GBA: ಈ ಕಾರಣಕ್ಕೆ ಬೆಂಗಳೂರಿನ ಐದು ಪಾಲಿಕೆಗಳು 1 ವರ್ಷದಲ್ಲಿ ಆರ್ಥಿಕ ದಿವಾಳಿ: ಸಿಎಂಗೆ ಪತ್ರ !
GBA: ಬೆಂಗಳೂರಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಾದ ಮೇಲೆ ಬೆಂಗಳೂರಿನ ಆರ್ಥಿಕ ವ್ಯವಸ್ಥೆ ಹದಗೆಡುತ್ತಿದ್ದು ಮುಂದಿನ ದಿನಗಳಲ್ಲಿ ಬೆಂಗಳೂರಿನ ಎಲ್ಲಾ ಪಾಲಿಕೆಗಳು ಸಹ ದಿವಾಳಿ ಆಗಲಿವೆ ಎನ್ನುವ ಮಾತು ಇದೀಗ ಕೇಳಿ ಬಂದಿದೆ. ಹೌದು ಬೆಂಗಳೂರಿನ ಆಡಳಿತವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಬದಲಾಗಿ, ಇದೀಗ ಗ್ರೇಟರ್ ಬೆಂಗಳೂರು ಪಾಲಿಕೆ ರಚನೆಯಾಗಿದೆ. ಈ ಪ್ರಾಧಿಕಾರದ ಅಡಿಯಲ್ಲಿ ಐದು ಪಾಲಿಕೆಗಳನ್ನು ರಚನೆ ಮಾಡಲಾಗಿದೆ. ಆದರೆ ಇದರಿಂದ ದಿವಾಳಿತನ ಪ್ರಾರಂಭವಾಗಲಿದೆ ಎಂದು ಹೇಳಲಾಗಿದೆ.
ಹೌದು ಬೆಂಗಳೂರಿನ ಎಲ್ಲಾ ಪಾಲಿಕೆಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದೆ ಎಂದು ಬೆಂಗಳೂರಿನ ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಅವರು ಹೇಳಿದ್ದು. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಬೆಂಗಳೂರಿನ 5 ಪಾಲಿಕೆಗಳಿಗೆ ಅವಶ್ಯಕತೆಯಿರುವ ಅಧಿಕಾರಿ / ನೌಕರರ ಸಂಖ್ಯೆ ಎಷ್ಟು ? ಅವರುಗಳಿಗೆ ಪ್ರತಿ ತಿಂಗಳೂ ಪಾವತಿಸಬೇಕಾದ ವೇತನಗಳ ಪ್ರಮಾಣವೆಷ್ಟು ಎನ್ನುವುದು ಸೇರಿದಂತೆ ಕೆಲವೊಂದು ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಒಂದೇ ವರ್ಷದಲ್ಲಿ 5 ಪಾಲಿಕೆಗಳು ದಿವಾಳಿ ಸ್ಥಿತಿಗೆ
ಇನ್ನು ಎಲ್ಲಾ ವಿಧದ ಆದಾಯದ ಮೂಲಗಳಿಂದ ಸಂಗ್ರಹವಾಗುವ ಮೊತ್ತದ ಶೇ. 60% ರಷ್ಟು ಹಣವನ್ನು ಕೇವಲ ಅಧಿಕಾರಿ / ನೌಕರರ ವೇತನ / EPF / ESI / ಪಿಂಚಿಣಿಗಳಿಗೆಂದೇ ವಿನಿಯೋಗಿಸಬೇಕಾದ ಅನಿವಾರ್ಯ ಪರಿಸ್ಥಿತಿ ಉದ್ಭವವಾಗುವುದರಿಂದ, ಅಭಿವೃದ್ಧಿ ಕಾರ್ಯಗಳು / 17 ಇಲಾಖೆಗಳಿಗೆ ಸಂಬಂಧಿಸಿದ ನಿರ್ವಹಣೆ ಕಾರ್ಯಗಳಿಗೆ ಅಗತ್ಯವಿರುವ ಅನುದಾನಗಳನ್ನು ಕ್ರೋಢೀಕರಿಸಲು ಸಾಧ್ಯವಾಗದೇ ಕೇವಲ ಒಂದೇ ವರ್ಷದಲ್ಲಿ ಬೆಂಗಳೂರಿನ 5 ಪಾಲಿಕೆಗಳು ಆರ್ಥಿಕ ಅವನತಿಗೆ ತಲುಪಿ ದಿವಾಳಿಯಾಗುತ್ತದೆ ಎಂದು ಅವರು ಹೇಳಿದ್ದಾರೆ.
ಪೂರ್ವಾಪರ ಯೋಚಿಸದೆಯೇ ಸಿದ್ದರಾಮಯ್ಯನವರ ಕಾಂಗ್ರೆಸ್ ಪಕ್ಷದ ಸರ್ಕಾರ ತಮ್ಮ ಸ್ವಾರ್ಥಕ್ಕಾಗಿ ಮತ್ತು ಅವರ ಪಕ್ಷದ ಸ್ವಹಿತಾಸಕ್ತಿಗಾಗಿ ಅಖಂಡ ಬೆಂಗಳೂರು ಮಹಾನಗರವನ್ನು 5 ತುಂಡು ತುಂಡುಗಳಾಗಿ ವಿಭಜಿಸಿರುವುದರಿಂದಾಗಿ ಹಾಗೂ ಈ ಹಿಂದಿನ 198 ವಾರ್ಡುಗಳನ್ನು ಪುರಸಭೆ / ಪಟ್ಟಣ ಪಂಚಾಯಿತಿಗಳಿಗಿಂತಲೂ ಸಣ್ಣ ಪ್ರಮಾಣದ 369 ವಾರ್ಡುಗಳನ್ನಾಗಿ ವಿಂಗಡಿಸಿರುವುದರಿಂದಾಗಿ - ದೇಶದ ಮಾಹಿತಿ ತಂತ್ರಜ್ಞಾನದ ರಾಜಧಾನಿ ಬೆಂಗಳೂರು ಮಹಾನಗರದ 5 ಪಾಲಿಕೆಗಳು ಎಲ್ಲಾ ರೀತಿಯಿಂದಲೂ ದಿವಾಳಿಯ ಅಂಚಿನತ್ತ ಸಾಗಿ ವಿಶ್ವದ ಮುಂದೆ ನಗೆಪಾಟಲಿಗೀಡಾಗುವ ಪರಿಸ್ಥಿತಿಗೆ ನಾಡಪ್ರಭು ಕೆಂಪೇಗೌಡರಿಂದ ನಿರ್ಮಿಸಲ್ಪಟ್ಟಿರುವ ಬೆಂಗಳೂರು ಮಹಾನಗರವನ್ನು ದೂಡಿರುವ ಸಿದ್ದರಾಮಯ್ಯನವರ ಸರ್ಕಾರವನ್ನು / ಕಾಂಗ್ರೆಸ್ ಪಕ್ಷವನ್ನು ಕನ್ನಡಿಗರು ಎಂದೆಂದಿಗೂ ಕ್ಷಮಿಸಲಾರರು ಎಂಬ ಮಹಾಸತ್ಯವನ್ನು ಪತ್ರ ಮುಖೇನ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧ್ಯಕ್ಷರಾದ ಸಿದ್ದರಾಮಯ್ಯನವರಿಗೆ ತಿಳಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಭಿವೃದ್ಧಿ ಕೆಲಸಗಳಿಗೆ ಹಣ ಉಳಿಯುವುದಿಲ್ಲ
ಇನ್ನು ಬೆಂಗಳೂರಿನಲ್ಲಿ ಐದು ಪಾಲಿಕೆಗಳ ರಚನೆಯಿಂದಾಗಿ ಬೆಂಗಳೂರಿನ ಅಭಿವೃದ್ಧಿಗೆ ಆದಾಯ ಸಾಕಾಗುವುದಿಲ್ಲ ಎನ್ನುವ ಮಾತು ಕೇಳಿ ಬಂದಿದೆ. ಅಭಿವೃದ್ಧಿ ಕಾರ್ಯಗಳಿಗೆಂದು ನಯಾ ಪೈಸೆಯೂ ಉಳಿಯುವುದಿಲ್ಲ ಎಂದು ಎನ್.ಆರ್ ರಮೇಶ್ ಅವರು ಹೇಳಿದ್ದಾರೆ. 5 ಪಾಲಿಕೆಗಳ ಎಲ್ಲಾ ಆದಾಯ ಮೂಲಗಳಿಂದ ಪ್ರತಿ ವರ್ಷವೊಂದಕ್ಕೆ ಲಭಿಸುವ ಆದಾಯದ ಮೊತ್ತ 5,850 ಕೋಟಿ ರೂಪಾಯಿ ಗಳಾದರೆ, ಮೇಲೆ ತಿಳಿಸಿರುವ ಎಲ್ಲಾ ಕಾರ್ಯಗಳಿಗೆ ಪ್ರತೀ ವರ್ಷವೊಂದಕ್ಕೆ ಕನಿಷ್ಠ 6,300 ಕೋಟಿ ರೂ. ಗಳಷ್ಟಾಗುತ್ತದೆ.
ಬೆಂಗಳೂರು ಮಹಾನಗರದ ವ್ಯಾಪ್ತಿಯಲ್ಲಿರುವ:- 1) 1,980 ಕಿ. ಮೀ. ಉದ್ದದ Arterial ಮತ್ತು Sub - Arterial ರಸ್ತೆಗಳು, ಸುಮಾರು 13,400 ಕಿ. ಮೀ. ಉದ್ದದ ವಾರ್ಡ್ ಮಟ್ಟದ ರಸ್ತೆಗಳ ಅಭಿವೃದ್ಧಿ ಕಾರ್ಯಗಳು, 2) 842 ಕಿ. ಮೀ. ಉದ್ದದ ಬೃಹತ್ ನೀರುಗಾಲುವೆಯ ಅಭಿವೃದ್ಧಿ ಕಾರ್ಯಗಳು ಮತ್ತು ಹೂಳೆತ್ತುವ ಕಾರ್ಯಗಳು, 3) 183 ಕೆರೆಗಳ ಅಭಿವೃದ್ಧಿ / ನಿರ್ವಹಣೆ ಕಾರ್ಯಗಳು, 4) 26 ಹೆರಿಗೆ ಆಸ್ಪತ್ರೆಗಳು / 06 ರೆಫರಲ್ ಆಸ್ಪತ್ರೆಗಳು ಮತ್ತು 144 ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ವಹಣೆ ಕಾರ್ಯಗಳು, 5) ನಗರ ಅರಣ್ಯೀಕರಣ ಕಾರ್ಯಗಳು, ಮರಗಳ ತೆರವುಗೊಳಿಸುವಿಕೆ / ರೆಂಬೆಗಳನ್ನು ಕತ್ತರಿಸುವ ಕಾರ್ಯಗಳು ಹಾಗೂ 6) ಪಶುಸಂಗೋಪನೆ ಇಲಾಖೆಯ ನಿರ್ವಹಣೆ ಮತ್ತು ಬೀದಿ ನಾಯಿಗಳ ಸಂತಾನ ಹರಣ ಶಸ್ತ್ರಚಿಕಿತ್ಸೆ ಕಾರ್ಯಗಳಿಗೆಂದು ಪ್ರತೀ ವರ್ಷವೊಂದಕ್ಕೆ ಕನಿಷ್ಠ ₹. 6,000 ಕೋಟಿ ರೂ. ಗಳಷ್ಟು ಅನಿವಾರ್ಯ ಅವಶ್ಯಕತೆ ಇರುತ್ತದೆ ಎಂದು ಅವರು ವಿವರಿಸಿದ್ದಾರೆ.
ಇನ್ನು ಹೆಚ್ಚು ಆರ್ಥಿಕ ಹೊರೆಯಿಂದ ಗ್ರೇಟರ್ ಬೆಂಗಳೂರು ಆಡಳಿತವು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.












Click it and Unblock the Notifications