11ರಲ್ಲಿ 34%,ಇಂಜಿನಿಯರಿಂಗ್ನಲ್ಲಿ 24 ಬ್ಯಾಕ್ಲಾಗ್: ಎಲ್ಲ ಸೋಲುಗಳನ್ನು ಮೆಟ್ಟಿ ನಿಂತ IPS ಅಧಿಕಾರಿ ಸಮೀರ್ ಶರ್ಮಾ
ಹೆಚ್ಚಿನವರು ಈ ಯುಪಿಎಸ್ಸಿಯಂತಹ ನಾಗರೀಕ ಸೇವೆ ಪರೀಕ್ಷೆಗಳನ್ನ ಬರೆಯಲು ಟಾಪರ್ಸ್ಗಳಾಗಿರಬೇಕು. ಎಲ್ಲಾ ತರಗತಿಗಳಲ್ಲೂ ನೂರಕ್ಕೆ ನೂರು ಅಂಕ ತೆಗೆದಿರಬೇಕು. ಹೀಗೆ ಏನೇನೋ ತಪ್ಪ ಕಲ್ಪನೆಯಲ್ಲಿ ಇರುತ್ತೇವೆ. ಆದರೂ ಕೂಡ ಭಾರತದಲ್ಲಿ ಪ್ರತಿ ವರ್ಷ ಲಕ್ಷಕ್ಕೂ ಹೆಚ್ಚು ಯುವಜನರು ಯುಪಿಎಸ್ಸಿ ಪರೀಕ್ಷೆ ಬರೆದು ನಾಗರಿಕ ಸೇವೆಗೆ ಸೇರಲು ಹಗಲಿರುಳು ಕಷ್ಟ ಪಡುತ್ತಿರುತ್ತಾರೆ. ಆದರೆ, ಪರೀಕ್ಷೆ ಬರೆದಾಗ ಫೇಲ್ ಆಗುವುದು ಅಥವಾ ಶಾಲಾ-ಕಾಲೇಜು ದಿನಗಳಲ್ಲಿ ತೆಗೆದ ಕಡಿಮೆ ಅಂಕಗಳನ್ನ ನೋಡಿ ಹೆಚ್ಚಿನವರು ತಮ್ಮ ಕನಸಿನ ಹಾದಿ ಇಲ್ಲಿಗೇ ಕೊನೆಗೊಂಡಿತು ಎಂದು ಬೇಸರದಲ್ಲಿರುತ್ತಾರೆ.
ಆದರೆ, ಇತ್ತೀಚಿನ ದಿನಗಳಲ್ಲಿ ಇಡೀ ದೇಶದ ಗಮನ ಸೆಳೆದಿರುವ ಐಪಿಎಸ್ ಅಧಿಕಾರಿ ಸಮೀರ್ ಶರ್ಮಾ ಅವರ ಜೀವನದ ಕಥೆಯೇ ಬೇರೆ. ಇಂದು ಖಾಕಿ ಯೂನಿಫಾರ್ಮ್ನಲ್ಲಿ ಗತ್ತಿನಿಂದ ದೇಶದ ಸೇವೆ ಮಾಡುತ್ತಿರುವ ಸಮೀರ್, ಒಂದು ಕಾಲದಲ್ಲಿ ತರಗತಿಯಲ್ಲಿ ಜಸ್ಟ್ ಪಾಸ್ ಆಗಲು ಕೂಡ ತುಂಬ ಪರದಾಡುತ್ತಿದ್ದ ಒಬ್ಬ ತೀರಾ ಸಾಧಾರಣ ವಿದ್ಯಾರ್ಥಿಯಾಗಿದ್ದರು. ಅವರು 11ನೇ ತರಗತಿಯಲ್ಲಿದ್ದಾಗ ಕೇವಲ ಶೇ. 34ರಷ್ಟು ಅಂಕ ಪಡೆದಿದ್ದರು. ಇನ್ನೂ ಇಂಜಿನಿಯರಿಂಗ್ ದಿನಗಳಲ್ಲಿ ಬರೋಬ್ಬರಿ 24 ಬ್ಯಾಕ್ಲಾಗ್ಗಳನ್ನು ಹೊಂದಿದ್ದರಂತೆ.

ಇಂತಹ ಮಾರ್ಕ್ಸ್ಗಳನ್ನ ನೋಡಿದ ಯಾವುದೇ ಸಾಮಾನ್ಯ ವ್ಯಕ್ತಿ ಆಗಿದ್ದರು ತನ್ನ ಕನಸುಗಳನ್ನು ಕೈಬಿಡುತ್ತಿದ್ದರು. ಆದರೆ ಸಮೀರ್ ಹಾಗೆ ಮಾಡಲಿಲ್ಲ. ಅವರು ಇಂದು ಮಾಡಿರುವ ಈ ಸಾಧನೆ ದೇಶಾದಲ್ಲಿರುವ ಲಕ್ಷಾಂತರ ಯುಪಿಎಸ್ಸಿ ಆಕಾಂಕ್ಷಿಗಳಿಗೆ ಹೊಸ ಭರವಸೆಯಾಗಿದೆ.
ಸಮೀರ್ ಶರ್ಮಾ ಅವರ ಶೈಕ್ಷಣಿಕ ಹಿನ್ನೆಲೆ
ಸಮೀರ್ ಶರ್ಮಾ ಅವರ ಶೈಕ್ಷಣಿಕ ಹಿನ್ನೆಲೆ ನೋಡುವುದಾದರೆ ಅವರು ಎಂದಿಗೂ ತರಗತಿಯ ಟಾಪರ್ಗಳ ಪಟ್ಟಿಯಲ್ಲೇ ಇರಲಿಲ್ಲ. ಹೌದು, ಅವರು 10ನೇ ತರಗತಿಯಲ್ಲಿ ಶೇ. 57ರಷ್ಟು ಅಂಕ ಗಳಿಸಿದ್ದರು. 11ನೇ ತರಗತಿಯಲ್ಲಿ ಕೇವಲ ಶೇ. 34ರಷ್ಟು ಅಂಕ ಗಳಿಸಿ ಪಾಸ್ ಆಗಿದ್ದರು. ನಂತರ 12ನೇ ತರಗತಿಯಲ್ಲಿ ಕೊಂಚ ಸುಧಾರಣೆ ಕಂಡು ಶೇ. 60ರಷ್ಟು ಅಂಕ ಗಳಿಸಿದರು.
ಶಾಲಾ ಶಿಕ್ಷಣ ಮುಗಿದ ನಂತರವೂ ಅವರ ಕಷ್ಟಗಳು ಕೊನೆಯಾಗಲಿಲ್ಲ. ಇಂಜಿನಿಯರಿಂಗ್ ಪದವಿ ವ್ಯಾಸಂಗ ಮಾಡುವಾಗ ಅವರು ಸತತವಾಗಿ 24 ವಿಷಯಗಳಲ್ಲಿ ಫೇಲ್ ಆಗಿ ಬ್ಯಾಕ್ಲಾಗ್ ಉಳಿಸಿಕೊಂಡಿದ್ದರು. ಇದರಿಂದಾಗಿ ಪದವಿ ಮುಗಿಸುವುದೇ ಅವರಿಗೆ ಕಷ್ಟವಾಗಿತ್ತು. ಆದರೆ, ಅವರು ತಮ್ಮ ಈ ಸೋಲುಗಳನ್ನು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಪ್ರತಿ ಸೋಲನ್ನೂ ಕೂಡ ಹೊಸದನ್ನು ಕಲಿಯುವ ಒಂದು ಉತ್ತಮ ಅವಕಾಶ ಎಂದುಕೊಂಡರು.
ಸೋಲನ್ನು ಜಯದ ಮೆಟ್ಟಿಲಾಗಿಸಿಕೊಂಡ ಐಪಿಎಸ್ ಅಧಿಕಾರಿ
ಯಾರೇ ಆಗಲಿ ಇಷ್ಟೊಂದು ಸೋಲುಗಳನ್ನು ಕಂಡಾಗ ತಮ್ಮ ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತಾರೆ. ಆದರೆ ಸಮೀರ್ ಶರ್ಮಾ ಹಾಗೆ ಮಾಡಲಿಲ್ಲ. ತಮ್ಮಲ್ಲಿ ತಾವು ನಂಬಿಕೆ ಕಳೆದುಕೊಂಡಿರಲಿಲ್ಲ. ತಮ್ಮ ದೃಢ ಸಂಕಲ್ಪ ಮತ್ತು ಪರಿಶ್ರಮದಿಂದ ಇಡೀ ಚಿತ್ರಣವನ್ನೇ ಬದಲಾಯಿಸಿದರು. ನಂತರ ಸಮೀರ್ ತಮ್ಮ ಹಳೆಯ ಓದುವ ಪದ್ಧತಿಯನ್ನು ಬದಲಾಯಿಸಿಕೊಂಡು, ಹೆಚ್ಚು ಶಿಸ್ತನ್ನು ರೂಢಿಸಿಕೊಂಡರು. ಕೇವಲ ತಕ್ಷಣದ ವೈಫಲ್ಯಗಳ ಬಗ್ಗೆ ಯೋಚಿಸುವ ಬದಲು ದೂರದೃಷ್ಟಿಯ ಗುರಿಯತ್ತ ಗಮನ ಹರಿಸಿದರು.
ಅವರ ಈ ನಿರಂತರ ಪ್ರಯತ್ನಕ್ಕೆ ಕೊನೆಗೂ ಅದ್ಭುತ ಪ್ರತಿಫಲ ದೊರೆಯಿತು. ಸತತ 18 ತಿಂಗಳುಗಳ ಕಾಲ ನಿರಂತರ ಪರೀಕ್ಷೆ ತಯಾರಿ ನಡೆಸಿದರು. ನಂತರ ಸಮೀರ್ ಅವರು ಭಾರತದ ಅತ್ಯಂತ ಕಠಿಣ ಸ್ಪರ್ಧಾತ್ಮಕ ಪರೀಕ್ಷೆಯಾದ ಯುಪಿಎಸ್ಸಿಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 182ನೇ ರ್ಯಾಂಕ್ (AIR 182) ಗಳಿಸಿ ತೇರ್ಗಡೆಯಾದರು. ಆ ಮೂಲಕ 2011ರ ಬ್ಯಾಚ್ನ ಎಜಿಎಂಯುಟಿ ಜಂಟಿ ಕೇಡರ್ನಲ್ಲಿ ಭಾರತೀಯ ಪೊಲೀಸ್ ಸೇವೆಗೆ ಸೇರ್ಪಡೆಯಾದರು.
ಸಮೀರ್ ಅವರ ಈ ಯಶಸ್ಸಿನ ಕಥೆಯು ಇಂದಿಗೂ ಸಾವಿರಾರು ವಿದ್ಯಾರ್ಥಿಗಳಿಗೆ ಸ್ಪೂರ್ತಿ. ಏಕೆಂದರೆ, ಈ ಪರೀಕ್ಷೆಯ ಸಿದ್ಧತೆಯ ಸಮಯದಲ್ಲಿ ಎದುರಾಗುವ ಮಾನಸಿಕ ಒತ್ತಡ, ಫಲಿತಾಂಶ ಹಾಗೂ ನಮ್ಮ ಮೇಲೆ ನಮಗೆ ಹುಟ್ಟುವ ಅನುಮಾನಗಳ ಬಗ್ಗೆ ಸಾಮಾನ್ಯವಾಗಿ ಯಾರೂ ಮಾತನಾಡುವುದಿಲ್ಲ. ಆದರೆ ಸಮೀರ್ ತಮ್ಮ ಸೋಲುಗಳ ಬಗ್ಗೆ ಮುಕ್ತವಾಗಿ ಹಂಚಿಕೊಳ್ಳುವ ಮೂಲಕ ವಿದ್ಯಾರ್ಥಿಗಳಲ್ಲಿ ಧೈರ್ಯ ತುಂಬುತ್ತಿದ್ದಾರೆ. ಯುಪಿಎಸ್ಸಿ ಪರೀಕ್ಷೆಯು ಕೇವಲ ಶಾಲಾ ದಿನಗಳ ಟಾಪರ್ಗಳಿಗೆ ಮಾತ್ರ ಸೀಮಿತವಾಗಿಲ್ಲ; ಬದಲಾಗಿ ನಿರಂತರ ಶ್ರಮ, ತಪ್ಪುಗಳಿಂದ ಕಲಿಯುವ ಗುಣ ಮತ್ತು ತಾಳ್ಮೆ ಇದ್ದರೆ ಯಾರು ಬೇಕಾದರೂ ಸಾಧಿಸಬಹುದು ಎಂಬುದನ್ನು ಸಮೀರ್ ಶರ್ಮಾ ಒಂದು ಉತ್ತಮ ಉದಾಹರಣೆ.












Click it and Unblock the Notifications