Viral Video: ದಿನಕ್ಕೆ ಮೂರು ಗಂಟೆ ಕೆಲಸ, ತಿಂಗಳಿಗೆ ₹70,000 ಸಂಪಾದನೆ; ಕೆಲಸ ಖಾಲಿ ಇದ್ಯಾ ಎಂದ ನೆಟ್ಟಿಗರು
ಬೆಳಗ್ಗೆಯಿಂದ ಸಂಜೆಯವರೆಗೆ ಬಾಸ್ ಬೈಗುಳ, ಟಾರ್ಗೆಟ್‌ಗಳ ತಲೆನೋವು, ಶನಿವಾರ-ಭಾನುವಾರವೂ ತಪ್ಪದ ಕೆಲಸದ ಒತ್ತಡ... ಇಷ್ಟೆಲ್ಲಾ ಸರ್ಕಸ್ ಮಾಡಿದ್ರು ಕೈಗೆ ಸಿಗೋದು ಮಾತ್ರ ಅಷ್ಟಕ್ಕಷ್ಟೇ ಸಂಬಳ. ಇನ್ನೊಂದೆಡೆ ಕೈಲೊಂದು ಡಿಗ್ರಿ ಹಿಡಿದು ಸೂಕ್ತ ಕೆಲಸ ಸಿಗದೆ ಕಂಗಾಲಾಗಿರೋ ಲಕ್ಷಾಂತರ ನಿರುದ್ಯೋಗಿಗಳ ದಂಡು. ದಿನವಿಡೀ ಕತ್ತೆಯಂತೆ ದುಡಿದು ಸುಸ್ತಾಗುವ ಐಟಿ-ಬಿಟಿ ಉದ್ಯೋಗಿಗಳಿಗೆ ಮತ್ತು ಕೆಲಸಕ್ಕಾಗಿ ಅಲೆಯುತ್ತಿರುವ ಯುವಕರಿಗೆ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರೋ ಈ ಒಂದು ವಿಡಿಯೋ ಭಾರೀ ಶಾಕ್ ನೀಡಿದೆ.
ಯಾವುದೇ ಆಫೀಸ್ ಪ್ರೆಷರ್ ಇಲ್ಲದೆ, ಕೇವಲ ದಿನಕ್ಕೆ 3 ಗಂಟೆ ಮಜವಾಗಿ ಕೆಲಸ ಮಾಡಿದ್ರೆ ತಿಂಗಳಿಗೆ ಬರೋಬ್ಬರಿ 70,000 ರೂಪಾಯಿಗೂ ಹೆಚ್ಚು ಗಳಿಸಬಹುದು ಎಂದು ಯುವಕನೊಬ್ಬ ಲೈವ್ ಆಗಿ ಪ್ರೂವ್ ಮಾಡಿ ತೋರಿಸಿದ್ದಾನೆ. ಕಾರ್ಪೊರೇಟ್ ಪ್ರೆಷರ್‌ಗೆ ಬಿದ್ದಿರೋರು ಮತ್ತು ಉದ್ಯೋಗ ಹುಡುಕುತ್ತಿರುವವರ ಕಣ್ಣು ಅರಳಿಸುವಂತೆ ಮಾಡಿರೋ ಆ 'ಸ್ಮಾರ್ಟ್ ಬಿಸಿನೆಸ್' ಐಡಿಯಾದ ಇಂಟರೆಸ್ಟಿಂಗ್ ವಿವರ ಇಲ್ಲಿದೆ.

ಹಿಂದೂ ಧರ್ಮದಲ್ಲಿ ಹಣೆಗೆ ತಿಲಕ ಅಥವಾ ಕುಂಕುಮ ಇಟ್ಟುಕೊಳ್ಳುವುದು ಅತ್ಯಂತ ಪವಿತ್ರ ಮತ್ತು ಸಂಪ್ರದಾಯದ ಭಾಗ. ಆದರೆ ಜನರಿಗೆ ತಿಲಕ ಇಡುವುದನ್ನೇ ಬಿಸಿನೆಸ್ ಮಾಡಿಕೊಂಡು ತಿಂಗಳಿಗೆ ಬರೋಬ್ಬರಿ 70,000 ರೂಪಾಯಿಗೂ ಹೆಚ್ಚು ಗಳಿಸಬಹುದು ಎಂದರೆ ನೀವು ನಂಬುತ್ತೀರಾ? ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಇಂತದ್ದೊಂದು ಕುತೂಹಲಕಾರಿ ವಿಡಿಯೋ ಭಾರಿ ಸದ್ದು ಮಾಡುತ್ತಿದೆ. ಧಾರ್ಮಿಕ ನಗರಿ ಋಷಿಕೇಶದಲ್ಲಿ (Rishikesh) ಯುವಕನೊಬ್ಬ ನಡೆಸಿದ ವಿಶಿಷ್ಟ ಪ್ರಯೋಗ ಮತ್ತು ಅದರಿಂದ ಆತ ಗಳಿಸಿದ ಹಣದ ವಿವರ ಇಂಟರ್ನೆಟ್‌ನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ.
ಏನಿದು ವಿಚಿತ್ರ ಪ್ರಯೋಗ? ವೈರಲ್ ವಿಡಿಯೋದಲ್ಲೇನಿದೆ?
ಇನ್‌ಸ್ಟಾಗ್ರಾಮ್‌ನಲ್ಲಿ 'Tan_E' ಎಂಬ ಪ್ರೊಫೈಲ್‌ನಿಂದ ಈ ವಿಡಿಯೋ ಶೇರ್ ಮಾಡಲಾಗಿದೆ. "ಋಷಿಕೇಶದ ಪವಿತ್ರ ಘಾಟ್‌ಗಳಲ್ಲಿ ಜನರಿಗೆ ತಿಲಕ ಇಡುವುದರಿಂದ ಎಷ್ಟು ಹಣ ಗಳಿಸಬಹುದು?" ಎಂಬುದನ್ನು ಸ್ವತಃ ತಾನೇ ಪರೀಕ್ಷಿಸಲು ಈ ಯುವಕ ಮುಂದಾಗುತ್ತಾನೆ. ಈ ಪ್ರಯೋಗಕ್ಕಾಗಿ ಯುವಕ ಮೊದಲು ಧಾರ್ಮಿಕ ಶೈಲಿಯ ಸಾಂಪ್ರದಾಯಿಕ ಉಡುಪುಗಳನ್ನು ಧರಿಸುತ್ತಾನೆ. ಕೈಯಲ್ಲೊಂದು ತಟ್ಟೆ ಹಿಡಿದು, ಅದರಲ್ಲಿ ಗಂಧ-ಕುಂಕುಮ ಇಟ್ಟುಕೊಂಡು ಋಷಿಕೇಶದ ಗಂಗಾ ನದಿಯ ಘಾಟ್‌ಗಳ ಕಡೆಗೆ ಹೆಜ್ಜೆ ಹಾಕುತ್ತಾನೆ.
ಶುರುವಿನಲ್ಲಿ ಘಾಟ್ ರಸ್ತೆಗಳಲ್ಲಿ ಓಡಾಡುವ ಜನರಿಗೆ ತಿಲಕ ಇಡಲು ಪ್ರಯತ್ನಿಸಿದಾಗ ಆತನಿಗೆ ಅಷ್ಟೊಂದು ಯಶಸ್ಸು ಸಿಗುವುದಿಲ್ಲ. ಸುಮಾರು 20 ಜನರಿಗೆ ತಿಲಕ ಇಟ್ಟಾಗ ಆತನಿಗೆ ಸಿಕ್ಕಿದ್ದು ಕೇವಲ 50ರಿಂದ 60ರೂಪಾಯಿ ಮಾತ್ರ. ಅನೇಕ ಪ್ರವಾಸಿಗರು ತಿಲಕ ಇಟ್ಟುಕೊಳ್ಳಲು ನಿರಾಕರಿಸುತ್ತಾರೆ. ಆದರೆ, ಅಸಲಿ ಆಟ ಶುರುವಾಗಿದ್ದೇ ಸಂಜೆಯ ನಂತರ. ಋಷಿಕೇಶದ ಪ್ರಸಿದ್ಧ 'ಗಂಗಾ ಆರತಿ' ವೀಕ್ಷಿಸಲು ದೇಶ-ವಿದೇಶಗಳಿಂದ ಸಾವಿರಾರು ಭಕ್ತರು ಘಾಟ್‌ಗೆ ಲಗ್ಗೆ ಇಡುತ್ತಾರೆ. ಈ ಸಮಯವನ್ನು ಯುವಕ ಸರಿಯಾಗಿ ಬಳಸಿಕೊಳ್ಳುತ್ತಾನೆ.
3 ಗಂಟೆಯಲ್ಲಿ ಭರ್ಜರಿ ಕಲೆಕ್ಷನ್
ಗಂಗಾ ಆರತಿಯ ಭಕ್ತಿ ಮೂಡ್‌ನಲ್ಲಿದ್ದ ನೂರಾರು ಭಕ್ತರು ಸಾಲಾಗಿ ಬಂದು ಈತನ ಬಳಿ ತಿಲಕ ಇಟ್ಟುಕೊಳ್ಳಲು ಶುರು ಮಾಡುತ್ತಾರೆ. ಕೇವಲ ಮೂರು ಗಂಟೆಗಳ ಅವಧಿಯಲ್ಲಿ ಆ ಯುವಕ ಬರೋಬ್ಬರಿ 2,350 ರೂಪಾಯಿಗಳನ್ನು ಸಂಪಾದಿಸುತ್ತಾನೆ. ದಿನಕ್ಕೆ ಕೇವಲ 3 ಗಂಟೆ ಕೆಲಸ ಮಾಡಿ ಇಷ್ಟು ಗಳಿಸಿದರೆ, ಈ ಲೆಕ್ಕಾಚಾರದ ಪ್ರಕಾರ ತಿಂಗಳಿಗೆ ಆರಾಮವಾಗಿ 70,000 ರೂಪಾಯಿಗಿಂತ ಹೆಚ್ಚು ಹಣ ಗಳಿಸಬಹುದು ಎಂದು ಆ ಯುವಕ ವಿಡಿಯೋದಲ್ಲಿ ಲೆಕ್ಕ ಹಾಕಿ ತೋರಿಸಿದ್ದಾನೆ. ಅಲ್ಲದೆ ದೇಶದಲ್ಲಿ ಕೆಲಸವಿಲ್ಲದೆ ಅಲೆಯುವ ನಿರುದ್ಯೋಗಿ ಯುವಕರಿಗೆ ಇದೊಂದು ಅತ್ಯುತ್ತಮ ಮತ್ತು ಸುಲಭವಾದ ಸ್ವಯಂ ಉದ್ಯೋಗದ ಐಡಿಯಾ ಎಂದೂ ಆತ ಸಲಹೆ ನೀಡಿದ್ದಾನೆ.
ನೆಟ್ಟಿಗರು ಏನಂದ್ರು?
ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಮಿಲಿಯನ್‌ಗಟ್ಟಲೆ ವೀಕ್ಷಣೆ ಪಡೆದಿದ್ದು, ನೆಟ್ಟಿಗರು ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. "ನಿಮ್ಮ ಈ ಬಿಸಿನೆಸ್‌ಗೆ ಯಾರಾದರೂ ಕೋ-ಫೌಂಡರ್ ಬೇಕಾಗಿದ್ದಾರಾ? ನಾನು ಬರಲು ಸಿದ್ಧ" ಎಂದು ತಮಾಷೆ ಮಾಡಿದ್ದಾರೆ. ನಾಳೆಯಿಂದ ನಾನೂ ಅಲ್ಲೇ ಕಾಣಿಸಿಕೊಂಡರೆ ಆಶ್ಚರ್ಯ ಪಡಬೇಡಿ" ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೊಂದು ವರ್ಗದ ಜನರು ಈ ವಿಡಿಯೋಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. "ದೇವರ ಭಕ್ತಿ ಮತ್ತು ಧರ್ಮವನ್ನು ಇವರು ಹಣ ಮಾಡುವ ಧಂಧೆಯನ್ನಾಗಿ ಬದಲಾಯಿಸುತ್ತಿದ್ದಾರೆ" ಎಂದು ಆಕ್ರೋಶ ಹೊರಹಾಕಿದ್ದಾರೆ. ಏನೇ ಇರಲಿ, ಈ ತಿಲಕ ಬಿಸಿನೆಸ್‌ನ ಆದಾಯದ ಲೆಕ್ಕಾಚಾರ ಮಾತ್ರ ಸದ್ಯ ಇಂಟರ್ನೆಟ್‌ನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.













Click it and Unblock the Notifications