ಕರಾವಳಿಯಲ್ಲೇ ನಡೆಯಲಿದೆ ಸಚಿವ ಸಂಪುಟ ಸಭೆ: ಪ್ರವಾಸೋದ್ಯಮಕ್ಕೆ ಬೂಸ್ಟರ್ ಡೋಸ್ ನೀಡಲು ಡಿಕೆಶಿ ಮೆಗಾ ಪ್ಲಾನ್
ಬೆಂಗಳೂರು: ರಾಜ್ಯದ ಕರಾವಳಿ ತೀರದ ಸಮಗ್ರ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಹಾಗೂ ಪ್ರವಾಸೋದ್ಯಮಕ್ಕೆ ಜಾಗತಿಕ ಮಟ್ಟದ ಮನ್ನಣೆ ತಂದುಕೊಡುವ ನಿಟ್ಟಿನಲ್ಲಿ ಕರಾವಳಿ ಭಾಗದಲ್ಲೇ ವಿಶೇಷ ಸಚಿವ ಸಂಪುಟ (Cabinet) ಸಭೆಯನ್ನು ನಡೆಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಘೋಷಿಸಿದ್ದಾರೆ. ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನಡೆದ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಕುರಿತ ಉನ್ನತ ಮಟ್ಟದ ಸಭೆಯಲ್ಲಿ ಮುಖ್ಯಮಂತ್ರಿಗಳು ಈ ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ. ಕರಾವಳಿ ಭಾಗದಲ್ಲಿ ಹೂಡಿಕೆಗೆ ಇರುವ ತಾಂತ್ರಿಕ ಅಡಚಣೆಗಳನ್ನು ನಿವಾರಿಸಿ, ಉದ್ಯಮಿಗಳಿಗೆ ಸುಗಮ ವಾತಾವರಣ ನಿರ್ಮಿಸಲು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
15-20 ದಿನಗಳಲ್ಲಿ ವರದಿ ಸಲ್ಲಿಕೆಗೆ ಗಡುವು
ಕರಾವಳಿ ಭಾಗದಲ್ಲಿ ಯಾವುದೇ ಹೊಸ ಯೋಜನೆಗಳು ಜಾರಿಗೆ ಬರಬೇಕಾದರೂ ಸಿಆರ್‌ಝಡ್ (CRZ-ಕರಾವಳಿ ನಿಯಂತ್ರಣ ವಲಯ) ಮತ್ತು ಅರಣ್ಯ ಇಲಾಖೆಯ ನಿಯಮಗಳು ದೊಡ್ಡ ಅಡಚಣೆಯಾಗುತ್ತಿವೆ. ಈ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಿಎಂ, "ಕರಾವಳಿಯಲ್ಲಿ ಕ್ಯಾಬಿನೆಟ್ ಸಭೆ ನಡೆಸುವಷ್ಟರಲ್ಲಿ ಎಲ್ಲ ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ಸಿದ್ಧವಿರಬೇಕು. ಸಿಆರ್‌ಝಡ್ ಮತ್ತು ಅರಣ್ಯ ಇಲಾಖೆಯಿಂದ ಆಗುತ್ತಿರುವ ತಕರಾರುಗಳು, ಅವುಗಳಿಗಿರುವ ಕಾನೂನಾತ್ಮಕ ಪರಿಹಾರಗಳ ಬಗ್ಗೆ ಮುಂದಿನ 15ರಿಂದ 20 ದಿನಗಳಲ್ಲಿ ಸಮಗ್ರ ವರದಿ ಸಿದ್ಧಪಡಿಸಬೇಕು" ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಉದ್ಯಮಿಗಳಿಗೆ ಕಿರಿಕಿರಿ ಇರಬಾರದು
"ಹೂಡಿಕೆದಾರರನ್ನು ಆಕರ್ಷಿಸಲು ಸರಳ ಮತ್ತು ಸುಗಮ ಮಾರ್ಗಗಳನ್ನು ಸೃಷ್ಟಿಸಬೇಕು. ವಿವಿಧ ಇಲಾಖೆಗಳಿಂದ ಉದ್ಯಮಿಗಳಿಗೆ ಆಗುತ್ತಿರುವ ಕಿರಿಕಿರಿಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು" ಎಂದು ಮುಖ್ಯಮಂತ್ರಿಗಳು ಖಡಕ್ ಸೂಚನೆ ನೀಡಿದ್ದಾರೆ. ಅಭಿವೃದ್ಧಿ ಯೋಜನೆಗಳಿಗೆ ವಿವಿಧ ಇಲಾಖೆಗಳಿಂದ ಸಕಾಲದಲ್ಲಿ ಅನುಮತಿ ಸಿಗುವಂತಾಗಲು 'ಏಕ ಗವಾಕ್ಷಿ' ವ್ಯವಸ್ಥೆ ಜಾರಿಗೆ ತರಬೇಕು ಎಂದಿದ್ದಾರೆ.
ರಿಷಬ್ ಶೆಟ್ಟಿ ವಿಶೇಷ ಮನವಿ
ಇದೇ ಸಭೆಯಲ್ಲಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡಿದ್ದ ಖ್ಯಾತ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ಕರಾವಳಿಯ ಕಲೆ ಮತ್ತು ಸಿನಿಮಾ ಜಗತ್ತಿನ ಬಗ್ಗೆ ಕೆಲವು ಪ್ರಮುಖ ಪ್ರಸ್ತಾಪಗಳನ್ನು ಮುಂದಿಟ್ಟರು. ಕರಾವಳಿ ಭಾಗದಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಸಿಂಗಲ್ ವಿಂಡೋ ಮೂಲಕ ಸುಲಭವಾಗಿ ಅನುಮತಿ ಮತ್ತು ಹೆಚ್ಚಿನ ಸೌಲಭ್ಯ ಕಲ್ಪಿಸಿಕೊಟ್ಟರೆ, ಇದು ಕೇರಳ-ಗೋವಾ ಮತ್ತು ಕರ್ನಾಟಕದ ಚಲನಚಿತ್ರ ರಂಗಕ್ಕೆ ದೊಡ್ಡ ಮಟ್ಟದ ಅನುಕೂಲ ಕಲ್ಪಿಸಲಿದೆ. ಕರಾವಳಿಯ ವಿಶಿಷ್ಟ ಜನಪದ ಕಲೆ, ಆಚರಣೆಗಳು ಮತ್ತು ಸಂಗೀತಕ್ಕೆ ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಅವರು ಕೋರಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಿಎಂ ಡಿ.ಕೆ.ಶಿವಕುಮಾರ್, ಕರಾವಳಿ ಮೇಳಗಳು, ಉತ್ಸವಗಳು ಮತ್ತು ಜಾಗತಿಕ ಮಟ್ಟದ ಮಾರ್ಕೆಟಿಂಗ್ ಮೂಲಕ ಕರಾವಳಿಯ ಸಾಂಸ್ಕೃತಿಕ ಹೆಮ್ಮೆಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ಸರ್ಕಾರ ಬದ್ಧ ಎಂದು ಭರವಸೆ ನೀಡಿದರು.
45 ಯೋಜನೆಗಳು, 4500 ಉದ್ಯೋಗಗಳು
ಕರ್ನಾಟಕ ಪ್ರವಾಸೋದ್ಯಮ ನೀತಿಯಡಿಯಲ್ಲಿ ಕರಾವಳಿ ವಲಯಕ್ಕಾಗಿ ಒಟ್ಟು 718.63 ಕೋಟಿ ರೂಪಾಯಿ ಹೂಡಿಕೆಯ 45 ಬೃಹತ್ ಯೋಜನೆಗಳಿಗೆ ಈಗಾಗಲೇ ಅನುಮೋದನೆ ನೀಡಲಾಗಿದೆ ಎಂದು ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು. ಸದ್ಯ ಅನುಮೋದನೆಗೊಂಡಿರುವ ಈ ಯೋಜನೆಗಳಿಂದ ಕರಾವಳಿಯಲ್ಲಿ 4,500 ಜನರಿಗೆ ಉದ್ಯೋಗಾವಕಾಶ ಸಿಗಲಿದೆ. ಆದರೆ, ಈ ಉದ್ಯೋಗ ಸೃಷ್ಟಿಯ ಪ್ರಮಾಣ ಇಷ್ಟಕ್ಕೇ ಸೀಮಿತವಾಗಬಾರದು, ಇದು ಇನ್ನಷ್ಟು ಹೆಚ್ಚಾಗಬೇಕು ಎಂದು ಸಿಎಂ ಆಶಯ ವ್ಯಕ್ತಪಡಿಸಿದರು. ಬಂಡವಾಳವನ್ನು ಮತ್ತಷ್ಟು ಆಕರ್ಷಿಸಲು ಹೂಡಿಕೆದಾರರಿಗೆ ಸರ್ಕಾರದಿಂದ ಸಹಾಯಧನ, ಬಡ್ಡಿ ಸಹಾಯಧನ ಹಾಗೂ ವಿವಿಧ ತೆರಿಗೆ ರಿಯಾಯಿತಿಗಳನ್ನು ನೀಡಲು ಸರ್ಕಾರ ಒತ್ತು ನೀಡಲಿದೆ ಎಂದಿದ್ದಾರೆ.
ದೇಶದಲ್ಲೇ ಅತಿ ಉದ್ದದ ಸಮುದ್ರ ತೀರವನ್ನು ಹೊಂದಿರುವ ಹೆಗ್ಗಳಿಕೆ ಕರ್ನಾಟಕಕ್ಕಿದೆ. ಈ ಕಡಲತೀರಗಳನ್ನು ಪ್ರವಾಸೋದ್ಯಮಕ್ಕೆ ಬಳಸಿಕೊಳ್ಳುವಾಗ ಪ್ರಕೃತಿ ಮತ್ತು ಪರಿಸರಕ್ಕೆ ಯಾವುದೇ ಹಾನಿಯಾಗದಂತೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಇದೇ ವೇಳೆ, ಕರಾವಳಿ ಭಾಗದಲ್ಲಿ 'ಹೆಲಿ ಟೂರಿಸಂ' ಅಭಿವೃದ್ಧಿಪಡಿಸಲು ಹೆಚ್ಚಿನ ಒತ್ತು ನೀಡಬೇಕು ಎಂದು ಉದ್ಯಮಿಗಳು ಸಿಎಂ ಡಿಕೆ ಶಿವಕುಮಾರ್ ಅವರಿಗೆ ಮನವಿ ಮಾಡಿದರು.













Click it and Unblock the Notifications