ಮಗುವಿನ ಹೈಟ್ ಜಾಸ್ತಿಯಾಗುತ್ತೆ ಅಂತ ಬಾಗಿಲಿಗೆ ತೋರಣದಂತೆ ನೇತಾಕಿದ ಪೋಷಕರು; ನೀವು ನರರಾಕ್ಷಸರು ಎಂದ ನೆಟ್ಟಿಗರು
ಮೊದಲೆಲ್ಲ ಮಕ್ಕಳು ಎತ್ತರವಾಗಿ ಬೆಳೀಬೇಕು ಅಂದ್ರೆ ಕಾಂಪ್ಲ್ಯಾನ್ ಕುಡಿಸಿ ಎಂದು ಪೋಷಕರಿಗೆ ಬಿಟ್ಟಿ ಸಲಹೆ ಕೊಡ್ತಿದ್ರು. ಆದರೆ ಈಗ ಮಗುವಿನ ಎತ್ತರ ಹೆಚ್ಚಿಸಬೇಕೆಂಬ ಹುಚ್ಚು ಹಠಕ್ಕೆ ಬಿದ್ದ ಹೆತ್ತವರೇ ಮಗುವಿಗೆ ಅಮಾನವೀಯವಾಗಿ ಚಿತ್ರಹಿಂಸೆ ನೀಡಿದ್ದಾರೆ. ಇಂತಹ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಸದ್ಯ ವೈರಲ್ ಆಗಿರುವ ಈ ವಿಡಿಯೋ ನೋಡಿ, ಹೆತ್ತವರ ಈ ಮೃಗೀಯ ವರ್ತನೆಗೆ ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ಇಷ್ಟಕ್ಕೂ ಮಗು ಎತ್ತರಕ್ಕೆ ಬೆಳೆಯಲಿ ಅಂತ ಪೋಷಕರು ಮಾಡಿದ್ದೇನು ಗೊತ್ತಾ?
ಇಂದಿನ ಕೆಲವು ಪೋಷಕರಿಗೆ ಮಗು ಸಮಾಜದ ಕಣ್ಣಿಗೆ ಹೇಗೆ ಕಾಣುತ್ತೆ ಅನ್ನೋದು ಮುಖ್ಯವಾಗಿಬಿಟ್ಟಿದೆ. ನನ್ನ ಮಗು ಬೆಳ್ಳಗಾಗಬೇಕು, ದಪ್ಪಗಾಗಬೇಕು ಅಥವಾ ಎತ್ತರವಾಗಬೇಕು ಅನ್ನೋ ಹುಚ್ಚು ಹಠಕ್ಕೆ ಬಿದ್ದು ಹೆತ್ತವರೇ ಮಕ್ಕಳಿಗೆ ಹಿಂಸೆ ನೀಡುವ ಘಟನೆಗಳು ಹೆಚ್ಚಾಗುತ್ತಿವೆ. ಇದೀಗ ತನ್ನ ಮಗ ಗಿಡ್ಡಗಿದ್ದಾನೆ ಎಂಬ ಒಂದೇ ಒಂದು ಕಾರಣಕ್ಕೆ, ಆತನ ಹೈಟ್ ಹೆಚ್ಚಿಸಲು ಹೆತ್ತ ತಂದೆ-ತಾಯಿಯೇ ಮಗುವನ್ನು ನೇಣುಗಂಬಕ್ಕೆ ಹಾಕುವಂತೆ ಬಾಗಿಲಿನ ಫ್ರೇಮ್‌ಗೆ ಕಟ್ಟಿ ತೂಗುಹಾಕಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಗುವಿನ ಕಿರುಚಾಟಕ್ಕೆ ಕರಗದ ಹೆತ್ತವರ ಕ್ರೌರ್ಯದ ವಿಡಿಯೋ ನೋಡಿ ಇಡೀ ಇಂಟರ್ನೆಟ್ ಲೋಕವೇ ಶಾಕ್ ಆಗಿದೆ.

ಬಾಗಿಲಿನ ಫ್ರೇಮ್‌ಗೆ ಮಗುವನ್ನು ಕಟ್ಟಿ ತೂಗುಹಾಕಿದ ಪೋಷಕರು
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ, ಪುಟ್ಟ ಮಗುವೊಂದರ ಕೈಗಳನ್ನು ಬಾಗಿಲಿನ ಮೇಲ್ಭಾಗದ ಫ್ರೇಮ್‌ಗೆ ಕಟ್ಟಿ ಮೇಲಕ್ಕೆ ತೂಗುಹಾಕಲಾಗಿದೆ. ಮಗು ನೋವಿನಿಂದ ಅಳುತ್ತಿದ್ದರೂ ಹೆತ್ತವರು ಮಾತ್ರ ಅದ್ಯಾವುದನ್ನೂ ಕೇರ್ ಮಾಡದೆ ಕ್ರೂರವಾಗಿ ನಿಂತಿದ್ದಾರೆ. ಮಗುವಿನ ಕಿರುಚಾಟ ಕೇಳಿ ಓಡಿಬಂದ ಪಕ್ಕದ ಮನೆಯ ಮಹಿಳೆ, ಈ ಇಡೀ ಘಟನೆಯನ್ನು ತನ್ನ ಮೊಬೈಲ್‌ನಲ್ಲಿ ಸೆರೆಹಿಡಿದು ಹೆತ್ತವರನ್ನು ತರಾಟೆಗೆ ತಗೆದುಕೊಂಡಿದ್ದಾರೆ.
'ಇದು ನಮ್ಮ ಪರ್ಸನಲ್ ಮ್ಯಾಟರ್' ಎಂದ ತಾಯಿ
ವಿಡಿಯೋ ರೆಕಾರ್ಡ್ ಮಾಡುತ್ತಾ ಪ್ರಶ್ನಿಸಿದ ನೆರೆಹೊರೆಯ ಮಹಿಳೆ, "ಮಗುವಿಗೆ ಈ ರೀತಿ ಟಾರ್ಚರ್ ಕೊಡ್ತಾರಾ? ಕೆಳಗಿನ ಮಹಡಿವರೆಗೂ ಮಗುವಿನ ಕಿರುಚಾಟ ಕೇಳಿಸುತ್ತಿದೆ. ಮಗುವನ್ನು ನೋಡುತ್ತಿದ್ದರೆ ನನ್ನ ಎದೆ ಒಡೆದುಹೋದಂತಾಗುತ್ತಿದೆ" ಎಂದು ಆಕ್ರೋಶ ಹೊರಹಾಕಿದ್ದಾರೆ. ಜೊತೆಗೆ ಮಗುವಿಗೆ ತಂದೆ ಹೊಡೆಯುತ್ತಿದ್ದಾನೆ ಎಂದೂ ಅವರು ಆರೋಪಿಸಿದ್ದಾರೆ. ಆದರೆ ಇದಕ್ಕೆ ಕ್ಯಾರೇ ಮಾಡದ ಮಗುವಿನ ತಾಯಿ, "ಇಲ್ಲಿ ಏನು ನಡೆಯುತ್ತಿದೆ ಎಂದು ನಿಮಗೆ ಗೊತ್ತಾ? ಇದು ನಮ್ಮ ವೈಯಕ್ತಿಕ ವಿಚಾರ, ಇದರಲ್ಲಿ ನೀವು ತಲೆಹಾಕಬೇಡಿ" ಎಂದು ಉತ್ತರ ನೀಡಿದ್ದಾಳೆ.
WTF …. pic.twitter.com/Bj2QebTYg0
— Indrajit (@Lotus_indrajit) July 6, 2026
ಈ ರೀತಿ ಮಾಡಿದ್ರೆ ಹೈಟ್ ಜಾಸ್ತಿಯಾಗುತ್ತೆ ಎಂದ ಮಹಾತಂದೆ
ಇನ್ನು ಈ ರಾದ್ಧಾಂತ ದೊಡ್ಡದಾಗುತ್ತಿದ್ದಂತೆ ಮತ್ತೊಬ್ಬರ ಸಹಾಯದಿಂದ ಮಗುವನ್ನು ಕೆಳಗೆ ಇಳಿಸಿದ ತಂದೆ, ತನ್ನ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾರೆ. "ನಮ್ಮ ಮಗು ಗಿಡ್ಡಗಿದ್ದಾನೆ. ಆತನ ಎತ್ತರ ಹೆಚ್ಚಾಗಲಿ ಎಂಬ ಕಾರಣಕ್ಕೆ ಹೀಗೆ ಬಾಗಿಲಿಗೆ ತೂಗುಹಾಕಿದ್ದೇವೆ" ಎಂದು ಹೇಳಿ ನೆಟ್ಟಿಗರ ಹುಬ್ಬೇರುವಂತೆ ಮಾಡಿದ್ದಾನೆ. ಅಲ್ಲದೆ, ನಮ್ಮ ಅನುಮತಿ ಇಲ್ಲದೆ ವಿಡಿಯೋ ಮಾಡುತ್ತಿದ್ದೀರಾ ಎಂದು ಕ್ಯಾಮೆರಾ ಹಿಡಿದ ಮಹಿಳೆಯನ್ನೇ ಬೆದರಿಸಲು ಯತ್ನಿಸಿದ್ದಾನೆ.
ನೀವು ಪೋಷಕರಲ್ಲ, ರಾಕ್ಷಸರು
ಈ ವಿಡಿಯೋದ ಸತ್ಯಾಸತ್ಯತೆ ಹಾಗೂ ಘಟನೆ ಎಲ್ಲಿ ನಡೆದಿದೆ ಎಂಬುದು ಇನ್ನು ನಿಖರವಾಗಿ ತಿಳಿದುಬಂದಿಲ್ಲವಾದರೂ, ವಿಡಿಯೋ ನೋಡಿದ ಸಾರ್ವಜನಿಕರು ತೀವ್ರ ಆಘಾತ ವ್ಯಕ್ತಪಡಿಸುತ್ತಿದ್ದಾರೆ. "ಇದು ಸಂಪೂರ್ಣ ಅವೈಜ್ಞಾನಿಕ ಮತ್ತು ಅಪಾಯಕಾರಿ ಪದ್ಧತಿ. ಇಂತಹ ಪೋಷಕರನ್ನು ತಕ್ಷಣವೇ ಜೈಲಿಗೆ ಹಾಕಬೇಕು" ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, "ಕಟ್ಟುನಿಟ್ಟಿನ ಪೋಷಕರು ಹಾಗೂ ಕ್ರೂರಿ ಪೋಷಕರ ನಡುವೆ ಸಣ್ಣ ಗೆರೆ ಇರುತ್ತದೆ. ಇವರು ಪೋಷಕರಲ್ಲ, ರಾಕ್ಷಸರು. ಮಗುವನ್ನು ತಕ್ಷಣ ಇವರ ವಶದಿಂದ ಬಿಡಿಸಬೇಕು" ಎಂದು ಆಗ್ರಹಿಸಿದ್ದಾರೆ.
"ಬೇರೆ ದೇಶಗಳಂತೆ ಭಾರತದಲ್ಲೂ ಬಲಿಷ್ಠ ಮಕ್ಕಳ ರಕ್ಷಣಾ ಕಾಯ್ದೆ ಜಾರಿಯಾಗಬೇಕು, ಆಗಲೇ ಇಂತವರಿಗೆ ಬುದ್ಧಿ ಬರುತ್ತದೆ" ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಮಗುವಿನ ಮನಸ್ಸಿನ ಮೇಲೆ ತೀವ್ರ ಆಘಾತ ಉಂಟುಮಾಡುವ ಇಂತಹ ಕೃತ್ಯ ಎಸಗಿದ ಪೋಷಕರನ್ನು ಪತ್ತೆಹಚ್ಚಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಅಭಿಯಾನವೇ ಶುರುವಾಗಿದೆ.













Click it and Unblock the Notifications