ವಿಮಾನದ ಕಿಟಕಿ ಮುರಿದು ಗಾಳಿಯ ರಭಸಕ್ಕೆ ಹೊರ ದಬ್ಬಲ್ಪಟ್ಟ ಪ್ರಯಾಣಿಕ : ಜೀವ ಉಳಿಸಿದ ಸೀಟ್ ಬೆಲ್ಟ್

ದೂರದ ಊರಿಗೆ ಪ್ರಯಾಣ ಮಾಡುವಾಗ ಅಥವಾ ಬೇಗ ತಲುಪಬೇಕಾಗಿರುವ ಜಾಗಕ್ಕೆ ತೆರಳುವಾಗ ಸಾಮಾನ್ಯವಾಗಿ ಆಯ್ಕೆ ಮಾಡುವುದು ವಿಮಾನ ಪ್ರಯಾಣವನ್ನು. ವಿಮಾನಯಾನ ದುಬಾರಿಯಾದರೂ ದಿನಗಳೇ ತಗಲುವ ಜರ್ನಿಯನ್ನು ಗಂಟೆಗಳಲ್ಲಿ ಮುಗಿಸಿಬಿಡಬಹುದು. ಆದರೆ, ಕೆಲವೊಮ್ಮೆ ವಿಮಾನ ಪ್ರಯಾಣ ಅತ್ಯಂತ ಭಯಾನಕ ಅನುಭವಗಳನ್ನು ನೀಡುತ್ತದೆ. ಮುಂದೆಂದೂ ಜೀವನದಲ್ಲಿ ವಿಮಾನ ಹತ್ತಲೇಬಾಋದು ಎನ್ನುವಂಥಹ ಭಯವನ್ನು ಹುಟ್ಟಿಸಿ ಬಿಡುತ್ತದೆ.

ತೆರೆದುಕೊಂಡ ವಿಮಾನದ ಕಿಟಕಿ:

ಗ್ರೀಸ್‌ನಿಂದ ಜರ್ಮನಿಗೆ ಹೋಗುವ ವಿಮಾನದಲ್ಲಿ ಇಂಥದ್ದೇ ಘಟನೆ ನಡೆದಿದೆ. ವಿಮಾನ ಸಮುದ್ರ ಮಟ್ಟದಿಂದ ಸಾವಿರಾರು ಅಡಿ ಎತ್ತರದಲ್ಲಿ ಹಾರುತ್ತಿದ್ದಂತೆಯೇ ಒಮ್ಮೆಲೇ ಕಿಟಕಿ ಸಡಿಲಗೊಂಡು ತೆರೆದುಕೊಂಡಿದೆ. ತೀವ್ರವಾದ ಗಾಳಿಯ ರಭಸಕ್ಕೆ ಪ್ರಯಾಣಿಕರೊಬ್ಬರ ದೇಹವು ಕಿಟಕಿಯಿಂದ ಹೊರಗೆ ಎಳೆಯಲ್ಪಟ್ಟಿದೆ.

Flight

ಕ್ಯಾಬಿನ್‌ನಲ್ಲಿ ಕೂಗಾಟ ಕಿರುಚಾಟ:

ಈ ವಿಮಾನ ಗ್ರೀಸ್‌ನ ಥೆಸಲೋನಿಕಿಯಿಂದ ಜರ್ಮನಿಯ ಮೆಮ್ಮಿಂಗೆನ್‌ಗೆ ಹೋಗುತ್ತಿತ್ತು. ವಿಮಾನದಲ್ಲಿದ್ದವರು ಹೇಳುವ ಪ್ರಕಾರ, ಪ್ರಯಾಣಿಕರು ಸೀಟ್ ಬೆಲ್ಟ್ ಧರಿಸಿದ್ದರಿಂದ ಏನೂ ಆಗಲಿಲ್ಲ. ಒಂದು ವೇಳೆ ಸೀಟ್‌ ಬೆಲ್ಟ್‌ ಧರಿಸದೇ ಇದ್ದಿದ್ದರೆ ಏನಾಗುತ್ತಿತ್ತೋ ಊಹಿಸುವುದು ಕೂಡಾ ಕಷ್ಟವಾಗಿರುತ್ತಿತ್ತು. ಮೊದಲು ವಿಮಾನದಲ್ಲಿ ಏನಾಗಿದೆ ಎನ್ನುವುದು ಯಾರಿಗೂ ಅರ್ಥವಾಗಿರಲಿಲ್ಲ. ಇದ್ದಕ್ಕಿದ್ದಂತೆ ಇಡೀ ಕ್ಯಾಬಿನ್‌ನಲ್ಲಿ ಕೂಗಾಟ ಕಿರುಚಾಟ ಕೇಳಿ ಬಂತು. ಎಲ್ಲರೂ ತಮ್ಮ ತಮ್ಮ ಸೀಟ್‌ ಬಿಟ್ಟು ಓಡುತ್ತಿದ್ದರು.

ಇಂಡಿಗೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಹೊಸ 'ಲೈಟ್' ಫೇರ್‌ನಲ್ಲಿ ಸಿಗಲಿದೆ ಈ ಭರ್ಜರಿ ಲಾಭ
ಇಂಡಿಗೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಹೊಸ 'ಲೈಟ್' ಫೇರ್‌ನಲ್ಲಿ ಸಿಗಲಿದೆ ಈ ಭರ್ಜರಿ ಲಾಭ

ಕಿಟಕಿಯಿಂದ ಹೊರ ತಳ್ಳಲ್ಪಟ್ಟ ವ್ಯಕ್ತಿ:

ವಿಮಾನ ಅತಿ ಎತ್ತರಕ್ಕೆ ತಲುಪುತ್ತಿದ್ದಂತೆ ಹೆಚ್ಚಿನ ಪ್ರಯಾಣಿಕರು ನಿದ್ರೆಗೆ ಜಾರಿದ್ದರು. ಇದ್ದಕ್ಕಿದ್ದಂತೆ ಟೈರ್ ಸಿಡಿದಂತೆ ದೊಡ್ಡ ಶಬ್ದ ಕೇಳಿ ಬಂತು. ಮೊದಲಿಗೆ, ವಿಮಾನದಲ್ಲಿ ತಾಂತ್ರಿಕ ದೋಷ ಎದುರಾಗಿದೆ ಎಂದೇ ಎಲ್ಲರೂ ಭಾವಿಸಿದ್ದರು. ಕ್ಯಾಬಿನ್‌ನಲ್ಲಿ ಕೂಗಾಟ ಕಿರುಚಾಟದ್ದೇ ಸದ್ದು. ಯಾರಿಗೆ ಏನಾಗಿದೆ ಎನ್ನುವುದೇ ತಿಳಿದಿರಲಿಲ್ಲ. ಯಾರೋ ಎಮರ್ಜೆನ್ಸಿ ಡೋರ್‌ ಓಪಮ್‌ ಮಾಡಿದ್ದಾರೆ. ಹಾಗಾಗಿ ಈ ಸದ್ದು ಇಷ್ಟು ರಭಸದಲ್ಲಿ ಗಾಳಿ ಬರುತ್ತಿದೆ ಎನ್ನುವುದು ಹಲವರ ಊಹೆಯಾಗಿತ್ತು. ಪ್ರತಿಯೊಬ್ಬರಿಗೂ ಅವರ ಪ್ರಾಣದ್ದೇ ಭಯ ಇಲ್ಲಿ ಕಾಡಿದ್ದು. ಆದರೆ ಮುಂದೆ ನೋಡಿದಾಗ, ಪ್ರಯಾಣಿಕರೊಬ್ಬರ ತಲೆ ಮತ್ತು ಭುಜಗಳು ವಿಮಾನದ ಕಿಟಕಿಯಿಂದ ಹೊರಗೆ ನೇತಾಡುತ್ತಿರುವುದು ಕಂಡು ಬಂತು.

ಜೀವ ಉಳಿಸಿದ ಸೀಟ್‌ ಬೆಲ್ಟ್‌:

ಇಲ್ಲಿ ಪ್ರಯಾಣಿಕ ತನ್ನ ಸೀಟ್ ಬೆಲ್ಟ್ ಅನ್ನು ಬಿಚ್ಚಿರಲಿಲ್ಲ. ಹಾಗಾಗಿ ಆ ವ್ಯಕ್ತಿಯ ಇಡೀ ದೇಹ ಕಿಟಕಿಯಿಂದ ಹೊರ ಹೋಗುವುದು ಸಾಧ್ಯವಾಗಲಿಲ್ಲ. ಅಲ್ಲದೆ ಹತ್ತಿರದಲ್ಲಿ ಕುಳಿತಿದ್ದ ಪ್ರಯಾಣಿಕ ಕೂಡಾ ತನ್ನೆಲ್ಲಾ ಶಕ್ತಿಯನ್ನು ಬಳಸಿ ಆ ವ್ಯಕ್ತಿಯ ಕಾಲನ್ನು ಬಿಗಿಯಾಗಿ ಹಿಡಿದು ಒಳಗೆ ಎಳೆಯುತ್ತಿದ್ದರು. ಹೀಗಾಗಿ ವ್ಯಕ್ತಿಯ ಪ್ರಾಣಕ್ಕೆ ಯಾವುದೇ ರೀತಿಯ ಹಾನಿಯಾಗಲಿಲ್ಲ. ಘಟನೆಯ ಸಮಯದಲ್ಲಿ, ವಿಮಾನದ ಆಕ್ಸಿಜನ್‌ ಮಾಸ್ಕ್‌ಗಳನ್ನು ಕೂಡಾ ಕೆಳಕ್ಕೆ ಇಳಿಸಲಾಗಿತ್ತು. ಪ್ರಯಾಣಿಕರ ಪ್ರಕಾರ ಕ್ಯಾಬಿನ್ ಒಳಗೆ ತೀವ್ರವಾದ ಗಾಳಿ ಮತ್ತು ವಿಚಿತ್ರ ವಾಸನೆ ಬರುತ್ತಿತ್ತು ಎನ್ನಲಾಗಿದೆ.

ವಿಮಾನ ವಿಳಂಬದಿಂದ ಅಪರೂಪದ ಹಲಸಿನ ಗಿಡ ನಾಶ: ರೈತನಿಗೆ 90,750 ರೂ. ಪರಿಹಾರ ನೀಡುವಂತೆ ಏರ್‌ ಏಷ್ಯಾಗೆ ಕೋರ್ಟ್‌ ಆದೇಶ
ವಿಮಾನ ವಿಳಂಬದಿಂದ ಅಪರೂಪದ ಹಲಸಿನ ಗಿಡ ನಾಶ: ರೈತನಿಗೆ 90,750 ರೂ. ಪರಿಹಾರ ನೀಡುವಂತೆ ಏರ್‌ ಏಷ್ಯಾಗೆ ಕೋರ್ಟ್‌ ಆದೇಶ

ಸಣ್ಣಪುಟ್ಟ ಗಾಯಗಳಿಂದ ಪಾರು:

ಮಾಧ್ಯಮ ವರದಿಗಳ ಪ್ರಕಾರ, ಗಾಯಗೊಂಡ ಪ್ರಯಾಣಿಕನು ಸೆರ್ಬಿಯಾದ ಪ್ರವಾಸಿಗನಾಗಿದ್ದ. ರಜೆಯಲ್ಲಿ ಗ್ರೀಸ್‌ನಿಂದ ಜರ್ಮನಿಗೆ ತೆರಳುತ್ತಿದ್ದ. ಅಪಘಾತದ ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಹೆಚ್ಚಿನ ಗಾಳಿಯ ಒತ್ತಡ ಮತ್ತು ಘರ್ಷಣೆಯಿಂದ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ ಪ್ರಾಣಾಪಾಯ ಇಲ್ಲ ಎನ್ನಲಾಗಿದೆ.

ಗ್ರೀಕ್ ಮಾಧ್ಯಮ ವರದಿಗಳ ಪ್ರಕಾರ, ವಿಮಾನದ ಎಂಜಿನ್‌ನ ಅವಶೇಷಗಳು ಕಿಟಕಿಗೆ ಬಡಿದು ಅದು ಬೇರ್ಪಟ್ಟಿದೆ ಎಂದು ಪ್ರಾಥಮಿಕ ತನಿಖೆಗಳು ಸೂಚಿಸಿವೆ. ಆದರೆ ಘಟನೆಗೆ ಅಸಲಿ ಕಾರಣ ಏನು ಎನ್ನುವುದನ್ನು ಅಧಿಕಾರಿಗಳು ಇನ್ನೂ ಅಧಿಕೃತವಾಗಿ ಹೇಳಿಲ್ಲ. ವಿಮಾನವು ಉತ್ತರ ಮ್ಯಾಸಿಡೋನಿಯಾದ ಮೇಲೆ ಹಾರುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ.

ವಿಮಾನಯಾನ ಸಂಸ್ಥೆ ಹೇಳಿದ್ದೇನು?:

ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ, ಈಘಟನೆ ನಡೆದಿದೆ ಎಂದು ವಿಮಾನಯಾನ ಸಂಸ್ಥೆ ರೈನೇರ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಸುರಕ್ಷತಾ ಕಾರಣಗಳಿಗಾಗಿ, ವಿಮಾನವನ್ನು ತಕ್ಷಣವೇ ಥೆಸಲೋನಿಕಿ ವಿಮಾನ ನಿಲ್ದಾಣಕ್ಕೆ ಹಿಂತಿರುಗಿಸಲಾಯಿತು. ವಿಮಾನಯಾನ ಸಂಸ್ಥೆಯ ಪ್ರಕಾರ, ಪೈಲಟ್ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್‌ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಕರೆತರಲಾಗಿದ್ದು, ಅವರ ಗಮ್ಯಸ್ಥಾನವನ್ನು ತಲುಪಲು ಮತ್ತೊಂದು ವಿಮಾನದ ವ್ಯವಸ್ಥೆ ಮಾಡಲಾಯಿತು.

ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆ:

ಘಟನೆಯ ಸುದ್ದಿ ಹೊರಬೀಳುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಯಿತು. ಘಟನೆಯ ವಿಡಿಯೋ ಕೂಡಾ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ನಂತರ, ವಿಮಾನದಲ್ಲಿ ಸೀಟ್‌ಬೆಲ್ಟ್ ಧರಿಸುವುದು ಕೇವಲ ನಿಯಮವಲ್ಲ, ಜೀವ ಉಳಿಸುವ ತಂತ್ರ ಎಂಬುದನ್ನು ಈ ಅಪಘಾತ ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಅನೇಕರು ಹೇಳಿದ್ದಾರೆ. ಅನೇಕ ಬಳಕೆದಾರರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಗಾಯಗೊಂಡ ವ್ಯಕ್ತಿಯನ್ನು ವಿಮಾನದೊಳಗೆ ಎಳೆಯುವ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.

ಈ ಘಟನೆ ಕೆಲವೇ ಸೆಕೆಂಡುಗಳ ಕಾಲ ನಡೆದಿರಬಹುದು. ಆದರೆ ಇದು ಎಲ್ಲಾ ಪ್ರಯಾಣಿಕರನ್ನು ಬೆಚ್ಚಿಬೀಳಿಸಿದೆ. ಗಾಯಗೊಂಡ ಪ್ರಯಾಣಿಕನು ತನ್ನ ಸೀಟ್ ಬೆಲ್ಟ್ ಅನ್ನು ಬಿಚ್ಚಿದ್ದರೆ ಅಥವಾ ಹತ್ತಿರದವರು ಸಹಾಯಕ್ಕೆ ತಕ್ಷಣ ಸ್ಪಂದಿಸಿರದಿದ್ದರೆ, ಪರಿಣಾಮ ಏನು ಬೇಕಾದರೂ ಆಗಿರುತ್ತಿತ್ತು. ಅದಕ್ಕಾಗಿಯೇ ತಜ್ಞರು ಯಾವಾಗಲೂ ಹಾರಾಟದ ಸಮಯದಲ್ಲಿ ನಿಮ್ಮ ಸೀಟ್ ಬೆಲ್ಟ್ ಧರಿಸಲು ಶಿಫಾರಸು ಮಾಡುತ್ತಾರೆ. ಸಣ್ಣ ಮುನ್ನೆಚ್ಚರಿಕೆಯು ದೊಡ್ಡ ಅಪಾಯವನ್ನು ತಪ್ಪಿಸಬಹುದು.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+