ಕೋಲಾರ ಮೇಲೆ ಜೆಡಿಎಸ್‌ ಕಣ್ಣು; ಹಾಲಿ ಸಂಸದರಿಗೆ ಟಿಕೆಟ್‌?

ಕೋಲಾರ, ಫೆಬ್ರವರಿ 26; ಕರ್ನಾಟಕದಲ್ಲಿ ಈ ಬಾರಿಯ ಲೋಕಸಭೆ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ. ಇದಕ್ಕೆ ಕಾರಣ ಬಿಜೆಪಿ-ಜೆಡಿಎಸ್ ನಡುವಿನ ಮೈತ್ರಿ, ಸೀಟು ಹಂಚಿಕೆ. ಬಿಜೆಪಿ ಜೆಡಿಎಸ್‌ಗೆ ಹಾಸನ ಬಿಟ್ಟು ಬೇರೆ ಯಾವುದೇ ಕ್ಷೇತ್ರ ನೀಡಿದರೂ ಸಹ ಹಾಲಿ ಸಂಸದರಿಗೆ ಟಿಕೆಟ್ ಕೈ ತಪ್ಪಲಿದೆ.

2023ರ ವಿಧಾನಸಭೆ ಚುನಾವಣೆ ಬಳಿಕ ಜೆಡಿಎಸ್ ನಾಯಕರು ದೆಹಲಿಯಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ ಬೆಂಬಲ ಘೋಷಣೆ ಮಾಡಿದರು. ರಾಜ್ಯದಲ್ಲಿ ಬಿಜೆಪಿ ಜೊತೆ ಸೀಟು ಹಂಚಿಕೆ ಮಾಡಿಕೊಂಡು ಚುನಾವಣೆ ಎದುರಿಸುತ್ತೇವೆ ಎಂದು ಹೇಳಿದರು. ಆದರೆ ಯಾವ-ಯಾವ ಕ್ಷೇತ್ರ? ಎಂಬುದು ಕುತೂಹಲ.

Lok Sabha Election 2024 Kolar Seat For JDS

ಸದ್ಯದ ಮಾಹಿತಿ ಪ್ರಕಾರ ಹಾಸನ, ಮಂಡ್ಯ, ಕೋಲಾರ, ಬೆಂಗಳೂರು ಗ್ರಾಮಾಂತರ, ತುಮಕೂರು ಕ್ಷೇತ್ರಕ್ಕೆ ಜೆಡಿಎಸ್ ನಾಯಕರು ಬೇಡಿಕೆ ಇಟ್ಟಿದ್ದಾರೆ. ಕಳೆದ ವಾರ ದೆಹಲಿಯಲ್ಲಿ ಅಮಿತ್ ಶಾ ಜೊತೆ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಮಾತುಕತೆ ನಡೆಸಿದ್ದಾರೆ.

ಸೀಟು ಹಂಚಿಕೆ ಅಂತಿಮವಾಗಿಲ್ಲ: ಕರ್ನಾಟಕದ ಬಿಜೆಪಿ ನಾಯಕರ ಪ್ರಕಾರ ಜೆಡಿಎಸ್-ಬಿಜೆಪಿ ನಡುವಿನ ಸೀಟು ಹಂಚಿಕೆ ಅಂತಿಮಗೊಂಡಿಲ್ಲ. ಹೈಕಮಾಂಡ್ ನಾಯಕರು ಸೂಕ್ತ ಸಮಯದಲ್ಲಿ ಈ ಕುರಿತು ತೀರ್ಮಾನವನ್ನು ಕೈಗೊಳ್ಳುತ್ತಾರೆ.

ಜೆಡಿಎಸ್‌ನ ಬೇಡಿಕೆಯಂತೆ ಕೋಲಾರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟರೆ ಹಾಲಿ ಬಿಜೆಪಿ ಸಂಸದ ಎಸ್. ಮುನಿಸ್ವಾಮಿ ಕ್ಷೇತ್ರ ಬಿಟ್ಟುಕೊಡಬೇಕು. 2019ರಲ್ಲಿ ಕೆ. ಎಚ್. ಮುನಿಯಪ್ಪ ಸೋಲಿಸಿ ಮುನಿಸ್ವಾಮಿ ಅಚ್ಚರಿಯ ಗೆಲವು ದಾಖಲಿಸಿದರು. ಆದರೆ ಈ ಬಾರಿ ಟಿಕೆಟ್ ಸಿಗಲಿದೆಯೇ? ಎಂಬುದು ಪ್ರಶ್ನೆ.

ಈ ಕುರಿತು ಮುನಿಸ್ವಾಮಿ ಮಾತನಾಡಿದ್ದು, "ನಾನು ಕ್ಷೇತ್ರದಿಂದ ಮರು ಆಯ್ಕೆಯಾಗುತ್ತೇನೆ. ಹೈಕಮಾಂಡ್ ಈ ತನಕ ಸೀಟು ಹಂಚಿಕೆ ಕುರಿತು ಯಾವುದೇ ತೀರ್ಮಾನವನ್ನು ಕೈಗೊಂಡಿಲ್ಲ" ಎಂದು ಸಂಸದರು ಹೇಳಿದ್ದಾರೆ.

"ಸೀಟು ಜೆಡಿಎಸ್‌ಗೆ ಬಿಟ್ಟು ಕೊಡಲಾಗುತ್ತದೆ ಎಂಬುದು ಕೇವಲ ಉಹಾಪೋಹ. ಈ ಕುರಿತು ಹೆಚ್ಚು ಗಮನ ನೀಡಬೇಡಿ ಎಂದು ನಾನು ಕಾರ್ಯಕರ್ತರಲ್ಲಿ ಮನವಿ ಮಾಡುತ್ತೇನೆ. ಎಲ್ಲವೂ ಅಂದುಕೊಂಡಂತೆ ಆಗುತ್ತದೆ, ನಾನು ಮತ್ತೆ ಸಂಸದನಾಗುತ್ತೇನೆ" ಎಂದು ಮುನಿಸ್ವಾಮಿ ಭರವಸೆ ನೀಡಿದ್ದಾರೆ.

"ಬಿಜೆಪಿ ನಾಯಕರು ಹಲವು ಹಂತದ ಸಮೀಕ್ಷೆಗಳನ್ನು ನಡೆಸುತ್ತಿದ್ದಾರೆ. ಯಾವ ತಂತ್ರ ಫಲಿಸುತ್ತದೆ, ಯಾವುದು ಫಲಿಸುವುದಿಲ್ಲ ಎಂದು ಪಕ್ಷದ ನಾಯಕರು ತೀರ್ಮಾನ ಕೈಗೊಳ್ಳುತ್ತಾರೆ. ನಾನು ಏನು ಮಾಡಬೇಕು? ಎಂದು ಪಕ್ಷ ತೀರ್ಮಾನ ಮಾಡುತ್ತದೆ" ಎಂದು ಸಂಸದರು ಹೇಳಿದರು.

2019ರಲ್ಲಿ ಕಾಂಗ್ರೆಸ್‌ನ ಕೆ. ಎಚ್. ಮುನಿಯಪ್ಪ 499,144 ಮತಗಳನ್ನು ಪಡೆದು ಸೋಲು ಕಂಡಿದ್ದರು. ಎಸ್. ಮುನಿಸ್ವಾಮಿ 709,165 ಮತಗಳನ್ನು ಪಡೆದು ಗೆಲವು ಸಾಧಿಸಿದ್ದರು. ಈಗ ಮುನಿಯಪ್ಪ ದೇವನಹಳ್ಳಿ ಕ್ಷೇತ್ರದ ಶಾಸಕರು, ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರು.

ಬಿಜೆಪಿ-ಜೆಡಿಎಸ್ ಮೈತ್ರಿಯಂತೆ ಕೋಲಾರ ಜೆಡಿಎಸ್ ಪಾಲಾದರೆ ಮೈತ್ರಿ ಅಭ್ಯರ್ಥಿ ಯಾರು? ಎಂಬುದು ಎಲ್ಲರ ಪ್ರಶ್ನೆ. ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಕೋಲಾರ, ಚಿಕ್ಕಬಳ್ಳಾಪುರ ಭಾಗದಲ್ಲಿ ಪ್ರಭಾವ ಹೊಂದಿದ್ದಾರೆ. ಆದ್ದರಿಂದ ಕೋಲಾರ ಸೀಟಿಗಾಗಿ ಬೇಡಿಕೆ ಇಟ್ಟಿದ್ದಾರೆ ಎಂಬುದು ಮಾಹಿತಿ.

ಮೈತ್ರಿ ಮಾತುಕತೆಯಂತೆ ಬಿಜೆಪಿ ಕೋಲಾರವನ್ನು ಜೆಡಿಎಸ್‌ಗೆ ನೀಡಿ ತುಮಕೂರು, ಚಿಕ್ಕಬಳ್ಳಾಪುರವನ್ನು ತನ್ನಲ್ಲಿ ಉಳಿಸಿಕೊಳ್ಳಲಿದೆ ಎಂಬ ಮಾತು ಕೇಳಿ ಬರುತ್ತಿದೆ. ಕೋಲಾರ ಬಿಜೆಪಿಗೆ ಬೇಕು ಎಂದು ಪಕ್ಷದ ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ. ಪಕ್ಷದ ಹೈಕಮಾಂಡ್ ಅಂತಿಮ ತೀರ್ಮಾನ ಕೈಗೊಂಡು ಕೋಲಾರ ಜೆಡಿಎಸ್ ಪಾಲಾದರೆ ಮುನಿಸ್ವಾಮಿ ಮುಂದಿನ ನಡೆ ಏನು?.

ಕೋಲಾರ, ಮಂಡ್ಯ ಮತ್ತು ಹಾಸನ ಕ್ಷೇತ್ರ ಜೆಡಿಎಸ್‌ಗೆ ಖಚಿತವಾಗಿದೆ ಎಂದು ರಾಜ್ಯದ ಜೆಡಿಎಸ್‌ನ ಕೆಲವು ನಾಯಕರು ಹೇಳಿಕೆ ನೀಡಿದ್ದು ಕುತೂಹಲಕ್ಕೆ ಕಾರಣವಾಗಿದೆ. ಕೋಲಾರ ಕ್ಷೇತ್ರಕ್ಕೆ ಶ್ರೀನಿವಾಸಪುರ, ಮುಳಬಾಗಿಲು, ಕೆಜಿಎಫ್, ಬಂಗಾರಪೇಟೆ, ಕೋಲಾರ, ಮಾಲೂರು ಅಲ್ಲದೇ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಮತ್ತು ಶಿಢ್ಲಘಟ್ಟ ಕ್ಷೇತ್ರಗಳು ಸೇರುತ್ತವೆ.

2023ರ ಚುನಾವಣೆಯಲ್ಲಿ ಕೋಲಾರ ಲೋಕಸಭಾ ಕ್ಷೇತ್ರದ 8 ಕ್ಷೇತ್ರಗಳಲ್ಲಿ ಜೆಡಿಎಸ್ 3 ಗೆದ್ದಿದೆ. ಕಾಂಗ್ರೆಸ್ 5 ಕ್ಷೇತ್ರದಲ್ಲಿ ಗೆದ್ದಿದೆ. ಇದನ್ನೇ ಆಧಾರವಾಗಿಟ್ಟುಕೊಂಡು ಜೆಡಿಎಸ್‌ ಕೋಲಾರ ಕ್ಷೇತ್ರಕ್ಕಾಗಿ ಬೇಡಿಕೆ ಇಟ್ಟಿದೆ ಎಂಬುದು ಸುದ್ದಿ. ಆದರೆ ಸೀಟು ಹಂಚಿಕೆ ಬಗ್ಗೆ ರಾಜ್ಯ ಮಟ್ಟದ ಬಿಜೆಪಿ, ಜೆಡಿಎಸ್ ನಾಯಕರು ತುಟಿ ಬಿಚ್ಚಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+