Jobs : ಮುಂದಿನ 6 ತಿಂಗಳಲ್ಲಿ 72,000 ಸರ್ಕಾರಿ ಹುದ್ದೆಗಳ ಭರ್ತಿಗೆ ಸರ್ಕಾರದ ಸಿದ್ಧತೆ
ರಾಜ್ಯದಲ್ಲಿ ಬಹುದಿನಗಳಿಂದ ನನೆಗುದಿಗೆ ಬಿದ್ದಿದ್ದ ನೇಮಕಾತಿ ಪ್ರಕ್ರಿಯೆಗಳಿಗೆ ಇತ್ತೀಚೆಗೆ ಸರ್ಕಾರ ಮರುಜೀವ ನೀಡಲು ಪ್ರಯತ್ನಿಸುತ್ತಿದೆ. ಒಳಮೀಸಲಾತಿ ಜಾರಿಯಾದ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ನೇಮಕಾತಿ ಪ್ರಕ್ರಿಯೆಗಳಿಗೆ ಇದೀಗ ಮತ್ತೆ ಚಾಲನೆ ನೀಡಲಾಗಿದ್ದು, ಕರುನಾಡಿನಲ್ಲಿ 'ಉದ್ಯೋಗ ಉತ್ಸವ' ಆರಂಭವಾಗಿದೆ. ಕರ್ನಾಟಕದಲ್ಲಿ ಮುಂದಿನ ಕೇವಲ ಆರು ತಿಂಗಳಲ್ಲಿ ಬರೋಬ್ಬರಿ 72,000 ವಿವಿಧ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.
ಈ ಕುರಿತು ರಾಜ್ಯದ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಅಧಿಕೃತ ಮಾಹಿತಿ ಹಂಚಿಕೊಂಡಿದ್ದು, ಸರ್ಕಾರಿ ಕೆಲಸದ ಕನಸು ಕಾಣುತ್ತಿರುವ ಲಕ್ಷಾಂತರ ಯುವಜನರಲ್ಲಿ ಇದು ಭರವಸೆ ಮೂಡಿಸಿದೆ.

ಕಲ್ಯಾಣ ಕರ್ನಾಟಕ ಭಾಗಕ್ಕೆ 32,000 ಹುದ್ದೆಗಳ ಮೀಸಲಾತಿ
ರಾಜ್ಯದ ಸಮಗ್ರ ಹಾಗೂ ಸಮಾನ ಅಭಿವೃದ್ಧಿಯ ದೃಷ್ಟಿಯಿಂದ ಕಲ್ಯಾಣ ಕರ್ನಾಟಕ ಭಾಗಕ್ಕೆ ರಾಜ್ಯ ಸರ್ಕಾರ ವಿಶೇಷ ಆದ್ಯತೆ ನೀಡುತ್ತಿದೆ. ಒಟ್ಟು 72,000 ಹುದ್ದೆಗಳ ಪೈಕಿ ಕೇವಲ ಕಲ್ಯಾಣ ಕರ್ನಾಟಕ ಭಾಗಕ್ಕಾಗಿಯೇ ಸುಮಾರು 32 ಸಾವಿರ ಹುದ್ದೆಗಳನ್ನು ಮೀಸಲಿಡಲಾಗಿದೆ ಎಂದು ಡಿಸಿಎಂ ತಿಳಿಸಿದ್ದಾರೆ. ನೇಮಕಾತಿ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕವಾಗಿ ಹಾಗೂ ತ್ವರಿತವಾಗಿ ಮುಗಿಸಲು ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಕೇವಲ 4 ತಿಂಗಳೊಳಗೆ ಎಲ್ಲಾ ಆಯ್ಕೆ ಪ್ರಕ್ರಿಯೆ ಸಂಪೂರ್ಣವಾಗಿ ಮುಗಿಸಿ, ಮುಂದಿನ ಆರು ತಿಂಗಳೊಳಗೆ ಆಯ್ಕೆಯಾದ ಅರ್ಹ ಅಭ್ಯರ್ಥಿಗಳ ಕೈಗೆ ನೇಮಕಾತಿ ಪತ್ರ ನೀಡುವ ಗುರಿಯನ್ನ ನಮ್ಮ ಸರ್ಕಾರ ಹೊಂದಿದೆ ಎಂದು ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಯಾವೆಲ್ಲಾ ಇಲಾಖೆಗಳಲ್ಲಿ ಖಾಲಿ ಹುದ್ದೆಗಳ ಭರ್ತಿ?
ಈಗಾಗಲೇ ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಸಾವಿರಾರು ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದು, ಈಗಾಗಲೇ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಕೂಡ ಭರದಿಂದಲೇ ಸಾಗುತ್ತಿದೆ. ಪ್ರಮುಖವಾಗಿ ಕಂದಾಯ ಇಲಾಖೆಯಲ್ಲಿ ಗ್ರಾಮ ಆಡಳಿತಾಧಿಕಾರಿಗಳು, ಭೂಮಾಪಕರು, ಅಲ್ಪಸಂಖ್ಯಾತ ಮತ್ತು ಸಮಾಜ ಕಲ್ಯಾಣ ಇಲಾಖೆಯಡಿ ಬರುವ ವಸತಿ ಶಾಲೆಗಳ ಶಿಕ್ಷಕರು ಹಾಗೂ ಗೃಹ ಇಲಾಖೆಯಡಿ ಬರುವ ವಿಶೇಷ ಮೀಸಲು ಪೊಲೀಸ್ ಪಡೆಯ ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಅಧಿಕೃತವಾಗಿ ಆರಂಭಗೊಂಡಿದೆ.
ಇದರ ಜೊತೆಗೆ, ಉನ್ನತ ಹುದ್ದೆಗಳ ಆಕಾಂಕ್ಷಿಗಳಿಗೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಮತ್ತೊಂದು ಗುಡ್ ನ್ಯೂಸ್ ಎಂದರೆ, 2026-27 ನೇ ಸಾಲಿನ ಗ್ರೂಪ್ 'ಎ' ಮತ್ತು ಗ್ರೂಪ್ 'ಬಿ' ವೃಂದದ ಒಟ್ಟು 319 ಗೆಜೆಟೆಡ್ ಪ್ರೊಬೇಷನರಿ (ಕೆಎಎಸ್) ಹುದ್ದೆಗಳ ಭರ್ತಿಗೂ ಸರ್ಕಾರ ಅಧಿಕೃತ ಆದೇಶ ನೀಡಿದೆ. ಇದು ಕೆಪಿಎಸ್‌ಸಿ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಲ್ಲಿ ಸಂತಸ ಮೂಡಿಸಿದೆ.
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕಗಳು
ಅಧಿಸೂಚನೆ ಹೊರಡಿಸಿರುವ ವಿವಿಧ ಇಲಾಖೆಗಳ ಸರ್ಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.
ಹುದ್ದೆಗಳ ವಿವರ ಮತ್ತು ಅರ್ಜಿ ಸಲ್ಲಿಸಲು ಇರುವ ಕೊನೆಯ ದಿನಾಂಕದ ಮಾಹಿತಿ ಈ ಕೆಳಗಿನಂತಿದೆ:
575 ಗ್ರಾಮ ಆಡಳಿತಾಧಿಕಾರಿ ಹುದ್ದೆಗಳು: ಜುಲೈ 30
750 ಭೂಮಾಪಕರ ಹುದ್ದೆಗಳು: ಆಗಸ್ಟ್ 7
1,074 ವಸತಿ ಶಾಲೆ ಶಿಕ್ಷಕರು: ಆಗಸ್ಟ್ 13
2,314 ವಿಶೇಷ ಮೀಸಲು ಪೊಲೀಸ್ ಪಡೆ ಹುದ್ದೆಗಳು: ಆಗಸ್ಟ್ 20
ಕರುನಾಡಿನಲ್ಲಿ ಉದ್ಯೋಗ ಉತ್ಸವ ಆರಂಭವಾಗಿದೆ. ಒಳಮೀಸಲಾತಿ ಜಾರಿಯಾದ ಹಿನ್ನೆಲೆಯಲ್ಲಿ ನೇಮಕಾತಿ ಪ್ರಕ್ರಿಯೆಗಳನ್ನು ಮತ್ತೆ ಆರಂಭಿಸಲಾಗಿದ್ದು, ಮುಂದಿನ ಆರು ತಿಂಗಳಲ್ಲಿ 72,000 ಹುದ್ದೆಗಳು ಭರ್ತಿಯಾಗಲಿದೆ.
— Dr. G Parameshwara (@DrParameshwara) July 17, 2026
ಇದರಲ್ಲಿ ಸುಮಾರು 32 ಸಾವಿರ ಹುದ್ದೆಗಳು ಕಲ್ಯಾಣ ಕರ್ನಾಟಕ ಭಾಗಕ್ಕೆ ಮೀಸಲಿಡಲಾಗಿದೆ. 4 ತಿಂಗಳೊಳಗೆ ಆಯ್ಕೆ ಪ್ರಕ್ರಿಯೆಯನ್ನು… pic.twitter.com/gVei9xLXXR
ರಾಜ್ಯದಲ್ಲಿ ನಿರುದ್ಯೋಗ ನಿವಾರಣೆ ಹಾಗೂ ಉದ್ಯೋಗ ಸೃಷ್ಟಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ಆಸಕ್ತ ಹಾಗೂ ಅರ್ಹ ಉದ್ಯೋಗಾಕಾಂಕ್ಷಿಗಳು ಈ ಕೂಡಲೇ ಅರ್ಜಿಗಳನ್ನು ಸಲ್ಲಿಸುವ ಮೂಲಕ ಲಭ್ಯವಿರುವ ಈ ಅವಕಾಶವನ್ನಾ ಸದುಪಯೋಗಪಡಿಸಿಕೊಳ್ಳಬೇಕು ಎಂದು ಉಪಮುಖ್ಯಮಂತ್ರಿಗಳು ಕರೆ ನೀಡಿದ್ದಾರೆ. "ನಿಮ್ಮ ಪ್ರತಿಭೆ ಮತ್ತು ನಿರಂತರ ಪರಿಶ್ರಮಕ್ಕೆ ಉದ್ಯೋಗದ ಗೌರವವನ್ನು ನೀಡಲು ನಾವು ಸದಾ ಬದ್ಧರಿದ್ದೇವೆ" ಎಂದು ಡಾ. ಜಿ. ಪರಮೇಶ್ವರ್ ಅವರು ಯುವಜನತೆಗೆ ಭರವಸೆಯ ಮಾತುಗಳನ್ನಾಡಿದ್ದಾರೆ.


Click it and Unblock the Notifications
