ವಿಜ್ಞಾನಕ್ಕೂ ನಿಲುಕದ ಅದ್ಭುತ ಶಕ್ತಿ: ಎಲ್ಲಾ ತರ್ಕಗಳನ್ನು ಮೀರಿದೆ ಭಾರತದ ಈ ಶಕ್ತಿಪೀಠಗಳ ರಹಸ್ಯ
ತರ್ಕಕ್ಕೆ ನಿಲುಕದ ದೈವಿಕ ಶಕ್ತಿ ಮತ್ತು ವಿಜ್ಞಾನವನ್ನೂ ಮೀರಿದ ನಿಗೂಢತೆ ಇರುವ ತಾಣಗಳೆಂದರೆ ಅದು ಭಾರತದ 'ಶಕ್ತಿಪೀಠಗಳು'. ಭಕ್ತರ ನಂಬಿಕೆಯೇ ಮೇಲುಗೈ ಸಾಧಿಸಿರುವ ಸ್ಥಳಗಳಿವು. ದೇವೀ ಪುರಾಣಗಳ ಪ್ರಕಾರ, ಸತಿ ದೇವಿಯ ದೇಹದ ಭಾಗಗಳು ಬಿದ್ದ ಸ್ಥಳಗಳೇ ಶಕ್ತಿಪೀಠಗಳಾಗಿ ಗುರುತಿಸಿಕೊಂಡಿವೆ. ಭಕ್ತರ ಆರಾಧ್ಯ ಕೇಂದ್ರಗಳಾಗಿವೆ. ಶತಮಾನಗಳಿಂದ ಇಲ್ಲಿಗೆ ಭೇಟಿ ನೀಡುವ ಭಕ್ತರು ಅಸಾಧಾರಣ ಮಾತ್ರವಲ್ಲ ವಿವರಣೆಗೂ ಮೀರಿದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ವಿಜ್ಞಾನವು ಸಿದ್ಧಾಂತಗಳನ್ನು ನೀಡಬಹುದು.ಆದರೆ ಇಲ್ಲಿನ ಭಕ್ತರ ಅನುಭವ ವಿಜ್ಞಾನವನ್ನೂ ಮೀರಿದೆ.
ಇತಿಹಾಸ, ಭಕ್ತಿ ಮತ್ತು ವಿಜ್ಞಾನದ ಸಮ್ಮಿಲನವಾಗಿರುವ ಈ ದೇವಾಲಯಗಳಿವು:
ಕಾಮಾಖ್ಯ ದೇವಾಲಯ, ಅಸ್ಸಾಂ (ಗುವಾಹಟಿ):
ನೀಲಾಚಲ ಬೆಟ್ಟದ ಮೇಲೆ ನೆಲೆಸಿರುವ ಕಾಮಾಖ್ಯ ದೇವಾಲಯವು ಶಕ್ತಿಪೀಠಗಳಲ್ಲಿ ಅತ್ಯಂತ ವಿಶಿಷ್ಟವಾದುದು. ಸತಿ ದೇವಿಯ ಗರ್ಭಭಾಗ ಬಿದ್ದ ಸ್ಥಳ ಇದು ಎನ್ನುವುದು ನಂಬಿಕೆ. ಈ ದೇವಾಲಯದಲ್ಲಿ ಸಾಂಪ್ರದಾಯಿಕ ವಿಗ್ರಹಗಳಿಲ್ಲ. ಬದಲಾಗಿ, ಗುಹೆಯ ಒಳಗಿರುವ ನೈಸರ್ಗಿಕ ಶಿಲಾ ರಚನೆಯನ್ನೇ ಇಲ್ಲಿ ಪೂಜಿಸಲಾಗುತ್ತದೆ.

1. ಅಂಬುಬಾಚಿ ರಹಸ್ಯ:
ಈ ದೇವಾಲಯದ ಅತ್ಯಂತ ಕುತೂಹಲಕಾರಿ ವಿಷಯವೆಂದರೆ ಇಲ್ಲಿ ನಡೆಯುವ ವಾರ್ಷಿಕ 'ಅಂಬುಬಾಚಿ ಮೇಳ'. ದೇವಿ ಋತುಮತಿಯಾಗುತ್ತಾಳೆ ಎಂಬ ನಂಬಿಕೆಯಿಂದ ಮೂರು ದಿನಗಳ ಕಾಲ ದೇವಾಲಯದ ಬಾಗಿಲು ಮುಚ್ಚಲಾಗುತ್ತದೆ. ಮೂರನೇ ದಿನದ ನಂತರ ಬಾಗಿಲು ತೆರೆದಾಗ ಭಕ್ತರಿಗೆ ಕೆಂಪು ಬಣ್ಣದ ಬಟ್ಟೆಯನ್ನು ಪ್ರಸಾದವಾಗಿ ನೀಡಲಾಗುತ್ತದೆ. ಈ ಇದು ಇಂದಿಗೂ ವಿಜ್ಞಾನಿಗಳಿಗೆ ಮತ್ತು ಭಕ್ತರಿಗೆ ಅಚ್ಚರಿಯ ವಿಷಯವಾಗಿದೆ. ವಿಜ್ಞಾನಿಗಳ ಯಾವ ತರ್ಕವನ್ನೂ ಇಲ್ಲಿ ಭಕ್ತರು ಒಪ್ಪುವಂತಿಲ್ಲ. ಇಲ್ಲಿ ಭಕ್ತರು ಏನು ನೋಡುತ್ತಾರೆ, ಏನು ಅನುಭವಿಸುತ್ತಾರೆ ಅದಷ್ಟೇ ಮುಖ್ಯವಾಗಿರುತ್ತದೆ.
2. ಕಾಳಿಘಾಟ್ ದೇವಾಲಯ, ಕೋಲ್ಕತ್ತಾ:
ಕೋಲ್ಕತ್ತಾದಲ್ಲಿರುವ ಕಾಳಿಘಾಟ್ ದೇವಾಲಯ ಭಾರತದ 51 ಶಕ್ತಿ ಪೀಠಗಳಲ್ಲಿ ಒಂದಾಗಿದೆ. ಆದಿ ಗಂಗಾ ನದಿಯ ದಂಡೆಯ ಮೇಲಿರುವ ಈ ಐತಿಹಾಸಿಕ ದೇವಾಲಯವು ಕಾಳಿಗೆ ಸಮರ್ಪಿತವಾಗಿದೆ. ಪಶ್ಚಿಮ ಬಂಗಾಳದ ಕಾಳಿಘಾಟ್ ದೇವಾಲಯವು ಸತಿ ದೇವಿಯ ಪಾದದ ಬೆರಳುಗಳು ಬಿದ್ದ ಸ್ಥಳವೆಂದು ನಂಬಲಾಗಿದೆ. ಇಲ್ಲಿನ ಕಾಳಿಕಾ ದೇವಿಯ ವಿಗ್ರಹವು ಭಕ್ತರಲ್ಲಿ ತೀವ್ರ ಭಕ್ತಿ ಭಾವವನ್ನು ಮೂಡಿಸುತ್ತದೆ. ವಿಶಾಲವಾದ ಕಣ್ಣುಗಳು ಮತ್ತು ಹೊರಚಾಚಿದ ನಾಲಿಗೆಯನ್ನು ಹೊಂದಿರುವ ದೇವಿ, ಶಕ್ತಿ ಮತ್ತು ಪರಿವರ್ತನೆಯ ಸಂಕೇತವಾಗಿದೆ. ಇಲ್ಲಿಯ ದೇವಿಯ ವಿಗ್ರಹವು ಮೂರು ಕಣ್ಣುಗಳು, ಚಿನ್ನದ ಕೈಗಳು ಮತ್ತು ಉದ್ದನೆಯ ಚಿನ್ನದ ನಾಲಿಗೆಯನ್ನು ಹೊಂದಿದೆ. ಇಲ್ಲಿಗೆ ಭೇಟಿ ನೀಡುವ ಭಕ್ತರು, ಈ ದೇವಾಲಯದಲ್ಲಿ ಒಂದು ರೀತಿಯ ವಿಶಿಷ್ಟ ಶಕ್ತಿಯನ್ನು ಅನುಭವಿಸುತ್ತೇವೆ ಎಂದು ಹೇಳುತ್ತಾರೆ.
3. ಜ್ವಾಲಾ ದೇವಿ ದೇವಾಲಯ, ಹಿಮಾಚಲ ಪ್ರದೇಶ:
ಹಿಮಾಚಲ ಪ್ರದೇಶದಲ್ಲಿರುವ ಜ್ವಾಲಾ ದೇವಿ ದೇವಾಲಯವು ವಿಭಿನ್ನವಾಗಿದೆ. ಇದು ಸತಿ ದೇವಿಯ ನಾಲಗೆ ಬಿದ್ದ ಜಾಗ ಎನ್ನುವುದು ನಂಬಿಕೆ. ಇಲ್ಲಿ ದೇವಿಯನ್ನು ವಿಗ್ರಹದ ರೂಪದಲ್ಲಿ ಪೂಜಿಸುವುದಿಲ್ಲ. ಬದಲಾಗಿ ಇಲ್ಲಿನ ಪರ್ವತದ ಬಿರುಕುಗಳಿಂದ ಸತತವಾಗಿ ಉರಿಯುವ 'ಶಾಶ್ವತ ಜ್ವಾಲೆ'ಯನ್ನು ದೇವಿಯ ಸ್ವರೂಪವೆಂದು ಆರಾಧಿಸಲಾಗುತ್ತದೆ. ಈ ದೇವಾಲಯದಲ್ಲಿ ಒಟ್ಟು 9 ಜ್ವಾಲೆಗಳಿವೆ. ಇವುಗಳನ್ನು ಮಹಾಕಾಳಿ, ಸರಸ್ವತಿ, ಮಹಾಲಕ್ಷ್ಮಿ ಮುಂತಾದ ದೇವಿಯರ ರೂಪವೆಂದು ಆರಾಧಿಸಲಾಗುತ್ತದೆ. ಇತಿಹಾಸದ ಪ್ರಕಾರ ಮೊಘಲ್ ಚಕ್ರವರ್ತಿ ಅಕ್ಬರ್ ಈ ಜ್ವಾಲೆಗಳನ್ನು ನಂದಿಸಲು ಹಾಲನ್ನು ಹರಿಸಿದ್ದನಂತೆ. ಆದರೆ ಏನೇ ಮಾಡಿದರೂ ಇಲ್ಲಿನ ಜ್ವಾಲೆ ಮಾತ್ರ ಆರಲಿಲ್ಲ. ಕೊನೆಗೆ ದೇವಿಯ ಶಕ್ತಿಯನ್ನು ಒಪ್ಪಿಕೊಂಡು ಚಿನ್ನದ ಛತ್ರಿಯನ್ನು ಅರ್ಪಿಸಿದನೆಂದು ಇತಿಹಾಸ ಹೇಳುತ್ತದೆ. ಇಲ್ಲಿ ವರ್ಷಪೂರ್ತಿ ಒಂದೇ ರೀತಿಯಲ್ಲಿ ಈ ಜ್ವಾಲೆ ಉರಿಯುತ್ತಲೇ ಇರುತ್ತದೆ.
ಭೂಮಿಯ ಒಳಪದರದಿಂದ ಬರುವ ನೈಸರ್ಗಿಕ ಅನಿಲದಿಂದ ಈ ಜ್ವಾಲೆ ಉರಿಯುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಆದರೆ, ಶತಮಾನಗಳಿಂದಲೂ ಈ ಜ್ವಾಲೆಗಳು ಆರದೆ ಉರಿಯುತ್ತಿರುವುದು ಭಕ್ತರ ಪಾಲಿಗೆ ದೈವಿಕ ಪವಾಡವಾಗಿದೆ.
ವಿಜ್ಞಾನವು ತನ್ನದೇ ಆದ ತರ್ಕಗಳನ್ನು ನೀಡಿದರೂ, ಈ ಶಕ್ತಿಪೀಠಗಳಿಗೆ ಭೇಟಿ ನೀಡಿದಾಗ ಭಕ್ತರು ಅನುಭವಿಸುವ ಮನಶಾಂತಿ ಮತ್ತು ದೈವಿಕ ಶಕ್ತಿಯು ಅಕ್ಷರಶಃ ವರ್ಣನಾತೀತ. ನಂಬಿಕೆ ಮತ್ತು ವಿಜ್ಞಾನದ ನಡುವಿನ ಈ ಸೆಣಸಾಟದಲ್ಲಿ, ಶಕ್ತಿಪೀಠಗಳು ಇಂದಿಗೂ ನಿಗೂಢ ಮತ್ತು ಪವಿತ್ರ ಕೇಂದ್ರಗಳಾಗಿ ಉಳಿದುಕೊಂಡಿವೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications