Kolar Lok Sabha Constituency: ಕೋಲಾರದಲ್ಲಿ ಎಲ್ ಹನುಮಂತಯ್ಯಗೆ ಟಿಕೆಟ್, ಮಾಸ್ಟರ್ ಪ್ಲ್ಯಾನ್ ಮಾಡ್ತಿದ್ಯಾ ಕಾಂಗ್ರೆಸ್?
ಕೋಲಾರ, ಮಾರ್ಚ್ 15: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ 20ಕ್ಕೂ ಹೆಚ್ಚು ಕ್ಷೇತ್ರಗಳನ್ನು ಉಳಿಸಿಕೊಳ್ಳಬೇಕು ಎಂಬ ಹಠದಲ್ಲಿದೆ. ರಾಜ್ಯ ನಾಯಕರು ಈಗಾಗಲೇ ಚುನಾವಣಾ ತಂತ್ರಗಳನ್ನು ಹೆಣೆಯುತ್ತಿದ್ದಾರೆ. ಮೊದಲ ಪಟ್ಟಿಯಲ್ಲಿ ಏಳು ಅಭ್ಯರ್ಥಿಗಳನ್ನು ಘೋಷಿಸಿದೆ.
ಇನ್ನು, ಉಳಿದ ಕ್ಷೇತ್ರಗಳಲ್ಲಿ ಸೋಲು ಗೆಲುವಿನ ಲೆಕ್ಕಾಚಾರ ಹಾಕುತ್ತಿದ್ದು, ಇದರ ಜೊತೆಗೆ ಕಾಂಗ್ರೆಸ್‌ಗೆ ಪಕ್ಷದೊಳಗಿನ ಭಿನ್ನಮತ, ಬಣ ಬಡಿದಾಟಗಳನ್ನು ಸರಿ ಮಾಡಬೇಕಿದೆ. ಅದರಲ್ಲೂ ಕುತೂಹಲ ಕೆರಳಿಸಿರುವ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಈ ಬಣ ಬಡಿದಾಟ ಹೆಚ್ಚಾಗಿಯೇ ಇದೆ. ಅಭ್ಯರ್ಥಿ ಆಯ್ಕೆ ಬಗ್ಗೆ ಎಲ್ಲರನ್ನು ಸಮಾಧಾನ ಮಾಡಬೇಕಿರುವುದು ಕಾಂಗ್ರೆಸ್ ನಾಯಕರ ಜವಾಬ್ದಾರಿ ಕೂಡ ಆಗಿದೆ.

ಕೋಲಾರಕ್ಕೆ ಎಲ್. ಹನುಮಂತಯ್ಯ ಅಭ್ಯರ್ಥಿ?
ಕೋಲಾರದಲ್ಲಿ ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಯಾರು ನಿಲ್ಲುತ್ತಾರೆ ಎಂಬುದು ಇನ್ನು ಫೈನಲ್ ಆಗಿಲ್ಲ. ಆದರೆ, ಕಾಂಗ್ರೆಸ್ ತನ್ನ ಕ್ಷೇತ್ರವನ್ನು ಮರಳಿ ಪಡೆಯುವ ಪ್ರಯತ್ನದಲ್ಲಿದ್ದು, ಇರುವ ಕೆಲ ಭಿನ್ನಾಭಿಪ್ರಾಯಗಳನ್ನು ಶಮನ ಮಾಡಲು ಪ್ಲ್ಯಾನ್ ಮಾಡುತ್ತಿದೆ. ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಜಿಲ್ಲೆಯನ್ನು ಕಳೆದ ಬಾರಿ ಬಿಜೆಪಿ ಗೆದ್ದಿದೆ. ಅದನ್ನು ಮತ್ತೆ ತನ್ನದಾಗಿಸುವ ಪ್ರಯತ್ನದಲ್ಲಿದೆ ಕಾಂಗ್ರೆಸ್.
ಆಹಾರ ಹಾಗೂ ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ಅವರನ್ನು ಅಬ್ಯರ್ಥಿ ಮಾಡಲು ಕಾಂಗ್ರೆಸ್ ಯೋಜಿಸಿತ್ತು. ಚುನಾವಣೆಯಲ್ಲಿ ಸ್ಪರ್ಧಿಸಲು ಮುನಿಯಪ್ಪ ಹಿಂದೇಟು ಹಾಕಿ, ಕುಟುಂಬದ ಸದಸ್ಯರೊಬ್ಬರಿಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದರು. ಆದರೆ, ನೀವೇ ಸ್ಪರ್ಧಿಸಬೇಕು ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಒತ್ತಡ ಹೇರಿದ್ದರು. ಆದರೆ, ಅವರ ಸ್ಪರ್ಧೆಗೆ ಪಕ್ಷದಲ್ಲೇ ವಿರೋಧ ಕೇಳಿಬಂದಿತ್ತು.
ಸಚಿವ ಎಂ.ಸಿ.ಸುಧಾಕರ್, ಶಾಸಕ ಕೊತ್ತೂರು ಮಂಜುನಾಥ್ ಹಾಗೂ ಮಾಜಿ ಸಚಿವ ಕೆ.ಆರ್.ರಮೇಶ್ ಕುಮಾರ್ ಬಣ ಮುನಿಯಪ್ಪ ಅರ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸಿದೆ. ಹೀಗಾಗಿ ಇವರು ಕೂಡ ಒಪ್ಪುವ ಅಭ್ಯರ್ಥಿಗಾಗಿ ಕಾಂಗ್ರೆಸ್ ಹುಡುಕಿದ್ದು, ಕೊನೆಗೆ ಮಾಜಿ ರಾಜ್ಯ ಸಭಾ ಸದಸ್ಯ ಎಲ್. ಹನುಮಂತಯ್ಯ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದೆ ಎಂಬ ಮಾಹಿತಿಯಿದೆ.

ಡಾ. ಎಲ್. ಹನುಮಂತಯ್ಯ ಎಡಗೈ ಸಮುದಾಯದವರು. ಅವರ ರಾಜ್ಯಸಭಾ ಅವಧಿ ಏಪ್ರಿಲ್ 2ರ ವರೆಗೆ ಇದೆ. ಅವರಿಗೆ ಟಿಕೆಟ್ ಕೊಟ್ಟಿಲ್ಲ ಎಂದು ಮಾದಿಗ ಸಮುದಾಯವರು ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗಾಗಿ ಇವರ ಸಿಟ್ಟು ಶಮನ ಮಾಡಲು ಎಲ್ ಹನುಮಂತಯ್ಯ ಅವರಿಗೆ ಮಣೆ ಹಾಕಲಾಗುತ್ತಿದೆ.
ಏಳು ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಿಸಿರುವ ಕಾಂಗ್ರೆಸ್
ಲೋಕಸಭಾ ಚುನಾವಣೆಗೆ ಎರಡು ಪಟ್ಟಿ ಬಿಡುಗಡೆ ಮಾಡಿರುವ ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ರಾಜ್ಯದ ಏಳು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿತ್ತು. ಉಳಿದ 21 ಕ್ಷೇತ್ರಗಳಿಗೆ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಹೈಕಮಾಂಡ್‌ಗೆ ಕಳುಹಿಸಲಾಗಿದೆ. ಆದರೆ, ಪರಿಸ್ಥಿತಿಗೆ ಅನುಗುಣವಾಗಿ ಕೊನೆ ಕ್ಷಣದಲ್ಲಿ ಸಂಭಾವ್ಯ ಅಭ್ಯರ್ಥಿಗಳು ಬದಲಾಗಬಹುದು ಎನ್ನಲಾಗಿದೆ.












Click it and Unblock the Notifications