ನಟಿ ರುಕ್ಮಿಣಿ ವಸಂತ್ ಬಿಕಿನಿ ಕೇಸ್; ಇವರೇ ನೋಡಿ ನಕಲಿ ವಿಡಿಯೋ ಹರಿಬಿಟ್ಟ ಕಿರಾತಕರು
ಸೆಲೆಬ್ರಿಟಿಗಳ ನಕಲಿ ವಿಡಿಯೋಗಳನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದ ಕಿಡಿಗೇಡಿಗಳಿಗೆ ಪೊಲೀಸರ ಈ ನಡೆ ಈಗ ನಡುಕ ಹುಟ್ಟಿಸಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನ ದುರುಪಯೋಗಪಡಿಸಿಕೊಂಡು ಸ್ಯಾಂಡಲ್‌ವುಡ್ ಖ್ಯಾತ ನಟಿ ರುಕ್ಮಿಣಿ ವಸಂತ್ ಅವರ ತೇಜೋವಧೆ ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಬರ್ ಕಮಾಂಡ್ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಜಾಲ ಬೀಸಿದ ಪೊಲೀಸರು, ಈ ಕೃತ್ಯದ ಹಿಂದಿರುವ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳ ಹೆಡೆಮುರಿ ಕಟ್ಟಿದ ಸೈಬರ್ ಟೀಂ
ರುಕ್ಮಿಣಿ ವಸಂತ್ ಅವರ ಹೆಸರಿನಲ್ಲಿ ಸಾರ್ವಜನಿಕವಾಗಿ ಮಾನಹಾನಿ ಮಾಡುವ ಉದ್ದೇಶದಿಂದಲೇ ಈ ನಕಲಿ ವಿಡಿಯೋವನ್ನು ಇಂಟರ್ನೆಟ್‌ನಲ್ಲಿ ಹರಿಬಿಡಲಾಗಿತ್ತು. ಈ ಕುರಿತು ದೂರು ದಾಖಲಾಗುತ್ತಿದ್ದಂತೆ ಎಚ್ಚೆತ್ತ ಸೈಬರ್ ಕಮಾಂಡ್ ವಿಭಾಗದ ವಿಶೇಷ ಪೊಲೀಸರು ಆರೋಪಿಗಳಿಗೆ ಬಲೆಬೀಸಿದ್ದರು. ವಿಡಿಯೋ ಅಪ್‌ಲೋಡ್ ಆದ ಮೂಲ, ಅದಕ್ಕೆ ಬಳಸಲಾದ ಇಂಟರ್ನೆಟ್ ಐಪಿ ಅಡ್ರೆಸ್ ಹಾಗೂ ಸೋಶಿಯಲ್ ಮೀಡಿಯಾ ಖಾತೆಗಳನ್ನು ಜಾಲಾಡಿದ ಅಧಿಕಾರಿಗಳು ಆರೋಪಿಗಳು ಎಲ್ಲಿದ್ದಾರೆ ಎಂಬುದನ್ನು ನಿಖರವಾಗಿ ಪತ್ತೆಹಚ್ಚಿದ್ದಾರೆ.

ತಾಂತ್ರಿಕ ಸಾಕ್ಷ್ಯಾಧಾರಗಳು ಮತ್ತು ಡಿಜಿಟಲ್ ಮಾಹಿತಿ ಬೆನ್ನಟ್ಟಿ ಜಾಲ ಬೀಸಿದ್ದ ಬೆಂಗಳೂರು ಸೈಬರ್ ಪೊಲೀಸರ ತಂಡವು ಮೂವರನ್ನು ವಶಕ್ಕೆ ಪಡೆದಿದೆ. ಬಂಧಿತರನ್ನು ಬೆಂಗಳೂರಿನಲ್ಲಿ ವಾಸವಿರುವ ಚಂದ್ರಕಾಂತ್ (33), ರಂಜಿತ್ (25), ಬಾಗಲಕೋಟೆ ಮೂಲದ ರವಿಕುಮಾರ್ (24) ಎಂದು ಗುರುತಿಸಲಾಗಿದೆ. ಕೆಲ ದಿನಗಳ ಹಿಂದೆ ನಟಿ ರುಕ್ಮಿಣಿ ವಸಂತ್ ಅವರ ಮುಖವನ್ನು ಎಐ ತಂತ್ರಜ್ಞಾನದ ಮೂಲಕ ಅಶ್ಲೀಲವಾಗಿ ಮಾರ್ಪಡಿಸಿ, ವಿಡಿಯೋ ಇಂಟರ್ನೆಟ್‌ನಲ್ಲಿ ಹರಿಬಿಡಲಾಗಿತ್ತು. ಈ ಕುರಿತು ದೂರು ದಾಖಲಾಗುತ್ತಿದ್ದಂತೆ ಸೈಬರ್ ಕಮಾಂಡ್ ವಿಭಾಗದ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು.
ನಕಲಿ ವಿಡಿಯೋ ಹಂಚಿಕೊಳ್ಳುವವರಿಗೆ ವಾರ್ನಿಂಗ್
ಡೀಪ್‌ಫೇಕ್ ಮತ್ತು ಎಐ ತಂತ್ರಜ್ಞಾನದ ಮೂಲಕ ನಟ-ನಟಿಯರ ಅಥವಾ ಸಾಮಾನ್ಯ ಜನರ ಮುಖವನ್ನು ಅಶ್ಲೀಲವಾಗಿ ಮಾರ್ಪಡಿಸಿ ವೀಕ್ಷಣೆ ಹಾಗೂ ಲೈಕ್ಸ್‌ಗಾಗಿ ಹಂಚಿಕೊಳ್ಳುವ ಪ್ರವೃತ್ತಿ ಇತ್ತೀಚೆಗೆ ಹೆಚ್ಚಾಗಿದೆ. ಆದರೆ ರುಕ್ಮಿಣಿ ವಸಂತ್ ಪ್ರಕರಣದಲ್ಲಿ ಪೊಲೀಸರು ತೋರಿರುವ ತ್ವರಿತ ನಡೆ, ಇಂತಹ ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗುವವರಿಗೆ ಕಠಿಣ ಎಚ್ಚರಿಕೆಯ ಸಂದೇಶ ರವಾನಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಬರುವ ಯಾವುದೇ ವಿಡಿಯೋಗಳ ನೈಜತೆಯನ್ನು ಪರಿಶೀಲಿಸದೆ ಫಾರ್ವರ್ಡ್ ಮಾಡುವುದು ಅಥವಾ ಹಂಚಿಕೊಳ್ಳುವುದು ಕೂಡ ಕಾನೂನು ಪ್ರಕಾರ ಅಪರಾಧವಾಗುತ್ತದೆ. ಸಿಕ್ಕಿಬಿದ್ದರೆ ಕಠಿಣ ಜೈಲು ಶಿಕ್ಷೆ ಎದುರಿಸಬೇಕಾಗುತ್ತದೆ. ನಟಿ ರುಕ್ಮಿಣಿ ವಸಂತ್ ಅವರ ಸೈಬರ್ ಹೋರಾಟ ಮತ್ತು ಪೊಲೀಸರ ಈ ಯಶಸ್ವಿ ಕಾರ್ಯಾಚರಣೆ ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಳ್ಳುವ ಸೈಬರ್ ಅಪರಾಧಿಗಳಿಗೆ ಕಾನೂನಿನ ಭಯ ಹುಟ್ಟಿಸುವಂತೆ ಮಾಡಿದೆ.
ಇತ್ತೀಚೆಗೆ ನಟಿಯರಾದ ರಶ್ಮಿಕಾ ಮಂದಣ್ಣ, ಆಲಿಯಾ ಭಟ್ ಅವರಂತಹ ಸ್ಟಾರ್ ನಟಿಯರು ಡೀಪ್‌ಫೇಕ್ ತಂತ್ರಜ್ಞಾನಕ್ಕೆ ಬಲಿಯಾಗಿದ್ದರು. ಈಗ ಸ್ಯಾಂಡಲ್‌ವುಡ್‌ನಲ್ಲಿ ರುಕ್ಮಿಣಿ ವಸಂತ್ ಅವರು ತಕ್ಷಣವೇ ಸೈಬರ್ ಪೊಲೀಸರ ಮೊರೆ ಹೋಗಿ ದೂರು ದಾಖಲಿಸಿರುವುದಕ್ಕೆ ಚಿತ್ರರಂಗದ ಪ್ರಮುಖರು ಬೆಂಬಲ ಸೂಚಿಸಿದ್ದಾರೆ. ಹೊಸದಾಗಿ ರಚನೆಯಾಗಿರುವ ಬೆಂಗಳೂರು ಸೈಬರ್ ಕಮಾಂಡ್ ವಿಭಾಗವು ಕೇವಲ ಕೆಲವೇ ದಿನಗಳಲ್ಲಿ ತಾಂತ್ರಿಕ ಸಾಕ್ಷ್ಯಗಳನ್ನು ಕಲೆಹಾಕಿ ಆರೋಪಿಗಳನ್ನು ಬಂಧಿಸುವ ಮೂಲಕ ಕಿಡಿಗೇಡಿಗಳಿಗೆ ತಕ್ಕ ಪಾಠ ಕಲಿಸಿದೆ.













Click it and Unblock the Notifications