ಹಾಸ್ಯಾಸ್ಪದ ಅನಿಸುತ್ತದೆ ಎಂದು ಅಮೀರ್ ಖಾನ್ ಲೇವಡಿ ಮಾಡಿದ್ದಾರೆ. ಮತ್ತೊಂದೆಡೆ ಅಮೀರ್ ಖಾನ್ ಮತ್ತು ಗೌರಿ ಸ್ಪ್ರ್ಯಾಟ್ ಅವರ ವಿವಾಹ ಸಮಾರಂಭದ ಸುಂದರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.
ಖ್ಯಾತ ಕ್ರಿಕೆಟಿಗರೊಬ್ಬರು ಹಂಚಿಕೊಂಡಿರುವ ಈ ವಿಡಿಯೋದಲ್ಲಿ ನವದಂಪತಿ ರೊಮ್ಯಾಂಟಿಕ್ ಆಗಿ ಡ್ಯಾನ್ಸ್ ಮಾಡುತ್ತಿದ್ದಾರೆ. ವಿಡಿಯೋದಲ್ಲಿ ಗೌರಿ ಅವರು ಅಮೀರ್ ಖಾನ್ ಕೈ ಹಿಡಿದು, "ನಾನು ಗೌರಿ ಸ್ಪ್ರ್ಯಾಟ್, ನನ್ನ ರಕ್ಷಕ ಮತ್ತು ಆಸರೆಯಾದ ಅಮೀರ್ ಖಾನ್ ಅವರನ್ನು ನನ್ನ ಕಾನೂನುಬದ್ಧ ಪತಿಯಾಗಿ ಸ್ವೀಕರಿಸುತ್ತಿದ್ದೇನೆ" ಎಂದು ಮದುವೆಯ ಪ್ರಮಾಣ ವಚನ ಸ್ವೀಕರಿಸುವ ದೃಶ್ಯ ಅದರಲ್ಲಿದೆ. ಟ್ರೋಲ್ ನಡುವೆಯೂ ಅಭಿಮಾನಿಗಳು ಅಮೀರ್ ಖಾನ್ ಪರ ಬ್ಯಾಟ್ ಬೀಸುತ್ತಿದ್ದಾರೆ.













Click it and Unblock the Notifications