Vehicle: ಬೆಂಗಳೂರಿನಲ್ಲಿ ಬೀದಿಬದಿಯಲ್ಲಿದ್ದ 223 ವಾಹನಗಳ ಜಪ್ತಿ ಮಾಡಿದ ಜಿಬಿಎ! ಎಲ್ಲೆಲ್ಲಿ ಎಷ್ಟು ಆಗಿದೆ ?
Vehicle: ಬೆಂಗಳೂರಿನ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಐದು ಪಾಲಿಕೆಗಳ ವ್ಯಾಪ್ತಿಯಲ್ಲಿ ಬೀದಿಬದಿ ವ್ಯಾಪಾರಿಗಳ ಒತ್ತುವರಿ ತೆರವು ಕಾರ್ಯಾಚರಣೆಯ ನಂತರ ಇದೀಗ ಸುದೀರ್ಘ ಅವಧಿಯಿಂದ ಬೀದಿಬದಿಯಲ್ಲಿ ನಿಲ್ಲಿಸಿರುವ ವಾಹನಗಳನ್ನು ತೆರವು ಮಾಡಲಾಗಿದೆ. ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅವರ ನಿರ್ದೇಶನದಂತೆ ಹಾಗೂ ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರಾದ ಪೋಮ್ಮಲ ಸುನೀಲ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಸಾರ್ವಜನಿಕ ರಸ್ತೆ, ಪಾದಚಾರಿ ಮಾರ್ಗ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ದೀರ್ಘಕಾಲದಿಂದ ನಿಲ್ಲಿಸಲಾಗಿರುವ ಬೀಡಾಡಿ ವಾಹನಗಳನ್ನು ತೆರವುಗೊಳಿಸುವ ಉದ್ದೇಶದಿಂದ ಬೆಂಗಳೂರು ಉತ್ತರ ನಗರ ಪಾಲಿಕೆ (BNCC) ಹಾಗೂ ಬೆಂಗಳೂರು ಸಂಚಾರ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಯಿತು ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಕಾರ್ಯಾಚರಣೆಯಡಿ, ಗುರುತಿಸಲಾದ 223 ಬೀಡಾಡಿ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಇದುವರೆಗೆ 82 ವಾಹನಗಳಿಗೆ ನೊಟೀಸ್ / ಸ್ಟಿಕ್ಕರ್ ಅಂಟಿಸಿ, 82 ಮಹಜರ್ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. 11 ವಾಹನಗಳು ಮಹಜರ್ ವೇಳೆ ಪತ್ತೆಯಾಗಿರುವುದಿಲ್ಲ. ಉಳಿದ 130 ಮಹಜರ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಭಾಗವಾರು ವಾಹನಗಳ ಜಪ್ತಿ
ವಿದ್ಯಾರಣ್ಯಪುರ ವಿಭಾಗ - ಗುರುತಿಸಲಾದ 15 ಬೀಡಾಡಿ ವಾಹನಗಳ ವಿರುದ್ಧ ಮಹಜರ್ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ.
ಬ್ಯಾಟರಾಯನಪುರ ವಿಭಾಗ - ಗುರುತಿಸಲಾದ 15 ಬೀಡಾಡಿ ವಾಹನಗಳಲ್ಲಿ 7 ವಾಹನಗಳ ವಿರುದ್ಧ ಮಹಜರ್ ಕ್ರಮ ಪೂರ್ಣಗೊಂಡಿದ್ದು, 8 ವಾಹನಗಳು ಮಹಜರ್ ವೇಳೆ ಪತ್ತೆಯಾಗಿಲ್ಲ.
ಪುಲಿಕೇಶಿನಗರ ವಿಭಾಗ - ಗುರುತಿಸಲಾದ 59 ಬೀಡಾಡಿ ವಾಹನಗಳಲ್ಲಿ 9 ವಾಹನಗಳ ವಿರುದ್ಧ ಮಹಜರ್ ಕ್ರಮ ಪೂರ್ಣಗೊಂಡಿದ್ದು, 50 ವಾಹನಗಳ ಮಹಜರ್ ಪ್ರಗತಿಯಲ್ಲಿದೆ.
ಸರ್ವಜ್ಞನಗರ ವಿಭಾಗ - ಗುರುತಿಸಲಾದ 53 ಬೀಡಾಡಿ ವಾಹನಗಳಲ್ಲಿ 9 ವಾಹನಗಳ ವಿರುದ್ಧ ಮಹಜರ್ ಕ್ರಮ ಪೂರ್ಣಗೊಂಡಿದ್ದು, 44 ವಾಹನಗಳ ಮಹಜರ್ ಪ್ರಗತಿಯಲ್ಲಿದೆ.
ಯಲಹಂಕ ವಿಭಾಗ - ಗುರುತಿಸಲಾದ 9 ಬೀಡಾಡಿ ವಾಹನಗಳ ವಿರುದ್ಧ ಮಹಜರ್ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ.
ದಾಸರಹಳ್ಳಿ ವಿಭಾಗ - 15 ಬೀಡಾಡಿ ವಾಹನಗಳಲ್ಲಿ 4 ವಾಹನಗಳ ವಿರುದ್ಧ ಮಹಜರ್ ಕ್ರಮ ಪೂರ್ಣಗೊಂಡಿದೆ. ಯಶವಂತಪುರ ಸಂಚಾರ ಪೋಲೀಸ್ ವ್ಯಾಪ್ತಿಯ 8 ವಾಹನಗಳು ಹಾಗೂ ಚಿಕ್ಕಬಾಣಾವರ ಸಂಚಾರ ಪೋಲೀಸ್ ವ್ಯಾಪ್ತಿಯ 3 ಒಟ್ಟು 11 ವಾಹನಗಳು ಮಹಜರು ವೇಳೆ ಪತ್ತೆಯಾಗಿಲ್ಲ. ವಿಭಾಗದ ಕಾರ್ಯಾಚರಣೆ ಪೂರ್ಣಗೊಂಡಿದೆ.
ಹೆಬ್ಬಾಳ ವಿಭಾಗ - 57 ಬೀಡಾಡಿ ವಾಹನಗಳನ್ನು ಗುರುತಿಸಲಾಗಿದ್ದು, 29 ವಾಹನಗಳಿಗೆ ಸ್ಟಿಕ್ಕರಿಂಗ್ ಹಾಗೂ ಮಹಜರ್ ಪ್ರಕ್ರಿಯೆ ನಡೆಸಲಾಗಿದೆ. 28 ವಾಹನಗಳ ಮಹಜರ್ ಪ್ರಗತಿಯಲ್ಲಿದೆ.
ಸಾರ್ವಜನಿಕರು ರಸ್ತೆ ಬದಿ, ಪಾದಚಾರಿ ಮಾರ್ಗ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ದೀರ್ಘಕಾಲ ವಾಹನಗಳನ್ನು ನಿಲ್ಲಿಸದಂತೆ ಹಾಗೂ ಈ ವಿಶೇಷ ಕಾರ್ಯಾಚರಣೆಗೆ ಸಹಕರಿಸುವಂತೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ಬೆಂಗಳೂರು ಉತ್ತರ ನಗರ ಪಾಲಿಕೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.














Click it and Unblock the Notifications