72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ: ರಕ್ಷಿತ್‌ ಶೆಟ್ಟಿ ಅಭಿನಯದ 'ಮಿಥ್ಯ' ಚಿತ್ರಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಗರಿ

ಬಹುನಿರೀಕ್ಷಿತ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ. ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ದೆಹಲಿಯಲ್ಲಿ ಈ ಪ್ರಶಸ್ತಿಗಳನ್ನು ಘೋಷಿಸಿದ್ದು, ಫೀಚರ್ ಫಿಲ್ಮ್, ನಾನ್-ಫೀಚರ್ ಫಿಲ್ಮ್ ಹಾಗೂ ಸಿನಿಮಾ ಕುರಿತಾದ ಬರವಣಿಗೆ ವಿಭಾಗಗಳಲ್ಲಿ ಸಾಧಕರಿಗೆ ಪ್ರಶಸ್ತಿಗಳನ್ನ ನೀಡಲಾಗಿದೆ.

2024ರ ಜನವರಿ 1 ರಿಂದ 2024ರ ಡಿಸೆಂಬರ್ 31ರ ನಡುವೆ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್‌ನಿಂದ ಪ್ರಮಾಣಪತ್ರ ಪಡೆದ ಚಲನಚಿತ್ರಗಳನ್ನ ಈ ಪ್ರಶಸ್ತಿಗಾಗಿ ಪರಿಗಣಿಸಲಾಗಿದೆ. ಈ ಬಾರಿಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕನ್ನಡ ಚಿತ್ರರಂಗ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಒಟ್ಟು ಮೂರು ಪ್ರಮುಖ ಪ್ರಶಸ್ತಿಗಳು ಒಲಿದುಬಂದಿರುವುದು ಕನ್ನಡಿಗರಿಗೆ ಮತ್ತು ರಾಜ್ಯಕ್ಕೆ ಹೆಮ್ಮೆಯ ವಿಚಾರ.

National Film Awards 2026

ಅತ್ಯುತ್ತಮ ಕನ್ನಡ ಸಿನಿಮಾ 'ಮಿಥ್ಯ'

ಪ್ರಾದೇಶಿಕ ಭಾಷಾ ವಿಭಾಗದಲ್ಲಿ ಈ ಬಾರಿ ರಕ್ಷಿತ್‌ ಶೆಟ್ಟಿ ನಟನಾಗಿ ಅಭಿನಯಿಸಿದ ಕನ್ನಡದ 'ಮಿಥ್ಯ' ಚಲನಚಿತ್ರ ಅತ್ಯುತ್ತಮ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಚಿತ್ರದ ಕಥಾಹಂದರವು ರಾಷ್ಟ್ರೀಯ ಮಟ್ಟದಲ್ಲಿ ತೀರ್ಪುಗಾರರ ಗಮನ ಸೆಳೆದಿದೆ. ಕೇವಲ ಅತ್ಯುತ್ತಮ ಚಿತ್ರವಷ್ಟೇ ಅಲ್ಲದೆ, ಇದೇ 'ಮಿಥ್ಯ' ಸಿನಿಮಾದಲ್ಲಿನ ನಟಿ ರೂಪಶ್ರೀ ವರ್ಕಾಡಿ ಅವರ ಅದ್ಭುತ ಅಭಿನಯಕ್ಕಾಗಿ ಅವರು ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ರೂಪಶ್ರೀ ಅವರ ಜೊತೆಗೆ ತಮಿಳಿನ 'ಮಹಾರಾಜ' ಚಿತ್ರದ ನಟನೆಗಾಗಿ ನಟಿ ಸಚನಾ ನಮಿದಾಸ್ ಕೂಡ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ.

ಕನ್ನಡದ ಕೃತಿಗೆ ಅತ್ಯುತ್ತಮ ಸಿನಿಮಾ ಪುಸ್ತಕ ಪ್ರಶಸ್ತಿ

ಸಿನಿಮಾ ಕುರಿತಾದ ಬರವಣಿಗೆ ವಿಭಾಗದಲ್ಲಿಯೂ ಕನ್ನಡಕ್ಕೆ ಒಂದು ಪ್ರಶಸ್ತಿ ಒಲಿದುಬಂದಿದೆ. ಚಲನಚಿತ್ರಗಳ ಕುರಿತಾದ ಅತ್ಯುತ್ತಮ ಪುಸ್ತಕ ವಿಭಾಗದಲ್ಲಿ 'ನಾನಿರುವುದೇ ನಿಮಗಾಗಿ ನಾಡಿರುವುದೇ ನನಗಾಗಿ: ಕನ್ನಡ ಸಿನಿಮಾದ ತತ್ವ ಮತ್ತು ರಾಜಕೀಯ' ಎಂಬ ಕೃತಿಗೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಈ ಪುಸ್ತಕವನ್ನು ಲೇಖಕ ಕೆಂಚನೂರು ಪ್ರದೀಪ್ ಕುಮಾರ್ ಶೆಟ್ಟಿ ಅವರು ರಚಿಸಿದ್ದು, ಇದು ಕನ್ನಡ ಸಿನಿಮಾದ ರಾಜಕೀಯ ಮತ್ತು ತಾತ್ವಿಕ ಆಯಾಮಗಳನ್ನು ಅತ್ಯಂತ ಆಳವಾಗಿ ವಿಶ್ಲೇಷಿಸುತ್ತದೆ ಎಂದು ತೀರ್ಪುಗಾರರು ಶ್ಲಾಘಿಸಿದ್ದಾರೆ.

ಪ್ರಮುಖ ರಾಷ್ಟ್ರೀಯ ಪ್ರಶಸ್ತಿ ವಿಜೇತರು 2026

ಕನ್ನಡದ ಸಾಧನೆಯ ಜೊತೆಗೆ, ರಾಷ್ಟ್ರೀಯ ಮಟ್ಟದ ಇತರ ಪ್ರಮುಖ ಪ್ರಶಸ್ತಿ ವಿಜೇತರ ವಿವರಗಳು ಇಲ್ಲಿವೆ:

1. 'ಆರ್ಟಿಕಲ್ 370'ಚಿತ್ರಕ್ಕೆ ಅತ್ಯುತ್ತಮ ಫೀಚರ್ ಫಿಲ್ಮ್ ಪ್ರಶಸ್ತಿ.

2. 'ಚಂದು ಚಾಂಪಿಯನ್' ಚಿತ್ರದ ನಟ ಕಾರ್ತಿಕ್ ಆರ್ಯನ್ ಹಾಗೂ 'ಭ್ರಮಯುಗಂ' ಚಿತ್ರದ ನಟ ಮಮ್ಮುಟ್ಟಿ ಅವರು ಅತ್ಯುತ್ತಮ ನಟ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ.

3. 'ಆರ್ಟಿಕಲ್ 370' ಚಿತ್ರದ ನಾಯಕ ನಟಿ ಗೌತಮ್ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ

4. 'ಅಮರನ್' ಚಿತ್ರವನ್ನು ನಿರ್ದೇಶಿಸಿದ ರಾಜ್‌ಕುಮಾರ್ ಪೆರಿಯಸಾಮಿ ಅವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ

5. 'ಕಲ್ಕಿ 2898 ಎಡಿ' ಅತ್ಯುತ್ತಮ ಜನಪ್ರಿಯ ಚಿತ್ರವಾಗಿ ಹೊರಹೊಮ್ಮಿದೆ.

6. ಅತ್ಯುತ್ತಮ ಮಲಯಾಳಂ ಚಿತ್ರವಾಗಿ 'ಫೆಮಿನಿಚಿ ಫಾತಿಮಾ' ಮತ್ತು ಅತ್ಯುತ್ತಮ ಹಿಂದಿ ಚಿತ್ರವಾಗಿ 'ಶ್ರೀಕಾಂತ್' ಆಯ್ಕೆಯಾಗಿವೆ.

7. ಹಾಗೆಯೇ ಹಿಂದಿ ಸಿನಿಮಾಗಳ ವಿಮರ್ಶೆಗಾಗಿ ಸಂಜೀವ್ ಶ್ರೀವಾಸ್ತವ ಅವರಿಗೆ ಅತ್ಯುತ್ತಮ ಸಿನಿಮಾ ವಿಮರ್ಶಕ ಪ್ರಶಸ್ತಿ.

ಒಟ್ಟಿನಲ್ಲಿ, 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಕನ್ನಡದ ಸಿನಿಮಾ ಮತ್ತು ಸಾಹಿತ್ಯ ಎರಡೂ ವಿಭಾಗಗಳು ರಾಷ್ಟ್ರಮಟ್ಟದಲ್ಲಿ ಮನ್ನಣೆ ಪಡೆದಿರುವುದು ರಾಜ್ಯದ ಎಲ್ಲಾ ಕಲಾಪ್ರೇಮಿಗಳಲ್ಲಿ ಸಂಭ್ರಮ ಮನೆ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+