ದೀಪಾವಳಿಗೆ ಮನೆಯ ಮುಂದೆ ಸಗಣಿ ಪಾಂಡವರು: ಏನಿದು ಉತ್ತರ ಕರ್ನಾಟಕದ ವಿಶೇಷ ಆಚರಣೆ..?
ಹುಬ್ಬಳ್ಳಿ, ನವೆಂಬರ್ 15: ಈಗ ನಾಡಿನೆಲ್ಲೆಡೆ ಎಲ್ಲೆಡೆ ಬೆಳಕಿನ ಹಬ್ಬ ದೀಪಾವಳಿ ಸಡಗರವೋ ಸಡಗರ. ನೋಡಿದೆಲ್ಲೆಡೆ ಪಟಾಕಿ ಬಾಣಗಳ ಬಿರುಸು. ಸಿಹಿ ಹಂಚಿಕೆ ಸಂಭ್ರಮ. ಆದರೆ ಉತ್ತರ ಕರ್ನಾಟಕದಲ್ಲಿ ಇವೆಲ್ಲವುಗಳ ಮಧ್ಯೆ ದೀಪಾವಳಿ ಪಾಡ್ಯದ ದಿನವನ್ನ ಅತ್ಯಂತ ವಿಶಿಷ್ಟವಾಗಿ ಆಚರಿಸಲಾಗುತ್ತದೆ.
ಗೋವಿನ ಸಗಣಿ ಮೂಲಕ ಪಂಚ ಪಾಂಡವರನ್ನು ರೂಪಿಸಿ ಅವುಗಳಿಗೆ ನೈವೇದ್ಯ ನೀಡುವ ಪರಿ ಅತ್ಯಂತ ವಿಶಿಷ್ಟವಾಗಿದೆ. ಉತ್ತರ ಕರ್ನಾಟಕದ ಮನೆ ಮನೆಗಳ ಮುಂದೆ ವಿರಾಜಿಸುವ ಈ ಸಗಣಿ ಪಾಂಡವರ ಸಂಪ್ರದಾಯಿಕ ಪದ್ಧತಿ ಕುರಿತು ವಿಶೇಷವಾದ ಮಾಹಿತಿ ಇಲ್ಲಿದೆ.

ಉತ್ತರ ಕರ್ನಾಟಕದಲ್ಲಿ ಈಗ ಎಲ್ಲರ ಮನೆ ಮನೆಗಳ ಮುಂದೆ ಎಲ್ಲಿ ನೋಡಿದರೂ ಕಾಣುವುದು ಗೋವಿನ ಸಗಣಿಯಿಂದ ತಯಾರಿಸಿರುವ ಪಾಂಡವರ ಮೂರ್ತಿಗಳು. ಇವುಗಳ ಮಧ್ಯೆ ಸಗಣಿ ಪಾಂಡವರಿಗೆ ನಡೆಯುತ್ತಿರೋ ನೈವೇದ್ಯ, ಸಾಲದ್ದಕ್ಕೆ ಮಹಿಳೆಯರು ಸಗಣಿ ಪಾಂಡವರಿಗೆ ಆರತಿ ಬೆಳಗುವುದು.
ಹುಬ್ಬಳ್ಳಿಯ ವಿವಿಧ ಕಡೆಗಳಲ್ಲಿ ಮಹಾಭಾರತದ ಪಾಂಡವರನ್ನು ನೆನಪಿಸುವಂತಹ ಬಲಿಪಾಡ್ಯದ ದಿನದಂದು ಗೋವಿನ ಸಗಣೆಯಿಂದ ವಿಶಿಷ್ಟವಾಗಿ ಈ ಮೂರ್ತಿಗಳನ್ನ ತಯಾರಿಸಲಾಗುತ್ತದೆ. ಹೀಗೆ ತಯಾರಿಸಿರೋ ಪಾಂಡವರಿಗೆ ವಿಶಿಷ್ಟ ಖಾದ್ಯದ ನೈವೇದ್ಯವು ಕೂಡಾ ನಡೆಯುತ್ತದೆ. ಅಂದರೆ ಅಂದು ವನವಾಸದಲ್ಲಿ ಪಾಂಡವರು ಕಲ್ಲಿನಿಂದ ಕಡಬು ಮತ್ತು ಮುಳ್ಳಿನಿಂದ ಶಾವಿಗೆಯನ್ನು ತಯಾರಿಸಿ ಊಟ ಮಾಡಿದರು ಎಂಬ ಪ್ರತೀತಿ ಇದೆ.
ಈ ಹಿನ್ನೆಲೆಯಲ್ಲಿ ಸಗಣೆಯ ಪಾಂಡವರನ್ನು ರೂಪಿಸಿ ಸುತ್ತ ಬಿಳಿದಾರವನ್ನು ಸುತ್ತುತ್ತಾರೆ. ಜೊತೆಗೆ ಪಾಂಡವರ ಛತ್ರಿ-ಚಾಮರ, ಕಿರೀಟಗಳಿದ್ದಂತೆ ಎಂದು ಉತ್ತರಾಣಿ ಕಡ್ಡಿ ಇಡುತ್ತಾರೆ. ಬಿಳಿ, ಹಳದಿ ಹೂವು, ಅನ್ನ ಮೊಸರಿನ ನೈವೇದ್ಯವನ್ನು ಈ ಸಗಣೆ ಪಾಂಡವರಿಗೆ ನೀಡಲಾಗುತ್ತದೆ.

ಇನ್ನು ದೀಪಾವಳಿಯ ಪಾಡ್ಯದ ದಿನದಂದು ಜನತೆ ಗೋವಿನ ಸಗಣೆಯನ್ನು ತಂದು ಆ ಮೂಲಕ ಪಂಚ ಪಾಂಡವರನ್ನು ರೂಪಿಸುತ್ತಾರೆ. ಅವುಗಳನ್ನ ತಮ್ಮ ಮನೆಯ ಬಾಗಿಲಿನ ಅಕ್ಕಪಕ್ಕದಲ್ಲಿ ಅಥವಾ ಮೇಲ್ಛಾವಣಿಯ ಮೇಲೆ ಇಟ್ಟು ಅವುಗಳನ್ನು ಪೂಜಿಸುವ ಪರಿ ವಿಶೇಷ. ಇಂತಹ ಪದ್ಧತಿ ಆಚರಣೆಯಿಂದ ನಮ್ಮ ಮನೆ ಮಕ್ಕಳಿಗೆ ಭವಿಷ್ಯದಲ್ಲಿ ಪಾಂಡವರ ರೀತಿಯಲ್ಲಿ ವನವಾಸ ಬರಬಾರದೆಂಬ ಉದ್ದೇಶದಿಂದ ಹಾಗೂ ಈ ಹಿಂದಿನಿಂದಲೂ ಈ ಸಂಪ್ರದಾಯ ಪಾಲಿಸುವ ರೂಢಿ ಇದ್ದು ಅದನ್ನು ನಾವು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ ಎಂದು ಸ್ಥಳೀಯರು ಹೇಳಿದ್ದಾರೆ.
ಒಟ್ಟಿನಲ್ಲಿ ಆಧುನಿಕತೆಯ ಭರಾಟೆಯಲ್ಲಿ ಇಂದು ಯುವ ಜನಾಂಗ ಸಂಪ್ರದಾಯ ಮರೆಯುತ್ತಿದ್ದಾರೆಂಬ ಅಂಶಗಳ ಮಧ್ಯೆ ಗುಮ್ಮಟನಗರಿ ಮಹಿಳೆಯರು ಸಂಪ್ರದಾಯಗಳನ್ನು ಉಳಿಸಿಕೊಂಡು ಸಗಣೆ ಪಾಂಡವರನ್ನು ಪೂಜಿಸಿ ಆರಾಧಿಸುವ ಪರಿ ಇನ್ನೂ ವಿಶೇಷವಾಗಿದೆ. ದೀಪಾವಳಿ ಭರ್ಜರಿಯಾಗಿ ನಡೆಯುತ್ತಿದ್ದು, ಇದರೊಟ್ಟಿಗೆ ಸಗಣೆ ಪಾಂಡವರು ಕೊಂಚ ವಿಶೇಷವಾಗಿ ಕಾಣಸಿಗುತ್ತಿದ್ದಾರೆ.












Click it and Unblock the Notifications