IPL 2027: ಹಾರ್ದಿಕ್ ಪಾಂಡ್ಯ ಪಂಜಾಬ್ ಕಿಂಗ್ಸ್‌ಗೆ ಸೇರ್ಪಡೆ ಬಗ್ಗೆ ರಿಕಿ ಪಾಂಟಿಂಗ್ ಮಹತ್ವದ ಹೇಳಿಕೆ
ಐಪಿಎಲ್ 2027 ಮಿನಿ ಹರಾಜಿಗೂ ಮುನ್ನ ಹಾರ್ದಿಕ್ ಪಾಂಡ್ಯ ಅವರು ಮುಂಬೈ ಇಂಡಿಯನ್ಸ್ ತೊರೆದು ಪಂಜಾಬ್ ಕಿಂಗ್ಸ್‌ಗೆ ಸೇರ್ಪಡೆಯಾಗಿದ್ದರು. ಇದೀಗ ಈ ಕುರಿತು ಪಿಬಿಕೆಎಸ್ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಪ್ರತಿಕ್ರಿಯಿಸಿದ್ದು, ಮಹತ್ವದ ಹೇಳಿಕೆ ನೀಡಿದ್ದಾರೆ. ಇಲ್ಲಿದೆ ನೋಡಿ ಈ ಕುರಿತ ಸಂಪೂರ್ಣ ಮಾಹಿತಿ.
ಇಂಡಿಯನ್ ಪ್ರೀಮಿಯರ್ ಲೀಗ್ 2027ರ ಮಿನಿ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ ತಂಡದಿಂದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಟ್ರೇಡ್ ಮೂಲಕ ತಮ್ಮ ತೆಕ್ಕೆಗೆ ತೆಗೆದುಕೊಂಡಿರುವುದು ಪಂಜಾಬ್ ಕಿಂಗ್ಸ್ ಚಿತ್ರಣವನ್ನೇ ಬದಲಿಸಿದೆ. ಹಾರ್ದಿಕ್ ಸೇರ್ಪಡೆಯಿಂದ ತಂಡದ ಎಲ್ಲಾ ವಿಭಾಗಗಳಲ್ಲೂ ಸಮತೋಲನ ಮೂಡಿದ್ದು, 2027ರ ಋತುವಿಗೆ ಪಂಜಾಬ್ ಒಂದು ಅಪ್ಪಟ ಆಲ್‌ರೌಂಡ್ ತಂಡವಾಗಿ ರೂಪುಗೊಂಡಿದೆ ಎಂದು ಮುಖ್ಯ ಕೋಚ್ ರಿಕಿ ಪಾಂಟಿಂಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹಾರ್ದಿಕ್ ಪಾಂಡ್ಯ ಆಗಮನದಿಂದ ಪಂಜಾಬ್‌ಗೆ ಆನೆಬಲ
ವೇಗಿ ಅರ್ಷದೀಪ್ ಸಿಂಗ್ ಅವರನ್ನು ಮುಂಬೈ ಇಂಡಿಯನ್ಸ್‌ಗೆ ಬಿಟ್ಟುಕೊಟ್ಟು, ಬರೋಬ್ಬರಿ ₹18 ಕೋಟಿ ಮೌಲ್ಯದ ಟ್ರೇಡ್ ಒಪ್ಪಂದದ ಮೂಲಕ ಪಂಜಾಬ್ ಕಿಂಗ್ಸ್ ಹಾರ್ದಿಕ್ ಪಾಂಡ್ಯ ಅವರನ್ನು ಸೇರ್ಪಡೆ ಮಾಡಿಕೊಂಡಿದೆ. ಈ ಕುರಿತು ಜಿಯೋ ಸ್ಟಾರ್ ಜೊತೆ ಮಾತನಾಡಿದ ಪಾಂಟಿಂಗ್, ತಮ್ಮ ತಂಡದ ಕಾರ್ಯತಂತ್ರವನ್ನು ವಿವರಿಸಿದ್ದಾರೆ.
'ಮುಂದಿನ ವರ್ಷ ಮತ್ತೊಂದು ಮೆಗಾ ಹರಾಜು ನಡೆಯಲಿದೆ. ಇದರಿಂದ ಈ ಮೂರು ವರ್ಷಗಳಲ್ಲಿ ನಮ್ಮ ಪ್ರಮುಖ ಆಟಗಾರರನ್ನು ಒಟ್ಟಿಗೆ ಉಳಿಸಿಕೊಳ್ಳಲು ನಾನು ಹೆಚ್ಚಿನ ಗಮನ ಹರಿಸಿದ್ದೇನೆ. ಹೀಗಾಗಿ 2027ರ ಐಪಿಎಲ್‌ಗೂ ಮುನ್ನ 6 ಆಟಗಾರರನ್ನು ಬಿಡುಗಡೆ ಮಾಡಿ, 19 ಆಟಗಾರರನ್ನು ಉಳಿಸಿಕೊಂಡಿದ್ದೇವೆ,' ಎಂದು ತಿಳಿಸಿದ್ದಾರೆ.
ತಂಡದಲ್ಲಿರುವ ಆಲ್‌ರೌಂಡರ್‌ಗಳ ದಂಡಿನ ಬಗ್ಗೆ ಸಂತಸ ವ್ಯಕ್ತಪಡಿಸಿದ ಪಾಂಟಿಂಗ್, 'ಹಾರ್ದಿಕ್ ಪಾಂಡ್ಯ ಆಗಮನದೊಂದಿಗೆ ಮಾರ್ಕೊ ಯಾನ್ಸೆನ್, ಮಾರ್ಕಸ್ ಸ್ಟೊಯಿನಿಸ್, ಅಜ್ಮತುಲ್ಲಾ ಒಮರ್‌ಝೈ, ಸೂರ್ಯಾಂಶ್ ಶೆಡ್ಗೆ, ಶಶಾಂಕ್ ಸಿಂಗ್ ಮತ್ತು ಕೂಪರ್ ಕಾನೊಲಿ ಅವರಂತಹ ಅತ್ಯುತ್ತಮ ಆಲ್‌ರೌಂಡರ್‌ಗಳು ನಮ್ಮ ಬಳಿ ಇದ್ದಾರೆ. ಸ್ಪಿನ್ ಮತ್ತು ವೇಗದ ಬೌಲಿಂಗ್ ಆಲ್‌ರೌಂಡರ್‌ಗಳ ವಿಭಾಗದಲ್ಲಿ ನಾವು ಎಲ್ಲಾ ಅಗತ್ಯಗಳನ್ನು ಪೂರೈಸಿಕೊಂಡಿದ್ದು, ಇದು ತಂಡಕ್ಕೆ ದೊಡ್ಡ ಶಕ್ತಿ ನೀಡಲಿದೆ,' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶಿಮ್ರಾನ್ ಹೆಟ್ಮೆಯರ್ ಬಿಡುಗಡೆಗೆ ಕಾರಣ ತಿಳಿಸಿದ ಸಂಗಕ್ಕಾರ
ಇದೇ ವೇಳೆ ವೆಸ್ಟ್ ಇಂಡೀಸ್‌ನ ಸ್ಫೋಟಕ ಬ್ಯಾಟರ್ ಶಿಮ್ರಾನ್ ಹೆಟ್ಮೆಯರ್ ಅವರನ್ನು ತಂಡದಿಂದ ಬಿಡುಗಡೆ ಮಾಡಿರುವ ಕುರಿತು ರಾಜಸ್ಥಾನ್ ರಾಯಲ್ಸ್ ಮುಖ್ಯ ಕೋಚ್ ಕುಮಾರ್ ಸಂಗಕ್ಕಾರ ಸ್ಪಷ್ಟನೆ ನೀಡಿದ್ದಾರೆ. ಹೆಟ್ಮೆಯರ್ ಬ್ಯಾಟಿಂಗ್ ಕ್ರಮಾಂಕದಲ್ಲಿ ಬೇರೆ ಸ್ಥಾನದಲ್ಲಿ ಆಡಲು ಬಯಸಿದ್ದರಿಂದ ಅನಿವಾರ್ಯವಾಗಿ ಈ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಯಿತು ಎಂದು ಅವರು ತಿಳಿಸಿದ್ದಾರೆ.
'ನಮ್ಮ ತಂಡದಲ್ಲಿ ಖಾಲಿ ಇರುವ ನಿರ್ದಿಷ್ಟ ಪಾತ್ರಕ್ಕೆ ಅನುಗುಣವಾಗಿ ಹೆಟ್ಮೆಯರ್ ಅವರನ್ನು ಬಿಡುಗಡೆ ಮಾಡಬೇಕಾಯಿತು. ಕಳೆದ ಒಂದೂವರೆ ವರ್ಷದಿಂದ ಅವರು ಬ್ಯಾಟಿಂಗ್ ಕ್ರಮಾಂಕದಲ್ಲಿ ಬೇರೆ ಸ್ಥಾನದಲ್ಲಿ ಆಡುವ ಮಹತ್ವಾಕಾಂಕ್ಷೆ ಹೊಂದಿದ್ದರು. ಅವರು ಈಗಲೂ ಅದ್ಭುತ ಆಟಗಾರ. ಆದರೆ ಹರಾಜಿನಲ್ಲಿ ನಮಗೆ ಅಗತ್ಯವಿರುವ ಆರ್ಥಿಕ ಸ್ವಾತಂತ್ರ್ಯ ಮತ್ತು ಹೆಚ್ಚಿನ ಹಣವನ್ನು ಉಳಿಸಿಕೊಳ್ಳುವ ದೃಷ್ಟಿಯಿಂದ ಈ ನಿರ್ಧಾರ ಅನಿವಾರ್ಯವಾಗಿತ್ತು. ಇದು ನಮಗೆ ಇಷ್ಟ ಇಲ್ಲದಿದ್ದರೂ ತೆಗೆದುಕೊಳ್ಳಲೇಬೇಕಾದ ಅತ್ಯಂತ ಕಠಿಣ ನಿರ್ಧಾರವಾಗಿತ್ತು,' ಎಂದು ಸಂಗಕ್ಕಾರ ಹೇಳಿದ್ದಾರೆ. ಒಟ್ಟಿನಲ್ಲಿ ಪಂಜಾಬ್ ಕಿಂಗ್ಸ್ ಬಲಿಷ್ಠ ತಂಡಗಳಲ್ಲಿ ಒಂದಾಗುವುದರಲ್ಲಿ ಎರಡು ಮಾತಿಲ್ಲ ಎನ್ನುವ ಲೆಕ್ಕದಲ್ಲಿ ರಿಕಿ ಪಾಂಟಿಂಗ್ ಹೇಳಿಕೆ ಕೊಟ್ಟಿರುವುದು ಇದೀಗ ಸಖತ್ ಸದ್ದು ಮಾಡುತ್ತಿದೆ.


Click it and Unblock the Notifications
