ಸತ್ತ ನಂತರವೂ ನೆಮ್ಮದಿಯಿಲ್ಲ!ಪ್ರತಿ 5 ವರ್ಷಗಳಿಗೊಮ್ಮೆ ಸಮಾಧಿಯಿಂದ ಹೊರ ತೆಗದು ಮಾಡಿಸಲಾಗುತ್ತದೆ ಈ ಕೆಲಸ
ಆಫ್ರಿಕನ್ ದೇಶವಾದ ಮಡಗಾಸ್ಕರ್‌ನ ಅನೇಕ ಪ್ರದೇಶಗಳಲ್ಲಿ ವಾಸಿಸುವ ಮಲಗಾಸಿ ಸಮುದಾಯವು ವಿಶಿಷ್ಟ ಸಂಪ್ರದಾಯವನ್ನು ಅನುಸರಿಸಿಕೊಂಡು ಬರುತ್ತಿದೆ. ಇವರಿಗೆ ಸಾವು ಜೀವನದ ಅಂತಿಮ ಹಂತವಲ್ಲ. ಸಾವಿನ ನಂತರವೂ ವ್ಯಕ್ತಿಯು ತನ್ನ ಕುಟುಂಬದೊಂದಿಗೆ ಸಂಪರ್ಕದಲ್ಲಿರುತ್ತಾನೆ. ತನ್ನ ಕುಟುಂಬವನ್ನು ರಕ್ಷಿಸುತ್ತಾನೆ ಎನ್ನುವ ನಂಬಿಕೆ ಇವರಲ್ಲಿದೆ. ಇಲ್ಲಿ, ಜನರು ತಮ್ಮ ಮೃತ ಸಂಬಂಧಿಕರ ಸಮಾಧಿಗಳನ್ನು ಮತ್ತೆ ಮತ್ತೆ ತೆರೆಯುತ್ತಾರೆ. ಅವರ ಅಸ್ಥಿ ಪಂಜರವನ್ನು ಹೊರ ತೆಗೆದು ಕೆಲವು ಆಚರಣೆಗಳನ್ನು ನೆರವೇರಿಸುತ್ತಾರೆ. ನೊಡುವುದಕ್ಕೆ,ಕೇಳುವುದಕ್ಕೆ ಇದು ವಿಚಿತ್ರ ಅನ್ನಿಸಬಹುದು ಆದರೆ ಇದು ಸತ್ಯ.
ಸತ್ತ ಸಂಬಂಧಿಕರೊಂದಿಗೆ ಸಮಾರಂಭ:
ಇಲ್ಲಿನ ಜನರು ತಮ್ಮ ಮೃತ ಸಂಬಂಧಿಕರನ್ನು ಸಮಾಧಿ ಮಾಡಿದ ನಂತರ ಮರೆತುಬಿಡುವುದಿಲ್ಲ, ಬದಲಾಗಿ, ಕೆಲವು ವರ್ಷಗಳ ನಂತರ, ಅವರನ್ನು ಮತ್ತೆ ಸ್ಮರಿಸಲು ಮತ್ತು ಗೌರವಿಸಲು ವಿಶೇಷ ಸಮಾರಂಭವನ್ನು ನಡೆಸುತ್ತಾರೆ. ಈ ಸಂಪ್ರದಾಯವನ್ನು "ಫಮದಿಹಾನ" ಎಂದು ಕರೆಯಲಾಗುತ್ತದೆ. ಇದರರ್ಥ ಮೂಳೆಗಳನ್ನು ಬದಲಾಯಿಸುವುದು ಎಂದು.

ಸಮಾಧಿಗಳನ್ನು ತೆರೆದು ಮನೆಗೆ ತರಲಾಗುತ್ತದೆ ಪೂರ್ವಜರ ಮೂಳೆ:
ಫಮಾದಿಹಾನದ ಸಮಯದಲ್ಲಿ, ಕುಟುಂಬ ಸದಸ್ಯರು ಸ್ಮಶಾನಗಳಿಗೆ ಭೇಟಿ ನೀಡಿ ಅವರ ಸಂಬಂಧಿಕರ ಸಮಾಧಿಗಳನ್ನು ತೆರೆಯುತ್ತಾರೆ. ನಂತರ ಸತ್ತವರ ಮೂಳೆಗಳನ್ನು ಬಹಳ ಗೌರವದಿಂದ ಹೊರತೆಗೆಯಲಾಗುತ್ತದೆ. ಅವುಗಳನ್ನು ಹೊಸ, ಸ್ವಚ್ಛವಾದ ಬಟ್ಟೆಗಳಿಂದ ಸುತ್ತಿಡಲಾಗುತ್ತದೆ. ಅನೇಕ ಸ್ಥಳಗಳಲ್ಲಿ, ಕುಟುಂಬ ಸದಸ್ಯರು ಗತಿಸಿದವರ ಮೂಳೆಗಳನ್ನು ಮನೆಗೆ ತರುತ್ತಾರೆ. ನಂತರ, ಇಡೀ ಕುಟುಂಬವು ಒಟ್ಟಿಗೆ ಸೇರಿ ಒಂದು ವಿಭಿನ್ನ ಆಚರಣೆಯಲ್ಲಿ ತೊಡಗುತ್ತದೆ. ಇದು ಶೋಕ ಸಮಾರಂಭವಾಗಿರುವುದಿಲ್ಲ, ಬದಲಾಗಿ ಹಬ್ಬದ ವಾತಾವರಣವಾಗಿರುತ್ತದೆ. ಜನರು ಸಂಗೀತ ನುಡಿಸುತ್ತಾರೆ, ನೃತ್ಯ ಮಾಡುತ್ತಾರೆ, ಬೇರೆ ಬೇರೆ ರೀತಿಯ ಆಹಾರವನ್ನು ತಿನ್ನುತ್ತಾರೆ. ತಮ್ಮ ಪೂರ್ವಜರ ನೆನಪುಗಳನ್ನು ಹಂಚಿಕೊಳ್ಳುತ್ತಾರೆ. ಮಕ್ಕಳಿಗೆ ಹಿರಿಯ ಕುಟುಂಬ ಸದಸ್ಯರ ಬಗ್ಗೆಯೂ ತಿಳಿಸಿ ಹೇಳಲಾಗುತ್ತದೆ. ಈ ಮೂಲಕ ಮಕ್ಕಳು ತಮ್ಮ ಕುಟುಂಬದ ಹಿರಿಯರ ಬಗ್ಗೆ ತಿಳಿದುಕೊಳ್ಳುವುದು ಸಹಾಯವಾಗುತ್ತದೆ.
5 ರಿಂದ 7 ವರ್ಷಗಳಲ್ಲಿ ಪುನರಾವರ್ತನೆಯಾಗುವ ಸಂಪ್ರದಾಯ:
ಅಂದ ಹಾಗೆ ಈ ಸಂಪ್ರದಾಯವನ್ನು ಪ್ರತಿ ವರ್ಷವೂ ಆಚರಿಸುವುದಿಲ್ಲ. ಕುಟುಂಬಗಳು ಸಾಮಾನ್ಯವಾಗಿ ಪ್ರತಿ ಐದರಿಂದ ಏಳು ವರ್ಷಗಳಿಗೊಮ್ಮೆ ಫಮದಿಹಾನ ಸಮಾರಂಭವನ್ನು ನಡೆಸುತ್ತವೆ. ಜೂನ್ ಮತ್ತು ಸೆಪ್ಟೆಂಬರ್ ನಡುವಿನ ಅವಧಿಯನ್ನು ಸಾಮಾನ್ಯವಾಗಿ ಈ ಆಚರಣೆಗೆ ಆಯ್ಕೆ ಮಾಡಲಾಗುತ್ತದೆ. ಏಕೆಂದರೆ ಈ ಸಮಯದಲ್ಲಿ ಮಡಗಾಸ್ಕರ್‌ನ ಹವಾಮಾನವು ಶುಷ್ಕವಾಗಿರುತ್ತದೆ. ಇದರಿಂದಾಗಿ ಹೊರಾಂಗಣ ಕಾರ್ಯಕ್ರಮಗಳನ್ನು ನಡೆಸುವುದು ಸುಲಭವಾಗುತ್ತದೆ. ಕುಟುಂಬ ಸದಸ್ಯರು ದೂರದ ದೇಶಗಳಿಂದ ತಮ್ಮ ಹಳ್ಳಿಗಳಿಗೆ ಹಿಂತಿರುಗುತ್ತಾರೆ. ಸಮಾರಂಭವು ಸಾಮಾನ್ಯವಾಗಿ ಹಲವಾರು ದಿನಗಳವರೆಗೆ ಇರುತ್ತದೆ. ಇದು ಸಂಬಂಧಿಕರನ್ನು ಒಟ್ಟುಗೂಡಿಸುತ್ತದೆ ಮತ್ತು ಕುಟುಂಬ ಸಂಬಂಧಗಳನ್ನು ಬಲಪಡಿಸುತ್ತದೆ.
ಈ ವಿಚಿತ್ರ ಪದ್ಧತಿಯ ಹಿಂದಿನ ಕಾರಣ:
ಮಡಗಾಸ್ಕರ್ ಜನರಿಗೆ, ಇದು ಕೇವಲ ಒಂದು ಸಂಪ್ರದಾಯವಲ್ಲ, ಬದಲಾಗಿ ಭಾವನೆ. ಸಾವಿನ ನಂತರವೂ ಅವರ ಪೂರ್ವಜರು ತಮ್ಮ ಕುಟುಂಬಗಳನ್ನು ನೋಡಿಕೊಳ್ಳುತ್ತಾರೆ, ಸಹಾಯ ಮಾಡುತ್ತಾರೆ ಎನ್ನುವ ನಂಬಿಕೆ ಇಲ್ಲಿಯವರದ್ದಾಗಿರುತ್ತದೆ. ಸ್ಥಳೀಯರ ಪ್ರಕಾರ, ತಮ್ಮ ಪೂರ್ವಜರನ್ನು ಸ್ಮರಿಸುವುದು ಮತ್ತು ಗೌರವಿಸುವುದು ಕುಟುಂಬದ ಯೋಗಕ್ಷೇಮಕ್ಕೆ ಅತ್ಯಗತ್ಯ. ಅವರನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ, ಅವರು ಕೋಪಗೊಳ್ಳಬಹುದು ಎನ್ನುವ ನಂಬಿಕೆಯೂ ಇಲ್ಲಿನವರಲ್ಲಿದೆ.ಸ್ಥಳೀಯ ನಂಬಿಕೆಯ ಪ್ರಕಾರ, ಅನೇಕ ಜನರ ಕನಸಿನಲ್ಲಿ ಪೂರ್ವಜರು ಕಾಣಿಸಿಕೊಳ್ಳುತ್ತಾರೆಯಂತೆ. ಹಾಗಾಗಿ ಫಮಾದಿಹಾನ ಮೂಲಕ, ಅವರು ತಮ್ಮ ಹಳೆಯ ಸಂಬಂಧಗಳೊಂದಿಗೆ ಮತ್ತೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ ಎನ್ನಲಾಗಿದೆ.
ಇಡೀ ಸಮಾರಂಭವನ್ನು ನೃತ್ಯ ಮತ್ತು ಹಾಡಿನೊಂದಿಗೆ ಆಚರಿಸಲಾಗುತ್ತದೆ:
ಈ ಸಂಪ್ರದಾಯದ ಅತ್ಯಂತ ವಿಶೇಷ ಅಂಶವೆಂದರೆ ಅದು ಸಾವಿನ ಭಯದಿಂದ ತುಂಬಿಲ್ಲ, ಬದಲಾಗಿ ಸಂತೋಷದಿಂದ ತುಂಬಿರುತ್ತದೆ. ಕುಟುಂಬ ಸದಸ್ಯರು ಸ್ಮಶಾನಕ್ಕೆ ಭೇಟಿ ನೀಡುತ್ತಾರೆ. ಮೂಳೆಗಳನ್ನು ಹೊರತೆಗೆದ ನಂತರ, ಹೊಸ ಬಟ್ಟೆಗಳನ್ನು ಧರಿಸಲಾಗುತ್ತದೆ. ನಂತರ ಮೆರವಣಿಗೆ ನಡೆಸಲಾಗುತ್ತದೆ. ಅನೇಕ ಸ್ಥಳಗಳಲ್ಲಿ, ಜನರು ತಮ್ಮ ಪೂರ್ವಜರನ್ನು ಮನೆಗೆ ಕರೆತರುತ್ತಾರೆ, ಸಂಗೀತಕ್ಕೆ ನೃತ್ಯ ಮಾಡುತ್ತಾರೆ. ಮನೆಗೆ ಬಂದ ನಂತರ, ಊಟ ತಯಾರಿಸಲಾಗುತ್ತದೆ ಮತ್ತು ಸಂಬಂಧಿಕರು ಒಟ್ಟಿಗೆ ಸಮಯ ಕಳೆಯುತ್ತಾರೆ. ಕೆಲವು ಪ್ರದೇಶಗಳಲ್ಲಿ, ಜನರು ಮೂಳೆಗಳನ್ನು ಹೆಗಲ ಮೇಲೆ ಹೊತ್ತುಕೊಂಡು ನೃತ್ಯ ಮಾಡುತ್ತಾರೆ. ಈ ಸಂಪ್ರದಾಯವು ಹೊರಗಿನವರಿಗೆ ವಿಚಿತ್ರವಾಗಿ ಕಂಡರೂ, ಸ್ಥಳೀಯರಿಗೆ, ಇದು ಪ್ರೀತಿ ಮತ್ತು ಗೌರವವನ್ನು ತೋರಿಸುವ ಒಂದು ಮಾರ್ಗವಾಗಿದೆ.
ಆದರೆ, ಬದಲಾಗುತ್ತಿರುವ ಕಾಲದೊಂದಿಗೆ, ಈ ಸಂಪ್ರದಾಯವು ಕೆಲವು ಸವಾಲುಗಳನ್ನು ಎದುರಿಸುತ್ತಿದೆ. ಅನೇಕ ನಗರವಾಸಿಗಳು ಈಗ ಇಂಥಹ ದೊಡ್ಡ ಸಮಾರಂಭಗಳನ್ನು ಆಯೋಜಿಸಲು ಸಾಧ್ಯವಾಗುತ್ತಿಲ್ಲ.ಇದಕ್ಕೆ ತಗಲುವ ವೆಚ್ಚವೂ ಅಧಿಕವಾಗಿರುತ್ತದೆ, ಜೊತೆಗೆ ಕೆಲವು ಆರೋಗ್ಯ ತಜ್ಞರು ಸಮಾಧಿಗಳನ್ನು ತೆರೆಯುವ ಪ್ರಕ್ರಿಯೆಯ ಬಗ್ಗೆ ಕಳವಳ ವ್ಯಕ್ತಪಡಿಸುತ್ತಾರೆ. ಇದರ ಹೊರತಾಗಿಯೂ, ಮಡಗಾಸ್ಕರ್‌ನ ಗ್ರಾಮೀಣ ಪ್ರದೇಶಗಳಲ್ಲಿ ಈ ಸಂಪ್ರದಾಯವು ಜೋರಾಗಿದೆ. ಜನರು ಇದನ್ನು ತಮ್ಮ ಸಂಸ್ಕೃತಿ ಮತ್ತು ಗುರುತಿನ ಭಾಗವೆಂದು ಕರೆಯುತ್ತಾರೆ.
ಇಲ್ಲಿ ಭಾವನೆಗಳಿಗೆ ಮಾತ್ರ ಬೆಲೆ:
ಪ್ರಪಂಚದ ಇತರ ಭಾಗಗಳ ಜನರಿಗೆ ಫಮದಿಹಾನ ಆಶ್ಚರ್ಯಕರವಾಗಿ ಕಂಡುಬಂದರೂ, ಮಡಗಾಸ್ಕರ್ ಜನರಿಗೆ, ಇದು ತಮ್ಮ ಪ್ರೀತಿಪಾತ್ರರನ್ನು ನೆನಪಿಸಿಕೊಳ್ಳಲು ಮತ್ತು ಅವರೊಂದಿಗೆ ಸಂಪರ್ಕದಲ್ಲಿರಲು ಒಂದು ಮಾರ್ಗವಾಗಿದೆ. ಈ ಸಂಪ್ರದಾಯವು ವಿವಿಧ ದೇಶಗಳಲ್ಲಿ ಸಾವು ಮತ್ತು ಸಂಬಂಧಗಳ ಬಗ್ಗೆ ವಿಭಿನ್ನ ದೃಷ್ಟಿಕೋನಗಳು ಹೇಗೆ ಇರಬಹುದು ಎಂಬುದನ್ನು ವಿವರಿಸುತ್ತದೆ. ಅನೇಕ ಸ್ಥಳಗಳಲ್ಲಿ, ಸಂಬಂಧಗಳು ಸಾವಿನೊಂದಿಗೆ ಕೊನೆಗೊಳ್ಳುತ್ತವೆ. ಆದರೆ ಮಡಗಾಸ್ಕರ್‌ನಲ್ಲಿ, ತಮ್ಮ ಪ್ರೀತಿಪಾತ್ರರು ಈ ಪ್ರಪಂಚವನ್ನು ತೊರೆದ ನಂತರವೂ ಅವರೊಂದಿಗೆ ಸಂಪರ್ಕದಲ್ಲಿರುತ್ತಾರೆ ಎನ್ನುವ ನಂಬಿಕೆಯನ್ನು ಉಳಿಸಿಕೊಂಡು ಬರಲಾಗಿದೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications