ಅಮೆರಿಕದ ಒಳಚರಂಡಿ ವ್ಯವಸ್ಥೆಗೆ ಭಾರತೀಯ ಮಹಿಳೆ ಫಿದಾ: ನಮ್ಮ ದೇಶದಲ್ಲಿ ಹೀಗೇಕಿಲ್ಲ ಎಂದ ನೆಟ್ಟಿಗರು
ಮಳೆಗಾಲ ಬಂತೆಂದರೆ ಸಾಕು ಭಾರತದ ಬಹುತೇಕ ಮಹಾನಗರಗಳಲ್ಲಿ ರಸ್ತೆಗಳು ಹೊಳೆಯಾಗುತ್ತವೆ. ಟ್ರಾಫಿಕ್ ಜಾಮ್, ಜಲಾವೃತ ರಸ್ತೆಗಳು ಹಾಗೂ ಗುಂಡಿ ಬಿದ್ದ ಹಾದಿಗಳು ಜನಸಾಮಾನ್ಯರ ದೈನಂದಿನ ಬದುಕನ್ನೇ ಹೈರಾಣಾಗಿಸುತ್ತವೆ. ಆದರೆ, ಅಮೆರಿಕದಲ್ಲಿ ಎಷ್ಟೇ ಜೋರು ಮಳೆ ಬಂದರೂ ರಸ್ತೆಗಳಲ್ಲಿ ಒಂದು ಹನಿಯೂ ನೀರು ನಿಲ್ಲುವುದಿಲ್ಲ! ಇದಕ್ಕೆ ಕಾರಣವೇನು? ಈ ಪ್ರಶ್ನೆಗೆ ಅಮೆರಿಕದ ಚಿಕಾಗೋದಲ್ಲಿ ನೆಲೆಸಿರುವ ಭಾರತೀಯ ಮಹಿಳೆಯೊಬ್ಬರು ಉತ್ತರ ನೀಡಿದ್ದು, ಅವರು ಹಂಚಿಕೊಂಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಗುಂಜನ್ ಡಿಯೋರಾ ಎಂಬವರು ಇನ್‌ಸ್ಟಾಗ್ರಾಮ್‌ನಲ್ಲಿ ಈ ಕುರಿತು ವಿಡಿಯೋ ಹಂಚಿಕೊಂಡಿದ್ದಾರೆ. ಭಾರತ ಹಾಗೂ ಅಮೆರಿಕ ಒಳಚರಂಡಿ ವ್ಯವಸ್ಥೆಯ ನಡುವಿನ ವ್ಯತ್ಯಾಸವನ್ನು ಅವರು ಬಹಳ ಸರಳವಾಗಿ ವಿವರಿಸಿದ್ದಾರೆ. "ಅಮೆರಿಕದಲ್ಲಿ ಎಷ್ಟೇ ಭಾರಿ ಮಳೆಯಾದರೂ ಕೆಲವೇ ನಿಮಿಷಗಳಲ್ಲಿ ರಸ್ತೆಯಲ್ಲಿನ ನೀರು ಸಂಪೂರ್ಣವಾಗಿ ಮಾಯವಾಗುತ್ತದೆ. ರಸ್ತೆಗಳು ಸ್ವಚ್ಛವಾಗಿರುತ್ತವೆ ಮತ್ತು ಎಲ್ಲಿಯೂ ನೀರು ನಿಲ್ಲುವುದಿಲ್ಲ. ಇದಕ್ಕೆ ಕಾರಣ ಅಮೆರಿಕದ ಅತ್ಯಧುನಿಕ ಒಳಚರಂಡಿ ವ್ಯವಸ್ಥೆ," ಎಂದು ಅವರು ಶ್ಲಾಘಿಸಿದ್ದಾರೆ.

ಹೇಗಿದೆ ಅಮೆರಿಕದ ಒಳಚರಂಡಿ ವ್ಯವಸ್ಥೆ?
ಗುಂಜನ್ ಅವರು ವಿವರಿಸುವಂತೆ, ಅಮೆರಿಕದಲ್ಲಿ ರಸ್ತೆಗಳನ್ನು ನಿರ್ಮಿಸುವಾಗಲೇ ಸ್ವಲ್ಪ ಇಳಿಜಾರಾಗಿ ನಿರ್ಮಿಸಲಾಗುತ್ತದೆ. ಪ್ರತಿ ಸ್ವಲ್ಪ ದೂರಕ್ಕೂ ಡ್ರೈನ್‌ಗಳನ್ನು ಅಳವಡಿಸಲಾಗಿರುತ್ತದೆ. ಇದರಿಂದಾಗಿ ರಸ್ತೆಯ ಮೇಲೆ ಬೀಳುವ ನೀರು ಎಲ್ಲಿಯೂ ನಿಲ್ಲದೆ, ತಕ್ಷಣವೇ ಹರಿದು ಹೋಗುತ್ತದೆ. ಅಮೆರಿಕದಲ್ಲಿರುವ ಈ ಒಳಚರಂಡಿ ವ್ಯವಸ್ಥೆ ಮಳೆಗಾಲದಲ್ಲಿ ವಾಹನ ಸವಾರರಿಗೆ ಮತ್ತು ಪಾದಚಾರಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುತ್ತದೆ.
ಅಮೆರಿಕದಲ್ಲಿ ಮಳೆನೀರು ನಿರ್ವಹಣೆಗೆ ಕೇವಲ ರಸ್ತೆಗಳಲ್ಲಿ ಮಾತ್ರವಲ್ಲ, ಮನೆಗಳಲ್ಲೂ ಕೂಡ ವ್ಯವಸ್ಥಿತ ಕ್ರಮಗಳನ್ನು ತೆಗೆಉಕೊಂಡಿರುತ್ತಾರೆ. ಮೇಲ್ಛಾವಣಿಯ ಮೇಲೆ ಬೀಳುವ ಮಳೆನೀರನ್ನು ಸಂಗ್ರಹಿಸಲು ಪೈಪ್‌ಗಳನ್ನು ಅಳವಡಿಸಲಾಗಿರುತ್ತದೆ. ಕೆಲವು ಮನೆಗಳಲ್ಲಿ ಈ ಪೈಪ್‌ಗಳನ್ನು ನೇರವಾಗಿ ಚರಂಡಿಗೆ ಸಂಪರ್ಕಿಸಿದರೆ, ಇನ್ನು ಕೆಲವು ಕಡೆ ರಸ್ತೆಗೆ ಬಿಡಲಾಗುತ್ತದೆ. ಆ ನೀರು ರಸ್ತೆಯ ಇಳಿಜಾರಿನ ಮೂಲಕ ಹರಿದು ದೊಡ್ಡ ಚರಂಡಿಗಳನ್ನು ಸೇರುತ್ತದೆ ಎಂದು ಡಿಯೋರಾ ಹೇಳಿದ್ದಾರೆ.
ರಸ್ತೆಯ ಬದಿಗಳಲ್ಲಿರುವ ಲೋಹದ ಕವರ್‌ಗಳನ್ನು 'ಫ್ಲಡ್ ಡ್ರೈನ್' ಎಂದು ಕರೆಯಲಾಗುತ್ತದೆ, ಇವು ಮೇಲ್ಮೈ ನೀರನ್ನು ಸಂಗ್ರಹಿಸಿ ತ್ವರಿತವಾಗಿ ಚರಂಡಿಗಳ ಮೂಲಕ ಸಾಗಿಸುತ್ತವೆ.
ಮಳೆನೀರು ಮತ್ತು ಕೊಳಚೆ ನೀರಿಗೆ ಪ್ರತ್ಯೇಕ ವ್ಯವಸ್ಥೆ
ಭಾರತದಲ್ಲಿ ಬಹುತೇಕ ಕಡೆ ಮಳೆನೀರು ಮತ್ತು ಕೊಳಚೆ ನೀರು ಒಂದೇ ಚರಂಡಿಯಲ್ಲಿ ಹರಿಯುವುದನ್ನು ನಾವು ನೋಡುತ್ತೇವೆ. ಆದರೆ ಅಮೆರಿಕದಲ್ಲಿ ಇವೆರಡಕ್ಕೂ ಪ್ರತ್ಯೇಕವಾದ ವ್ಯವಸ್ಥೆ ಇದೆ. ಮಳೆನೀರು ಸಾಗಲು ಒಂದು ಪೈಪ್, ಕೊಳಚೆ ನೀರಿಗೆ ಮತ್ತೊಂದು ಪೈಪ್ ಇರುತ್ತದೆ.
ವಿಶೇಷವೆಂದರೆ, ಮಳೆನೀರು ವ್ಯರ್ಥವಾಗುವುದಿಲ್ಲ; ಅದು ನೇರವಾಗಿ ನದಿಗಳು ಮತ್ತು ಸರೋವರಗಳಿಗೆ ಸೇರುತ್ತದೆ. ಇದೊಂದು ಅತ್ಯಂತ ಪರಿಣಾಮಕಾರಿ ಕ್ರಮವಾಗಿದೆ. ಹೀಗಾಗಿಯೇ ಅಮೆರಿಕದಲ್ಲಿ ಮಳೆ ನಿಂತ ತಕ್ಷಣ ರಸ್ತೆಗಳು ಮತ್ತು ಮನೆಗಳ ಸುತ್ತಮುತ್ತಲ ಪ್ರದೇಶ ಒಣಗುತ್ತದೆ ಎಂದು ಅವರು ಹೇಳಿದ್ದಾರೆ.
ಭಾರತದಲ್ಲಿನ ಜಲಾವೃತ ಸಮಸ್ಯೆ: ನೆಟ್ಟಿಗರ ಬೇಸರ
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸಾವಿರಾರು ನೆಟ್ಟಿಗರು ತಮ್ಮದೇ ಆದ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. "ಇದು ನಿಜಕ್ಕೂ ಬಹಳ ಅದ್ಭುತವಾದ ವ್ಯವಸ್ಥೆ, ಭಾರತ ಕೂಡ ಇಂತಹ ತಂತ್ರಜ್ಞಾನವನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು," ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ಪ್ರತಿಕ್ರಿಯಿಸಿ, "ನಮ್ಮ ಇಂಜಿನಿಯರ್‌ಗಳಿಗೂ ಇಂತಹ ಮೂಲಸೌಕರ್ಯ ನಿರ್ಮಿಸುವ ಪ್ರತಿಭೆ ಮತ್ತು ಅಗಾಧವಾದ ಪರಿಣಿತಿ ಇದೆ. ಆದರೆ ನಮ್ಮಲ್ಲಿನ ಭ್ರಷ್ಟಾಚಾರ ಮತ್ತು ಲಂಚಗುಳಿತನದಿಂದಾಗಿ ಇಂತಹ ಅತ್ಯುತ್ತಮ ಯೋಜನೆಗಳು ಕೇವಲ ಕಾಗದದಲ್ಲಿ ಮಾತ್ರ ಉಳಿಯುತ್ತವೆ, ಸರಿಯಾಗಿ ಅನುಷ್ಠಾನಗೊಳ್ಳುತ್ತಿಲ್ಲ," ಎಂದು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಜೊತೆಗೆ, ಭಾರತದ ಮಹಾನಗರಗಳಾದ ಬೆಂಗಳೂರು, ಮುಂಬೈ, ದೆಹಲಿಯಂತಹ ನಗರಗಳಲ್ಲಿ ಮಳೆಗಾಲದಲ್ಲಿ ಉಂಟಾಗುವ ಪ್ರವಾಹದ ಪರಿಸ್ಥಿತಿಯನ್ನು ಹಲವರು ನೆನಪಿಸಿಕೊಂಡಿದ್ದಾರೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿದರೂ ನಮ್ಮಲ್ಲಿ ಸ್ವಲ್ಪ ಮಳೆಗೇ ರಸ್ತೆಗಳಲ್ಲಿ ದೋಣಿ ಓಡಿಸುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಟೀಕಿಸಿದ್ದಾರೆ.
ಅಮೆರಿಕದ ಈ ವ್ಯವಸ್ಥೆಯನ್ನು ನೋಡಿಯಾದರೂ ನಮ್ಮ ಆಡಳಿತ ವ್ಯವಸ್ಥೆ ಎಚ್ಚೆತ್ತುಕೊಂಡು, ಮಳೆನೀರು ಕೊಯ್ಲು ಹಾಗೂ ಒಳಚರಂಡಿ ನಿರ್ವಹಣೆಯಲ್ಲಿ ಹೊಸ ಬದಲಾವಣೆಗಳನ್ನು ತರಬೇಕಿದೆ ಎಂಬುದು ಜನರ ಆಶಯವಾಗಿದೆ. ಒಟ್ಟಿನಲ್ಲಿ, ಈ ಒಂದು ವಿಡಿಯೋ ಭಾರತದ ಮೂಲಸೌಕರ್ಯ ಅಭಿವೃದ್ಧಿಯ ಬಗ್ಗೆ ಗಂಭೀರವಾಗಿ ಚಿಂತಿಸುವಂತೆ ಮಾಡಿದೆ ಎಂಬುದರಲ್ಲಿ ಎರಡು ಮಾತಿಲ್ಲ.














Click it and Unblock the Notifications