ಅಮೆರಿಕದ ಕ್ರಿಮಿನಲ್ ಕೇಸ್ ವಜಾ ಹಿಂದಿಲ್ಲ ಯಾವುದೇ ಡೀಲ್: ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ ಗೌತಮ್ ಅದಾನಿ

ಅಮೆರಿಕದ ನ್ಯಾಯಾಂಗ ಇಲಾಖೆ ತಮ್ಮ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನ ವಜಾಗೊಳಿಸುವ ನಿರ್ಧಾರದ ಹಿಂದೆ ಯಾವುದೇ ಭರವಸೆ, ಒಪ್ಪಂದ ಅಥವಾ ವಿನಿಮಯದ ಪ್ರಭಾವವಿಲ್ಲ ಎಂದು ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಅವರು ಅಮೆರಿಕದ ನ್ಯಾಯಾಲಯಕ್ಕೆ ಪ್ರಮಾಣೀಕೃತ ಅಫಿಡವಿಟ್ ಕೂಡ ಸಲ್ಲಿಸಿದ್ದಾರೆ.

ಜುಲೈ 8 ರಂದು ಅಮೆರಿಕದ ಈಸ್ಟರ್ನ್ ಡಿಸ್ಟ್ರಿಕ್ಟ್ ಆಫ್ ನ್ಯೂಯಾರ್ಕ್‌ನ ಜಿಲ್ಲಾ ನ್ಯಾಯಾಲಯ ಹೊರಡಿಸಿದ ಆದೇಶಕ್ಕೆ ಪ್ರತಿಕ್ರಿಯೆಯಾಗಿ ಈ ಅಫಿಡವಿಟ್ ಸಲ್ಲಿಸಲಾಗಿದೆ. ಕ್ರಿಮಿನಲ್ ಮೊಕದ್ದಮೆಯನ್ನ ವಜಾಗೊಳಿಸುವ ನಿರ್ಧಾರಕ್ಕೆ ಸಂಬಂಧಿಸಿದಂತೆ ಯಾವುದೇ ಭರವಸೆ, ಪ್ರಸ್ತಾಪ, ಒಪ್ಪಂದ ಅಥವಾ ಲಾಭದ ಬಗ್ಗೆ ತಮಗೆ ತಿಳಿದಿದೆಯೇ ಎಂದು ಪ್ರಮಾಣ ವಚನ ಸ್ವೀಕರಿಸಿ ತಿಳಿಸುವಂತೆ ನ್ಯಾಯಾಲಯವು ಅದಾನಿ ಅವರಿಗೆ ಸೂಚಿಸಿತ್ತು.

Gautam Adani

ತಮ್ಮ ಅಫಿಡವಿಟ್‌ನಲ್ಲಿ, ಈ ಕ್ರಿಮಿನಲ್ ಮೊಕದ್ದಮೆಯನ್ನು ವಜಾಗೊಳಿಸುವ ಸಂಬಂಧ ಯಾರಿಂದಲೂ "ಯಾವುದೇ ಭರವಸೆ, ಪ್ರಸ್ತಾಪ, ಬೇಡಿಕೆ, ಸ್ವೀಕಾರ ಅಥವಾ ಒಪ್ಪಂದ" ಆಗಿಲ್ಲ ಎಂದು ಅದಾನಿ ತಿಳಿಸಿದ್ದಾರೆ. ಕ್ರಿಮಿನಲ್ ಆರೋಪಗಳನ್ನು ಕೈಬಿಡುವುದಕ್ಕಾಗಿ ಮೌಲ್ಯಯುತವಾಗಿರುವ ಏನನ್ನಾದರೂ ವಿನಿಮಯ ಮಾಡಿಕೊಳ್ಳುವ ಯಾವುದೇ ಒಪ್ಪಂದದ ಬಗ್ಗೆ ತಮಗೆ ತಿಳಿದಿಲ್ಲ ಎಂದು ಅವರು ಸ್ಪಷ್ಟವಾಗಿ ತಿಳಿಸಿದ್ದಾರೆ.

2024ರ ನವೆಂಬರ್‌ನಲ್ಲಿ ಅಮೆರಿಕದ ನ್ಯಾಯಾಂಗ ಇಲಾಖೆಯು ಈ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಿತ್ತು. ವಿದ್ಯುತ್ ಸರಬರಾಜು ಗುತ್ತಿಗೆಗಳನ್ನು ಪಡೆಯಲು ಭಾರತೀಯ ಅಧಿಕಾರಿಗಳಿಗೆ ಸುಮಾರು 25 ಕೋಟಿ ಡಾಲರ್‌ಗಳಷ್ಟು ಲಂಚ ನೀಡಿದ ಮತ್ತು ಅಮೆರಿಕದ ಮಾರುಕಟ್ಟೆಗಳಲ್ಲಿ ಹಣ ಸಂಗ್ರಹಿಸುವಾಗ ಹೂಡಿಕೆದಾರರನ್ನು ದಾರಿತಪ್ಪಿಸಿದ ಆರೋಪವನ್ನು ಗೌತಮ್ ಅದಾನಿ ಮತ್ತು ಇತರ ಏಳು ಜನರ ಮೇಲೆ ಹೊರಿಸಲಾಗಿತ್ತು. ಅದಾನಿ ಅವರು ಮೊದಲಿನಿಂದಲೂ ಈ ಎಲ್ಲಾ ಆರೋಪಗಳನ್ನ ಮೊದಲಿನಿಂದಲೂ ನಿರಾಕರಿಸುತ್ತಲೇ ಬಂದಿದ್ದಾರೆ. ಇತ್ತೀಚೆಗಷ್ಟೇ, ಕ್ರಿಮಿನಲ್ ಪ್ರಕ್ರಿಯೆಗಳನ್ನು ಶಾಶ್ವತವಾಗಿ ವಜಾಗೊಳಿಸಲು ಡಿಒಜಿ ಮುಂದಾಗಿದೆ. ಒಂದು ವೇಳೆ ನ್ಯಾಯಾಲಯ ಇದನ್ನು ಅಂಗೀಕರಿಸಿದರೆ, ಪ್ರಕರಣವು ಶಾಶ್ವತವಾಗಿ ಮುಕ್ತಾಯವಾಗುತ್ತದೆ.

ಅಮೆರಿಕದಲ್ಲಿ ಅದಾನಿ ಗ್ರೂಪ್ ಹೂಡಿಕೆ: ವರದಿ ತಳ್ಳಿಹಾಕಿದ ಅದಾನಿ

ಪ್ರಕರಣವನ್ನು ವಜಾಗೊಳಿಸಿರುವುದು ಅಮೆರಿಕದಲ್ಲಿ ಅದಾನಿ ಗ್ರೂಪ್ ಮಾಡಲಿರುವ ಹೂಡಿಕೆಗೆ ಸಂಬಂಧಿಸಿದೆ ಎಂಬ ವರದಿಗಳನ್ನು ಅದಾನಿ ತಳ್ಳಿಹಾಕಿದ್ದಾರೆ. ಅಮೆರಿಕದಲ್ಲಿ 10 ಬಿಲಿಯನ್ ಡಾಲರ್ ಹೂಡಿಕೆ ಮಾಡುವ ಬಗ್ಗೆ ಕಂಪನಿ ದೋಷಾರೋಪಣೆ ಬಹಿರಂಗವಾಗುವ ಮೊದಲೇ, ಅಂದರೆ 2024ರ ನವೆಂಬರ್ 13ರಂದೇ ಸಾರ್ವಜನಿಕವಾಗಿ ಘೋಷಿಸಲಾಗಿತ್ತು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಅಫಿಡವಿಟ್ ಪ್ರಕಾರ, ಅದಾನಿ ಅವರ ಕಾನೂನು ಪ್ರತಿನಿಧಿಗಳು ಡಿಒಜಿ ಮತ್ತು ಅಮೆರಿಕದ ಸೆಕ್ಯುರಿಟೀಸ್ ಅಂಡ್ ಎಕ್ಸ್‌ಚೇಂಜ್ ಕಮಿಷನ್ ಅಧಿಕಾರಿಗಳೊಂದಿಗೆ ಸಭೆಗಳನ್ನು ನಡೆಸಿದ್ದರು. ಪ್ರಕರಣ ಇತ್ಯರ್ಥಪಡಿಸಲು ಬಯಸಿದರೆ, ಪ್ರಸ್ತಾವಿತ ಹೂಡಿಕೆಯನ್ನು ಅದರ ಭಾಗವಾಗಿ ಪರಿಗಣಿಸಬಹುದು ಎಂದು ಕಾನೂನು ತಂಡವು ಅಮೆರಿಕದ ಅಧಿಕಾರಿಗಳಿಗೆ ತಿಳಿಸಿತ್ತು. ಆದರೆ, ಹೂಡಿಕೆಯ ಪ್ರಸ್ತಾಪವು ಪ್ರಕರಣ ವಜಾಗೊಳಿಸುವ ನಿರ್ಧಾರದ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ ಎಂದು ಡಿಒಜಿ ಸ್ಪಷ್ಟಪಡಿಸಿತ್ತು.

ಒಪ್ಪಂದವಿಲ್ಲ ಎಂದ ಅಮೆರಿಕ ನ್ಯಾಯಾಂಗ ಇಲಾಖೆ

ಜುಲೈ 4 ರಂದು ಡಿಒಜಿ ಸಲ್ಲಿಸಿದ ಅರ್ಜಿಯ ಬೆನ್ನಲ್ಲೇ ಈ ಅಫಿಡವಿಟ್ ಸಲ್ಲಿಕೆಯಾಗಿದೆ. ಹೂಡಿಕೆ ಭರವಸೆಗಳಿಗೂ ಪ್ರಕರಣ ವಜಾಗೊಳಿಸುವುದಕ್ಕೂ ಸಂಬಂಧವಿದೆ ಎಂಬ ಮಾಧ್ಯಮ ವರದಿಗಳನ್ನು ಪ್ರಾಸಿಕ್ಯೂಟರ್‌ಗಳು ನಿರಾಕರಿಸಿದ್ದಾರೆ. ಇಂತಹ ಹಕ್ಕುಸಾಧನೆಗಳನ್ನು ಸುಳ್ಳು ಎಂದು ಬಣ್ಣಿಸಿರುವ ಇಲಾಖೆಯು, ತನ್ನ ನಿರ್ಧಾರವು ಕೇವಲ ಕಾನೂನು ಮತ್ತು ಸಾಕ್ಷ್ಯಾಧಾರಗಳನ್ನು ಆಧರಿಸಿದೆ ಎಂದು ಸಮರ್ಥಿಸಿಕೊಂಡಿದೆ. ಈ ಆಪಾದಿತ ಕೃತ್ಯಗಳು ಪ್ರಧಾನವಾಗಿ ಭಾರತದಲ್ಲಿ ನಡೆದಿವೆ ಹಾಗೂ ಹೂಡಿಕೆದಾರರಿಗೆ ಯಾವುದೇ ನಷ್ಟವಾಗಿರುವುದು ಕಂಡುಬಂದಿಲ್ಲ ಎಂದು ಡಿಒಜಿ ಉಲ್ಲೇಖಿಸಿದೆ.

ಪಾರದರ್ಶಕತೆ ಬಯಸಿದ ಯುಎಸ್ ನ್ಯಾಯಾಲಯ

ದೋಷಾರೋಪಣೆಯನ್ನು ವಜಾಗೊಳಿಸುವ ಡಿಒಜಿ ಮನವಿಗೆ ತೀರ್ಪು ನೀಡುವ ಮೊದಲು ಅಫಿಡವಿಟ್ ಸಲ್ಲಿಸುವಂತೆ ಯುಎಸ್ ಜಿಲ್ಲಾ ನ್ಯಾಯಾಧೀಶ ನಿಕೋಲಸ್ ಗರೌಫಿಸ್ ಸೂಚಿಸಿದ್ದರು. ಡೆಪ್ಯೂಟಿ ಅಟಾರ್ನಿ ಜನರಲ್ ಆರ್. ಟ್ರೆಂಟ್ ಮೆಕ್ಕಾಟರ್ ಅವರು, ಪ್ರಕರಣ ವಜಾಗೊಳಿಸುವ ವಿಚಾರದಲ್ಲಿ ತಾನೇ ಅಂತಿಮ ನಿರ್ಧಾರಕ ಎಂದು ಹೇಳಿಕೊಂಡಿದ್ದು, ಹೂಡಿಕೆಯ ಕಾರಣದಿಂದಾಗಿ ಆರೋಪಗಳನ್ನು ಕೈಬಿಡಲಾಗಿದೆ ಎಂಬ ಮಾತುಗಳು "ಸುಳ್ಳು" ಎಂದು ತಮ್ಮ ಫೈಲಿಂಗ್‌ನಲ್ಲಿ ತಿಳಿಸಿದ್ದಾರೆ.

ಅಂತಿಮ ತೀರ್ಪು ಬಾಕಿ

ಡಿಒಜಿ ವಿವರಣೆಯ ಹೊರತಾಗಿಯೂ, ಪ್ರತಿವಾದಿಗಳನ್ನು ಒಳಗೊಂಡ ಕೆಲವು ರೀತಿಯ ಒಪ್ಪಂದ ಅಸ್ತಿತ್ವದಲ್ಲಿರುವ ಸಾಧ್ಯತೆಯನ್ನು ನ್ಯಾಯಾಧೀಶರು ಗಮನಿಸಿದ್ದಾರೆ. ಪ್ರಕರಣವನ್ನು ವಜಾಗೊಳಿಸಲು ಡಿಒಜಿ ನೀಡಿರುವ ಕಾರಣಗಳು ನಿಜ ಮತ್ತು ಯಾವುದೇ ಗುಪ್ತ ಒಪ್ಪಂದವು ಅದರ ನಿರ್ಧಾರದ ಮೇಲೆ ಪ್ರಭಾವ ಬೀರಲಾರದು ಎಂಬುದರ ಬಗ್ಗೆ ನ್ಯಾಯಾಲಯವು ನಂಬಬೇಕು. ಅದಾನಿ ಅವರ ಅಫಿಡವಿಟ್ ಮತ್ತು ಎರಡೂ ಕಡೆಯವರು ಸಲ್ಲಿಸಿದ ದಾಖಲೆಗಳನ್ನು ಪರಿಗಣಿಸಿದ ನಂತರ ನ್ಯಾಯಾಲಯವು ಶೀಘ್ರದಲ್ಲೇ ತನ್ನ ಅಂತಿಮ ನಿರ್ಧಾರ ಪ್ರಕಟಿಸುವ ನಿರೀಕ್ಷೆಯಿದೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+