IMD Weather Forecast: ದೇಶದ ಈ ಭಾಗಗಳಲ್ಲಿ ಜುಲೈ ಅಂತ್ಯದವರೆಗೂ ಭಾರಿ ಮಳೆ ಮುನ್ಸೂಚನೆ
IMD Weather Forecast: ದೇಶದ ಬಹುತೇಕ ಭಾಗಗಳಲ್ಲಿ ಮುಂಗಾರು ಆವರಿಸಿದ್ದು, ಜುಲೈ ತಿಂಗಳ ಕೊನೆವರೆಗೂ ವಾಡಿಕೆಯ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ. ಹಾಗಾದ್ರೆ ಎಲ್ಲೆಲ್ಲಿ ವರುಣನ ಆರ್ಭಟ ಹೆಚ್ಚಿರಲಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಈಗಾಗಲೇ ಭಾರತದಲ್ಲಿ ನೈಋತ್ಯ ಮುಂಗಾರು ಮಾರುತಗಳು ಸಂಪೂರ್ಣವಾಗಿ ವ್ಯಾಪಿಸಿವೆ. ಆದರೂ ದೇಶದಾದ್ಯಂತ ಮಳೆಯ ಪ್ರಮಾಣ ಮಾತ್ರ ಒಂದೇ ರೀತಿ ಇಲ್ಲ. ಜೂನ್ ತಿಂಗಳ ಕೊನೆಯಲ್ಲಿ ವಾಡಿಕೆಗಿಂತ ಶೇಕಡಾ 40ರಷ್ಟು ಮಳೆಯ ಕೊರತೆಯಾಗಿದ್ದು, ಜುಲೈ ಮೊದಲ ವಾರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಇದು ಶೇಕಡಾ 14ಕ್ಕೆ ಇಳಿಕೆಯಾಗಿದೆ. ಆದರೆ ಹವಾಮಾನ ಇಲಾಖೆಯ ಪ್ರಕಾರ, ಇದೀಗ ಮುಂಗಾರು ಪಡೆದಿದ್ದರೂ ಸಹ, ಕೆಲವು ಪ್ರದೇಶಗಳಲ್ಲಿ ಮತ್ತೆ ಒಣಹವೆ ಮುಂದುವರೆಯುವ ಸಾಧ್ಯತೆಯಿದೆ.

ಜುಲೈ ಅಂತ್ಯದವರೆಗೂ ಭಾರಿ ಮಳೆ ಮುನ್ಸೂಚನೆ
ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಜೂನ್ 1ರಿಂದ ಜುಲೈ 9ರ ವರೆಗೆ ದೇಶದಲ್ಲಿ ವಾಡಿಕೆಗಿಂತ ಶೇಕಡಾ 14ರಷ್ಟು ಕಡಿಮೆ ಮಳೆಯಾಗಿದೆ. ಈ ಇಡೀ ತಿಂಗಳಿನಲ್ಲಿ ವಾಡಿಕೆಯ ಶೇಕಡಾ 94ರಷ್ಟು ಮಳೆಯಾಗುವ ನಿರೀಕ್ಷೆಯಿದೆ ಎಂದು ಎಂದು ಮುನ್ಸೂಚನೆ ನೀಡಿದೆ. ಇನ್ನೂ ಜುಲೈನಲ್ಲಿ ಸುರಿಯುವ ಮಳೆಯು ಕೃಷಿ ಮತ್ತು ಜಲಾಶಯಗಳ ಮಟ್ಟ ಹೆಚ್ಚಾಗಲು ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ.
ಭಾರಿ ಮಳೆಯಿಂದಾಗಿ ಜಲಾವೃತ, ಸಂಚಾರ ದಟ್ಟಣೆ
ಜುಲೈ ಆರಂಭದಲ್ಲಿ ಮಹಾರಾಷ್ಟ್ರದ ಮುಂಬೈ ಸೇರಿದಂತೆ ದೇಶದ ಹಲವೆಡೆ ರಣಮಳೆ ಸುರಿದಿದೆ. ಭಾರಿ ಮಳೆ ಪರಿಣಾಮ ಮುಂಬೈನ ಜಲಾಶಯಗಳ ನೀರಿನ ಸಂಗ್ರಹ ಮಟ್ಟವು ಏರಿಕೆಯಾಗಿದ್ದು, ನೀರಿನ ಆತಂಕ ದೂರವಾಗಿದೆ. ರಾಷ್ಟ್ರ ರಾಜಧಾನಿ ನವದೆಹಲಿ ಸೇರಿದಂತೆ ಉತ್ತರ ಭಾರತದ ಕೆಲವು ಭಾಗಗಳಲ್ಲೂ ಭಾರಿ ಮಳೆಯಿಂದಾಗಿ ಜಲಾವೃತ ಮತ್ತು ಸಂಚಾರ ದಟ್ಟಣೆಯ ಸಮಸ್ಯೆಗಳು ಸಂಭವಿಸಿವೆ.
ಹಲವೆಡೆ ಮಳೆ ಕೊರತೆ ಸಮಸ್ಯೆ
ಆದರೆ ಬಿಹಾರ್, ಪೂರ್ವ ಉತ್ತರ ಪ್ರದೇಶ, ಜಾರ್ಖಂಡ್, ಪಂಜಾಬ್, ಮಹಾರಾಷ್ಟ್ರದ ಮರಾಠವಾಡ, ಕೇರಳ ಮತ್ತು ಕರ್ನಾಟಕದ ಕೆಲವು ಭಾಗಗಳಲ್ಲಿ ನಿರೀಕ್ಷಿತ ಪ್ರಮಾಣಣದಲ್ಲಿ ಮಳೆಯಾಗಿಲ್ಲ. ಈ ಭಾಗಗಳಲ್ಲಿ ಮಳೆಯ ಕೊರತೆ ಮುಂದುವರಿದಿದ್ದು, ಬಿತ್ತನೆ ಕಾರ್ಯದ ಮೇಲೆ ಪರಿಣಾಮ ಬೀರಿದೆ. ಈ ಭಾಗಗಳ ಅಲ್ಲಲ್ಲಿ ಮಾತ್ರ ಭಾರಿ ಮಳೆ ಮುಂದುವರೆದಿದೆ ಅಷ್ಟೇ. ಮುಂದಿನ ದಿನಗಳಲ್ಲಿ ಬಹುತೇಕ ಕಡೆಗಳಲ್ಲಿ ಮಳೆ ಸುರಿಯುವ ಸಾಧ್ಯತೆಯಿದೆ ಎನ್ನುವ ಮುನ್ಸೂಚನೆಯನ್ನು ನೀಡಿದೆ.
ಭಾರತೀಯ ಹವಾಮಾನ ಇಲಾಖೆಯ ಹಿರಿಯ ವಿಜ್ಞಾನಿ ಶಶಿಕಾಂತ್ ಅವರ ಪ್ರಕಾರ, ಮಳೆ ತರುವ ಮುಂಗಾರು ಮಾರುತಗಳು ಪ್ರಸ್ತುತ ಉತ್ತರದ ಕಡೆಗೆ ಚಲಿಸುತ್ತಿವೆ. ಇದರ ಪರಿಣಾಮ ಮುಂಬರುವ ದಿನಗಳಲ್ಲಿ ಉತ್ತರ ಪ್ರದೇಶ, ಬಿಹಾರ್, ಪಶ್ಚಿಮ ಬಂಗಾಳ, ಸಿಕ್ಕಿಂ ಮತ್ತು ಈಶಾನ್ಯ ರಾಜ್ಯಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಇದೇ ಸಮಯದಲ್ಲಿ ದೆಹಲಿಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಲಿದ್ದು, ಒಣಹವೆ ಮುಂದುವರೆಯಲಿದೆ ಎಂದು ತಿಳಿಸಿದೆ. ಒಟ್ಟಿನಲ್ಲಿ ಈ ಬಾರಿ ದೇಶದ ಬಹುತೇಕ ಭಾಗಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಿರಲಿದೆ ಎಂದು ಮುನ್ಸೂಚನೆ ನೀಡಿದೆ.












Click it and Unblock the Notifications