ಬೆಂಗಳೂರಿನಲ್ಲಿ ಮತ್ತೊಂದು ಗಾಲ್ಫ್ ಕೋರ್ಸ್ ನಿರ್ಮಿಸಿ, ನನಗೆ ಇತಿಹಾಸ ಬರೆಯುವುದರಲ್ಲಿ ಆಸಕ್ತಿ ಹೆಚ್ಚು: ಸಿಎಂ ಡಿ.ಕೆ.ಶಿವಕುಮಾರ್
ಬೆಂಗಳೂರು: "ಬೆಂಗಳೂರು ಗಾಲ್ಫ್ ಕ್ಲಬ್ 150 ವರ್ಷಗಳ ಐತಿಹಾಸಿಕ ಸಂಭ್ರಮದಲ್ಲಿದೆ. ಈ ಸುಸಂದರ್ಭಕ್ಕೆ ನಿಜವಾದ ಅರ್ಥ ಸಿಗಬೇಕಾದರೆ ನೀವು ಬೆಂಗಳೂರಿನಲ್ಲಿ ಮತ್ತೊಂದು ಗಾಲ್ಫ್ ಕೋರ್ಸ್ ನಿರ್ಮಿಸಬೇಕು" ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗಾಲ್ಫ್ ಕ್ಲಬ್ ಸದಸ್ಯರಿಗೆ ಹೇಳಿದ್ದಾರೆ.
ಸ್ಯಾಂಕಿ ರಸ್ತೆಯಲ್ಲಿರುವ ಗಾಲ್ಫ್ ಕ್ಲಬ್‌ನಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ 'ಬೆಂಗಳೂರು ಗಾಲ್ಫ್ ಕ್ಲಬ್‌ನ 150ನೇ ವಾರ್ಷಿಕೋತ್ಸವ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತಾವು ಮುಖ್ಯಮಂತ್ರಿಯಾದ ಬಳಿಕ ಪಾಲ್ಗೊಳ್ಳುತ್ತಿರುವ ಮೊದಲ ಖಾಸಗಿ ಕಾರ್ಯಕ್ರಮ ಇದಾಗಿದ್ದು, ಸಿಎಂ ಎನ್ನುವುದಕ್ಕಿಂತ ಈ ಕ್ಲಬ್‌ನ ಓರ್ವ ಹೆಮ್ಮೆಯ ಸದಸ್ಯನಾಗಿ ಇಲ್ಲಿಗೆ ಆಗಮಿಸಿದ್ದೇನೆ ಎಂದು ಅವರು ತಿಳಿಸಿದರು.

ಬೆಂಗಳೂರಿನಲ್ಲಿ ಮತ್ತಷ್ಟು ಗಾಲ್ಫ್ ಕೋರ್ಸ್ ನಿರ್ಮಾಣದ ಅಗತ್ಯವಿದೆ
ತಮ್ಮ ಭಾಷಣದಲ್ಲಿ ಡಿಕೆಶಿ, "ನನ್ನ ಮಾತುಗಳು ನಿಮಗೆ ಹಿತವಾಗಿರಲಿಕ್ಕಿಲ್ಲ, ನಿಮ್ಮ ಚಪ್ಪಾಳೆಯೂ ನನಗೇನು ಬೇಕಾಗಿಲ್ಲ. ಆದರೆ ಎಷ್ಟೇ ಕಹಿಯಾದರೂ ಸತ್ಯವನ್ನು ನುಡಿಯಲೇಬೇಕು" ಎಂದರು. "ಈ ಕ್ಲಬ್‌ಗೆ ತನ್ನದೇ ಆದ ದೊಡ್ಡ ಇತಿಹಾಸವಿದೆ. ಆದರೆ, ಕೇವಲ ಇತಿಹಾಸವನ್ನು ಸ್ಮರಿಸಿದರೆ ಸಾಲದು, ಬದಲಿಗೆ ಇತಿಹಾಸವನ್ನು ಸೃಷ್ಟಿಸಬೇಕು. ಬೆಂಗಳೂರು ನಗರವನ್ನು ಕಟ್ಟುವಂತಹ ಸಾಮರ್ಥ್ಯವಿರುವ ಅನೇಕ ಪ್ರಭಾವಿ ಉದ್ಯಮಿಗಳು, ಹಿರಿಯ ಅಧಿಕಾರಿಗಳು ಇಲ್ಲಿದ್ದೀರಿ. 150 ವರ್ಷಗಳ ಇತಿಹಾಸವಿರುವ ಈ ಪ್ರತಿಷ್ಠಿತ ಗಾಲ್ಫ್ ಕ್ಲಬ್, ಈ ಹೊತ್ತಿಗೆ ನಗರದಲ್ಲಿ ಕನಿಷ್ಠ ಮೂರ್ನಾಲ್ಕು ಗಾಲ್ಫ್ ಕೋರ್ಸ್‌ಗಳನ್ನು ನಿರ್ಮಿಸಬೇಕಾಗಿತ್ತು. ಅದಕ್ಕೆ ನಿಮ್ಮಲ್ಲಿ ಯಾವ ಕೊರತೆಯಿದೆ?" ಎಂದು ಅವರು ಪ್ರಶ್ನಿಸಿದರು.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಶಂಕುಸ್ಥಾಪನೆಗೆ ಬಂದಿದ್ದಾಗ, ವಿಶ್ವದ ನಾಯಕರು ಮೊದಲು ಬೆಂಗಳೂರಿಗೆ ಬಂದು ನಂತರ ದೇಶದ ಇತರೆ ನಗರಗಳಿಗೆ ಹೋಗುತ್ತಿದ್ದಾರೆ ಎಂದು ಹೇಳಿದ್ದನ್ನು ಸಿಎಂ ಈ ವೇಳೆ ಸ್ಮರಿಸಿದರು.
ಇತಿಹಾಸ ಸೃಷ್ಟಿಸುವುದರಲ್ಲಿ ನನಗೆ ಆಸಕ್ತಿ : ಡಿಕೆಶಿ
ಕಾರ್ಯಕ್ರಮದಲ್ಲಿ ತಮ್ಮ ಕಾರ್ಯವೈಖರಿಯನ್ನು ಸಮರ್ಥಿಸಿಕೊಂಡ ಅವರು, "ಹಿಂದೆ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ಕಾರಣಕ್ಕೆ ನಿಮ್ಮ ಕ್ಲಬ್‌ನ ಅನುಮತಿಯನ್ನು ಸುಲಭವಾಗಿ ನವೀಕರಿಸಿದ್ದಾರೆ. ಒಂದು ವೇಳೆ ನಾನೇ ಆಗಿದ್ದರೆ ಅಷ್ಟು ಸುಲಭವಾಗಿ ನವೀಕರಣ ಮಾಡುತ್ತಿರಲಿಲ್ಲ. ಮುಂದಿನ ಪೀಳಿಗೆಗಾಗಿ ನಗರದಲ್ಲಿ ಮತ್ತೊಂದೆರಡು ಗಾಲ್ಫ್ ಕೋರ್ಸ್ ಆರಂಭಿಸಬೇಕು ಎಂಬ ಕಠಿಣ ಷರತ್ತನ್ನು ವಿಧಿಸುತ್ತಿದ್ದೆ.
ನಾನು ಕೇವಲ ಇತಿಹಾಸವನ್ನು ಓದುವುದಕ್ಕಿಂತ, ಇತಿಹಾಸವನ್ನು ಬರೆಯುವುದರಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ವ್ಯಕ್ತಿ. ಟೀಕೆಗಳು ಸಾಯುತ್ತವೆ, ಆದರೆ ನಾವು ಮಾಡಿದ ಕೆಲಸಗಳು ಮಾತ್ರ ಶಾಶ್ವತವಾಗಿ ಉಳಿಯುತ್ತವೆ. ಟೀಕೆ ಮಾಡುವವರು ಮಾಡುತ್ತಲೇ ಇರಲಿ, ನಾವು ಬಲಿಷ್ಠರಾಗಿದ್ದಷ್ಟೂ ಶತ್ರುಗಳು ಹೆಚ್ಚಾಗುತ್ತಾರೆ. ನಡೆಯುವವರು ಮಾತ್ರ ಎಡವುತ್ತಾರೆ" ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.
ಬೆಂಗಳೂರಿನ ಹವಾಮಾನ ಹಾಗೂ ಮಾನವ ಸಂಪನ್ಮೂಲಕ್ಕೆ ಸಾಟಿಯಿಲ್ಲ
ಬೆಂಗಳೂರಿನ ಜಾಗತಿಕ ಪ್ರಾಮುಖ್ಯತೆಯನ್ನು ವಿವರಿಸಿದ ಅವರು, "ನಾನು ದಾವೋಸ್‌ಗೆ ಭೇಟಿ ನೀಡಿದ್ದಾಗ ಮಹಾರಾಷ್ಟ್ರದ ಮುಖ್ಯಮಂತ್ರಿಗಳು, ನಾವು ಯಾವುದೇ ಹೊಸ ಒಪ್ಪಂದಗಳಿಗೆ ಏಕೆ ಸಹಿ ಹಾಕುತ್ತಿಲ್ಲ ಎಂದು ಪ್ರಶ್ನಿಸಿದ್ದರು. ಅದಕ್ಕೆ ನಾನು, ನಮಗೆ ಅದರ ಅವಶ್ಯಕತೆಯೇ ಇಲ್ಲ, ಏಕೆಂದರೆ ಬೆಂಗಳೂರಿನಲ್ಲಿರುವ ಅದ್ಭುತ ಹವಾಮಾನ ಹಾಗೂ ಗುಣಮಟ್ಟದ ಮಾನವ ಸಂಪನ್ಮೂಲ ಪ್ರಪಂಚದ ಬೇರೆಲ್ಲೂ ಸಿಗುವುದಿಲ್ಲ ಎಂದು ಉತ್ತರಿಸಿದ್ದೆ" ಎಂದರು.
"ಸಿಲಿಕಾನ್ ಸಿಟಿ ಕ್ಯಾಲಿಫೋರ್ನಿಯಾದಲ್ಲಿ 13 ಲಕ್ಷ ಎಂಜಿನಿಯರಿಂಗ್ ವೃತ್ತಿಪರರಿದ್ದರೆ, ನಮ್ಮ ಬೆಂಗಳೂರಿನಲ್ಲಿ ಬರೋಬ್ಬರಿ 26 ಲಕ್ಷ ಎಂಜಿನಿಯರ್‌ಗಳಿದ್ದಾರೆ. ಅತಿ ಹೆಚ್ಚು ಮೆಡಿಕಲ್ ಕಾಲೇಜುಗಳನ್ನು ಹೊಂದಿರುವ ನಮ್ಮ ನಗರದಲ್ಲಿ ಪ್ರತಿ ವರ್ಷ 13 ಸಾವಿರಕ್ಕೂ ಹೆಚ್ಚು ಹೊಸ ವೈದ್ಯರು ಸೃಷ್ಟಿಯಾಗುತ್ತಿದ್ದಾರೆ ಹಾಗೂ 270 ಇಂಜಿನಿಯರಿಂಗ್ ಕಾಲೇಜುಗಳಿವೆ" ಎಂದು ಹೆಮ್ಮೆಯಿಂದ ನುಡಿದರು.
ಟ್ರಾಫಿಕ್ ಸಮಸ್ಯೆ ನಿವಾರಣೆ, ಟನಲ್ ರಸ್ತೆ ಮತ್ತು ಹಸಿರು ಬೆಂಗಳೂರು ನಿರ್ಮಾಣ
ನಗರದ ಸಂಚಾರ ದಟ್ಟಣೆ ಕುರಿತು ಮಾತನಾಡಿದ ಸಿಎಂ, "1.40 ಕೋಟಿ ಜನಸಂಖ್ಯೆ ಇರುವ ಬೆಂಗಳೂರಿನಲ್ಲಿ 1.35 ಕೋಟಿ ವಾಹನಗಳಿವೆ. ಅಂದರೆ ಸರಾಸರಿ ಒಬ್ಬ ವ್ಯಕ್ತಿಗೆ ಒಂದು ವಾಹನವಿದೆ. ಬೇರೆ ಮೆಟ್ರೋಪಾಲಿಟನ್ ನಗರಗಳಲ್ಲಿ ಶೇಕಡಾ 19ರಷ್ಟು ವಿಸ್ತೀರ್ಣದ ರಸ್ತೆಗಳಿದ್ದರೆ, ನಮ್ಮಲ್ಲಿ ಕೇವಲ ಶೇ 8ರಷ್ಟು ಮಾತ್ರ ರಸ್ತೆಗಳಿವೆ. ಹೀಗಾಗಿ ಸಹಜವಾಗಿಯೇ ಸಂಚಾರ ದಟ್ಟಣೆ ವಿಪರೀತವಾಗಿದೆ. ಬೆಂಗಳೂರು ಮೊದಲೇ ಯೋಜಿತ ನಗರವಲ್ಲ. ಹಾಗಾಗಿ ಭವಿಷ್ಯದ ವಿಸ್ತರಣೆಯ ಬಗ್ಗೆ ನಾವು ಗಂಭೀರವಾಗಿ ಆಲೋಚನೆ ಮಾಡಲೇಬೇಕು" ಎಂದರು.
"ಬೆಂಗಳೂರಿನಲ್ಲಿ ಹಸಿರು ವಿಸ್ತರಣೆಗೆ ನಾನು ಬದ್ಧನಾಗಿದ್ದೇನೆ. ಕಬ್ಬನ್ ಪಾರ್ಕ್ ಹಾಗೂ ಲಾಲ್ ಬಾಗ್ ಬಿಟ್ಟರೆ ನಗರದಲ್ಲಿ ಬೇರೆ ದೊಡ್ಡ ಉದ್ಯಾನವನಗಳೆಲ್ಲಿವೆ? ಹೀಗಾಗಿ ನಗರದ 18 ಕಿ.ಮೀ ಸುತ್ತಮುತ್ತ ಎಲ್ಲೆಲ್ಲಿ ಅರಣ್ಯ ಇಲಾಖೆಯ ಖಾಲಿ ಜಾಗವಿದೆಯೋ, ಅಲ್ಲೆಲ್ಲಾ ಹೊಸ ಪಾರ್ಕ್ ನಿರ್ಮಿಸಲು ಸೂಚನೆ ನೀಡಿದ್ದೇನೆ. ಇದಲ್ಲದೆ, ಸಂಚಾರ ದಟ್ಟಣೆ ನಿವಾರಣೆಗೆ ಟನಲ್ (ಸುರಂಗ) ರಸ್ತೆ ನಿರ್ಮಾಣಕ್ಕೆ ಮುಂದಾದಾಗಲೂ ಅನೇಕರು ಟೀಕಿಸುತ್ತಿದ್ದಾರೆ. ಹಾಗಾದರೆ ನಗರದಲ್ಲಿರುವ ಹಳೆಯ ಕಟ್ಟಡಗಳನ್ನೆಲ್ಲಾ ಒಡೆದು ಹಾಕಲು ಸಾಧ್ಯವೇ? 50 ಕಿ.ಮೀ ವರೆಗೆ ಡಬಲ್ ಡೆಕ್ಕರ್ ರಸ್ತೆ ವಿಸ್ತರಣೆ ಹಾಗೂ ಮೆಟ್ರೋ ಜಾಲ ವಿಸ್ತರಣೆಗೂ ಯೋಜನೆ ರೂಪಿಸಲಾಗಿದೆ" ಎಂದು ವಿವರಿಸಿದರು.
ಮುಂದಿನ ಐದು ವರ್ಷಗಳಲ್ಲಿ ಎಲ್ಲಾದರೂ ಸುಮಾರು 200 ಎಕರೆ ಜಾಗವನ್ನು ಪಡೆದುಕೊಂಡು ಹೊಸ ಗಾಲ್ಫ್ ಮೈದಾನ ನಿರ್ಮಿಸಿ, ಅದರ ಶಂಕುಸ್ಥಾಪನೆಗೆ ತಮ್ಮನ್ನೇ ಕರೆಯುವಂತೆ ಸವಾಲು ಹಾಕಿದ ಅವರು, "ಪಾವಗಡದಲ್ಲಿ ಸೋಲಾರ್ ಪಾರ್ಕ್ ಮಾಡಲು ಮುಂದಾದಾಗಲೂ ಜನ ನಕ್ಕಿದ್ದರು. ಆದರೆ 13 ಸಾವಿರ ಎಕರೆಯಲ್ಲಿ ಒಂದು ಎಕರೆ ರೈತರ ಜಮೀನನ್ನೂ ಸ್ವಾಧೀನಪಡಿಸಿಕೊಳ್ಳದೆ ಆ ಬೃಹತ್ ಪ್ರಾಜೆಕ್ಟ್ ಮಾಡಿ ಮುಗಿಸಿದ್ದೇವೆ" ಎಂದು ತಮ್ಮ ಸಾಧನೆಯನ್ನು ಉದಾಹರಣೆಯಾಗಿ ನೀಡಿದರು.












Click it and Unblock the Notifications