Kurudumale: ರಾಜಕೀಯದ ಶಕ್ತಿ ಕೇಂದ್ರ ಕುರುಡುಮಲೆ ಮಹತ್ವವೇನು? ಇಲ್ಲಿಂದಲೇ ಪ್ರಚಾರ ಆರಂಭ ಏಕೆ?
ಕೋಲಾರದ ಮುಳಬಾಗಿಲಿನ ಕುರುಡುಮಲೆ ವಿನಾಯಕನ ಸನ್ನಿಧಿ ರಾಜ್ಯ ರಾಜಕೀಯದ ಶಕ್ತಿ ಕೇಂದ್ರವಾಗಿದೆ. ರಾಜ್ಯದ ರಾಜಕೀಯ ಪಕ್ಷಗಳು, ಬಹುತೇಕ ನಾಯಕರು ಇಲ್ಲಿಂದಲೇ ತಮ್ಮ ರಾಜಕೀಯ ಪ್ರಚಾರವನ್ನು ಆರಂಭಿಸುತ್ತಾರೆ. ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಕುರುಡುಮಲೆ ವಿನಾಯಕ ರಾಜಕೀಯ ಯಶಸ್ಸನ್ನು ನೀಡುತ್ತಾನೆ ಎನ್ನುವುದು ನಂಬಿಕೆ.
ಇತ್ತೀಚಿಗಷ್ಟೇ ಕರ್ನಾಟಕದ ಕಾಂಗ್ರೆಸ್ ಪಕ್ಷ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಜಾಧ್ವನಿ ಯಾತ್ರೆಯನ್ನು ಅಧೀಕೃತವಾಗಿ ಈ ಕ್ಷೇತ್ರದಿಂದಲೇ ಆರಂಭಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೂಡ ಕಾಂಗ್ರೆಸ್ ಇದೇ ಪುಣ್ಯ ಕ್ಷೇತ್ರದಿಂದ ಚುನಾವಣಾ ಪ್ರಚಾರ ಆರಂಭಿಸಿದ್ದರು.

ವಿಧಾನಸಭಾ ಚುನಾವಣಾಯಲ್ಲಿ 135 ಕ್ಷೇತ್ರಗಳನ್ನು ಪಡೆಯುವ ಮೂಲಕ ಕಾಂಗ್ರೆಸ್ ದಿಗ್ವಿಜಯ ಸಾಧಿಸಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿತ್ತು. ಇದೀಗ ಮತ್ತೆ ಲೋಕಸಭಾ ಚುನಾವಣೆಗೂ ಈ ಕ್ಷೇತ್ರದಿಂದಲೇ ಪ್ರಚಾರ ಆರಂಭಿಸಿದ್ದು, ಈ ಬಾರೀ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿದೆ.
ಮುಳಬಾಗಿಲಿನ ಕುರುಡುಮಲೆ ರಾಜ್ಯ ರಾಜಕೀಯದ ಶಕ್ತಿ ಕೇಂದ್ರ. ಕುರುಡುಮಲೆ ವಿನಾಯಕ ರಾಜಕೀಯ ನಾಯಕರುಗಳಿಗೆ ಅದೃಷ್ಟ ತಂದುಕೊಡುತ್ತಾನೆ ಎನ್ನುವುದು ನಂಬಿಕೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಸೇರಿದಂತೆ ಬಹುತೇಕ ಎಲ್ಲಾ ನಾಯಕರು ಚುನಾವಣಾ ಸಂದರ್ಭದಲ್ಲಿ ಈ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ.

ರಾಜ್ಯದ ದೇವಮೂಲೆಯಲ್ಲಿರುವ ಮುಳಬಾಗಿಲಿನ ಕುರುಡುಮಲೆ ವಿನಾಯಕನ ಕ್ಷೇತ್ರದಲ್ಲಿ ಪೂಜೆ ಸಲ್ಲಿಸಿದ ಬಳಿಕ ಬಹುತೇಕ ಎಲ್ಲಾ ಚುನಾವಣೆ ಪ್ರಚಾರ ಆರಂಭಿಸಲಾಗುತ್ತದೆ. ಮೂರು ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಮುಳಬಾಗಿಲಿನ ಈ ಕ್ಷೇತ್ರದಲ್ಲಿ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರ ಆರಂಭಿಸುತ್ತಾರೆ.
ಕುರುಡುಮಲೆ ಗಣಪತಿ ಮಹಿಮೆ
1994ರ ವಿಧಾನಸಭೆ ಚುನಾವಣೆ ವೇಳೆ ಹೆಚ್.ಡಿ ದೇವೇಗೌಡರ ನೇತೃತ್ವದಲ್ಲಿ ಕುರುಡುಮಲೆಯ ಗಣಪತಿಗೆ ಪೂಜೆ ಸಲ್ಲಿಸಿ ಪ್ರಚಾರ ಪ್ರಾರಂಭಿಸಲಾಗಿತ್ತು. ಆಗ ಜನತಾದಳ ಪಕ್ಷ 115 ಸ್ಥಾನಗಳೊಂದಿಗೆ ರಾಜ್ಯದಲ್ಲಿ ಸ್ವತಂತ್ರವಾಗಿ ಅಧಿಕಾರ ಅಧಿಕಾರ ಹಿಡಿದಿತ್ತು. ಆ ನಂತರ ದೇವೇಗೌಡರು ಪ್ರಧಾನಿ ಕೂಡ ಆದರು. 1999ರಲ್ಲಿ ಎಸ್.ಎಂ.ಕೃಷ್ಣ ಕೂಡ ಇಲ್ಲಿಂದಲೇ ಪ್ರಚಾರ ಆರಂಭಿಸಿದ್ದರು. ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕೂಡ ಇಲ್ಲಿಂದಲೇ ಚುನಾವಣಾ ಪ್ರಚಾರ ಆರಂಭಿಸಿ ಗೆಲುವು ಸಾಧಿಸಿತ್ತು.
ಕುರುಡುಮಲೆ ಇತಿಹಾಸವೇನು..?
ಕುರುಡು ಮಲೆ ಎಂಬ ಹೆಸರು ಕೂಡು ಮತ್ತು ಮಲೆ ಎಂಬ ಪದಗಳಿಂದ ಬಂದಿದೆ. ಇದರರ್ಥ ಸೇರುವ, ಭೇಟಿಯಾಗುವ ಸ್ಥಳವೆಂದು ಅರ್ಥ. ಸ್ಥಳೀಯರ ನಂಬಿಕೆಗಳಂತೆ ಈ ಸ್ಥಳವು ದೇವರುಗಳಿಗೆ ಬೇಸರವಾದಾಗ ಅವರು ಕಾಲ ಕಳೆಯುವ ಉದ್ದೇಶದಿಂದ ಭೂಮಿಗೆ ಇಳಿದು ಬರುವ ಸ್ಥಳವೆಂದು ಭಾವಿಸಲಾಗಿದೆ. ಇಲ್ಲಿನ ದೇವಾಲಯವು 13.5 ಅಡಿ ಎತ್ತರದ ಗಣಪತಿ ಮೂರ್ತಿಯನ್ನು ಹೊಂದಿದೆ. ಈ ದೇವಾಲಯವನ್ನು ಇತಿಹಾಸ ಪ್ರಸಿದ್ಧ ಶಿಲ್ಪಿಗಳಾದ ಜಕಣಾಚಾರಿ ಮತ್ತು ಅವನ ಮಗ ಡಕಣಾಚಾರಿ ಇಬ್ಬರು ವಿನ್ಯಾಸಗೊಳಿಸಿದರು ಎಂದು ಹೇಳಲಾಗುತ್ತದೆ. ಇಲ್ಲಿನ ವಿನಾಯಕನ ಮೂರ್ತಿ ರಾಮಾಯಣದ ಕಾಲದ್ದು ಎನ್ನುವುದು ಸ್ಥಳೀಯರ ನಂಬಿಕೆ. ಕುರುಡುಮಲೆ ಬೆಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ 100 ಕಿ.ಮೀ ದೂರದಲ್ಲಿದ್ದು, ರಸ್ತೆ ಮಾರ್ಗದ ಮೂಲಕ ಸುಲಭವಾಗಿ ತಲುಪಬಹುದಾಗಿದೆ.












Click it and Unblock the Notifications