Bidadi: ಬಿಡದಿ ರೈತರು ಸರ್ಕಾರದ ದರ್ಪಕ್ಕೆ ಹೆದರಿ ಕೆಟ್ಟ ಘಟನೆಗಳಿಗೆ ಅವಕಾಶ ಕೊಡಬೇಡಿ: ಕೇಂದ್ರ ಸಚಿವ ಕುಮಾರಸ್ವಾಮಿ
ಬೆಂಗಳೂರು: ಬಿಡದಿಯ ಟೌನ್‌ಶಿಪ್ ಯೋಜನೆಗಾಗಿ ಮಂಡಲಹಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಭೂಸ್ವಾಧೀನ ಸರ್ವೆ ವೇಳೆ ರೈತ ಮಹಿಳೆಯರು ಹಾಗೂ ಅಧಿಕಾರಿಗಳ ನಡುವೆ ನಡೆದ ಸಂಘರ್ಷ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಈ ಘಟನೆಯ ಕುರಿತು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಸದ್ಯದ ಉದ್ವಿಗ್ನ ಪರಿಸ್ಥಿತಿಗೆ ರಾಜ್ಯ ಕಾಂಗ್ರೆಸ್ ಸರ್ಕಾರದ ಬೇಜವಾಬ್ದಾರಿತನ ಹಾಗೂ ಚಿತಾವಣೆಯೇ ಕಾರಣ ಎಂದು ಗಂಭೀರ ಆರೋಪ ಮಾಡಿದ್ದಾರೆ.
500 ದಿನಗಳ ಹೋರಾಟಕ್ಕೆ ಸರ್ಕಾರ ಧಕ್ಕೆ
ತಮ್ಮ ಹಕ್ಕಿಗಾಗಿ ಹೋರಾಡುತ್ತಿರುವ ರೈತರ ಪರ ಮಾತನಾಡಿರುವ ಕುಮಾರಸ್ವಾಮಿ, ಸರ್ಕಾರದ ದರ್ಪದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. "ತಮ್ಮ ತಲತಲಾಂತರದ ಭೂಮಿಯನ್ನು ಕಳೆದುಕೊಳ್ಳುವ ಭೀತಿಯಲ್ಲಿರುವ ಸ್ಥಳೀಯ ರೈತರು ಕಳೆದ 500 ದಿನಗಳಿಂದ ಬಿಡದಿಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರು. ಆದರೆ ಅವರ ಆಕ್ಷೇಪಣೆಗಳನ್ನ ಆಲಿಸದೆ ಏಕಾಏಕಿ ಅಧಿಕಾರಿಗಳು ಸರ್ವೆ ಮಾಡಲು ಬಂದಿರುವುದನ್ನು ಕಂಡು ರೈತರು ಆಕ್ರೋಶಗೊಂಡಿದ್ದಾರೆ. ಈ ಕೋಪ ಸಹಜವಾದದ್ದು ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

ರೈತರು ಶಾಂತಿಯಿಂದ ಇರಿ
ಇದೇ ವೇಳೆ ಉದ್ರಿಕ್ತ ರೈತರಲ್ಲಿ ಮನವಿ ಮಾಡಿರುವ ಹೆಚ್‌ಡಿಕೆ, "ಯಾವುದೇ ಕಾರಣಕ್ಕೂ ಇಂತಹ ಕೆಟ್ಟ ಘಟನೆಗಳಿಗೆ ಅಥವಾ ಕಾನೂನು ಕೈಗೆತ್ತಿಕೊಳ್ಳುವ ಪರಿಸ್ಥಿತಿಗೆ ಅವಕಾಶ ಕೊಡಬೇಡಿ. ನಿಮ್ಮ ಹೋರಾಟ ಶಾಂತಿಯುತವಾಗಿ ಮುಂದುವರೆಯಲಿ. ನಾವು ಸರ್ಕಾರದ ವಿರುದ್ಧ ಕಾನೂನಾತ್ಮಕವಾಗಿ ಹೋರಾಟ ಮಾಡೋಣ. ನಿಮ್ಮ ನೋವು ಮತ್ತು ಆಕ್ರೋಶವನ್ನು ರಾಜಕೀಯವಾಗಿ ದುರುಪಯೋಗಪಡಿಸಿಕೊಳ್ಳಲು ಈ ಸರ್ಕಾರಕ್ಕೆ ನೀವೇ ಅವಕಾಶ ಮಾಡಿಕೊಡಬೇಡಿ" ಎಂದು ಕಿವಿಮಾತು ಹೇಳಿದ್ದಾರೆ.
ಪೊಲೀಸರಿಗೆ ಎಚ್ಚರಿಕೆ
ಘಟನಾ ಸ್ಥಳದಲ್ಲಿ ರೈತರನ್ನು ನಿಯಂತ್ರಿಸಲು ಮುಂದಾದ ಪೊಲೀಸ್ ಇಲಾಖೆಯ ನಡೆಗೂ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಪ್ರಸ್ತುತ ಆಡಳಿತಾರೂಢ ಸರ್ಕಾರದ ಪರವಾಗಿ ಕೆಲಸ ಮಾಡದಂತೆ ಪೊಲೀಸರಿಗೆ ಎಚ್ಚರಿಸಿದ್ದಾರೆ. ಶಾಂತಿಯುತವಾಗಿ ನಡೆಯುತ್ತಿದ್ದ ಹೋರಾಟವನ್ನು ಹತ್ತಿಕ್ಕಲು ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯನ್ನ ದುರುಪಯೋಗಪಡಿಸಿಕೊಳ್ಳುತ್ತಿದೆ. ಯಾವ ಕಾರಣಕ್ಕೂ ಸರ್ಕಾರದ ದರ್ಪ ಹಾಗೂ ಒತ್ತಡಕ್ಕೆ ಮಣಿದು ಅನ್ನದಾತರ ವಿರುದ್ಧ 'ರೈತ ವಿರೋಧಿ' ನೀತಿಯನ್ನು ಅನುಸರಿಸಬೇಡಿ. ಒಂದು ವೇಳೆ ಸರ್ಕಾರದ ಕೈಗೊಂಬೆಯಾಗಿ ರೈತರನ್ನು ಶೋಷಿಸಿದರೆ, ಈ ಸರ್ಕಾರದ ಪಾಪದ ಹಾಗೂ ಕೆಟ್ಟ ನಡವಳಿಕೆಯ ಪಾಲನ್ನು ಭವಿಷ್ಯದಲ್ಲಿ ನೀವೂ ಕೂಡ ಹಂಚಿಕೊಳ್ಳಬೇಕಾದ ದಿನ ಬಂದೇ ಬರುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಭೂಮಿ ಕಳೆದುಕೊಳ್ಳುವ ಭೀತಿಯಲ್ಲಿರುವ ರೈತರು ಸುಮಾರು 500 ದಿನಗಳಿಂದ ಬಿಡದಿಯಲ್ಲಿ ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದಾರೆ. ಏಕಾಏಕಿ ಅಧಿಕಾರಿಗಳು ಸರ್ವೇ ಮಾಡಲು ಬಂದಿರುವುದನ್ನು ಕಂಡು ಸಹಜವಾಗಿಯೇ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ರಾಜ್ಯ ಸರಕಾರದ ಬೇಜವಾಬ್ದಾರಿ ಮತ್ತು ಚಿತಾವಣೆಯೇ ಕಾರಣ.
— ಹೆಚ್.ಡಿ.ಕುಮಾರಸ್ವಾಮಿ | HD Kumaraswamy (@hd_kumaraswamy) July 13, 2026
ಆದಾಗ್ಯೂ ಕೆಟ್ಟ ಘಟನೆಗಳಿಗೆ ಅವಕಾಶ… pic.twitter.com/JhsbkruRvA
ರಣರಂಗವಾಗಿದ್ದ ಮಂಡಲಹಳ್ಳಿ
ರಾಜ್ಯ ಸರ್ಕಾರವು ಬಿಡದಿ ಭಾಗದಲ್ಲಿ ಹಮ್ಮಿಕೊಂಡಿರುವ ಮಹತ್ವಾಕಾಂಕ್ಷೆಯ ಹೈಟೆಕ್ ಟೌನ್‌ಶಿಪ್ ಯೋಜನೆಗಾಗಿ ಜಮೀನುಗಳನ್ನು ವಶಪಡಿಸಿಕೊಳ್ಳಲು ಪ್ರಕ್ರಿಯೆ ಆರಂಭಿಸಿದೆ. ಆದರೆ ಭೂಮಿಯನ್ನು ಬಿಟ್ಟುಕೊಡಲು ಸ್ಥಳೀಯ ರೈತರು ಸಿದ್ಧರಿರಲಿಲ್ಲ. ಇದೇ ಕಾರಣಕ್ಕಾಗಿ ಕಳೆದ 500 ದಿನಗಳಿಂದ ಮಂಡಲಹಳ್ಳಿ ಭಾಗದ ಅನ್ನದಾತರು ಧರಣಿ ನಡೆಸುತ್ತಾ ಬಂದಿದ್ದರು. ಆದರೆ ಭೂಮಾಪನ (ಸರ್ವೆ) ಇಲಾಖೆಯ ಅಧಿಕಾರಿಗಳು ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಪೊಲೀಸ್ ಭದ್ರತೆಯೊಂದಿಗೆ ಮಂಡಲಹಳ್ಳಿ ಗ್ರಾಮದ ಜಮೀನುಗಳಿಗೆ ಸರ್ವೆ ನಡೆಸಲು ಎಂಟ್ರಿ ಕೊಟ್ಟಿದ್ದರು.
ಯಾವುದೇ ಪೂರ್ವ ಮಾಹಿತಿ ಇಲ್ಲದೆ ಜಮೀನಿಗೆ ನುಗ್ಗಿದ ಅಧಿಕಾರಿಗಳನ್ನು ಕಂಡು ಈ ಭಾಗದ ರೈತ ಮಹಿಳೆಯರು ಕೆರಳಿ ಕೆಂಡವಾಗಿದ್ದರು. "ನಮ್ಮ ಅರ್ಜಿಗಳು ಇನ್ನೂ ಇತ್ಯರ್ಥವಾಗದಿದ್ದರೂ ಬಲವಂತವಾಗಿ ಸರ್ವೆ ಮಾಡುವುದು ಎಷ್ಟು ಸರಿ?" ಎಂದು ಪ್ರಶ್ನಿಸಿದಾಗ, ಅಧಿಕಾರಿಯೊಬ್ಬರು ಅತ್ಯಂತ ಬೇಜವಾಬ್ದಾರಿಯಿಂದ ಉತ್ತರಿಸಿದ್ದರು ಎನ್ನಲಾಗಿದೆ.
ಈ ಉದ್ಧಟತನದಿಂದ ಆಕ್ರೋಶದ ಕಟ್ಟೆ ಒಡೆದ ಗ್ರಾಮದ ಮಹಿಳೆಯರು, ತಕ್ಷಣವೇ ತಾವಿದ್ದ ಜಾಗದಿಂದಲೇ ಪೊರಕೆ ಕೈಗೆತ್ತಿಕೊಂಡು ಅಧಿಕಾರಿಗಳ ಮೇಲೆ ಮುಗಿಬಿದ್ದಿದ್ದರು. ಆಕ್ರೋಶದಿಂದ ಅಧಿಕಾರಿಗಳನ್ನು ಬೆನ್ನಟ್ಟಿ, ಪೊರಕೆಯಿಂದ ಹೊಡೆದು ಅಲ್ಲಿಂದ ಓಡಿಸಿದ್ದರು. ಇದಕ್ಕೆ ಹೆದರಿದ ಅಧಿಕಾರಿಗಳು ಪ್ರಾಣಭಯದಿಂದ ಓಡಬೇಕಾಯಿತು. ಇದೇ ವೇಳೆ ಅಧಿಕಾರಿಗಳು ಬಂದಿದ್ದ ಸರ್ಕಾರಿ ವಾಹನಗಳ ಗಾಜುಗಳನ್ನು ಪುಡಿಪುಡಿ ಮಾಡಿ ಜಖಂಗೊಳಿಸಲಾಗಿತ್ತು. ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದ್ದಂತೆ ಇಡೀ ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿತ್ತು.












Click it and Unblock the Notifications