Bird Flu: ಮೊಟ್ಟೆ-ಕೋಳಿ ತಿನ್ನುವವರೇ ಹುಷಾರ್!- ಹೆಚ್ಚಾಗಿದೆ ಹಕ್ಕಿಜ್ವರ
ಕೋಳಿ ಮೊಟ್ಟೆ ಹೆಚ್ಚು ಇಷ್ಟಪಟ್ಟು ತಿಂತೀರಾ? ಹಾಗಾದರೆ ಈ ಸುದ್ದಿಯನ್ನು ನೀವು ಓದಲೇಬೇಕು. ಯಾಕೆಂದರೆ ಬೇಸಿಗೆ ಬಿಸಿಲು ಹೆಚ್ಚಾದಂತೆ ನಾನಾ ಖಾಯಿಲೆಗಳು ಅಧಿಕವಾಗುತ್ತಿವೆ. ಕೆಲವೆಡೆ ಹಕ್ಕಿಜ್ವರ ಹೆಚ್ಚಾಗಿದ್ದು ಜನರನ್ನು ಆತಂಕಕ್ಕೆ ದೂಡಿದೆ.
ರಾಂಚಿಯಲ್ಲಿ ಹಕ್ಕಿ ಜ್ವರ ಹೆಚ್ಚಾಗಿ ಹಬ್ಬುತ್ತಿದೆ. ರಾಂಚಿಯ ಹೋಟ್ವಾರ್ ಪ್ರಾದೇಶಿಕ ಕೋಳಿ ಫಾರಂನಲ್ಲಿ ಇತ್ತೀಚೆಗೆ ಏಕಾಏಕಿ ಕೋಳಿಗಳ ಸಾವು ವರದಿಯಾಗಿತ್ತು. ಈ ಕೋಳಿಗಳ ಮಾದರಿ ಪರೀಕ್ಷೆಯಲ್ಲಿ ಹಕ್ಕಿಜ್ವರ ಇರುವುದು ಸ್ಪಷ್ಟವಾಗಿದೆ. ಭೋಪಾಲ್‌ನ ICAR-ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸ್‌ಗೆ ಕಳುಹಿಸಲಾದ ಮಾದರಿಗಳಲ್ಲಿ H5N1 ಏವಿಯನ್ ಇನ್‌ಫ್ಲುಯೆಂಜಾ ದೃಢಪಟ್ಟಿದೆ. ಹಕ್ಕಿಜ್ವರ ದೃಢಪಟ್ಟ ತಕ್ಷಣ ಇಲಾಖೆಯ ಅಧಿಕಾರಿಗಳು ಕ್ರಮಕೈಗೊಂಡಿದ್ದಾರೆ.

ಜಿಲ್ಲಾಡಳಿತದ ಕ್ರಿಯಾ ಯೋಜನೆ
ಹಕ್ಕಿಜ್ವರ ದೃಢಪಟ್ಟ ನಂತರ ಕ್ರಿಯಾ ಯೋಜನೆಯಡಿ ರಾಂಚಿ ಜಿಲ್ಲಾಡಳಿತ ಕ್ಷಿಪ್ರ ಪ್ರತಿಕ್ರಿಯೆ ತಂಡವನ್ನು ರಚಿಸಿದೆ. ಜಿಲ್ಲಾಧಿಕಾರಿ ರಾಹುಲ್ ಕುಮಾರ್ ಸಿನ್ಹಾ ಆದೇಶದ ಮೇರೆಗೆ, ಕ್ಷಿಪ್ರ ಪ್ರತಿಕ್ರಿಯೆ ತಂಡ ರಚಿಸಲಾಗಿದೆ. ಪ್ರತಿ ತಂಡದಲ್ಲಿ ಪಶುವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ತಂಡದಲ್ಲಿ ಜಿಲ್ಲಾ ಪಶುಸಂಗೋಪನಾ ಅಧಿಕಾರಿ ಮತ್ತು ಸಹಾಯಕ ನಿರ್ದೇಶಕರು ಸಹ ಇರುತ್ತಾರೆ.
ಒಂದು ಕಿಲೋಮೀಟರ್ ವ್ಯಾಪ್ತಿಯೊಳಗೆ ಕಟ್ಟೆಚ್ಚರ
ಕ್ರಿಯಾ ಯೋಜನೆಯಡಿ ಸೋಂಕಿತ ಕೇಂದ್ರದಿಂದ 1 ಕಿಲೋಮೀಟರ್ ವ್ಯಾಪ್ತಿಯಲ್ಲಿ ಕೋಳಿ ಸಾಕಾಣಿಕೆಗೆ ಸಂಬಂಧಿಸಿದ ಸಮೀಕ್ಷೆ ಕಾರ್ಯವನ್ನು ಮಾಡಲಾಗುವುದು. ಇದರಿಂದಾಗಿ ಆಡಳಿತಾತ್ಮಕ ಮಟ್ಟದಲ್ಲಿ ಸೋಂಕಿತ ಕೋಳಿಗಳನ್ನು ಕೊಲ್ಲಲು ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಸೋಂಕಿತ 10 ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಪ್ರದೇಶವನ್ನು ಕಣ್ಗಾವಲು ವಲಯವೆಂದು ಗುರುತಿಸುವ ಮೂಲಕ ಈ ಪ್ರದೇಶದಲ್ಲಿ ಏವಿಯನ್ ಇನ್ಫ್ಲುಯೆನ್ಸದ ತೀವ್ರ ನಿಗಾ ವಹಿಸಲಾಗುವುದು.
ಮುನ್ನೆಚ್ಚರಿಕೆ ಕ್ರಮವಾಗಿ ಸೋಂಕಿತ ಪ್ರಾದೇಶಿಕ ಕೋಳಿ ಫಾರಂ, ಹೋತ್ವಾರ್, ರಾಂಚಿ (ಸೋಂಕಿತ ಪ್ರದೇಶ)ಯಿಂದ ಒಂದು ಕಿಲೋಮೀಟರ್ ವ್ಯಾಪ್ತಿಯೊಳಗೆ ಯಾವುದೇ ಜೀವಂತ/ಸತ್ತ ಕೋಳಿ ಉತ್ಪನ್ನಗಳು ಮತ್ತು ಮೊಟ್ಟೆಗಳ ಖರೀದಿ ಹಾಗೂ ಮಾರಾಟವನ್ನು ನಿಷೇಧಿಸಲಾಗಿದೆ. ಅಲ್ಲದೆ ಮುಂದಿನ ಆದೇಶದವರೆಗೆ ಕೋಳಿ ಹಾಗೂ ಮೊಟ್ಟೆ ಸಾಗಣೆಯನ್ನು ಸಹ ನಿಷೇಧಿಸಲಾಗಿದೆ.

ಮನುಷ್ಯರಿಗೂ ಹರಡುವ ಹಕ್ಕಿಜ್ವರ
ಹಕ್ಕಿ ಜ್ವರ ಎಂದರೆ ಅದು ಹಕ್ಕಿಗಳಿಗೆ ಬರುವಂತಹ ಜ್ವರವಾಗಿದೆ. ಆದರೆ ಇದು ಮನುಷ್ಯರಿಗೆ ಕೂಡ ಹಬ್ಬುವ ಕಾರಣದಿಂದಾಗಿ ತುಂಬಾ ಭೀತಿಯ ವಾತಾವರಣ ಸೃಷ್ಟಿಯಾಗಿದೆ. ಹಲವಾರು ರೀತಿಯ ಹಕ್ಕಿ ಜ್ವರದ ಮಾದರಿಗಳನ್ನು ಪತ್ತೆ ಮಾಡಲಾಗಿದ್ದು, ಇದರಲ್ಲಿ ನಾಲ್ಕು ಮಾದರಿಯಾಗಿರುವಂತಹ H5N1, H7N9, H5N6 ಮತ್ತು H5N8 ಮಾದರಿಯ ಹಕ್ಕಿ ಜ್ವರಗಳು ಇತ್ತೀಚಿನ ವರ್ಷಗಳಲ್ಲಿ ತುಂಬಾ ಚಿಂತೆಯನ್ನು ಸೃಷ್ಟಿ ಮಾಡಿದೆ.
H5N1, H7N9, H5N6 ಮಾದರಿಯ ಹಕ್ಕಿ ಜ್ವರದ ವೈರಸ್ ವಿಶ್ವದ ಹಲವು ದೇಶಗಳಲ್ಲಿ ಕಂಡುಬಂದಿದ್ದು, ಇದರಿಂದಾಗಿ ಸಾವಿರಾರು ಮಂದಿ ಸಾವನ್ನಪ್ಪಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ H5N1 ಸಾಮಾನ್ಯ ಮಾದರಿಯ ಹಕ್ಕಿ ಜ್ವರವಾಗಿದ್ದು, ಇದು ಮನುಷ್ಯರಲ್ಲಿ 1997ರಲ್ಲಿ ಪತ್ತೆ ಮಾಡಲಾಗಿದ್ದು, ಇದು ಪೀಡಿತರಲ್ಲಿ ಶೇ.60ರಷ್ಟು ಮಂದಿಯ ಪ್ರಾಣಕ್ಕೆ ಹಾನಿ ಉಂಟು ಮಾಡಿದೆ.
ಹಕ್ಕಿಗಳಿಗೆ ಇದು ತುಂಬಾ ಮಾರಣಾಂತಿಕ ವೈರಸ್ ಆಗಿದ್ದು, ಮನುಷ್ಯರು ಹಾಗೂ ಪ್ರಾಣಿಗಳಿಗೆ ಕೂಡ ಇದು ಸುಲಭವಾಗಿ ಹಬ್ಬುವುದು. ಆದರೆ ಮನುಷ್ಯರಿಂದ ಮನುಷ್ಯರಿಗೆ ಇದುವರೆಗೆ ಹಬ್ಬಿರುವುದು ತಿಳಿದುಬಂದಿಲ್ಲ. H5N8 ಮಾದರಿಯ ಹಕ್ಕಿ ಜ್ವರದ ವೈರಸ್ ಇದುವರೆಗೆ ವಿಶ್ವದಲ್ಲಿ ಮನುಷ್ಯರಲ್ಲಿ ಕಂಡುಬಂದಿಲ್ಲ ಎಂದು ರಾಷ್ಟ್ರೀಯ ಆರೋಗ್ಯ ಇಲಾಖೆಯು ಹೇಳಿದೆ.












Click it and Unblock the Notifications