ಪ್ರಜ್ವಲ್ ದೇವರಾಜ್‌ಗೆ ಸಿಕ್ಸ್‌ಪ್ಯಾಕ್ ಮಾಡಲು ಹೇಳಿದ್ವಿ: ಕರಾವಳಿ ಡಬ್ಬಿಂಗ್ ವಿವಾದದ ಅಸಲಿ ವಿಷಯ ಬಹಿರಂಗಪಡಿಸಿದ ಚಿತ್ರತಂಡ
ಸ್ಯಾಂಡಲ್‌ವುಡ್‌ನ 'ಕರಾವಳಿ' ಸಿನಿಮಾದ ಡಬ್ಬಿಂಗ್ ಹಾಗೂ ನಟ ಪ್ರಜ್ವಲ್ ದೇವರಾಜ್ ಅವರ ಸಂಭಾವನೆ ವಿಚಾರವಾಗಿ ಎದ್ದಿರುವ ವಿವಾದಕ್ಕೆ ಸಂಬಂಧಿಸಿದಂತೆ ಚಿತ್ರದ ನಿರ್ಮಾಣ ಸಂಸ್ಥೆಯಾದ "ಗುರುದತ್ ಗಣಿಗ ಫಿಲ್ಮ್ಸ್" (Gurudatha Ganiga Films) ಮಾಧ್ಯಮ ಪ್ರಕಟಣೆ ಹೊರಡಿಸುವ ಮೂಲಕ ಸ್ಪಷ್ಟನೆ ನೀಡಿದೆ. ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಡೆದ ಗಲಾಟೆ ಹಾಗೂ ಡಬ್ಬಿಂಗ್ ಬದಲಾವಣೆಯ ಹಿಂದಿನ ಅಸಲಿ ಕಾರಣವೇನು ಎಂದು ಬಹಿರಂಗಪಡಿಸಿದೆ.
ಟ್ರೈಲರ್ ಲಾಂಚ್‌ನಲ್ಲಿ ಗಲಾಟೆ: ಪೊಲೀಸ್ ದೂರು ದಾಖಲು
'ಕರಾವಳಿ' ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಕೆಲ ಅಪರಿಚಿತ ವ್ಯಕ್ತಿಗಳು ಅನಧಿಕೃತವಾಗಿ ನುಗ್ಗಿ, ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನಿಸಿದ್ದರು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ನಿರ್ಮಾಣ ಸಂಸ್ಥೆ, ಆ ಕಿಡಿಗೇಡಿಗಳ ವಿರುದ್ಧ ಈಗಾಗಲೇ ಅಧಿಕೃತವಾಗಿ ಪೊಲೀಸ್ ದೂರು ದಾಖಲಿಸಿದೆ ಎಂದು ಹೇಳಿದೆ.

ನಟ ಪ್ರಜ್ವಲ್ ದೇವರಾಜ್ ಅವರಿಗೆ ನೀಡಬೇಕಾಗಿದ್ದ ಬಾಕಿ ಹಣದ ಕುರಿತು ಸಂಸ್ಥೆ ಪ್ರಮುಖ ವಿಚಾರ ಬಹಿರಂಗಪಡಿಸಿದೆ. ಒಪ್ಪಂದದ ಪ್ರಕಾರ ಚಿತ್ರದ ಪಾತ್ರಕ್ಕಾಗಿ ಪ್ರಜ್ವಲ್ ದೇವರಾಜ್ ಅವರು ಸಿಕ್ಸ್‌ಪ್ಯಾಕ್ ದೈಹಿಕ ರೂಪಾಂತರ ಮಾಡಿಕೊಳ್ಳಬೇಕಾಗಿತ್ತು. ಕಥೆಗೆ ಇದು ಅತ್ಯಂತ ಮುಖ್ಯವಾಗಿದ್ದರಿಂದ ಅವರಿಗೆ ದೊಡ್ಡ ಮೊತ್ತದ ಸಂಭಾವನೆ ನೀಡಲು ನಿರ್ಮಾಪಕರು ಒಪ್ಪಿದ್ದರು. ಆದರೆ, ಅವರು ಈ ದೈಹಿಕ ರೂಪಾಂತರ ಮಾಡಿಕೊಳ್ಳಲು ಸಾಧ್ಯವಾಗದ ಕಾರಣ ಒಪ್ಪಂದದ ಅನ್ವಯ ಉಳಿದ ಬಾಕಿ ಹಣವನ್ನು ತಡೆಹಿಡಿಯಲಾಗಿತ್ತು. ಆದರೆ ಇತ್ತೀಚಿನ ಘಟನೆ ನಡೆದ ಮರುದಿನವೇ ಅವರಿಗೆ ನೀಡಬೇಕಾಗಿದ್ದ ಬಾಕಿ ಹಣ ಪಾವತಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಬೇರೆಯವರಿಂದ ಡಬ್ಬಿಂಗ್ ಮಾಡಿಸಲು ಕಾರಣವೇನು?
"ಬಾಕಿ ಹಣ ನೀಡದಿದ್ದರೆ ನಾನು ಡಬ್ಬಿಂಗ್ ಮಾಡುವುದಿಲ್ಲ" ಎಂದು ಪ್ರಜ್ವಲ್ ದೇವರಾಜ್ ಅವರು ಖಡಾಖಂಡಿತವಾಗಿ ಹೇಳಿದ್ದರು. ಇದೇ ಕಾರಣಕ್ಕೆ ಚಿತ್ರತಂಡ ಸುಮಾರು ಎರಡು ತಿಂಗಳ ಕಾಲ ಅವರಿಗಾಗಿ ಕಾದಿತ್ತು. ಆದರೆ ಯಾವುದೇ ಸ್ಪಂದನೆ ಸಿಗದಿದ್ದಾಗ, ಸಿನಿಮಾ ತಡವಾಗಬಾರದು ಎಂಬ ಅನಿವಾರ್ಯತೆಯಿಂದಾಗಿ ಬೇರೆ ಧ್ವನಿ ಕಲಾವಿದರಿಂದ ಡಬ್ಬಿಂಗ್ ಮಾಡಿಸಲಾಗಿದೆ ಎಂದು ನಿರ್ಮಾಪಕರು ಸ್ಪಷ್ಟಪಡಿಸಿದ್ದಾರೆ.
ಈ ಸಮಸ್ಯೆ ಸೌಹಾರ್ದಯುತವಾಗಿ ಬಗೆಹರಿಸಲು ಚಿತ್ರತಂಡ ಹಲವು ಬಾರಿ ಪ್ರಯತ್ನ ನಡೆಸಿತ್ತು. ಸ್ಯಾಂಡಲ್‌ವುಡ್‌ನ ಪ್ರಮುಖ ನಿರ್ಮಾಪಕರಾದ ಕೆವಿಎನ್ ಸಂಸ್ಥೆಯ ಸುಪ್ರೀತ್, ಜಾಕ್ ಮಂಜು ಹಾಗೂ ಚಕ್ರವ್ಯೂಹ ಚಿತ್ರದ ನಿರ್ಮಾಪಕ ಲೋಹಿತ್ ಅವರು ಪ್ರತ್ಯೇಕವಾಗಿ ಪ್ರಜ್ವಲ್ ದೇವರಾಜ್ ಅವರನ್ನು ಸಂಪರ್ಕಿಸಿ ಮಧ್ಯಸ್ಥಿಕೆ ವಹಿಸಲು ಯತ್ನಿಸಿದ್ದರು. ಆದರೆ ಬಾಕಿ ಹಣ ಪಾವತಿ ಆಗುವವರೆಗೂ ಕರಾವಳಿ ಚಿತ್ರದ ಯಾವುದೇ ಕೆಲಸಗಳಲ್ಲಿ ಭಾಗಿಯಾಗಲ್ಲ" ಎಂದು ಪ್ರಜ್ವಲ್ ಅವರು ನಿರಾಕರಿಸಿದ್ದರಿಂದ ಈ ಮಾತುಕತೆ ವಿಫಲವಾಗಿದ್ದವು ಎಂದಿದ್ದಾರೆ. ಸಿನಿಮಾದ ಟ್ರೈಲರ್‌ನಲ್ಲಿ ಪ್ರಜ್ವಲ್ ದೇವರಾಜ್ ಅವರ ಧ್ವನಿ ಇಲ್ಲದಿರುವ ವಿಚಾರ ಅವರಿಗೆ ಮೊದಲೇ ತಿಳಿದಿತ್ತು. ಬೇರೆಯವರಿಂದ ಡಬ್ಬಿಂಗ್ ಮಾಡಿಸುತ್ತಿರುವ ನಿರ್ಧಾರವನ್ನು ಚಿತ್ರತಂಡವು ಪ್ರಜ್ವಲ್ ಅವರ ಮ್ಯಾನೇಜರ್ ಮೂಲಕ ಮುಂಚಿತವಾಗಿಯೇ ತಲುಪಿಸಿತ್ತು ಎಂದೂ ಹೇಳಿದೆ.
ಬಾಕಿ ಹಣ ಕೈಸೇರಿದ ನಂತರವೂ, ಸೋಷಿಯಲ್ ಮೀಡಿಯಾ ಹಾಗೂ ಮಾಧ್ಯಮಗಳಲ್ಲಿ ಫೇಕ್ ಅಕೌಂಟ್‌ಗಳ ಮೂಲಕ ಕರಾವಳಿ ಸಿನಿಮಾ, ಅದರ ನಿರ್ದೇಶಕರು ಹಾಗೂ ನಿರ್ಮಾಣ ಸಂಸ್ಥೆಯ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಅಪಪ್ರಚಾರ ಮಾಡಲಾಗುತ್ತಿದೆ. ಈ ವ್ಯವಸ್ಥಿತ ಅಪಪ್ರಚಾರದ ಹಿಂದೆ ಯಾರಿದ್ದಾರೆ ಎಂಬ ಕುರಿತು ಸೂಕ್ತ ತನಿಖೆ ನಡೆಸುವಂತೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದೇವೆ ಎಂದು ಹೇಳಿದೆ.
ಕರಾವಳಿ ಚಿತ್ರತಂಡ ನಿಯಮಗಳ ಪ್ರಕಾರವೇ ಕೆಲಸ ಮಾಡಿದ್ದು, ನಟ ಪ್ರಜ್ವಲ್ ದೇವರಾಜ್ ಕಡೆಯಿಂದ ಸಹಕಾರ ಸಿಗದ ಕಾರಣ ಹಾಗೂ ಚಿತ್ರದ ಗುಣಮಟ್ಟ ಮತ್ತು ಸಮಯ ಪ್ರಜ್ಞೆಯನ್ನು ಕಾಪಾಡುವ ಉದ್ದೇಶದಿಂದ ಡಬ್ಬಿಂಗ್ ಧ್ವನಿಯನ್ನು ಬದಲಾಯಿಸಬೇಕಾಗಿ ಬಂತು ಎಂದು ನಿರ್ಮಾಣ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಆದರೆ ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ಈ ವಿವಾದವೇ ಚರ್ಚೆಯಲ್ಲಿದೆ.













Click it and Unblock the Notifications