ಓದಲು ಯಾವುದೇ ವಯಸ್ಸಿನ ಮಿತಿಯಿಲ್ಲ: 35 ವರ್ಷಗಳ ಬಳಿಕ ಕಾಲೇಜು ಪರೀಕ್ಷೆ ಬರೆದ 50 ವರ್ಷದ ಮಹಿಳೆ, Video Viral
ಹೊಸದನ್ನಾ ಏನಾದರೂ ಕಲಿಯಲು ಉತ್ಸಾಹ ಬೇಕೇ ಹೊರತು ವಯಸ್ಸಲ್ಲ. ಸಾಧಿಸುವ ಛಲ ಮತ್ತು ಕಲಿಯುವ ಹಸಿವು ಇದ್ದರೆ, ಯಾವುದೇ ವಯಸ್ಸಿನಲ್ಲಿಯೂ ನಮ್ಮ ಕನಸುಗಳನ್ನು ನನಸಾಗಿಸಬಹುದು. ಬದುಕಿನ ಜಂಜಾಟಗಳಲ್ಲಿ ಕಳೆದುಹೋದ ಶಿಕ್ಷಣದ ಕನಸಿಗೆ ಮರುಜೀವ ನೀಡಲು ದೃಢಸಂಕಲ್ಪವೊಂದೇ ಸಾಕು. ಈ ಮಾತನ್ನು ಅಕ್ಷರಶಃ ನಿಜ ಮಾಡಿದ್ದಾರೆ 50 ವರ್ಷದ ಮಹಿಳೆಯೊಬ್ಬರು. ಶಿಕ್ಷಣಕ್ಕೆ ಯಾವುದೇ ವಯಸ್ಸಿನ ಹಂಗಿಲ್ಲ ಎಂಬುದನ್ನು ತಮ್ಮ ಕೆಲಸದ ಮೂಲಕ ಇವರು ಇಡೀ ಜಗತ್ತಿಗೆ ಸಾರಿದ್ದಾರೆ. ಬರೋಬ್ಬರಿ 35 ವರ್ಷಗಳ ಸುದೀರ್ಘ ವಿರಾಮದ ನಂತರ ಮತ್ತೆ ಕಾಲೇಜು ಮೆಟ್ಟಿಲೇರಿ, ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಲು ಮುಂದಾಗಿರುವ ಇವರ ಸ್ಫೂರ್ತಿದಾಯಕ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸಿದೆ.
50ನೇ ವಯಸ್ಸಿನಲ್ಲಿ ಕಾಲೇಜು ಪರೀಕ್ಷೆ
ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಹಲವಾರು ವಿಡಿಯೋಗಳು ವೈರಲ್ ಆಗುತ್ತವೆ. ಆದರೆ, ಕೆಲವು ವಿಡಿಯೋಗಳು ಮಾತ್ರ ವೀಕ್ಷಕರ ಮನಸ್ಸಲ್ಲಿ ಅಚ್ಚಾಗಿ ಉಳಿಯುತ್ತವೆ. ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಹರಿದಾಡುತ್ತಿರುವ ವಿಡಿಯೋವೊಂದು ನೆಟ್ಟಿಗರ ಗಮನ ಸೆಳೆದಿದೆ. 'ಓದಲು ಯಾವುದೇ ವಯಸ್ಸಿನ ಮಿತಿಯಿಲ್ಲ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ, 50 ವರ್ಷದ ಮಹಿಳೆಯೊಬ್ಬರು ಮುಖದಲ್ಲಿ ಮಂದಹಾಸ ಹಾಗೂ ಆತ್ಮವಿಶ್ವಾಸದೊಂದಿಗೆ ಕಾಲೇಜು ಕ್ಯಾಂಪಸ್ ಪ್ರವೇಶಿಸುತ್ತಿರುವುದನ್ನು ಕಾಣಬಹುದು. ಜೀವನದ ಈ ಘಟ್ಟದಲ್ಲಿ ಹೊಸದಾಗಿ ಕಲಿಯಲು ಮತ್ತು ಹಿಂದೆ ಉಳಿದ ಪರೀಕ್ಷೆಗಳನ್ನು ಪೂರ್ಣಗೊಳಿಸಲು ಅವರು ತೋರಿರುವ ಉತ್ಸಾಹ ಎಲ್ಲರಿಗೂ ಮಾದರಿಯಾಗಿದೆ.

ಈ ವಿಡಿಯೋವನ್ನು ಮೂಲತಃ ಮಂಜು ನಾರಂಗ್ ಎಂಬವರು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದು, "50ನೇ ವಯಸ್ಸಿನಲ್ಲಿ ವಿದ್ಯಾರ್ಥಿನಿ, ಕಾಲೇಜು ಪರೀಕ್ಷೆಯ ಕ್ಲಾಸ್" ಎಂದು ಬರೆದುಕೊಂಡಿದ್ದಾರೆ. ಇದರ ಜೊತೆಗೆ "35 ವರ್ಷಗಳಾದರೂ ನೀವು ಇನ್ನೂ ಬ್ಯಾಕ್ ಪೇಪರ್ಸ್ ಕ್ಲಿಯರ್ ಮಾಡುತ್ತಿದ್ದೀರಿ" ಎಂಬ ಸಾಲುಗಳನ್ನು ಸಹ ಸೇರಿಸಲಾಗಿದೆ.
ವೈರಲ್ ವಿಡಿಯೋದಲ್ಲಿ ಏನಿದೆ?
ಈ ವೈರಲ್ ವಿಡಿಯೋದಲ್ಲಿ ಆ ಮಹಿಳೆ ಕಾಲೇಜಿಗೆ ಪ್ರವೇಶಿಸುವ ಮುನ್ನ ಕ್ಯಾಮೆರಾ ಕಡೆಗೆ ನೋಡಿ ಮುಗುಳ್ನಗುತ್ತಾ ಮಾತನಾಡಿದ್ದಾರೆ. "ಗಾಯ್ಸ್, ಇಂದು ನನ್ನ ಕಾಲೇಜಿನಲ್ಲಿ ಪರೀಕ್ಷೆ ಇದೆ ಮತ್ತು ಇಂದು ನಾನು ಕಾಲೇಜಿಗೆ ಎಂಟ್ರಿ ಕೊಡುತ್ತಿದ್ದೇನೆ. ನಾನು ಎಕ್ಸಾಮ್ ಬರೆಯಲು ಹೋಗುತ್ತಿದ್ದೇನೆ," ಎಂದು ಅವರು ಅತ್ಯಂತ ಲವಲವಿಕೆಯಿಂದ ಹೇಳಿದ್ದಾರೆ. ಅವರ ದನಿಯಲ್ಲಿ ಯಾವುದೇ ಅಂಜಿಕೆ ಅಥವಾ ಮುಜುಗರವಿರಲಿಲ್ಲ; ಬದಲಾಗಿ ಒಂದು ರೀತಿಯ ಆಟದ ಉತ್ಸಾಹ ಹಾಗೂ ನೆಮ್ಮದಿ ಎದ್ದು ಕಾಣುತ್ತಿತ್ತು. ಕ್ಯಾಂಪಸ್ ಕಡೆಗೆ ಅವರು ಹೆಜ್ಜೆ ಹಾಕುತ್ತಿದ್ದಾಗ, ಹಿನ್ನೆಲೆಯಲ್ಲಿ ಅವರ ಮಗ "ಆಲ್ ದಿ ಬೆಸ್ಟ್" ಎಂದು ಹೇಳಿ ತಾಯಿಗೆ ಪ್ರೋತ್ಸಾಹ ತುಂಬುತ್ತಿರುವ ಧ್ವನಿ ಕೂಡ ಕೇಳಿಸುತ್ತದೆ.
ಶಿಕ್ಷಣಕ್ಕೆ ವಯಸ್ಸಿಲ್ಲ: ನೆಟ್ಟಿಗರಿಂದ ಪ್ರಶಂಸೆಯ ಮಹಾಪೂರ
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಎಲ್ಲೆಡೆ ಹರಡಿದ್ದು, ಶಿಕ್ಷಣಕ್ಕೆ ವಯಸ್ಸಿಲ್ಲ ಎಂದು ನೆಟ್ಟಿಗರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ವಯಸ್ಸು ಕೇವಲ ಒಂದು ಸಂಖ್ಯೆ, ಕಲಿಯುವ ಆಸಕ್ತಿ ಇದ್ದರೆ ಯಾವುದೂ ಅಸಾಧ್ಯವಲ್ಲ ಎಂದು ಬಳಕೆದಾರರು ಕಮೆಂಟ್ ಮಾಡುತ್ತಿದ್ದಾರೆ. "ವಾಹ್ ಮಮ್ಮಿ ವಾಹ್, ನೀವು ಕಮಾಲ್ ಮಾಡಿದ್ದೀರಿ," ಎಂದು ಒಬ್ಬರು ಪ್ರತಿಕ್ರಿಯಿಸಿದರೆ, ಮತ್ತೊಬ್ಬರು ತಮಾಷೆಯಾಗಿ "ಪರೀಕ್ಷೆ ವೇಳೆ ಆಂಟಿಯನ್ನು ಉತ್ತರ ಕೇಳುವುದನ್ನು ಊಹಿಸಿಕೊಳ್ಳಿ," ಎಂದು ಬರೆದಿದ್ದಾರೆ.
ಮತ್ತೊಬ್ಬ ಬಳಕೆದಾರರು ಭಾವುಕರಾಗಿ ಪ್ರತಿಕ್ರಿಯಿಸಿದ್ದು, "ಈ ವಯಸ್ಸಿನಲ್ಲಿಯೂ ಅಧ್ಯಯನ ಮಾಡುವ ನಿಮ್ಮ ಹಸಿವು ಮತ್ತು ಧೈರ್ಯ ಅದ್ಭುತ. ನಿಮ್ಮ ಬ್ಯಾಕ್ ಪೇಪರ್ಸ್ ಕ್ಲಿಯರ್ ಮಾಡಲು ಸಹಾಯ ಮಾಡುವ ಅವಕಾಶ ನನಗಿದ್ದಿದ್ದರೆ, ಅದು ನನ್ನ ವೃತ್ತಿಜೀವನದ ಸಾಧನೆಯಾಗುತ್ತಿತ್ತು," ಎಂದು ಬರೆದುಕೊಂಡಿದ್ದಾರೆ. "ಫೈನಲ್ ಬಾಸ್, ಎಂದಿಗೂ ಬಿಟ್ಟುಕೊಡಬೇಡಿ," ಮತ್ತು "ನಿಮ್ಮ ಬಗ್ಗೆ ನನಗೆ ತುಂಬಾ ಹೆಮ್ಮೆಯಿದೆ ಆಂಟಿ" ಎಂದು ಅನೇಕರು ಶುಭಕೋರಿದ್ದಾರೆ. ಒಟ್ಟಾರೆಯಾಗಿ, ಕಲಿಯುವಿಕೆ ಎಂಬುದು ನಿರಂತರ ಪ್ರಕ್ರಿಯೆ ಎಂಬುದನ್ನು ಈ ವಿಡಿಯೋ ಎಲ್ಲರಿಗೂ ಸಾರಿ ಹೇಳಿದೆ.












Click it and Unblock the Notifications