ಮೈಸೂರು: ದರ ಏರಿಕೆ ನಡುವೆಯೂ ಹೂವು, ಹಣ್ಣು ಖರೀದಿ ಜೋರು, ಪಟಾಕಿ ಕೊಳ್ಳಲು ಜನರ ನಿರಾಸಕ್ತಿ
ಮೈಸೂರು, ನವೆಂಬರ್ 13: ದರ ಏರಿಕೆ ನಡುವೆಯೂ ಸಾರ್ವಜನಿಕರು ಬೆಳಕಿನ ಹಬ್ಬ ದೀಪಾವಳಿ ಆಚರಣೆಗೆ ಬೇಕಾದ ಹೂವು, ಹಣ್ಣು, ಹಣತೆ ಹಾಗೂ ಅಲಂಕಾರಿಕ ವಸ್ತುಗಳನ್ನು ಖರೀದಿಸಿದ್ದಾರೆ.
ನಗರದ ಪ್ರಮುಖ ಮಾರುಕಟ್ಟೆಗಳಾದ ದೇವರಾಜ ಮಾರುಕಟ್ಟೆ, ಮಂಡಿ ಮಾರ್ಕೆಟ್, ವಾಣಿವಿಲಾಸ ಮಾರುಕಟ್ಟೆ, ಧ್ವನಂತ್ರಿ ರಸ್ತೆ, ಅಗ್ರಹಾರ ವೃತ್ತ, ನಂಜುಮಳಿಗೆ, ಜೆಕೆ ಮೈದಾನದ ರಸ್ತೆ ಸೇರಿದಂತೆ ನಗರದ ನಾನಾ ರಸ್ತೆ ಹಾಗೂ ರಸ್ತೆ ಬದಿಗಳಲ್ಲಿ ಸೋಮವಾರ ಬೆಳಗ್ಗೆಯಿಂದಲೇ ಸಾರ್ವಜನಿಕರು ಉತ್ಸಾಹದಲ್ಲಿ ಹಬ್ಬಕ್ಕೆ ಬೇಕಾದ ಹಣ್ಣು, ಹೂವು, ತರಕಾರಿ, ಪೂಜಾ ಸಾಮಗ್ರಿಗಳನ್ನು ಖರೀದಿಸಿದರು.

ನಗರದ ಜೆಕೆ ಗ್ರೌಂಡ್ ಸೇರಿದಂತೆ ನಾನಾ ಕಡೆ ಅಂಗಡಿಗಳ ಮುಂದೆ ಗ್ರಾಹಕರು ಸಾಲುಗಟ್ಟಿ ನಿಂತು ಪಟಾಕಿಗಳನ್ನು ಖರೀದಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಈ ಬಾರಿ ಪಟಾಕಿ ಜತೆಗೆ ಮಣ್ಣಿನ ಹಣತೆ, ಆಕಾಶಬುಟ್ಟಿಗೂ ಡಿಮ್ಯಾಂಡ್ ಕಂಡುಬಂತು.
ಸಾಮಾನ್ಯವಾಗಿ ಹಬ್ಬಗಳು ಬಂತೆಂದರೆ ಹೂವಿನ ದರ ಗಗನಕ್ಕೇರುತ್ತದೆ. ಈ ಬಾರಿ ಸೇವಂತಿಗೆ 50- 60 ರೂ., ಚೆಂಡು ಹೂ 60, ಕನಕಾಂಬರ ಮಾರಿಗೆ 120, ಕಾಕಡ 100 ರೂ.ಗೆ ಮಾರಾಟವಾಯಿತು. ತರಕಾರಿ ದರ ಯಥಾಸ್ಥಿತಿಯಲ್ಲಿತ್ತು. ಹಬ್ಬಕ್ಕೆ ಹೊಸ ಬಟ್ಟೆ ಖರೀದಿಯೂ ಜೋರಾಗಿತ್ತು. ಡಿ.ದೇವರಾಜ ಅರಸು ರಸ್ತೆ, ಕೆ.ಆರ್.ಸರ್ಕಲ್, ಸಯ್ಯಾಜಿರಾವ್ ರಸ್ತೆ, ಓಲ್ಡ್ ಬ್ಯಾಂಕ್ ರಸ್ತೆ, ಮಕ್ಕಾಜಿ ಚೌಕ, ಗಾಂಧಿ ಸ್ಕ್ವೇರ್ ಸೇರಿದಂತೆ ಎಲ್ಲೆಡೆ ಅಂಗಡಿಗಳಲ್ಲಿ ಖರೀದಿ ಜೋರಾಗಿತ್ತು.
ಹಣತೆ ಖರೀದಿ ಬಲು ಜೋರು
ದೀಪಾವಳಿ ಹಬ್ಬದ ದಿನ ಹಣತೆಗಳಿಗೆ ಎಣ್ಣೆ ಹಾಕಿ ಸಾಲಾಗಿ ಜೋಡಿಸಿ ದೀಪ ಬೆಳಗುವುದು ಸಂಪ್ರದಾಯ. ಸದ್ಯ ಮಾರುಕಟ್ಟೆಯಲ್ಲಿರುವ ಪರಿಸರ ಸ್ನೇಹಿ ಮಣ್ಣಿನ ಹಣತೆಗಳಿಗೆ ಬೇಡಿಕೆ ಇದ್ದು, ಉತ್ತಮ ವ್ಯಾಪಾರ ನಡೆಯಿತು. ವಿವಿಧ ಬಗೆಯ ಆಕೃತಿಯ ಹಣತೆಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ.

ಪಿಂಗಾಣಿ, ಗ್ಲಾಸ್‌ನಿಂದ ತಯಾರಿಸಿರುವ ಹಣತೆ, ಮಣ್ಣಿನ ಹಣತೆ, ಪ್ರಮುಖವಾಗಿ ಶಂಖುವಿನಾಕಾರದ, ಆನೆ, ಒಂಟೆ, ಕುದುರೆ, ಗಿಳಿ ಮೇಲಿರುವ ಹಣತೆ, ನಕ್ಷತ್ರಾಕಾರ, ಬುಟ್ಟಿಯಾಕಾರ, ಕಮಲ ಹೂವಿನಾಕಾರ, ಗುಲಾಬಿಯಾಕಾರ. ಹೀಗೆ ವಿವಿಧ ಬಗೆಯ ಹಣತೆಗಳು ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ಮಾರಾಟವಾದವು. ಒಂದು ಡಜನ್ ಹಣತೆಗೆ 35 ರಿಂದ 50 ರೂವರೆಗೆ ಮಾರಲಾಗುತ್ತಿದೆ.
ಪಟಾಕಿ ಖರೀದಿಗೆ ಜನರ ನಿರಾಸಕ್ತಿ
ಹಬ್ಬದಲ್ಲಿ ಮುಖ್ಯವಾಗಿ ಬಳಸುವ ಪಟಾಕಿ ವ್ಯಾಪಾರ ಕೊಂಚ ಕಳೆಗುಂದಿದೆ. ಶೇ.10ರಿಂದ 20 ರಷ್ಟು ದರ ಏರಿಕೆ ಆಗಿರುವುದು ಸಾರ್ವಜನಿಕರ ಬೇಸರಕ್ಕೆ ಕಾರಣವಾಗಿದೆ. ಹಸಿರು ಪಟಾಕಿಗಳನ್ನು ಮಾತ್ರವೇ ಮಾರಾಟ ಮಾಡಬೇಕೆಂದು ಸುಪ್ರೀಂಕೋರ್ಟ್ ಆದೇಶ ನೀಡಿದ್ದರಿಂದ ಹಾಗೂ ಪರಿಸರದ ಮೇಲಾಗುತ್ತಿರುವ ಹಾನಿ ತಪ್ಪಿಸಲು ಜಿಲ್ಲಾಡಳಿತ ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅವಕಾಶ ನೀಡಿದೆ.
ಪರಿಣಾಮ ಕಡಿಮೆ ರಾಸಾಯನಿಕ ಬಳಕೆ ಮಾಡಿರುವ ಹಾಗೂ ಹೆಚ್ಚು ಶಬ್ಧ ಮಾಡದ ಪಟಾಕಿಗಳು ಮಾರುಕಟ್ಟೆಗೆ ಆಗಮಿಸಿವೆ. ಗ್ರಾಹಕರೂ ಸಹ ಹಸಿರು ಪಟಾಕಿ ಖರೀದಿಗೆ ಒತ್ತು ನೀಡಿದ್ದಾರೆ. ಅಲ್ಲದೆ, ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಮೂಡಿರುವ ಪರಿಣಾಮ ಮಕ್ಕಳು ಪಟಾಕಿ ಹೊಡೆಯಲು ಮನಸ್ಸು ಮಾಡುತ್ತಿಲ್ಲ.












Click it and Unblock the Notifications