19 ಕೋಟಿ ರೂಪಾಯಿ ವೆಚ್ಚದ ವಿಂಡ್ ಟನಲ್ ಕೆಳಸೇತುವೆ ಕಾಮಗಾರಿ ಮುಕ್ತಾಯ ಯಾವಾಗ? ಸಚಿವರಿಂದ ಬಿಗ್ ಅಪ್ಡೇಟ್
Bengaluru Wind Tunnel Underpass: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅಭಿವೃದ್ಧಿ ಕಾರ್ಯಗಳು ಭರದಿಂದ ಸಾಗಿವೆ. ಇದೀಗ ವಿಂಡ್ ಟನಲ್ ರಸ್ತೆ ಅಂಡರ್‌ಪಾಸ್ ಕಾಮಗಾರಿಗೆ ವೇಗ ನೀಡಲು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಹಾಗಾದ್ರೆ ಎಲ್ಲಿವರೆಗೂ ಗಡುವು ನೀಡಲಾಗಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಹಳೆ ವಿಮಾನ ನಿಲ್ದಾಣ ರಸ್ತೆಯ ಯು.ಆರ್. ರಾವ್ ಉಪಗ್ರಹ ಕೇಂದ್ರದ ಬಳಿಯಿರುವ ವಿಂಡ್ ಟನಲ್ ಜಂಕ್ಷನ್‌ಗೆ ಶುಕ್ರವಾರ (ಜುಲೈ 10) ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ಬಳಸಿಕೊಳ್ಳುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದರು.

3 ತಿಂಗಳಲ್ಲಿ ಕಾಮಗಾರಿ ಮುಗಿಸುವಂತೆ ಸೂಚನೆ
ಕೆಳಸೇತುವೆ ಕಾಮಗಾರಿಗೆ ಸಂಬಂಧಿಸಿದಂತೆ ಜಲಮಂಡಳಿಯ ಪೈಪ್‌ಲೈನ್, ಒಳಚರಂಡಿ, ಬೆಸ್ಕಾಂ ಕೇಬಲ್‌ಗಳು, ಓಎಫ್‌ಸಿ ಕೇಬಲ್‌ಗಳು ಸೇರಿದಂತೆ ಇತರೆ ಯುಟಿಲಿಟಿಗಳ ಸ್ಥಳಾಂತರ ಕಾರ್ಯ ಪೂರ್ಣಗೊಳಿಸಲಾಗಿದೆ. ಇದೀಗ ತಡೆಗೋಡೆ(ರಿಟೈನಿಂಗ್ ವಾಲ್) ಕಾಮಗಾರಿ ಪ್ರಗತಿಯಲ್ಲಿದ್ದು, ಅದಕ್ಕೆ ಮತ್ತಷ್ಟು ವೇಗ ನೀಡಿ 3 ತಿಂಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ರವರು ಮಾತನಾಡಿ, 'ವಾಹನ ಸಂಚಾರಕ್ಕೆ ಯಾವುದೇ ಅಡಚಣೆ ಆಗದಂತೆ ಕಾಮಗಾರಿ ನಡೆಸಲಾಗುತ್ತಿದೆ. ಜಂಕ್ಷನ್‌ನ ಎರಡೂ ಬದಿಗಳಲ್ಲಿರುವ ರಕ್ಷಣಾ, ಇಸ್ರೋ, ಎನ್.ಎ.ಎಲ್. ಇಲಾಖೆ ಹಾಗೂ ಖಾಸಗಿ ಜಾಗಗಳಲ್ಲಿ ತಾತ್ಕಾಲಿಕ ರಸ್ತೆಗಳನ್ನು ತ್ವರಿತವಾಗಿ ನಿರ್ಮಿಸಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತದೆ,' ಎಂದರು.
ಕಾಮಾಗರಿ ವೆಚ್ಚ ಹಾಗೂ ಉದ್ದ ಏಷ್ಟು?
ವಿಂಡ್ ಟನಲ್ ಜಂಕ್ಷನ್‌ನಲ್ಲಿ 19 ಕೋಟಿ ರೂಪಾಯಿ ವೆಚ್ಚದಲ್ಲಿ 300 ಮೀಟರ್ ಉದ್ದದ ಕೆಳಸೇತುವೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಎರಡೂ ಬದಿಗಳಲ್ಲಿ 7.5 ಮೀಟರ್ ಅಗಲದ 4 ಪಥಗಳ ಕೆಳಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಪ್ರಸ್ತುತ ಒಂದು ಭಾಗದಲ್ಲಿ ಉಪಯುಕ್ತತೆಗಳ ಸ್ಥಳಾಂತರ, ಆರ್.ಸಿ.ಸಿ. ಗೋಡೆ ನಿರ್ಮಾಣ, ಸರ್ವೀಸ್ ರಸ್ತೆ ನಿರ್ಮಾಣ ಹಾಗೂ ಮಧ್ಯಭಾಗದಲ್ಲಿ ಅಳವಡಿಸಲಾಗುವ ಬಾಕ್ಸ್‌ಗಳ ತಯಾರಿಕೆ ಸೇರಿದಂತೆ ಶೇಕಡ 75ರಷ್ಟು ಕಾಮಗಾರಿ ಪೂರ್ಣಗೊಂಡಿದೆ.
ಯುಟಿಲಿಟಿಗಳ ಸ್ಥಳಾಂತರ ಕಾರ್ಯವನ್ನು ಪೂರ್ಣಗೊಲೀಸಲಾಗಿದ್ದು, ತಡೆಗೋಡೆ ಕಾಮಗಾರಿ ಕಾರ್ಯ ಪ್ರಗತಿಯಲ್ಲಿದೆ. ತಡೆಗೋಡೆ ಕಾರ್ಯ ಮುಗಿದ ಬಳಿಕ ಮಧ್ಯಭಾಗಕ್ಕೆ ಸಿದ್ಧಪಡಿಸಿರುವ ಬಾಕ್ಸ್‌ಗಳನ್ನು ಅಳವಡಿಸಿ, ಕೊನೆಯ ಹಂತದಲ್ಲಿ ಸರ್ವೀಸ್ ರಸ್ತೆಗಳನ್ನು ನಿರ್ಮಾಣ ಮಾಡಲಾಗುವು ಎಂದು ತಿಳಿಸುದ್ದಾರೆ. ಪರಿಶೀಲನೆ ವೇಳೆ ಕೇಂದ್ರ ನಗರ ಪಾಲಿಕೆ ಆಯುಕ್ತರಾದ ವೆಂಕಟಾ ಚಲಪತಿ, ಮುಖ್ಯ ಅಭಿಯಂತರರಾದ ವಿಜಯ್ ಕುಮಾರ್ ಹರಿದಾಸ್, ಹೇಮಲತಾ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಕಾಮಗಾರಿ ವಿಳಂಬಕ್ಕೆ ಕಾರಣ ಏನು?
ಹಳೇ ಏರ್‌ಪೋರ್ಟ್ ರಸ್ತೆಯನ್ನು ಸಿಗ್ನಲ್ ಮುಕ್ತ ಕಾರಿಡಾರ್ ಮಾಡುವ ಯೋಜನೆಯ ಭಾಗವಾಗಿ ಈ ಅಂಡರ್‌ಪಾಸ್ ನಿರ್ಮಾಣವನ್ನು ಯೋಜಿಸಲಾಗಿತ್ತು. ಸುಮಾರು ಮೂರು ವರ್ಷಗಳಿಗೂ ಹೆಚ್ಚು ಕಾಲ ನೆನೆಗುದಿಗೆ ಬಿದ್ದಿದ್ದ ಈ 19 ಕೋಟಿ ರೂಪಾಯಿ ವೆಚ್ಚದ ಯೋಜನೆಗೆ ಕೊನೆಗೂ ವೇಗ ಸಿಕ್ಕಿದೆ. ಈ ಹಿಂದೆ ರಕ್ಷಣಾ ಇಲಾಖೆ, ಇಸ್ರೋ ಮತ್ತು ನ್ಯಾಷನಲ್ ಏರೋಸ್ಪೇಸ್ ಲ್ಯಾಬೊರೇಟರೀಸ್ ಸಂಸ್ಥೆಗಳಿಂದ ಭೂಸ್ವಾಧೀನ ಪ್ರಕ್ರಿಯೆ ತಡವಾಗಿದ್ದು ಮತ್ತು ಭೂಗತ ಪೈಪ್‌ಲೈನ್ ಹಾಗೂ ಕೇಬಲ್‌ಗಳ ಸ್ಥಳಾಂತರದ ಸವಾಲುಗಳಿಂದಾಗಿ ಕಾಮಗಾರಿ ವಿಳಂಬವಾಗಿತ್ತು.
ಪ್ರಸ್ತುತ ಮಳೆಗಾಲದ ಅವಧಿಯನ್ನು ಹೊರತುಪಡಿಸಿ ಈ ಕಾಮಗಾರಿಯನ್ನು ಪೂರ್ಣಗೊಳಿಸಲು ಕನಿಷ್ಠ 180 ದಿನಗಳ ಕಾಲಾವಕಾಶದ ಅಗತ್ಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ಪ್ರಮುಖ ಐಟಿ ಕಾರಿಡಾರ್‌ಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯ ಅಂಡರ್‌ಪಾಸ್ ಪೂರ್ಣಗೊಂಡರೆ ದೊಮ್ಲೂರು ಮತ್ತು ಮರತಹಳ್ಳಿ ನಡುವಿನ ಪ್ರಯಾಣಿಕರಿಗೆ ಟ್ರಾಫಿಕ್ ಕಿರಿಕಿರಿಯಿಂದ ಮುಕ್ತಿ ಸಿಗಲಿದೆ ಎನ್ನಲಾಗುತ್ತಿದೆ.












Click it and Unblock the Notifications