ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿನ್ನದ ನಾಡು ಕಸದ ತೊಟ್ಟಿಯಲ್ಲ- ಕೆಜಿಎಫ್ ಗರಮಾಗರಂ

By Srinath
|
Google Oneindia Kannada News

koodankulam-atomic-waste-disposal-kgf-protests-nov-23
ಕೋಲಾರ‌, ನ.23: 'ನಮ್ಮದು ಚಿನ್ನದ ನಾಡು; ಕಸದ ತೊಟ್ಟಿಯಲ್ಲ' ಎಂದು ಗರಂ ಆಗಿರುವ ಕೆಜಿಎಫ್ ಜನ ಶುಕ್ರವಾರ ಬೆಳಗ್ಗೆಯಿಂದಲೇ ಬಂದ್, ಪ್ರತಿಭಟನೆಗಳಲ್ಲಿ ತೊಡಗಿದ್ದಾರೆ.

ಚಿಕಿತ್ಸಕ ದೃಷ್ಟಿಯ ಕನ್ನಡಪ್ರಭ ವ್ಯಂಗ್ಯಚಿತ್ರಕಾರ ಎಸ್ ವಿ ಪದ್ಮನಾಭ್ ಇಂದು 'ಪಂಚ್ ಮುಖಿ'ಯಲ್ಲಿ ಗೀಚಿರುವಂತೆ 'ಬೆಂಗಳೂರಿಗೆ ಹುಣ್ಣಾಗಿ ಕಾಡುತ್ತಿರುವ ಕಸವನ್ನು ತೆಗೆದುಕೊಂಡು ಹೋಗಿ ಚೆನ್ನೈನಲ್ಲಿ ಹಾಕ್ತೀವಿ ಅಂತ ಹೇಳಿದರೆ ಸಾಕು KGFನತ್ತ ಅಣು ತ್ಯಾಜ್ಯ ಬರುವುದು ತಪ್ಪುತ್ತದೆ!'

ತಮಿಳನಾಡಿನ ಕೂಡಂಕೊಳಂ ಅಣುವಿದ್ಯುತ್ ಸ್ಥಾವರ ತ್ಯಾಜ್ಯವನ್ನು ಪಾಳುಬಿದ್ದಿರುವ KGFನಲ್ಲಿ ಹಾಕಲಾಗುವುದು ಎಂದು ಸುಪ್ರೀಂಕೋರ್ಟಿಗೆ ಅಫಿಡವಿಟ್ ಮೂಲಕ ಕೇಂದ್ರ ಸರಕಾರ ತಿಳಿಸಿರುವುದನ್ನು ವಿರೋಧಿಸಿ ಜನ ಆಕ್ರೋಶಗೊಂಡಿದ್ದಾರೆ.

ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಈ ಬಗ್ಗೆ ಬುಧವಾರ ಮಾಹಿತಿ ನೀಡಿರುವುದನ್ನು ಖಂಡಿಸಿ ನ. 23 ಶುಕ್ರವಾರ ಜೆಡಿಎಸ್‌, ಬಿಜೆಪಿ ಕೆಜಿಎಫ್ ಬಂದ್‌ಗೆ ಕರೆ ನೀಡಿದೆ. ವಿಷಕಾರಿ ಅಣು ತ್ಯಾಜ್ಯ ವಿಲೇವಾರಿ ಮಾಡುವ ಪ್ರಸ್ತಾಪ ವಿರೋಧಿಸಿ ಕೋಲಾರ ಮತ್ತು ಕೆಜಿಎಫ್ ನಲ್ಲಿ ಗುರುವಾರವೇ ಬಿಜೆಪಿ, ಜೆಡಿಎಸ್‌ ಪಕ್ಷ ಸೇರಿದಂತೆ ಹಲವು ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸಿವೆ.

ಡಿ. 14ರಂದು ಸುಪ್ರೀಂಕೋರ್ಟ್ ತೀರ್ಪು: ಈ ಸಂದರ್ಭದಲ್ಲಿ ಮಾತನಾಡಿದ ಚಿನ್ನದ ಗಣಿಗಳ ಕಾರ್ಮಿಕರ ಹೋರಾಟ ಸಮಿತಿಯ ಸಂಚಾಲಕ ಜಯಕುಮಾರ್, ಕೇಂದ್ರದ ಈ ನಿರ್ಧಾರ ಕೆಜಿಎಫ್ ಜನರಲ್ಲಿ ಆಂತಕ ನಿರ್ಮಾಣ ಮಾಡಿದೆ. ಕಳೆದ 10 ವರ್ಷಗಳ ಹಿಂದೆ ಗಣಿಗಳನ್ನು ಮುಚ್ಚಲಾಗಿದ್ದು, ಇದುವರೆಗೂ ಪುನಃಶ್ಚೇತನ ಮಾಡಿಲ್ಲ. ಗಣಿಗಳ ಪುನಃಶ್ಚೇತನದ ಬಗ್ಗೆ ಮುಂದಿನ ತಿಂಗಳು 14ರಂದು ಸುಪ್ರೀಂಕೋರ್ಟ್ ತೀರ್ಪು ನೀಡಲಿದೆ.

ಇಂತಹ ಸಂದರ್ಭದಲ್ಲಿ ಯುರೇನಿಯಂ ತ್ಯಾಜ್ಯವನ್ನು ಚಿನ್ನದ ಗಣಿಗಳಲ್ಲಿ ವಿಸರ್ಜನೆ ಮಾಡುವ ಕ್ರಮ ಸರಿಯಲ್ಲ. ಅಪಾಯಕಾರಿ ತ್ಯಾಜ್ಯವನ್ನು ಗಣಿಗಳಲ್ಲಿ ಸುರಿಯುವುದರಿಂದ ಮಾನವ ಜೀವನ ಮತ್ತು ಪರಿಸರ ಹಾಗೂ ಅಂತರ್ಜಲದ ಮೇಲೆ ತೀವ್ರತರದ ಹಾನಿಯಾಗಲಿದೆ. ಕೂಡಲೇ ಕೇಂದ್ರ ಸರಕಾರ ಈ ಜನ ವಿರೋಧಿ ಕ್ರಮವನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿದರು.

ಕೋಲಾರದಲ್ಲಿ ಗುರುವಾರ ಸಂಜೆ ಮಾನವ ಸರಪಳಿ ರಚಿಸಿ ರಸ್ತೆ ತಡೆ ನಡೆಸಿದ ಬಿಜೆಪಿ ಕೇಂದ್ರ ಸರ್ಕಾರ ಮತ್ತು ಕೇಂದ್ರ ಸಚಿವ ಕೆ.ಎಚ್‌.ಮುನಿಯಪ್ಪ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದೆ. ಜಯ ಕರ್ನಾಟಕ ಸಂಘಟನೆ ಕೂಡ ನಗರದಲ್ಲಿ ಪ್ರತಿಭಟಿಸಿ ಈ ಪ್ರಸ್ತಾಪವನ್ನು ತಕ್ಷಣವೇ ಕೈಬಿಡುವಂತೆ ಸರಕಾರಕ್ಕೆ ಮನವಿ ಸಲ್ಲಿಸಿದೆ.

ವಿವಾದದ ಕೇಂದ್ರ ಬಿಂದುವಾಗಿರುವ ಕೆಜಿಎಫ್ ನಲ್ಲಿ ಬಿಜೆಪಿ, ರಿಪಬ್ಲಿಕನ್‌ ಪಾರ್ಟಿ ಆಫ್ ಇಂಡಿಯಾ, ಕರವೇ, ಸಿಪಿಐಎಂ ಸೇರಿದಂತೆ ಹಲವು ಸಂಘಟನೆಗಳು ಗುರುವಾರ ಪ್ರತಿಭಟನೆ ನಡೆಸಿವೆ. ಶುಕ್ರವಾರ ಕರೆ ನೀಡಿರುವ ಕೆಜಿಎಫ್ ಬಂದ್‌ಗೆ ಎಲ್ಲಾ ಪ್ರಮುಖ ಸಂಘಟನೆಗಳು ಬೆಂಬಲ ನೀಡಿದ್ದು ಭಾರೀ ಪ್ರಮಾಣದ ಹೋರಾಟಕ್ಕೆ ಮುಂದಾಗಿವೆ.

ಶಾಸಕ ಸಂಪಂಗಿ ಆಕ್ರೋಶ:
ತಮಿಳುನಾಡಿಗೆ ವಿದ್ಯುತ್‌; ಇಲ್ಲಿನ ಜನರಿಗೆ ಅಣು ತ್ಯಾಜ್ಯ. ಇದ್ಯಾವ ನ್ಯಾಯ ಎಂದು ಕೇಂದ್ರದ ನಿರ್ಧಾರವನ್ನು ಖಂಡಿಸಿರುವ ಸ್ಥಳೀಯ ಬಿಜೆಪಿ ಶಾಸಕ ವೈ ಸಂಪಂಗಿ ಸಹ ಹೋರಾಟಕ್ಕೆ ಇಳಿದಿದ್ದಾರೆ. ಇನ್ನು, ಮಾಜಿ ಶಾಸಕ ಭಕ್ತವತ್ಸಲಂ ಅವರು ಅಣು ಸ್ಥಾವರದ ತ್ಯಾಜ್ಯಗಳನ್ನು ವಿಲೇವಾರಿ ಮಾಡಲು ಮುಂದಾದಲ್ಲಿ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಏನನ್ನುತ್ತಾರೆ?:
ಅಣುತ್ಯಾಜ್ಯವನ್ನು ಕೆಜಿಎಫ್ ಹೊಂಡ-ಗುಂಡಿಗಳಲ್ಲಿ ಹೂಳುವ ಕೇಂದ್ರದ ಚಿಂತನೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಆರ್ ವರ್ತೂರು ಪ್ರಕಾಶ್‌, ಅಣು ತ್ಯಾಜ್ಯವನ್ನು ಇಲ್ಲಿ ತಂದು ಹಾಕದಂತೆ ರಾಜ್ಯ ಸರಕಾರ ಕ್ರಮ ತೆಗೆದುಕೊಳ್ಳಲಿದೆ. ಮುಖ್ಯಮಂತ್ರಿ ಶೆಟ್ಟರ್ ಜತೆ ಚರ್ಚಿಸಿ ಯಾವುದೇ ಕಾರಣಕ್ಕೂ ತ್ಯಾಜ್ಯ ಘಟಕ ಸ್ಥಾಪನೆ ಮಾಡದಂತೆ ತಡೆಯುತ್ತೇನೆ ಎಂದಿದ್ದಾರೆ.

ನವದೆಹಲಿ ವರದಿ:
'ತಮಿಳುನಾಡಿನ ಕೂಡುಂಕುಳುಂ ಪರಮಾಣು ವಿದ್ಯುತ್ ಸ್ಥಾವರದ ತ್ಯಾಜ್ಯವನ್ನು ಕರ್ನಾಟಕದ ಕೋಲಾರ ಚಿನ್ನದ ಗಣಿಗೆ ತಂದು ವಿಸರ್ಜಿಸುವ ಯಾವುದೇ ಆಲೋಚನೆ ಸರ್ಕಾರಕ್ಕಿಲ್ಲ. ಈ ಬಗ್ಗೆ ಆತಂಕ ಬೇಡ ಎಂದು ಕೇಂದ್ರ ಸರ್ಕಾರ ಗುರುವಾರ ಸ್ಪಷ್ಟಪಡಿಸಿದೆ.

ಈ ಮಧ್ಯೆ, ಕೋಲಾರ ಲೋಕಸಭಾ ಕ್ಷೇತ್ರದ ಸಂಸದ, ಕೇಂದ್ರ ಮಧ್ಯಮ ಹಾಗೂ ಸಣ್ಣ ಉದ್ಯಮಗಳ ಖಾತೆ ಸಚಿವ ಕೆಎಚ್ ಮುನಿಯಪ್ಪ ಪರಮಾಣು ತ್ಯಾಜ್ಯ ವಿಲೇವಾರಿಗೆ ಚಿನ್ನದ ಗಣಿಗಳನ್ನು ಬಳಸಲಾಗುವುದು ಎಂಬ ವರದಿ ನಿರಾಕರಿಸಿದ್ದಾರೆ.

ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಇಂಥ ಸುದ್ದಿಗಳನ್ನು ನಂಬಿ ಆತಂಕಕ್ಕೊಳಗಾಗಿ ಪ್ರತಿಭಟನೆ, ಬಂದ್‌ಗೆ ಮುಂದಾಗಬಾರದು ಎಂದು ಮನವಿ ಮಾಡಿದ್ದಾರೆ. ಸರ್ಕಾರ ಇಂಥ ತೀರ್ಮಾನ ಕೈಗೊಂಡಿಲ್ಲ ಎಂದು ಖಚಿತಪಡಿಸಿದ್ದಾರೆ.

English summary
Koodankulam nuclear power plant waste-disposal. KGF protests Nov 23.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X