ಲಂಡನ್‌ನಲ್ಲಿ 'ಹಲ್ದಿರಾಮ್ಸ್' ಹವಾ: ದೇಸಿ ಸ್ನ್ಯಾಕ್ಸ್ ಖರೀದಿಗೆ ಉದ್ದದ ಕ್ಯೂ ನಿಂತ ಭಾರತೀಯರು, Video Viral
ಎಲ್ಲರಿಗೂ ಅವರ ಊರಿನ ಊಟವೆಂದರೆ ಅಚ್ಚುಮೆಚ್ಚು. ಅದರಲ್ಲಿ ವಿದೇಶದಲ್ಲಿರುವ ಭಾರತೀಯರಿಗೆ ತಮ್ಮ ನಾಡಿನ ಊಟ, ತಿಂಡಿಗಳೆಂದರೆ ಎಲ್ಲಿಲ್ಲದ ಪ್ರೀತಿ. ಅದರಲ್ಲೂ ಚಾಟ್ಸ್, ಸಿಹಿ ತಿನಿಸುಗಳು ಎಂದರೆ ಬಾಯಲ್ಲಿ ನೀರು ತರುತ್ತದೆ. ಇದೀಗ ಲಂಡನ್‌ನಲ್ಲಿ ಭಾರತದ ಜನಪ್ರಿಯ ಸ್ನ್ಯಾಕ್ಸ್ ಬ್ರ್ಯಾಂಡ್‌ಗಳಲ್ಲಿ ಒಂದಾಗಿರುವ 'ಹಲ್ದೀರಾಮ್ಸ್' ತನ್ನ ಮೊದಲ ಔಟ್‌ಲೆಟ್ ಅನ್ನು ಆರಂಭಿಸಿದೆ.
ಇಂದರಿಂದಾಗಿ ಅಲ್ಲಿನ ಅನಿವಾಸಿ ಭಾರತೀಯರ ಸಂತಸಕ್ಕೆ ಹೇಳಲಾಗುತ್ತಿಲ್ಲ. ಲಂಡನ್‌ನ ಲೆಸ್ಟರ್ ಸ್ಕ್ವೇರ್‌ನಲ್ಲಿ ಹೊಸದಾಗಿ ಆರಂಭವಾಗಿರುವ ಈ ಮಳಿಗೆಯ ಮುಂದೆ ಭಾರತೀಯರು ಉದ್ದದ ಕ್ಯೂ ನಿಂತಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. "ಪ್ರತಿಯೊಬ್ಬ ಭಾರತೀಯನ ವೀಕೆಂಡ್ ಪ್ಲಾನ್ ಒಂದೇ ಆಗಿತ್ತು" ಎಂಬ ತಮಾಷೆಯ ಕ್ಯಾಪ್ಷನ್‌ನೊಂದಿಗೆ ಹಂಚಿಕೊಂಡ ಈ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ.

ಲಂಡನ್‌ನಲ್ಲಿ ಹಲ್ದೀರಾಮ್ಸ್ ಹವಾ
ಇನ್‌ಸ್ಟಾಗ್ರಾಮ್‌ನಲ್ಲಿ 'views.we.explore'ಎಂಬ ಖಾತೆಯಿಂದ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಲಂಡನ್‌ನ ಲೆಸ್ಟರ್ ಸ್ಕ್ವೇರ್‌ನಲ್ಲಿ ಹಲ್ದೀರಾಮ್ಸ್ ತನ್ನ ಮೊದಲ ಮಳಿಗೆಯನ್ನು ತೆರೆದಿದೆ. ಈ ವಿಚಾರ ತಿಳಿಯುತ್ತಿದ್ದಂತೆ ವಿಕೆಂಡ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರು ಅಲ್ಲಿಗೆ ಬಂದಿದ್ದಾರೆ. ಹಲ್ದೀರಾಮ್ಸ್‌ನ ಜನಪ್ರಿಯ ತಿನಿಸುಗಳಾದ ಆಲೂ ಭುಜಿಯಾ, ಚೋಲೆ ಭಟೂರೆ ಸೇರಿದಂತೆ ದೇಸಿ ಸ್ನ್ಯಾಕ್ಸ್‌ಗಳ ರುಚಿ ಸವಿಯಲು ಜನರು ಮುಗಿಬಿದ್ದಿದ್ದಾರೆ. "ಹಲ್ದೀರಾಮ್ಸ್‌ನ ಮೊದಲ ಔಟ್‌ಲೆಟ್‌ಗಾಗಿ ಇಷ್ಟೋಂದು ಜನ ನಿಂತಿರುವುದು, ಈ ಉತ್ಸಾಹ ಹಾಗೂ ಇಷ್ಟುದ್ದದ ಕ್ಯೂ... ಈ ವೀಕೆಂಡ್‌ನಲ್ಲಿ ಪ್ರತಿಯೊಬ್ಬ ಭಾರತೀಯರ ಪ್ಲಾನ್ ಇದೇ ಆಗಿತ್ತು ಎನ್ನಬಹುದು! ನೀವೂ ಈ ಕ್ಯೂನಲ್ಲಿ ನಿಲ್ಲಲು ಇಷ್ಟಪಡುತ್ತೀರಾ?" ಎಂದು ವಿಡಿಯೋಗೆ ಕ್ಯಾಪ್ಷನ್ ನೀಡಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್
ಈ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದಂತೆ, ಅನೇಕರು ತಮ್ಮ ಲಂಡನ್ ಹಲ್ದೀರಾಮ್ಸ್ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಭಾರತದಿಂದ ಅದರಲ್ಲೂ ಹುಟ್ಟೂರಿನಿಂದ ಸಾವಿರಾರು ಮೈಲಿ ದೂರದಲ್ಲಿರುವ ಜನರಿಗೆ ತಮ್ಮ ಊರಿನ ರುಚಿಕರ ಬ್ರ್ಯಾಂಡ್ ಸಿಕ್ಕಾಗ ಆಗುವ ಖುಷಿ ಈ ವಿಡಿಯೋದಲ್ಲಿ ಎದ್ದು ಕಾಣುತ್ತಿದೆ. ಸದ್ಯ ಈ 'ಹಲ್ದೀರಾಮ್ಸ್ ಲಂಡನ್ ಔಟ್‌ಲೆಟ್' ಕೇವಲ ತಿನಿಸುಗಳಿಗಾಗಿ ಮಾತ್ರವಲ್ಲ, ಭಾರತೀಯರೆಲ್ಲರನ್ನೂ ಒಂದು ಮಾಡುವ ಸ್ಥಳವಾಗಿ ಮಾರ್ಪಟ್ಟಿದೆ. ಆದರೆ, ಈ ವಿಡಿಯೋಗೆ ನೆಟ್ಟಿಗರಿಂದ ಕೇವಲ ಮೆಚ್ಚುಗೆ ಮಾತ್ರವಲ್ಲ, ಮಿಶ್ರ ಪ್ರತಿಕ್ರಿಯೆಗಳೂ ವ್ಯಕ್ತವಾಗಿವೆ.
ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ: ಪರ-ವಿರೋಧ ಚರ್ಚೆ
ಈ ವಿಡಿಯೋ ಕಾಮೆಂಟ್ನಲ್ಲಿ ಪರ ಮತ್ತು ವಿರೋಧದ ಚರ್ಚೆಗಳು ಜೋರಾಗಿವೆ. "ಇದರ ರುಚಿ ಫ್ರೋಜನ್ ಫುಡ್‌ನಂತಿದೆ ಎಂದು ನಾನು ಕೇಳಲ್ಪಟ್ಟೆ! ಅವರು ಖಂಡಿತವಾಗಿಯೂ ತಾಜಾ ಆಹಾರ ನೀಡುವುದಿಲ್ಲ, ಅವರಿಗೆ ಕೇವಲ ಲಾಭ ಬೇಕು" ಎಂದು ಒಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭೇಟಿ ನೀಡಿದ್ದ ಮತ್ತೊಬ್ಬ ಬಳಕೆದಾರರು ಪ್ರತಿಕ್ರಿಯಿಸಿ, "ನಾನು ನಿನ್ನೆ ಅಲ್ಲಿಗೆ ಹೋಗಿದ್ದೆ. ನಿಜ ಹೇಳಬೇಕೆಂದರೆ ಅಲ್ಲಿನ ಬೆಲೆ ಮತ್ತು ಜನಜಂಗುಳಿಗೆ ಅದು ಯೋಗ್ಯವಾಗಿಲ್ಲ" ಎಂದಿದ್ದಾರೆ.
ಆದರೆ ಇನ್ನು ಕೆಲವರು ಇದನ್ನು ಬೆಂಬಲಿಸಿದ್ದು. "ವಿಶ್ವಾದ್ಯಂತ ಹಲ್ದೀರಾಮ್ಸ್ ಮಳಿಗೆಗಳು ಆರಂಭವಾಗಬೇಕು," ಎಂದು ಒಬ್ಬರು ಹೇಳಿದರೆ, "ಚೋಲೆ ಭಟೂರೆ ಮೇಲಿನ ಹುಚ್ಚು ಇದು," "ಎಲ್ಲರಿಗೂ ಆಲೂ ಭುಜಿಯಾ ಬೇಕಿದೆ" ಎಂದು ಮತ್ತೊಬ್ಬರು ತಮಾಷೆ ಮಾಡಿದ್ದಾರೆ. " ಈ ಸರತಿ ಸಾಲಿನಲ್ಲಿ ಕ್ಯೂನಲ್ಲಿ ನಿಲ್ಲುವ ಟ್ರೆಂಡ್ ಲಂಡನ್‌ಗೂ ತಲುಪಿದೆ" ಎಂದು ಕೆಲವರು ಕಾಲೆಳೆದಿದ್ದಾರೆ. "ಸೊಂಟದ ಮೇಲೆ ಕೈಯಿಟ್ಟು ನಿಂತಿರುವವರ ಸ್ಟೈಲ್ ನೋಡಿದರೆ ಅವರು ಪಕ್ಕಾ ನಮ್ಮ ಭಾರತದವರು ಎಂದು ಸುಲಭವಾಗಿ ಹೇಳಬಹುದು" ಎಂಬ ಕಾಮೆಂಟ್‌ಗಳು ಕೂಡ ನೆಟ್ಟಿಗರ ಮುಖದಲ್ಲಿ ನಗು ತರಿಸುತ್ತಿವೆ.












Click it and Unblock the Notifications