ಡಾ.ಬಿಆರ್ ಅಂಬೇಡ್ಕರ್‌ರನ್ನು ಸೋಲಿಸಿದ್ದು ಇದೇ ಕಾಂಗ್ರೆಸ್: ಇತಿಹಾಸ ತಿಳಿಸಿದ ಬಿಜೆಪಿ..!
ಬೆಂಗಳೂರು, ಏಪ್ರಿಲ್ 11: ಸಂವಿಧಾನಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಕುರಿತು ಈಗ ಕಾಂಗ್ರೆಸ್ ನಾಯಕರು ಮಾತಾಡುತ್ತಾರೆ. ಆದರೆ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದೇ ಕಾಂಗ್ರೆಸ್ ಎಂದು ಬಿಜೆಪಿ ವಿರೋಧ ಪಕ್ಷದ ನಾಯಕ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದರು.
ದಲಿತ ಸಂಘಟನೆಗಳ ಸ್ವಾಭಿಮಾನಿ ಸಮಾವೇಶ ಮತ್ತು ಚುನಾವಣಾ ಸಂಬಂಧದ ಸಭೆ ಹಾಗೂ ಬಂಗಾರಪೇಟೆ ಕ್ಷೇತ್ರದ ಅಂಚಾಳ ಗ್ರಾಮದಲ್ಲಿ ನಡೆದ ಪ್ರಚಾರಸಭೆಯಲ್ಲಿ ಅವರು ಮಾತನಾಡಿದರು.

ನರೇಂದ್ರ ಮೋದಿ ಪ್ರಧಾನಿಯಾದ ನಂತರ ಡಾ.ಬಿ.ಆರ್.ಅಂಬೇಡ್ಕರ್ ಬರೆದ ಸಂವಿಧಾನಕ್ಕೆ ಹೆಚ್ಚು ಮಹತ್ವ ನೀಡಿದ್ದಾರೆ. ಅಂಬೇಡ್ಕರ್ ಅವರು ತುಳಿತಕ್ಕೊಳಗಾದ ಜನರ ಪರವಾಗಿ ದನಿ ಎತ್ತಿದ್ದರು. ಅಂತಹ ಮಹಾನ್ ವ್ಯಕ್ತಿ ಬಾಬಾ ಸಾಹೇಬ್ ಅಂಬೇಡ್ಕರರು ಲೋಕಸಭೆಗೆ ಹೋಗಲು ಚುನಾವಣೆಗೆ ನಿಂತಾಗ ಅವರನ್ನು ಕಾಂಗ್ರೆಸ್ ಹೀನಾಯವಾಗಿ ಸೋಲಿಸಿತ್ತು ಎಂದು ಆರೋಪಿಸಿದರು.
ಅಂಬೇಡ್ಕರ್ ಸೋಲಿಸಲು ಕರೆ ಕೊಟ್ಟಿದ್ದ ನೆಹರೂ
ಅಂದು ಪ್ರಧಾನಮಂತ್ರಿಯಾಗಿದ್ದ ಜವಾಹರ್ ಲಾಲ್ ನೆಹರೂ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ರನ್ನು ಸೋಲಿಸುವ ಕರೆ ನೀಡಿದ್ದರು. ಈ ಇತಿಹಾಸವನ್ನು ಎಲ್ಲರೂ ತಿಳಿದಿರಬೇಕು. ಇಷ್ಟೇ ಅಲ್ಲದೆ ಸೋಲಿಸಿದವರಿಗೆ ಕಾಂಗ್ರೆಸ್ ಪ್ರಶಸ್ತಿ ನೀಡಿ ಗೌರವಿಸಿತು.

ಡಾ.ಬಿ.ಆರ್ ಅಂಬೇಡ್ಕರ್ ಅವರಿಗೆ ಭಾರತರತ್ನ ನೀಡಬೇಕೆಂದು ಕಾಂಗ್ರೆಸ್‌ನ ಒಬ್ಬ ನಾಯಕ ಆಗ್ರಹ ಮಾಡಲಿಲ್ಲ. ಆದರೆ ಆ ಕೆಲಸವನ್ನು ಬಿಜೆಪಿಯ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಮಾಡಿದ್ದರು ಎಂದು ತಿಳಿಸಿದರು.
ಡಾ.ಬಿಆರ್. ಅಂಬೇಡ್ಕರ್ ಅವರು ನಿಧನರಾದಾಗ ನಂತರದಲ್ಲಿ ಅವರ ಸ್ಮಾರಕ ನಿರ್ಮಿಸಲು ಕೂಡ ಕಾಂಗ್ರೆಸ್ ಜಾಗ ಕೊಡಲಿಲ್ಲ. ಇಷ್ಟೆಲ್ಲ ಅನ್ಯಾಯ ಮಾಡಿದ ಕಾಂಗ್ರೆಸ್‌ಗೆ ದಲಿತರು ಮತ ನೀಡಬೇಕೆ ಎಂದು ಆಲೋಚಿಸಬೇಕು. ಪ್ರಧಾನಿ ಮೋದಿ ಅಂಬೇಡ್ಕರರ ಐದು ಸ್ಥಳಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಹಾಗಾಗಿ ಅವರಿಗೆ ದಲಿತರು ಮತ ನೀಡಬೇಕು ಎಂದರು.
ಪಾಕಿಸ್ತಾನ ಪರ ಜೈಕಾರ ಹಾಕಿದವನಿಗೆ ಶಿಕ್ಷೆ ಇಲ್ಲ
ದೇಶ ಸುಭದ್ರತೆಯಿಂದ ಇದ್ದರೆ ಮಾತ್ರ ಜನರು ನೆಮ್ಮದಿಯಿಂದ ಬದುಕಲು ಸಾಧ್ಯ. ಪಾಕಿಸ್ತಾನ ಅನೇಕ ಬಾರಿ ದೇಶದ ಮೇಲೆ ದಾಳಿ ಮಾಡಿದೆ. ಇತ್ತೀಚೆಗೆ ವಿಧಾನಸೌಧದಲ್ಲಿ ಕಾಂಗ್ರೆಸ್‌ನವರೇ ಕರೆದುಕೊಂಡು ಬಂದವರು ಪಾಕಿಸ್ತಾನಕ್ಕೆ ಜೈಕಾರ ಹಾಕಿದ್ದರು.
ಇಂತಹವರಿಗೆ ಶಿಕ್ಷೆ ನೀಡದೆ ಕಾಂಗ್ರೆಸ್ ಸರ್ಕಾರ ಸುಮ್ಮನಿದೆ. ಸಿಎಂ ಸಿದ್ದರಾಮಯ್ಯನವರು ಆಗಾಗ್ಗೆ ಅನ್ನಭಾಗ್ಯ ಎಂದು ಹೇಳುತ್ತಾರೆ. ಆದರೆ ಅದು ನಿಜವಾಗಿಯೂ ಮೋದಿ ಭಾಗ್ಯವಾಗಿದೆ. ಇವರದ್ದು ಕನ್ನ ಭಾಗ್ಯವಾಗಿದೆ. ಇವರು ಗೋಣಿಚೀಲವನ್ನೂ ನೀಡುವುದಿಲ್ಲ ಎಂದರು.
ರಾಜ್ಯದಲ್ಲಿ ಉಂಟಾದ ಬರ ಪರಿಹಾರವನ್ನು ಕೇಳಿದರೆ ಕೇಂದ್ರ ಸರ್ಕಾರದ ಮೇಲೆ ಸಿಎಂ ಸಿದ್ದರಾಮಯ್ಯ ಕೈ ತೋರಿಸುತ್ತಾರೆ. ಈ ಚುನಾವಣೆ ಮುಗಿದ ನಂತರ ನೌಕರರಿಗೆ ಸಂಬಳ ಕೊಡಲು ಕೂಡ ಸರ್ಕಾರದ ಬಳಿ ಹಣವಿರುವುದಿಲ್ಲ ಎಂದು ಕಿಡಿ ಕಾರಿದರು.
ಮಲ್ಲೇಶ್ ಬಾಬು ಪರ ಪ್ರಚಾರ
ಮೈತ್ರಿ ಅಭ್ಯರ್ಥಿ ಮಲ್ಲೇಶ್ ಬಾಬು ಅವರ ತಂದೆ ಐಎಎಸ್ ಅಧಿಕಾರಿಯಾಗಿ ದಲಿತರಿಗೆ ಸಹಾಯ ಮಾಡಿದ್ದಾರೆ. ವಿದ್ಯಾವಂತ ಯುವಕ ಮಲ್ಲೇಶ್ ಅವರಿಗೆ ಎಲ್ಲರೂ ಬೆಂಬಲಿಸಬೇಕು. ಹಿಂದಿನ ಸಂಸದ ಮುನಿಸ್ವಾಮಿ ಅವರ ಹೆಸರನ್ನು ಹಿಂದೆ ನಾನೇ ಶಿಫಾರಸು ಮಾಡಿದ್ದೆ. ಆಗಲೂ ಎಲ್ಲರೂ ಅಪಾರ ಬೆಂಬಲ ನೀಡಿದ್ದರು. ಈಗಲೂ ಅದೇ ರೀತಿ ಬೆಂಬಲ ನೀಡಬೇಕು ಎಂದು ಕೋರಿದರು.
ಕಾಂಗ್ರೆಸ್ ಅಭ್ಯರ್ಥಿ ನೆಂಟರು
ಕಾಂಗ್ರೆಸ್ ಅಭ್ಯರ್ಥಿ ಕೇವಲ ನೆಂಟರಂತಿದ್ದು, ಅವರು ಮತ್ತೆ ಈ ಕಡೆ ಬರುವುದಿಲ್ಲ. ಇಂಥವರನ್ನು ಆಯ್ಕೆ ಮಾಡಬೇಕಾ? ಎಂದು ಜನರು ಚಿಂತಿಸಬೇಕು ಎಂದು ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಲೇವಡಿ ಮಾಡಿದರು.
ಈ ಬಾರಿ ಪ್ರಧಾನಿ ಮೋದಿ, ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರು, ಜೆಡಿಎಸ್ ಹಾಗೂ ಬಿಜೆಪಿ ಮತಗಳು ಸೇರಿ ಮೈತ್ರಿ ಅಭ್ಯರ್ಥಿಗೆ ಒಟ್ಟು 6 ಲಕ್ಷ ಮತಗಳ ಲೀಡ್ ದೊರೆಯಬೇಕು ಎಂದು ಅವರು ಕರೆ ಕೊಟ್ಟರು.












Click it and Unblock the Notifications