2 ಮಕ್ಕಳ ಅಪ್ಪ ಯಶ್ ರೊಮ್ಯಾನ್ಸ್ ಮಾಡಿದ್ರೆ ಬೆಂಕಿ, ಕಿಯಾರಾ ಮಾಡಿದ್ರೆ ತಪ್ಪಾ? ಟಾಕ್ಸಿಕ್ ನಟ ಕೆಂಡ
ಯಶ್‌ಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ, ಅವರು ಸ್ಕ್ರೀನ್ ಮೇಲೆ ರೊಮ್ಯಾನ್ಸ್ ಮಾಡಿದರೆ ಬೆಂಕಿ ಇಮೋಜಿ ಹಾಕ್ತಾರೆ. ಅದೇ ಕಿಯಾರಾಗೆ ಬಾಯಿಗೆ ಬಂದಂಗೆ ಮಾತಾಡಿ ಟ್ರೋಲ್ ಮಾಡ್ತಾರೆ. ಇದೆಂಥಾ ವಿಕೃತಿ. ಹೀಗೆಂದು ಟ್ರೋಲಿಗರನ್ನು ನೇರ ತರಾಟೆಗೆ ತೆಗೆದುಕೊಂಡಿರೋದು ಟಾಕ್ಸಿಕ್ ನಟ ಬೆನೆಡಿಕ್ಟ್ ಗ್ಯಾರೆಟ್ಟ್.
ಯಶ್ ಹಾಗೂ ಕಿಯಾರಾ ಅಡ್ವಾಣಿ ನಟನೆಯ 'ಟಾಕ್ಸಿಕ್'' ಸಿನಿಮಾದ ತಬಾಹಿ ವೀಡಿಯೋ ಹಾಡು ಬಂದು ಹದಿನೈದು ದಿನಗಳ ಮೇಲಾಯ್ತು. ಆದರೆ ಅದರ ಬಗೆಗಿನ ಚರ್ಚೆಯ ಕಾವು ಇನ್ನೂ ಆರಿಲ್ಲ. ಸದ್ಯ ಈ ಸಿನಿಮಾದಲ್ಲಿ ಮುಖ್ಯ ಪಾತ್ರವೊಂದರಲ್ಲಿ ನಟಿಸಿರುವ ಬ್ರಿಟಿಷ್ ಮೂಲದ ನಟ ಬೆನೆಡಿಕ್ಟ್ ಗ್ಯಾರೆಟ್ಟ್ ಜನರ ಹೀನ ಮನಸ್ಥಿತಿ ಬಗ್ಗೆ ಕಿಡಿ ಕಾರಿದ್ದಾರೆ.

ಹೀರೋ ರೊಮ್ಯಾನ್ಸ್ ಮಾಡಿದ್ರೆ ಹ್ಯಾಂಡ್ಸಮ್, ನಟಿಗೆ ಅವಾಚ್ಯ ಪದ ಬಳಕೆ
ಬೆನೆಡಿಕ್ಟ್ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದು, ಅದರಲ್ಲಿ ಕಿಯಾರಾ ಅಡ್ವಾಣಿಯನ್ನು ಟ್ರೋಲ್ ಮಾಡುತ್ತಿರುವವರ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಜನರ ದ್ವಂದ್ವ ನೀತಿಯನ್ನು ಪ್ರಶ್ನಿಸಿರುವ ಅವರು, 'ನಾನು ನೋಡುತ್ತಿದ್ದೇನೆ, ಜನ ಯಶ್ ಅವರನ್ನು ಸಿಕ್ಕಾಪಟ್ಟೆ ಹೊಗಳುತ್ತಿದ್ದಾರೆ. ಅವರ ಕಮೆಂಟ್ ಸೆಕ್ಷನ್‌ನಲ್ಲಿ ಫೈರ್ ಎಮೋಜಿಗಳನ್ನು ಹಾಕಿ ಅವರು ಎಷ್ಟು ಹ್ಯಾಂಡ್ಸಮ್ ಆಗಿ ಕಾಣುತ್ತಿದ್ದಾರೆ ಅಂತ ಹೇಳ್ತಿದ್ದಾರೆ. ಆದರೆ ಇದೇ ವಿಷಯದಲ್ಲಿ ಕಿಯಾರಾ ಅಡ್ವಾಣಿ ಅವರನ್ನ ಮಾತ್ರ ಕಾಲೆಳೆಯಲಾಗುತ್ತಿದೆ, ಅವರ ಬಗ್ಗೆ ಜೋಕ್‌ಗಳನ್ನು ಮಾಡಲಾಗುತ್ತಿದೆ. ಓಹ್, ಅವಳಿಗೆ ಇತ್ತೀಚೆಗಷ್ಟೇ ಮದುವೆಯಾಗಿದೆ, ಅವಳು ಒಬ್ಬ ತಾಯಿ, ಸಿದ್ಧಾರ್ಥ್ ಮಲ್ಹೋತ್ರಾ ಬದಲಿಗೆ ಯಶ್ ಜೊತೆ ಹನಿಮೂನ್‌ಗೆ ಹೋಗಿದ್ದಾಳಾ ಎಂದೆಲ್ಲಾ ಜನ ಆಡಿಕೊಳ್ಳುತ್ತಿದ್ದಾರೆ. ನಿಜಕ್ಕೂ ಇದೆಂಥಾ ಹುಚ್ಚುತನ?' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಯಾಕೆ ಇಂಥಾ ಮನಸ್ಸು?
'ಯಶ್ ಸ್ಕ್ರೀನ್ ಮೇಲೆ ರೊಮ್ಯಾನ್ಸ್ ಮಾಡಿದರೆ ಅವರನ್ನು ಹೊಗಳುತ್ತಾರೆ. ಅದೇ ಕಿಯಾರಾ ಅಡ್ವಾಣಿ ತನ್ನ ಪಾಡಿಗೆ ನಟನೆ ಮಾಡಿದರೆ ಅವರ ಮೇಲೆ ಮಾತ್ರ ಯಾಕೆ ಈ ರೀತಿ ಮುಗಿಬೀಳುತ್ತಿದ್ದಾರೆ!' ಎಂದು ಬರೆದುಕೊಂಡಿದ್ದಾರೆ.
ಮಹಿಳೆಗೆ ಬೈಗುಳ, ಪುರುಷನಿಗೆ ಚಪ್ಪಾಳೆ
ಯಶ್‌ಗೂ ಮದುವೆಯಾಗಿದೆ ಎಂಬುದನ್ನು ನೆನಪಿಸಿದ ಬೆನೆಡಿಕ್ಟ್, 'ನೋಡಿ, ಯಶ್ ಅವರಿಗೂ ಮದುವೆಯಾಗಿದೆ, ಅವರಿಗೂ ಮಕ್ಕಳಿದ್ದಾರೆ. ಹೀಗಿರುವಾಗ ಕೇವಲ ಮಹಿಳೆಗೆ ಮಾತ್ರ ಯಾಕೆ ಬೈಗುಳ, ಪುರುಷನಿಗೆ ಯಾಕೆ ಚಪ್ಪಾಳೆ? ಇಲ್ಲಿ ಒಂದು ನಿಜಾಂಶವನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.
ಅದೆಲ್ಲ ನಟನೆ, ಬಿಟ್ಬಿಡಿ ಸ್ವಾಮಿ
"ಅವರು ನಟರು. ಅವರ ಕೆಲಸ ನಟಿಸುವುದು, ವಿಭಿನ್ನ ಪಾತ್ರಗಳನ್ನು ಮಾಡುವುದು ಮತ್ತು ಪ್ರೇಕ್ಷಕರಿಗೆ ಕಥೆಯನ್ನು ತಲುಪಿಸುವುದು. ನಿಜ ಜೀವನದಲ್ಲಿ ಪ್ರೀತಿ ಇಲ್ಲದಿದ್ದರೂ, ಪರದೆ ಮೇಲೆ ಪ್ರೀತಿಯಲ್ಲಿ ಇದ್ದಾರೆ ಎಂದು ನಂಬಿಸುವಂತೆ ನಟಿಸುವುದೇ ಅವರ ವೃತ್ತಿ' ಎಂದು ಬೆನೆಡಿಕ್ಟ್ ಹೇಳಿದ್ದಾರೆ.
ಸಮಾಜದ ಮನಸ್ಥಿತಿಗೆ ಕನ್ನಡ
'ತಬಾಹಿ ಮ್ಯೂಸಿಕ್ ವಿಡಿಯೋ ಬಗ್ಗೆ ಬರುತ್ತಿರುವ ನೆಗೆಟಿವ್ ಕಮೆಂಟ್‌ಗಳು ಆ ನಟರ ಬಗ್ಗೆ ಏನನ್ನೂ ಹೇಳಲ್ಲ, ಬದಲಿಗೆ ನಮ್ಮ ಸಮಾಜದ ಯೋಚನಾ ಲಹರಿ ಎಂತದ್ದು ಎಂಬುದನ್ನು ತೋರಿಸಿಕೊಡುತ್ತದೆ. ಜನರು ಕಿಯಾರಾ ಅವರ ನಟನೆಯನ್ನು ವಿಮರ್ಶೆ ಮಾಡುತ್ತಿಲ್ಲ. ಬದಲಿಗೆ ಅವಳು ಒಬ್ಬರ ಹೆಂಡತಿ, ಒಬ್ಬರ ತಾಯಿ ಎನ್ನುವ ಕಾರಣಕ್ಕೆ ಅವಳನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಮದುವೆಯಾದ ತಕ್ಷಣ ಒಬ್ಬ ನಟಿ ನಟಿಸುವುದನ್ನೇ ನಿಲ್ಲಿಸಬೇಕಾ? ಇದು ನಿಜಕ್ಕೂ ಬಾಲಿಶತನ ಎಂದು ಕಿಡಿ ಕಾರಿದ್ದಾರೆ. 'ಸಮಸ್ಯೆ ಇರೋದು ಕಿಯಾರಾ ಅವರ ವೃತ್ತಿಪರತೆಯಲ್ಲಲ್ಲ, ಬದಲಿಗೆ ಅವರ ಮೇಲೆ ದಾಳಿ ಮಾಡುತ್ತಿರುವ ಜನರ ದ್ವಂದ್ವ ನಿಲುವು ಮತ್ತು ಬೂಟಾಟಿಕೆಯಲ್ಲಿ..' ಎಂದು ಖಾರವಾಗಿ ಹೇಳಿದ್ದಾರೆ
ಟಾಕ್ಸಿಕ್ ಸಿನಿಮಾ ಅನೌನ್ಸ್ ಆದಾಗಿನಿಂದಲೂ ಅದರ ಪ್ರಮೋಷನಲ್ ಕಂಟೆಂಟ್‌ಗಳಿಂದಾಗಿ ಒಂದಿಲ್ಲೊಂದು ವಿವಾದದಲ್ಲಿ ಸಿಲುಕಿಕೊಂಡಿದೆ. ಚಿತ್ರದ ಪೋಸ್ಟರ್‌ಗಳು ಮತ್ತು ಟ್ರೈಲರ್‌ಗಳಲ್ಲಿ ವೈಲೆನ್ಸ್ ಜೊತೆಗೆ ಬೋಲ್ಡ್ ದೃಶ್ಯಗಳು ಅಷ್ಟೇ ಪ್ರಮಾಣದಲ್ಲಿದ್ದು, ಎಲ್ಲಾ ಕಡೆಯಿಂದಲೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇತ್ತೀಚೆಗೆ 'ತಬಾಹಿ' ವಿಡಿಯೋ ಸಾಂಗ್ ರಿಲೀಸ್ ಆದಾಗ, ಅದರಲ್ಲಿ ಕಿಯಾರಾ ಮತ್ತು ಯಶ್ ನಡುವಿನ ರೋಮ್ಯಾಂಟಿಕ್ ದೃಶ್ಯಗಳನ್ನು ನೋಡಿ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಶುರುವಾಯಿತು. ಅದರಲ್ಲೂ ಕಿಯಾರಾ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಯಿತು. ಯಶ್ ಜೊತೆಗೆ ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಟಾಕ್ಸಿಕ್ ಸಿನಿಮಾ ಆಗಸ್ಟ್ 26 ರಂದು ಥಿಯೇಟರ್ಗಳಲ್ಲಿ ಬಿಡುಗಡೆಯಾಗಲಿದೆ.
(ಬರಹ: ಭವಾನಿ ಭಟ್)














Click it and Unblock the Notifications