ಕೋಲಾರದಲ್ಲಿ ಕೈ ಬಿಟ್ಟ ಟಿಕೆಟ್ ಆಕಾಂಕ್ಷಿಗಳು? ಕಾಂಗ್ರೆಸ್ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದ 'ಕೆಜಿಎಫ್' ಪಡೆ
ಕೋಲಾರ್ ಮಾರ್ಚ್ 27: ನನಗೆ ಬೇಕು... ನನಗೇ ಕೊಡಿ.... ಅವರಿಗೆ ಕೊಟ್ಟರೆ ನನ್ ರಾಜೀನಾಮೆ ಗ್ಯಾರೆಂಟಿ... ಹೀಗೆ ಕೋಲಾರದಲ್ಲಿ ಟಿಕೆಟ್ ಆಕಾಂಕ್ಷಿಗಳು ಕೈ ನಾಯಕರ ಮುಂದೆ ಪಟ್ಟು ಹಿಡಿದು ಕುಳಿತಿದ್ದಾರೆ. ಇದು ಕಾಂಗ್ರೆಸ್ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಹೌದು... ಕಾಂಗ್ರೆಸ್ ಲೋಕಸಭಾ ಚುನಾವಣೆಗೆ 28 ಕ್ಷೇತ್ರಗಳ ಪೈಕಿ 24 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದೆ. ಆದರೆ ಇನ್ನೂ ಕೋಲಾರ, ಚಾಮರಾಜನಗರ, ಚಿಕ್ಕಬಳ್ಳಾಪುರ ಮತ್ತು ಬಳ್ಳಾರಿ ಕ್ಷೇತ್ರದ ಅಭ್ಯರ್ಥಿಗಳ ಹೆಸರು ಬಾಕಿ ಉಳಿದುಕೊಂಡಿದೆ. ಆದರೆ ಕೋಲಾರದಲ್ಲಿ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ಕಾಂಗ್ರೆಸ್‌ಗೆ ಬಿಸಿ ತುಪ್ಪವಾಗಿದೆ.

ಕಾಂಗ್ರೆಸ್ ಟಿಕೆಟ್ ಹಂಚಿಕೆ ವಿಚಾರದಲ್ಲಿ ಭಿನ್ನಮತ ಸ್ಪೋಟಗೊಂಡಿದ್ದು ಕೈ ನಾಯಕರಿಗೆ ದೊಡ್ಡ ತಲೆನೋವಾಗಿದೆ. ಒಂದೆಡೆ ಸಚಿವ ಕೆ.ಹೆಚ್.ಮುನಿಯಪ್ಪ ತಮ್ಮ ಅಳಿಯನಿಗೆ ಟಿಕೆಟ್ ನೀಡುವಂತೆ, ಮತ್ತೊಂದರೆಡೆ ರಮೇಶ್ ಕುಮಾರ್ ಬಣ ತಾವು ಬೆಂಬಲಿಸುವ ಅಭ್ಯರ್ಥಿಗೆ ಟಿಕೆಟ್ ನೀಡುವಂತೆ ಪಟ್ಟು ಹಿಡಿದರೆ, ಇನ್ನೊಂದೆಡೆ ಮುನಿಯಪ್ಪ ಕುಟುಂಬಕ್ಕೆ ಟಿಕೆಟ್ ಕೊಟ್ಟರೆ ರಾಜೀನಾಮೆ ನೀಡುವುದಾಗಿ ಐವರು ಶಾಸಕರು ಬೆದರಿಕೆ ಹಾಕಿದ್ದಾರೆ.
ಭಿನ್ನಮತ ತಣ್ಣಗಾಗಿಸಲು ಡಿಸಿಎಂ ಡಿಕೆ ಶಿವಕುಮಾರ್ ಎಷ್ಟೇ ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ. ಟಿಕೆಟ್ ಆಕಾಂಕ್ಷಿ ಎಲ್.ಹನುಮಂತಯ್ಯ ಜೊತೆ ಮಾತುಕತೆ ನಡೆಸಿದರೂ ಭಿನ್ನಮತ ಶಮನಗೊಳಿಸಲು ಆಗಲಿಲ್ಲ. ಜೊತೆಗೆ ಸಿಎಂ ರಾಜಕೀಯ ಕಾರ್ಯದರ್ಶಿ ಆಗಿರುವ ನಜೀರ್ ಅಹ್ಮದ್ ರಾಜೀನಾಮೆಗೆ ಮುಂದಾಗಿದ್ದಾರೆ.
ಕೋಲಾರದಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಗಗನಕ್ಕೇರಿದೆ. ಹೀಗಾಗಿ ಯಾರಿಗೆ ಸಮಾಧಾನ ಮಾಡಬೇಕು ಯಾರಿಗೆ ಟಿಕೆಟ್ ನೀಡಬೇಕು ಎನ್ನುವುದು ಅಂತಿಮಗೊಳಿಸಲು ಸಾಧ್ಯವಾಗುತ್ತಿಲ್ಲ. ಇದನ್ನು ಬಗೆಹರಿಸಲು ಸ್ವತ: ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯ ಮುಂದಾದರೂ ಭಿನ್ನಮತ ಶಮನಗೊಳಿಸುವುದು ಕಷ್ಟವಾಗಿದೆ.

ಈ ಬಗ್ಗೆ ಈಗಾಗಲೇ ಹೈಕಮಾಂಡ್‌ಗೆ ಮಾಹಿತಿ ರವಾನಿಸಲಾಗಿದ್ದು, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸಚಿವರು, ಶಾಸಕರು ಹಾಗೂ ಎಂಎಲ್‌ಸಿಗಳ ರಾಜೀನಾಮೆ ತಡೆಯುವಂತೆ ಸೂಚಿಸಿದ್ದಾರೆ. ತೆರೆಮರೆಯಲ್ಲಿ ಮನವೊಲಿಸುವ ಯತ್ನ ನಡೆಯುತ್ತಿವೆ.
ಕೋಲಾರ ಭಾಗದ ಶಾಸಕರು, ಸಚಿವರು ಮುನಿಯಪ್ಪ ಅಳಿಯನಿಗೆ ಟಿಕೆಟ್ ನೀಡದಂತೆ ಒತ್ತಾಯಿಸಿದ್ದಾರೆ. ಒಂದು ವೇಳೆ ಟಿಕೆಟ್ ನೀಡಿದರೆ ತಾವು ರಾಜೀನಾಮೆ ನೀಡುವುದು ಖಚಿತ ಎಂದು ಪಟ್ಟು ಹಿಡಿದಿದ್ದಾರೆ. ಈ ಬಗ್ಗೆ ಖಚಿತ ಪಡಿಸಿದ ಸಿಎಂ ಸಿದ್ದರಾಮಯ್ಯ,' ಭಿನ್ನಾಭಿಪ್ರಾಯ ಇರುವುದು ನಿಜ. ಎಡ ಗೈ ಸಮುದಾಯಕ್ಕೆ ಟಿಕೆಟ್ ನೀಡುವಂತೆ ಒತ್ತಾಯವಿದೆ. ಅವರೊಂದಿಗೆ ನಾನು ಮಾತನಾಡುತ್ತೇನೆ' ಎಂದರು.
ಅಸಮಾಧಾನ ಇರುವ ಕೋಲಾರ ಶಾಸಕರು ಮಂಗಳೂರಿನಲ್ಲಿರುವ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್‌ಗೆ ಭೇಟಿಗೆ ಸಮಾಯಾವಕಾಶ ಕೇಳಿದ್ದಾರೆ ಎನ್ನಲಾಗಿದೆ. ಅವರನ್ನು ಭೇಟಿ ಮಾಡಲು ಸಚಿವ ಎಂ.ಸಿ ಸುಧಾಕರ್ ಹಾಗೂ ಶಾಸಕರಾದ ಕೊತ್ತೂರು ಮಂಜುನಾಥ್ ಮತ್ತು ನಂಜೇಗೌಡ ಈಗಾಗಲೇ ವಿಮಾನ ಟಿಕೆಟ್ ಬುಕ್ ಮಾಡಿದ್ದು ಸಂಜೆ ಸ್ವೀಕರ್ ಭೇಟಿ ಮಾಡಲಿದ್ದಾರೆ.












Click it and Unblock the Notifications