Rain: ರಾಜ್ಯದ 157 ತಾಲೂಕುಗಳು ಬರಪೀಡಿತ! ಅಧಿಕಾರದ ಅಮಲಿನಲ್ಲಿ ಸರ್ಕಾರ: ಆರ್.ಅಶೊಕ್ ಆಗ್ರಹವೇನು?
ಬೆಂಗಳೂರು: ಕರ್ನಾಟಕದಾದ್ಯಂತ ಬರದ ಛಾಯೆಯ ತೀವ್ರತೆ ಹೆಚ್ಚುತ್ತಿದೆ. ವಾಡಿಕೆಯಷ್ಟು ಮುಂಗಾರು ಆಗದೇ ಬರಗಾಲ ಸೃಷ್ಟಿಯಾಗಿದ್ದು, ಬರೋಬ್ಬರಿ 157 ತಾಲೂಕುಗಳಲ್ಲಿ ಬರ ಆವರಿಸಿದೆ. ಹೀಗಿದ್ದರು ರಾಜ್ಯ ಸರ್ಕಾರಕ್ಕೆ, ಈ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಬರ ಘೋಷಣೆಗೆ ಸಾಕ್ಷಿ ಬೇಕಾ. ಅಧಿಕಾರದ ಅಮಲಿನಲ್ಲಿ ಮುಖ್ಯಮಂತ್ರಿಗಳಿಗೆ ಅನ್ನದಾತನ ಕಣ್ಣೀರು ಕಾಣುತ್ತಿಲ್ಲವೇ? ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಿಡಿ ಕಾರಿದರು.
ಅರ್ಧ ರಾಜ್ಯಕ್ಕೆ ಮಳೆ ಕೊರತೆ ಉಂಟಾಗಿದೆ. ಇನ್ನರ್ಧ ರಾಜ್ಯಕ್ಕೆ ಅಷ್ಟಾಗಿ ಮಳೆ ಆಗದಿದ್ದರೆ, ಡ್ಯಾಂಗಳ ನೀರು ಕೊಂಚ ಕೈ ಹಿಡಿದಿದೆ. ಕುಡಿಯುವ ನೀರಿಗೆ ಸಮಸ್ಯೆ ಆಗುವ ನಿರೀಕ್ಷೆ ಇದೆ. ಅನ್ನದಾತರು ಚಿಂತೆಗೀಡಾದಿದ್ದಾರೆ. ಈ ಸಂಬಂಧ ಎನ್ ಡಿ ಆರ್ ಎಫ್ ನಿಯಮ ಸಡಿಲಿಸಿ ಅನುದಾನ ನೀಡುವಂತೆ ರಾಜ್ಯದ ಸಿಎ, ಡಿಸಿಎಂ ಸೇರಿದಂತೆ ನಾಯಕರು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಇದರ ಬೆನ್ನಲ್ಲೆ ರಾಜ್ಯ ಸಕಾ್ರದ ಮೇಲೆ ವಿಪಕ್ಷ ನಾಯಕ ಆಕ್ರೋಶ ಹೊರ ಹಾಕಿದರು.

ಕಳೆದ ಜೂನ್‌ನಲ್ಲಿ ಶೇ.42, ಜುಲೈನಲ್ಲಿ ಶೇ.34 ಮುಂಗಾರು ಮಳೆ (Monsooon Rain Shortage) ಕೊರತೆ ಆಗಿದೆ. ಬಿತ್ತನೆ ಮಾಡಬೇಕಿದ್ದ 84 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ರೈತರು ಮಳೆಗಾಗಿ ಆಕಾಶದತ್ತ ನೋಡುತ್ತಾ ಕೈಚೆಲ್ಲಿ ಕುಳಿತಿದ್ದಾರೆ. ಜಲಾಶಯಗಳು ಬರಿದಾಗುತ್ತಿವೆ, ಕುಡಿಯುವ ನೀರಿನ ಆತಂಕ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಮಾತ್ರ ಅಧಿಕಾರದ ರಾಜಕೀಯವೇ ಮುಖ್ಯವಾಗಿದೆ ಎಂದು ಟೀಕಿಸಿದರು.
ರಾಜ್ಯದಲ್ಲಿ ಬರ ಉಂಟಾದರೂ, ಬರ ಘೋಷಣೆಗೆ ನಿಮ್ಮ ಸರ್ಕಾರಕ್ಕೆ ಇನ್ನೂ ಯಾವ ಸಾಕ್ಷಿ ಬೇಕು ಡಿ.ಕೆ. ಶಿವಕುಮಾರ್ ಅವರೇ?. ರೈತರ ಬೆಳೆ ಒಣಗಿದ ಮೇಲೂ, ಜಾನುವಾರುಗಳಿಗೆ ಮೇವು ಇಲ್ಲದ ಮೇಲೂ, ಕುಡಿಯುವ ನೀರಿಗೆ ಹಾಹಾಕಾರ ಶುರುವಾದ ಮೇಲೂ ಇನ್ನೂ ನಿಯಮಗಳ ಹಿಂದೆ, ಕಡತಗಳ ಹಿಂದೆ ಅಡಗಿಕೊಳ್ಳುತ್ತೀರಾ? ಎಂದು ಪ್ರಶ್ನಿಸಿದರು.
ಸರ್ಕಾರದಿಂದ ಮೋಡ ಬಿತ್ತನೆ ನಾಟಕ
ಈಗ ಕೇಳಿ ಬರುತ್ತಿರುವ ಮತ್ತೊಂದು ಹಾಸ್ಯಾಸ್ಪದ ನಾಟಕ "ಮೋಡ ಬಿತ್ತನೆ" ಮಳೆ ಇಲ್ಲ. ಮೋಡಗಳೇ ಇಲ್ಲ ಎನ್ನುವುದನ್ನು ನಿಮ್ಮದೇ ಸಚಿವರು ಒಪ್ಪಿಕೊಂಡಿದ್ದಾರೆ. ಆದರೆ ನೀವು ಮಾತ್ರ "ವರದಿ ಬಂದ ಮೇಲೆ ಮೋಡ ಬಿತ್ತನೆ" ಎಂಬ ಹೊಸ ನಾಟಕ ಆರಂಭಿಸಿದ್ದೀರಿ. ರೈತರ ಸಂಕಷ್ಟಕ್ಕೆ ಪರಿಹಾರ ಕೊಡುವ ಬದಲು ಜನರ ಗಮನ ಬೇರೆಡೆ ಸೆಳೆಯುವ ಈ ನಾಟಕ ಯಾರಿಗಾಗಿ?.
ಗ್ಯಾರೆಂಟಿ ಅನುಷ್ಠಾನ ಸಮಿತಿಗಳ ಹೆಸರಿನಲ್ಲಿ ಪಕ್ಷದ ಅತೃಪ್ತ ಆತ್ಮಗಳಿಗೆ ಗಂಜಿ ಕೇಂದ್ರ ನಡೆಸಲು ಸಾವಿರಾರು ಕೋಟಿ ರೂಪಾಯಿ ಇದೆ. ಭಾರತ್ ಜೋಡೋ ಕ್ಲಬ್ ಹೆಸರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಹಣದ ಹೊಳೆ ಹರಿಸಲು ದುಡ್ಡಿದೆ. ಆದರೆ ಬರದಿಂದ ನರಳುತ್ತಿರುವ ರೈತರಿಗೆ ಪರಿಹಾರ ಘೋಷಿಸಲು, ಕುಡಿಯುವ ನೀರಿನ ತುರ್ತು ಯೋಜನೆ ಕೈಗೊಳ್ಳಲು, ಜಾನುವಾರುಗಳಿಗೆ ಮೇವು ಒದಗಿಸಲು ಮಾತ್ರ ಸರ್ಕಾರದ ಖಜಾನೆ ಖಾಲಿಯಾಗಿದೆಯೇ? ಎಂದು ಕೇಳಿದರು.
ವಿಶೇಷ ಬರ ಪರಿಹಾರ ಪ್ಯಾಕೇಜ್‌ಗೆ ಆಗ್ರಹ
* 157 ತಾಲೂಕುಗಳನ್ನು ತಕ್ಷಣ ಬರಪೀಡಿತ ಪ್ರದೇಶಗಳೆಂದು ಘೋಷಿಸಬೇಕು.
* ವಿಶೇಷ ಬರ ಪರಿಹಾರ ಪ್ಯಾಕೇಜ್ ಪ್ರಕಟಿಸಿ.
* ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಹಾಗೂ ರೈತರಿಗೆ ತುರ್ತು ನೆರವನ್ನು ಯುದ್ಧೋಪಾದಿಯಲ್ಲಿ ಒದಗಿಸಿ.
* ಕೇಂದ್ರವನ್ನು ದೂರುವುದು ಬಿಟ್ಟು, ರಾಜ್ಯ ಸರ್ಕಾರದ ಜವಾಬ್ದಾರಿಯನ್ನು ಮೊದಲು ನಿಭಾಯಿಸಿ ಎಂದು ಅವರು ಒತ್ತಾಯಿಸಿದರು.
ಬಂಡಲ್ ಮುಖ್ಯಮಂತ್ರಿ, ರೀಲ್ಸ್ ಮಂತ್ರಿ!
ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ (GBGA) ತಂದು "ಬ್ರ್ಯಾಂಡ್ ಬೆಂಗಳೂರು" ಕಟ್ಟುತ್ತೇವೆ ಎಂದು ಜಗತ್ತಿಗೇ ಡಂಗುರ ಸಾರಿದ ಕಾಂಗ್ರೆಸ್ ಸರ್ಕಾರದ ನಿಜವಾದ ಸಾಧನೆ ಏನು ಗೊತ್ತೇ? ತಮ್ಮದೇ ಸರ್ಕಾರ ರೂಪಿಸಿದ ಕಾಯ್ದೆಯನ್ನು ತಾವೇ ಉಲ್ಲಂಘಿಸಿರುವುದು! ಎಂದು ಸರ್ಕಾರದ ಕಾಲೆಳೆದರು.
ಪ್ರತಿ ಮೂರು ತಿಂಗಳಿಗೊಮ್ಮೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಜಿಬಿಜಿಎ ಸಭೆ ಕಡ್ಡಾಯವಾಗಿ ನಡೆಯಬೇಕು ಎಂದು ಕಾಯ್ದೆಯಲ್ಲೇ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆದರೂ ಮೊದಲ ಸಭೆ ನಡೆದ ಬಳಿಕ ಬರೋಬ್ಬರಿ 9 ತಿಂಗಳು ಕಳೆದರೂ ಒಂದೇ ಒಂದು ಸಭೆಯನ್ನೂ ನಡೆಸಿಲ್ಲ. ಇದೇನಾ ನಿಮ್ಮ ಆಡಳಿತ? ಇದೇನಾ ನಿಮ್ಮ ಬ್ರ್ಯಾಂಡ್ ಬೆಂಗಳೂರು? ಡಿಕೆ ಶಿವಕುಮಾರ್ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡರೇ ಕಾನೂನು ಜನರಿಗೆ ಮಾತ್ರವೇ? ನಿಮ್ಮ ಸರ್ಕಾರಕ್ಕೆ ಅನ್ವಯಿಸುವುದಿಲ್ಲವೇ? ಎಂದು ವಾಗ್ದಾಳಿ ನಡೆಸಿದರು.
ದಿನಬೆಳಗಾದರೆ ರೀಲ್ಸ್, ಫೇಸ್ಬುಕ್ ಲೈವ್ ಅಂತ ಬಿಟ್ಟಿ ಪ್ರಚಾರಕ್ಕೆ ಸಮಯವಿದೆ. ಆದರೆ ಬೆಂಗಳೂರಿನ ಭವಿಷ್ಯ ನಿರ್ಧರಿಸುವ ಕಡ್ಡಾಯ ಸಭೆ ನಡೆಸಲು ಮಾತ್ರ ಸಮಯವಿಲ್ಲ ಎಂದು ಅವರು ದೂರಿದರು.













Click it and Unblock the Notifications