Kolar Lok Sabha elections: ಕೋಲಾರ ಲೋಕಸಭಾ ಕ್ಷೇತ್ರದಲ್ಲಿ 'ಸ್ಥಳೀಯ' V/s 'ಹೊರಗಿನವ' ಫೈಟ್!
ಕೋಲಾರ, ಏಪ್ರಿಲ್. 20: ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಅಧಿಕಾರ ಕಿತ್ತುಕೊಳ್ಳಲು ಕಾಂಗ್ರೆಸ್ ಬಡಿದಾಡುತ್ತಿದ್ದರೆ, ಕಾಂಗ್ರೆಸ್ ನಾಯಕರ ಒಳಜಗಳದಿಂದ ಈ ಬಾರಿಯೂ ಕ್ಷೇತ್ರ ಬಿಜೆಪಿ- ಜೆಡಿಎಸ್ ಮೈತ್ರಿ ಪಾಲಾಗುವ ಎಲ್ಲಾ ಸಾಧ್ಯತೆಗಳು ಇವೆ. ಇದಕ್ಕೆ ಹಿರಿಯ ನಾಯಕ ಕೆ ಎಚ್ ಮುನಿಯಪ್ಪ ಅವರ ಅನುಪಸ್ಥಿತಿಯು ಕಾರಣ ಎನ್ನಲಾಗುತ್ತಿದೆ.
ಈಗ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿರುವ ಕಾಂಗ್ರೆಸ್ ಹಿರಿಯ ನಾಯಕ ಕೆ ಎಚ್ ಮುನಿಯಪ್ಪ ಅವರು 1991 ರಿಂದ 2019 ರ ವರೆಗೂ ಏಳು ಬಾರಿ ಕೋಲಾರ ಕ್ಷೇತ್ರವನ್ನು ಆಳಿದ್ದಾರೆ. 2019 ರಲ್ಲಿ ಬಿಜೆಪಿಯ ಎಸ್ ಮುನಿಸ್ವಾಮಿ ಅವರಿಮದ ಸೋಲು ಕಂಡಿದ್ದಾರೆ. ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಕ್ಷೇತ್ರ ಬಿಜೆಪಿ ಪಾಲಾಗಿದ್ದು, ಅದನ್ನು ಮರಳಿ ತೆಕ್ಕೆಗೆ ತೆಗೆದುಕೊಳ್ಳಲು ಕಾಂಗ್ರೆಸ್ ತಡಬಡಿಸುತ್ತಿದೆ. ಆದರೆ, ಇದಕ್ಕೆ ಕಾಂಗ್ರೆಸ್ ನಾಯಕರೆ ಅಡ್ಡಿಯಾಗಿದ್ದಾರೆ. ಎಲ್ಲವನ್ನೂ ಸರಿದೂಗಿಸಲು ಕಾಂಗ್ರೆಸ್‌ನ ಕೆವಿ ಗೌತಮ್ ಅವರನ್ನು ಕಣಕ್ಕಿಳಿಸಿದೆ.

ಬಿಜೆಪಿಯು ಕೋಲಾರ ಕ್ಷೇತ್ರವನ್ನು ಈ ಬಾರಿ ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದರಿಂದ, ಪ್ರಾದೇಶಿಕ ಪಕ್ಷವು ಕಾಂಗ್ರೆಸ್‌ನ ಕೆವಿ ಗೌತಮ್ ವಿರುದ್ಧ ಎಂ ಮಲ್ಲೇಶ್ ಬಾಬು ಅವರನ್ನು ಕಣಕ್ಕಿಳಿಸಿದೆ. ಇದು ಕಾಂಗ್ರೆಸ್‌ಗೆ ದೊಡ್ಡ ತಲೆ ನೋವು ತಂದಿದೆ ಎಂದರೆ ತಪ್ಪಲ್ಲ. ಕೋಲಾರದಲ್ಲಿ ಮಲ್ಲೇಶ್ ಬಾಬು ಮತ್ತು ಕೆವಿ ಗೌತಮ್ ಸ್ಪರ್ಧೆ ಸ್ಥಳೀಯ ಮತ್ತು ಹೊರಗಿನವ ಎಂಬ ಚರ್ಚೆಗೆ ಕಾರಣವಾಗಿದೆ.
ಕಾಂಗ್ರೆಸ್ ಅಭ್ಯರ್ಥಿ ವಿರುದ್ಧವೂ ಇದೆ ಕಾಂಗ್ರೆಸ್‌ನಲ್ಲೆ ಅಸಮಾಧಾನ!
ಕಾಂಗ್ರೆಸ್‌ನ ಕೆವಿ ಗೌತಮ್ ವಿರುದ್ಧ ಅವರ ಆಯ್ಕೆ ಕೂಡ ಹಲವು ನಾಯಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಸಚಿವ ಕೆ ಎಚ್ ಮುನಿಯಪ್ಪ ಅವರು ತಮ್ಮ ಅಳಿಯ ಕೆ ಜಿ ಚಿಕ್ಕ ಪೆದ್ದಣ್ಣ, ಎಸ್‌ಸಿ (ಎಡ) ಅವರಿಗೆ ಟಿಕೆಟ್ ಬಯಸಿದ್ದರು. ಆದರೆ ಕಾಂಗ್ರೆಸ್‌ನ ಅವರ ಪ್ರತಿಸ್ಪರ್ಧಿ ಬಣವು ಎಸ್‌ಸಿ (ಬಲ) ಅಭ್ಯರ್ಥಿಗೆ ಬೇಡಿಕೆ ಇಟ್ಟಿತ್ತು. ಬೇಡಿಕೆ ಈಡೇರದಿದ್ದರೇ ಕನಿಷ್ಠ ಐವರು ಹಾಲಿ ಶಾಸಕರು ರಾಜೀನಾಮೆ ನೀಡಲು ಮುಂದಾದರು. ಇದೇ ಕಾರಣಕ್ಕೆ ಎರಡು ಬಣಗಳನ್ನು ಸಮಾಧಾನ ಮಾಡಲು ತಟಸ್ಥ ಅಭ್ಯರ್ಥಿ ಗೌತಮ್‌ಗೆ ಕಾಂಗ್ರೆಸ್ ಮಣೆ ಹಾಕಿತ್ತು.

ಆದರೆ ಕೆ ಎಚ್ ಮುನಿಯಪ್ಪ ಚುನಾವಣಾ ಕಣದಲ್ಲಿ ಕಾಣುತ್ತಿಲ್ಲ. ಮುನಿಯಪ್ಪ ಅವರ ಪ್ರತಿಸ್ಪರ್ಧಿ ಮಾಜಿ ಸ್ಪೀಕರ್ ಕೆಆರ್ ರಮೇಶ್ ಕುಮಾರ್ ಕೂಡ ಕಾಣಿಸುತ್ತಿಲ್ಲ. ಹೊರಗಿನಿಂದ ಅಭ್ಯರ್ಥಿಯನ್ನು ಕರೆತಮದು ಚುನಾವಣಾ ಕಣಕ್ಕೆ ಇಳಿಸಿ ಎಲ್ಲರೂ ದೂರ ಹೋದಂತೆ ಆಗಿದೆ ಕಾಂಗ್ರೆಸ್ ಅಭ್ಯರ್ಥಿ ಸ್ಥಿತಿ. ಹಿರಿಯ ನಾಯಕರು ಯುವ ನಾಯಕರ ಬೆನ್ನಿಗೆ ನಿಲ್ಲದೆ ಇರುವುದು ಬಿಜೆಪಿ-ಜೆಡಿ (ಎಸ್) ಮೈತ್ರಿಗೆ ಅನುಕೂಲವಾಗಬಹುದು.
ಎಸ್‌ಸಿ ಮೀಸಲು ಪ್ರದೇಶವಾದ ಕೋಲಾರದಲ್ಲಿ ಒಕ್ಕಲಿಗರು, ಕುರುಬರು ಮತ್ತು ಮುಸ್ಲಿಮರೂ ಇದ್ದಾರೆ. ಎಸ್ಸಿಗಳಲ್ಲಿ ಛಲವಾದಿಗಳು ಮತ್ತು ಮಾದಿಗರು ಸಮಾನ ಸಂಖ್ಯೆಯಲ್ಲಿದ್ದಾರೆ. ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಬಾಬು ಅವರ ಸಮುದಾಯವಾದ ಭೋವಿಗಳು ಗಣನೀಯ ಸಂಖ್ಯೆಯಲ್ಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಗೌತಮ್ ಒಬ್ಬ ಮಾದಿಗ ಸಮುದಾಯದವರು. ಇತ್ತ, ಟಿಕೆಟ್ ಘೋಷಣೆ ವಿಳಂಬವಾದ ಕಾರಣ, ಗೌತಮ್ ಮತ್ತು ಮಲ್ಲೇಶ್ ಬಾಬು ತಮ್ಮ ಪ್ರಚಾರವನ್ನು ಒಂದೆ ಸಮಯದಲ್ಲಿ ಪ್ರಾರಂಭಿಸಿದ್ದಾರೆ.
ಕೋಲಾರದಲ್ಲಿ ಇಲ್ಲಿಯವರೆಗೆ ನಡೆದ 17 ಚುನಾವಣೆಗಳಲ್ಲಿ 15 ರಲ್ಲಿ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್ ಇದನ್ನು ಭದ್ರಕೋಟೆಯಾಗಿ ಮಾಡಿಕೊಂಡಿದೆ. ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಐದರಲ್ಲಿ ಪಕ್ಷವು ತನ್ನ ಹಿಡಿತ ಹೊಂದಿದೆ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿ ಗೌತಮ್ ಗೆಲ್ಲುತ್ತಾರೆ ಎನ್ನಲಾಗುತ್ತಿದೆ.
ಆದರೆ, ಇಲ್ಲಿ ಬಹುತೇಕ ಶಾಸಕರು ಮುನಿಯಪ್ಪ ವಿರೋಧಿ ಪಾಳಯದಲ್ಲಿ ಗುರುತಿಸಿಕೊಂಡಿದ್ದಾರೆ. ತಾವು ಕೇಳದ ಅಭ್ಯರ್ಥಿ ಗೌತಮ್ ಅವರ ಗೆಲುವಿಗೆ ಶೇ.100ರಷ್ಟು ಬೆಂಬಲ ನೀಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಜೊತೆಗೆ ಕಾಂಗ್ರೆಸ್‌ನ ಭವಿಷ್ಯಕ್ಕೆ ಐದು ಗ್ಯಾರಂಟಿಗಳು ಕೆಲಸ ಮಾಡುತ್ತವೇಯೇ ಎಂಬುದನ್ನು ಚುನಾವಣೆ ನಿರ್ಧರಿಸಲಿದೆ.
ಅಂಕಿಅಂಶಗಳ ಪ್ರಕಾರ, ಕೋಲಾರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಹೆಚ್ಚಿನ ಮತಗಳನ್ನು ಹೊಂದಿವೆ. ಎರಡೂ ಪಕ್ಷಗಳ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಸಚಿವ ಮುನಿಸ್ವಾಮಿ ಸ್ಪರ್ಧಿಸದ ಹಿನ್ನೆಲೆಯಲ್ಲಿ ಮತಗಳು ಇಬ್ಭಾಗವಾಗಲಿದೆ ಇದು ಜೆಡಿಎಸ್ ಅಭ್ಯರ್ಥಿಗೆ ಲಾಭವಾಗಬಹುದು.












Click it and Unblock the Notifications