ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ರಥೋತ್ಸವ ಸಂಪನ್ನ: ಲಕ್ಷಾಂತರ ಭಕ್ತರು ಭಾಗಿ
ಚಾಮರಾಜನಗರ, ನವೆಂಬರ್ 14: ನಾಡಿನ ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಒಂದಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಸೋಮವಾರ ದೀಪಾವಳಿ ರಥೋತ್ಸವ ಅದ್ಧೂರಿಯಾಗಿ ನೆರವೇರಿತು.
ಇಂದು ಬೆಳಗ್ಗೆ 8.50 ರಿಂದ 9.10 ರವರಗಿನ ಶುಭ ಲಗ್ನದಲ್ಲಿ ಸಾಲೂರು ಮಠದ ಸ್ವಾಮೀಜಿ ನೇತೃತ್ವದಲ್ಲಿ ರಥೋತ್ಸವ ನಡೆಯಿತು, ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ಸಕಲ ವ್ಯವಸ್ಥೆಯನ್ನು ಕೈಗೊಂಡಿದ್ದರು.
ಮಲೆ ಮಹದೇಶ್ವರ ಬೆಟ್ಟದ ಬೇಡಗಂಪನ ಸಮುದಾಯದ ಅರ್ಚಕರಿಂದ ರಥಕ್ಕೆ ಪೂಜೆ ಸಲ್ಲಿಸಿದ ಬಳಿಕ ಬೇಡಗಂಪಣ ಸಮುದಾಯದ ಹೆಣ್ಣು ಮಕ್ಕಳು ರಥಕ್ಕೆ ಬೆಲ್ಲದಾರತಿ ಮಾಡಿದ ಬಳಿಕ ರಥವನ್ನು ಲಕ್ಷಾಂತರ ಮಂದಿ ಭಕ್ತರು ಎಳೆದರು. ಕಳೆದ 3 ದಿನಗಳಿಂದ ಕ್ಷೇತ್ರಕ್ಕೆ ರಾಜ್ಯ, ಹೊರರಾಜ್ಯದಿಂದ 4-5 ಲಕ್ಷ ಮಂದಿ ಭೇಟಿ ಕೊಟ್ಟಿದ್ದಾರೆ.

ಜಾತ್ರೆಗೆ ಬರುವ ಲಕ್ಷಾಂತರ ಮಂದಿ ಭಕ್ತರಿಗೆ ಪ್ರಾಧಿಕಾರವು ನಿರಂತರ ದಾಸೋಹಕ್ಕೆ ಮುಂದಾಗಿದ್ದು ಬೆಳಗ್ಗೆ ತಿಂಡಿ, ಮಧ್ಯಾಹ್ನ, ರಾತ್ರಿ ಊಟದ ವ್ಯವಸ್ಥೆ ಮಾಡಲಾಗ ಭಕ್ತರಿಗೆ ಅಲ್ಲಲ್ಲಿ ಕುಡಿಯುವ ನೀರು, ಶೌಚಗೃಹದ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಭಕ್ತರಿಗೆ ಪ್ರಸಾದವನ್ನಾಗಿ ನೀಡುವ ಸಲುವಾಗಿ ಸುಮಾರು ನಾಲ್ಕರಿಂದ ಐದು ಲಕ್ಷ ಲಡ್ಡು ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
ದೀಪಾವಳಿ ಜಾತ್ರೆ ಅಂಗವಾಗಿ ದೇವಾಲಯದ ರಾಜಗೋಪುರ, ಮುಖ್ಯ ದ್ವಾರ ಹಾಗೂ ಇತರೆ ದ್ವಾರಗಳನ್ನು ತಳಿರು ತೋರಣ, ಹೂ ಗಳಿಂದ ಅಲಂಕರಿಸಲಾಗಿತ್ತು. ಅಲ್ಲದೇ ದೇವಾಲಯ ಹಾಗೂ ಸಾಲೂರು ಮಠಕ್ಕೆ ತೆರಳುವ ಮಾರ್ಗವನ್ನು ಹಾಗೂ ಪ್ರಮುಖ ರಸ್ತೆಗಳಲ್ಲಿ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಪಾದಯಾತ್ರೆ ಸೇರಿದಂತೆ ಬೆಟ್ಟಕ್ಕೆ ಬಂದ ಲಕ್ಷಾಂತರ ಭಕ್ತರು ಮಾದಪ್ಪನಿಗೆ ಉಘೇ ಎಂದು ದೇವಾಲಯದ ಸೌಂದರ್ಯವನ್ನು ಕಣ್ತುಂಬಿಕೊಂಡರು.
ಮಲೆ ಮಹದೇಶ್ವರ ಬೆಟ್ಟದಲ್ಲಿ ಪೊಲೀಸ್ ಬಂದೋಬಸ್ತ್
ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗಲು ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ಸಲುವಾಗಿ ತಾಳಬೆಟ್ಟದಲ್ಲಿ ಬಸ್ ನಿಲ್ದಾಣ ಮಾಡಲಾಗಿದೆ. ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಸಂಚಾರಕ್ಕೆ ತಡೆಯೊಡ್ಡಲಾಗಿದೆ. ಜಾತ್ರಾ ಮಹೋತ್ಸವದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯಬಾರದು ಎನ್ನುವ ಮುನ್ನೆಚ್ಚರಿಕೆ ಕ್ರಮವಹಿಸಿ ಪೊಲೀಸ್ ಇಲಾಖೆಯಿಂದ ಕೆಎಸ್‌ಆರ್‌ಪಿ ತುಕಡಿ, ಜಿಲ್ಲೆಯ ವಿವಿಧೆಡೆಯಿಂದ ಪೊಲೀಸ್ ಅಧಿಕಾರಿಗಳು ಹಾಗೂ ಹೋಂ ಗಾರ್ಡ್ಸ್ ಗಳನ್ನು ನಿಯೋಜಿಸಲಾಗಿತ್ತು. ಒಟ್ಟಾರೆ 550 ಜನರ ಪೊಲೀಸ್ ಹಾಗೂ ಹೋಂ ಗಾರ್ಡ್ಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.












Click it and Unblock the Notifications