ರೈಲ್ವೆ ಬಡ್ತಿ ಪರೀಕ್ಷೆಗೆ ದಿನಾಂಕ ಮರುನಿಗದಿ; ಕನ್ನಡ ಕಡೆಗಣಿಸಿದ ಇಲಾಖೆ, ಮತ್ತೆ ಎಕ್ಸಾಂ ತಡೆಯುತ್ತೇವೆ ಎಂದ ಕರವೇ
ಬೆಂಗಳೂರು: ನೈಋತ್ಯ ರೈಲ್ವೆ ಇಲಾಖೆಯು ಕನ್ನಡಿಗರ ಮೇಲಿನ ತನ್ನ ಹಠತನವನ್ನು ಮುಂದುವರೆಸಿದೆ. ರೈಲ್ವೆ ಇಲಾಖೆಯಲ್ಲಿನ ವಿವಿಧ ಹುದ್ದೆಗಳ ಪದೋನ್ನತಿ ಅಂದರೆ ಪ್ರಮೋಷನ್ ಪರೀಕ್ಷೆಯಲ್ಲಿ ಮತ್ತೊಮ್ಮೆ ಕನ್ನಡ ಭಾಷೆಯನ್ನು ಕಡೆಗಣಿಸಿರುವುದು ಕನ್ನಡಿಗರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಜೂನ್ 25ರಂದು ನಡೆಯಲಿರುವ ಈ ರೈಲ್ವೆ ಬಡ್ತಿ ಪರೀಕ್ಷೆಯನ್ನು ಕೇವಲ ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಮಾತ್ರ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಇದನ್ನು ತೀವ್ರವಾಗಿ ಖಂಡಿಸಿರುವ ಕರ್ನಾಟಕ ರಕ್ಷಣಾ ವೇದಿಕೆ (ಕರವೇ), ಪರೀಕ್ಷೆಯಲ್ಲಿ ಕನ್ನಡಕ್ಕೆ ಅವಕಾಶ ನೀಡದಿದ್ದರೆ ಅಂದು ಪರೀಕ್ಷೆ ನಡೆಯಲು ಬಿಡುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದೆ.
ಮತ್ತೆ ಕನ್ನಡ ಕಡೆಗಣಿಸಿದ ರೈಲ್ವೆ ಇಲಾಖೆ
ಈ ಹಿಂದೆಯೂ ರೈಲ್ವೆ ಇಲಾಖೆ ಬಡ್ತಿ ಪರೀಕ್ಷೆಗಳಲ್ಲಿ ಕೇವಲ ಹಿಂದಿ ಮತ್ತು ಇಂಗ್ಲೀಷ್ ಭಾಷೆಗೆ ಮಾತ್ರ ಅವಕಾಶ ನೀಡಿತ್ತು. ಆಗ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡದಿದ್ದನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ತೀವ್ರ ಪ್ರತಿಭಟನೆ ನಡೆಸಿದ್ದವು. ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿಯ ಪರೀಕ್ಷಾ ಕೇಂದ್ರಗಳಿಗೆ ಕರವೇ ಕಾರ್ಯಕರ್ತರು ನುಗ್ಗಿ ಆಕ್ರೋಶ ವ್ಯಕ್ತಪಡಿಸಿದಾಗ, ಅನಿವಾರ್ಯವಾಗಿ ರೈಲ್ವೆ ಇಲಾಖೆ ಪರೀಕ್ಷೆಯನ್ನು ದಿಢೀರ್ ರದ್ದುಗೊಳಿಸಿತ್ತು. ಆದರೆ, ಇದೀಗ ತಮ್ಮ ತಪ್ಪನ್ನು ತಿದ್ದಿಕೊಳ್ಳದ ಇಲಾಖೆ, ಮತ್ತೊಮ್ಮೆ ಕನ್ನಡಕ್ಕೆ ಕೊಕ್ ನೀಡಿ ಇದೇ ಜೂನ್ 25ರಂದು ಮರುದಿನಾಂಕ ನಿಗದಿಪಡಿಸಿದೆ. ಈ ಬಾರಿಯೂ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿಲ್ಲ.

ಒಟ್ಟು 73 ಹುದ್ದೆಗಳಿಗೆ ಪರೀಕ್ಷೆ
ನೈಋತ್ಯ ರೈಲ್ವೆಯಲ್ಲಿ ಒಟ್ಟು 73 ಬಡ್ತಿ ಹುದ್ದೆಗಳಿಗಾಗಿ ಈ ಎಕ್ಸಾಂ ನಡೆಯುತ್ತಿದೆ. ಇದರಲ್ಲಿ ಆಫೀಸ್ ಸೂಪರಿಂಟೆಂಡೆಂಟ್ (39 ಹುದ್ದೆಗಳು), ಸೀನಿಯರ್ ಕ್ಲರ್ಕ್ (25 ಹುದ್ದೆಗಳು) ಮತ್ತು ಇಂಟರ್ಮೀಡಿಯೆಟ್ ಅಪ್ರೆಂಟಿಸ್ ಮೆಕ್ಯಾನಿಕ್ಸ್ (9 ಹುದ್ದೆಗಳು) ಸೇರಿವೆ. ಇದರ ಜೊತೆಗೆ ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಜೂನ್ 4ರಂದು ಹೊರಡಿಸಿರುವ ಪ್ರತ್ಯೇಕ ಅಧಿಸೂಚನೆಯಂತೆ, ಲೆವೆಲ್-5ರ ಗೂಡ್ಸ್ ಟ್ರೇನ್ ಮ್ಯಾನೇಜರ್ ಹುದ್ದೆಗಳನ್ನು ಶೇ.15 ಎಲ್‌ಡಿಸಿಇ ಕೋಟಾದಡಿ ಭರ್ತಿ ಮಾಡಲು ಜೂನ್ 25ರಂದು ಸಿಬಿಟಿ (ಕಂಪ್ಯೂಟರ್ ಬೇಸ್ಡ್ ಟೆಸ್ಟ್) ಪರೀಕ್ಷೆ ನಡೆಯಲಿದೆ. ಇಷ್ಟೆಲ್ಲಾ ಹುದ್ದೆಗಳಿಗೆ ನಡೆಯುವ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ಕೇವಲ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರ ಸಿದ್ಧಪಡಿಸುತ್ತಿರುವುದು ಸ್ಥಳೀಯ ನೌಕರರ ಅಸಮಾಧಾನಕ್ಕೆ ಕಾರಣವಾಗಿದೆ.
ಟಿ.ಎ. ನಾರಾಯಣಗೌಡ ಖಡಕ್ ಎಚ್ಚರಿಕೆ
ರೈಲ್ವೆ ಇಲಾಖೆಯ ಈ ನಡೆಗೆ ಕರವೇ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣಗೌಡ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ನೈಋತ್ಯ ರೈಲ್ವೆ ಮುಖ್ಯಸ್ಥರು ಈ ಮೂರು ಸುತ್ತೋಲೆಗಳ ದೋಷವನ್ನು ಕೂಡಲೇ ಸರಿಪಡಿಸಬೇಕು. ಪರೀಕ್ಷೆಗಳನ್ನು ಕನ್ನಡದಲ್ಲೂ ನಡೆಸುವಂತೆ ಹೊಸ ಆದೇಶ ಹೊರಡಿಸಬೇಕು. ಇಲ್ಲವಾದಲ್ಲಿ, ಜೂನ್ 25ರಂದು ನಿಗದಿಯಾಗಿರುವ ಪರೀಕ್ಷೆಯನ್ನು ಯಾವುದೇ ಕಾರಣಕ್ಕೂ ನಡೆಸಲು ಬಿಡುವುದಿಲ್ಲ" ಎಂದು ಆಗ್ರಹಿಸಿದ್ದಾರೆ.
ಕನ್ನಡಿಗರ ಹಕ್ಕುಗಳನ್ನು ಹೊಸಕಿ ಹಾಕುವ ರೈಲ್ವೆ ಇಲಾಖೆಯ ಈ ನಿರ್ಧಾರವು ಕರ್ನಾಟಕದ ಕನ್ನಡಿಗರ ಮೇಲೆ ನಡೆಸುತ್ತಿರುವ ಘೋರ ಅನ್ಯಾಯ ಹಾಗೂ ಭಾಷಾ ಹಕ್ಕುಗಳನ್ನು ಕಿತ್ತುಕೊಳ್ಳುವ ದೊಡ್ಡ ಸಂಚಾಗಿದೆ ಎಂದು ನಾರಾಯಣಗೌಡ ಕಿಡಿಕಾರಿದ್ದಾರೆ. "ಜೂನ್ 25ರಂದು ಬೆಂಗಳೂರು, ಮೈಸೂರು, ಹುಬ್ಬಳ್ಳಿ ಸೇರಿದಂತೆ ರಾಜ್ಯದ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಂಘಟನೆಯ ಕಾರ್ಯಕರ್ತರು ಉಗ್ರ ಹೋರಾಟ ನಡೆಸಲಿದ್ದಾರೆ. ಅಲ್ಲಿ ನಡೆಯುವ ಅನಾಹುತಗಳಿಗೆ ಕರವೇ ಜವಾಬ್ದಾರಿಯಲ್ಲ. ರೈಲ್ವೆ ಆಡಳಿತವು ಈ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸದಿದ್ದರೆ, ಮುಂದಾಗುವ ಪರಿಣಾಮಗಳು ತೀವ್ರವಾಗಿರುತ್ತವೆ" ಎಂದು ಪತ್ರಿಕಾ ಹೇಳಿಕೆಯ ಮೂಲಕ ರೈಲ್ವೆ ಇಲಾಖೆಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.












Click it and Unblock the Notifications