NEET ಪೇಪರ್ ಲೀಕ್ ಖಂಡಿಸಿ 18 ದಿನಗಳಿಂದ ಉಪವಾಸ ಮಾಡುತ್ತಿರುವ ಈ ಸೋನಮ್ ವಾಂಗ್ಚುಕ್ ಯಾರು?
ನವದೆಹಲಿಯ ಜಂತರ್ ಮಂತರ್‌ನಲ್ಲಿ ಶಿಕ್ಷಣ ತಜ್ಞ ಹಾಗೂ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹ 18ನೇ ದಿನಕ್ಕೆ ಕಾಲಿಟ್ಟಿದೆ. ಕೇವಲ ನೀರನಷ್ಟೇ ಕುಡಿದು ಪ್ರತಿಭಟಿಸುತ್ತಿರುವ 59 ವರ್ಷದ ವಾಂಗ್ಚುಕ್ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಿದೆ. ಈ 18 ದಿನದಲ್ಲಿ ಸುಮಾರು 8 ಕೆಜಿ ತೂಕ ಕಳೆದುಕೊಂಡಿದ್ದಾರೆ.
ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಲಡಾಖ್‌ನ ಸಾಂವಿಧಾನಿಕ ಹಕ್ಕುಗಳ ರಕ್ಷಣೆಗಾಗಿ ಅವರು ಕಾಕ್ರೋಚ್ ಜನತಾ ಪಾರ್ಟಿ ಆರಂಭಿಸಿರುವ ಈ ಹೋರಾಟಕ್ಕೆ ಕೈಜೋಡಿಸಿದ್ದಾರೆ. ಆದರೆ, 25 ದಿನಗಳಿಂದ ನಡೆಯುತ್ತಿರುವ ಈ ಪ್ರತಿಭಟನೆಗೆ ಕೇಂದ್ರ ಸರ್ಕಾರ ಇದುವರೆಗೂ ಯಾವುದೇ ರೀತಿಯಿಂದ ಪ್ರತಿಕ್ರಿಯೆ ನೀಡಿಲ್ಲ.

ಸೋನಮ್ ವಾಂಗ್ಚುಕ್ ಅವರ ಪ್ರಮುಖ ಬೇಡಿಕೆಯಂದರೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ. ಹೌದು, 2026ರ ಮೇ ತಿಂಗಳಲ್ಲಿ ನಡೆದ ನೀಟ್ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಆಗಿದ್ದರಿಂದ 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದೆ. ಇದರಿಂದಾಗಿ 11 ವಿದ್ಯಾರ್ಥಿಗಳು ಆತ್ಮಹತ್ಯೆ ಕೂಡ ಮಾಡಿಕೊಂಡಿದ್ದಾರೆ.ವಿದ್ಯಾರ್ಥಿಗಳ ಪರವಾಗಿ ನಿಂತಿರುವ ವಾಂಗ್ಚುಕ್, ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ವಿದ್ಯಾರ್ಥಿಗಳ ತಪ್ಪೇನೂ ಇಲ್ಲ, ಹಾಗಾಗಿ ಅವರಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದ್ದಾರೆ.
ರಾಜಕೀಯ ಸಂವಹನ ತಂತ್ರಜ್ಞ ಅಭಿಜೀತ್ ಡಿಪ್ಕೆ ಸ್ಥಾಪಿಸಿರುವ 'ಕಾಕ್ರೋಚ್ ಜನತಾ ಪಾರ್ಟಿ' ಕೂಡ ಸಚಿವರ ರಾಜೀನಾಮೆಗೆ ಪಟ್ಟು ಹಿಡಿದಿದ್ದು, ಮೃತ ವಿದ್ಯಾರ್ಥಿಗಳ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ನೀಡುವಂತೆ ಒತ್ತಾಯಿಸಿದೆ. ಈ ಪಕ್ಷವನ್ನ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಇತ್ತೀಚೆಗೆ ಯುವಕರನ್ನು ಉಲ್ಲೇಖಿಸಿ 'ಕಾಕ್ರೋಚ್' ಎಂಬ ಪದ ಬಳಸಿದ್ದನ್ನು ವ್ಯಂಗ್ಯವಾಗಿ ಸ್ವೀಕರಿಸಿ, ಕಟ್ಟಿದ್ದಾರೆ.
ಲಡಾಖ್ 6ನೇ ಶೆಡ್ಯೂಲ್ ಜಾರಿ
ವಾಂಗ್ಚುಕ್ ಅವರ ಎರಡನೇ ಬೇಡಿಕೆ ಎಂದರೆ ಲಡಾಖ್ ಅನ್ನು ಸಂವಿಧಾನದ 6ನೇ ಶೆಡ್ಯೂಲ್‌ಗೆ ಸೇರಿಸ ಬೇಕು ಎನ್ನುವುದು. 2019ರಲ್ಲಿ ಜಮ್ಮು-ಕಾಶ್ಮೀರದಿಂದ ಲಡಾಖ್ ಅನ್ನು ಪ್ರತ್ಯೇಕಿಸಿ ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಲಾಯಿತು. ಆ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಲಡಾಖ್‌ಗೆ 6ನೇ ಶೆಡ್ಯೂಲ್ ಮಾನ್ಯತೆ ನೀಡುವ ಭರವಸೆಯನ್ನ ನೀಡಿತ್ತು. ಆದರೆ, 2024ರ ಆರಂಭದಲ್ಲಿ ಕೇಂದ್ರ ಗೃಹ ಸಚಿವರು ಈ ಬೇಡಿಕೆಯನ್ನು ತಿರಸ್ಕರಿಸಿದರು.
ಲಡಾಖ್‌ನಲ್ಲಿ ಶೇ.97ರಷ್ಟು ಬುಡಕಟ್ಟು ಜನಾಂಗದವರಿದ್ದು, ಸೂಕ್ತ ಸಾಂವಿಧಾನಿಕ ರಕ್ಷಣೆ ಇಲ್ಲದಿದ್ದರೆ ಹೊರಗಿನವರು ಇಲ್ಲಿನ ಭೂಮಿ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನ ಲೂಟಿ ಮಾಡುತ್ತಾರೆ ಎಂಬುದು ವಾಂಗ್ಚುಕ್ ಆತಂಕ. ಪರಿಸರ ರಕ್ಷಣೆಗಾಗಿ ಹೋರಾಡುತ್ತಿರುವ ಅವರನ್ನು 2025ರಲ್ಲಿ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ (NSA) ಬಂಧಿಸಿ 170 ದಿನಗಳ ಕಾಲ ಜೈಲಿನಲ್ಲಿ ಸಹ ಇರಿಸಲಾಗಿತ್ತು.
ಕೇಂದ್ರದ ಮೌನ
2011ರಲ್ಲಿ ಅಣ್ಣಾ ಹಜಾರೆ ಅವರು ಉಪವಾಸ ಸತ್ಯಾಗ್ರಹ ನಡೆಸಿದಾಗ ಅಂದಿನ ಸರ್ಕಾರ ಅದಕ್ಕೆ ಸ್ಪಂದಿಸಿತ್ತು. ಆದರೆ, ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ವಿಜೇತರಾದ ಸೋನಮ್ ವಾಂಗ್ಚುಕ್ ಸಾವು - ಬದುಕಿನ ನಡುವೆ ಹೋರಾಡುತ್ತಿದ್ದರೂ ಹಾಲಿ ಸರ್ಕಾರ ಮೌನ ವಹಿಸಿರುವುದು ವಿರೋಧ ಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ. ಮಮತಾ ಬ್ಯಾನರ್ಜಿ, ಅರವಿಂದ್ ಕೇಜ್ರಿವಾಲ್, ಅಖಿಲೇಶ್ ಯಾದವ್ ಸೇರಿದಂತೆ ಹಲವು ಪ್ರಮುಖ ನಾಯಕರು ಹಾಗೂ ಚಲನಚಿತ್ರ ಗಣ್ಯರು ಕೂಡ ವಾಂಗ್ಚುಕ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಜುಲೈ 20ರಂದು ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಲಿದ್ದು, ಅಂದು ಜಂತರ್ ಮಂತರ್‌ನಿಂದ ಸಂಸತ್ ಭವನದವರೆಗೆ ಶಾಂತಿಯುತ ಮೆರವಣಿಗೆ ನಡೆಸಲು ಯುವಕರು ಮತ್ತು ವಾಂಗ್ಚುಕ್ ನಿರ್ಧರಿಸಿದ್ದಾರೆ.














Click it and Unblock the Notifications