ಮಿಸ್ ಮಾಡಲೇ ಬಾರದ ಕರ್ನಾಟಕದ 5 ಐದು ಪವರ್‌ಫುಲ್ ಪ್ರಾಚೀನ ದೇವಸ್ಥಾನಗಳು
ಪ್ರಾಚೀನ ದೇವಸ್ಥಾನಗಳಿಗೆ ಯಾಕೆ ಹೋಗಬೇಕು ಅಂದರೆ ಅದನ್ನು ಆಗಮ ಶಾಸ್ತ್ರದ ನಿಯಮಗಳ ಮೂಲಕವೇ ಕಟ್ಟಿರುವ ಕಾರಣ ಪವರ್ ಜಾಸ್ತಿ. ಜೊತೆಗೆ ಶಿಲ್ಪಕಲೆಗಳ ಸೌಂದರ್ಯವನ್ನೂ ಸವಿಯಬಹುದು. ಕರ್ನಾಟಕದ ಬೆಸ್ಟ್ 5 ಪ್ರಾಚೀನ ದೇವಸ್ಥಾನಗಳ ವಿವರ ಇಲ್ಲಿದೆ.
ದಕ್ಷಿಣ ಭಾರತೀಯ ದೇವಸ್ಥಾನಗಳು ಯಾಕೆ ವಿಶಿಷ್ಟ ಅಂದರೆ ಅನೇಕ ಕಾರಣ ಕೊಡಬಹುದು. ಈ ದೇವಾಲಯಗಳನ್ನು ಹಿಂದಿನವರು ಶಾಸ್ತ್ರಬದ್ಧವಾಗಿ ಕಟ್ಟಿದ್ದಾರೆ. ಆಗಮ ಶಾಸ್ತ್ರಗಳಲ್ಲಿ ಹೇಳಿರುವ ಹಾಗೆ ನಿರ್ಮಿಸಿರುವ ಕಾರಣ ಇಲ್ಲಿ ವೈಬ್ರೇಶನ್ ಹೆಚ್ಚು. ಮನಸ್ಸಿನ ನೆಗೆಟಿವಿಯನ್ನೆಲ್ಲ ದೂರ ಮಾಡಿ ಪ್ರಫುಲ್ಲವಾಗಿರುವ ಹಾಗೆ ಮಾಡುತ್ತದೆ. ಅದರ ಜೊತೆಗೆ ಇಲ್ಲಿಯ ದೇವಸ್ಥಾನಗಳ ವಾಸ್ತುಶಿಲ್ಪಗಳಂತೂ ಅತ್ಯದ್ಭುತ. ಇವುಗಳ ಮುಂದೆ ಯಾವ ಮ್ಯೂಸಿಯಂಗಳೂ ನಿಲ್ಲಲಾರದು. ಇಲ್ಲಿ ದ್ರಾವಿಡ, ನಾಗರ ಮತ್ತು ವೇಸರ ಶೈಲಿಯ ಕೆತ್ತನೆಗಳ ಸೊಗಸನ್ನು ಕಣ್ತುಂಬಿಸಿಕೊಳ್ಳಬಹುದು. ಈ ದೇವಸ್ಥಾನಗಳ ವಾಸ್ತುಶಿಲ್ಪ ಎಷ್ಟು ಅದ್ಭುತವಾಗಿದೆ ಎಂದರೆ, ಅವು ಶತಮಾನಗಳ ಧಾರ್ಮಿಕ, ಸಾಂಸ್ಕೃತಿಕ ಮತ್ತು ಕಲಾತ್ಮಕ ಬೆಳವಣಿಗೆಗಳ ಪ್ರತಿಬಿಂಬದ ಹಾಗೆ ಭಾಸವಾಗುತ್ತವೆ.

ಚೆನ್ನಕೇಶವ ದೇವಸ್ಥಾನ, ಬೇಲೂರು
ಹೊಯ್ಸಳ ಸಾಮ್ರಾಜ್ಯದ ರಾಜ ವಿಷ್ಣುವರ್ಧನ ಕಟ್ಟಿಸಿದ ಈ ಅಪರೂಪದ ದೇವಸ್ಥಾನವು ಯಗಚಿ ನದಿಯ ದಂಡೆಯಲ್ಲಿದೆ. ಇದನ್ನು ಹೊಯ್ಸಳ ವಾಸ್ತುಶಿಲ್ಪದ ಅತ್ಯಂತ ಶ್ರೇಷ್ಠ ಕೆತ್ತನೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಬಳಪದ ಕಲ್ಲಿನಿಂದ ನಿರ್ಮಿಸಲಾದ ಮತ್ತು ವಿಶಿಷ್ಟವಾದ ನಕ್ಷತ್ರಾಕಾರದ ತಳಹದಿ ಮೇಲೆ ಸ್ಥಾಪಿತವಾಗಿರುವ ಈ ದೇವಸ್ಥಾನವು ಅದ್ಭುತವಾದ ಸೂಕ್ಷ್ಮ ಕೆತ್ತನೆಗಳಿಗೆ ಹೆಸರುವಾಸಿ. ಇದರ ಗೋಡೆಗಳ ಮೇಲೆ ರಾಮಾಯಣ, ಮಹಾಭಾರತ ಮತ್ತು ಪುರಾಣಗಳ ಕಥೆಗಳನ್ನು ಹೇಳುವ ಸುಂದರವಾದ ಕುಸುರಿಗಳಿವೆ.
ಈ ದೇವಸ್ಥಾನವು ಆ ಕಾಲದಲ್ಲಿದ್ದ ಧಾರ್ಮಿಕ ಸಹಿಷ್ಣತೆಯನ್ನೂ ಪ್ರತಿಬಿಂಬಿಸುತ್ತದೆ. ವೈಷ್ಣವ, ಶೈವ, ಶಾಕ್ತ, ಜೈನ ಮತ್ತು ಬೌದ್ಧ ಧರ್ಮಗಳಿಂದ ಪ್ರೇರಿತವಾಗಿದ್ದು, ಆ ಕಾಲದಲ್ಲಿ ಪಂಥಗಳ ನಡುವೆ ಎಷ್ಟು ಸೌಹಾರ್ದತೆ ಇತ್ತು ಎಂಬುದರ ಪ್ರತೀಕವಾಗಿ ಕಾಣುತ್ತದೆ.
ಇಲ್ಲಿಗೆ ಭೇಟಿ ನೀಡಲು ಅಕ್ಟೋಬರ್ನಿಂದ ಮಾರ್ಚ್ ತಿಂಗಳು ಬೆಸ್ಟ್. ಹವಾಮಾನ ಚೆನ್ನಾಗಿರುವುದರಿಂದ ದೇವಾಲಯದ ಸೊಗಸನ್ನು ಸವಿಯಬಹುದು.

ವಿಠ್ಠಲ ದೇವಸ್ಥಾನ, ಹಂಪಿ
ಹಂಪಿ ಅನ್ನುವ ಇಡೀ ಊರೇ ಒಂದು ಕಲಾಕೃತಿಯ ಹಾಗೆ ಕಾಣುತ್ತದೆ. ಕಣ್ಣು ನೆಟ್ಟಲ್ಲೆಲ್ಲ ಕಲಾಕೃತಿಗಳು, ಒಂದಿಲ್ಲೊಂದು ಕೆತ್ತನೆಗಳು, ಸ್ಮಾರಕಗಳು. ವಿರೂಪಾಕ್ಷ ದೇವಾಲಯವು ಆಧ್ಯಾತ್ಮ ಆಸಕ್ತರನ್ನು ಹೆಚ್ಚು ಸೆಳೆದರೆ ವಿಜಯ ವಿಠಲ ಅನನ್ಯ ವಾಸ್ತುಶಿಲ್ಪದ ಕಾರಣಕ್ಕೆ ಗಮನಸೆಳೆಯುತ್ತದೆ. ವಿಜಯನಗರ ಸಾಮ್ರಾಜ್ಯಕ್ಕೆ ಸೇರಿದ ದೇವಸ್ಥಾನವು ಹದಿನೈದನೇ ಶತಮಾನದಷ್ಟು ಹಳೆಯದು. ವಿಠಲ ದೇವಸ್ಥಾನದ ಆವರಣವು ತುಂಬಾ ವಿಶಾಲವಾಗಿದ್ದು, ಎತ್ತರದ ಕಾಂಪೌಂಡ್ ಗೋಡೆಗಳು ಮತ್ತು ಮೂರು ದೊಡ್ಡ ಪ್ರವೇಶ ದ್ವಾರಗಳನ್ನು ಹೊಂದಿದೆ. ಈ ದೇವಸ್ಥಾನದ ಅತ್ಯಂತ ಸುಂದರವಾದ ಭಾಗವೆಂದರೆ ಕಲ್ಲಿನ ರಥ. ಇಲ್ಲಿರುವ ಸಪ್ತಸ್ವರದ ಕಂಬಗಳನ್ನು ಮೆಲ್ಲಗೆ ತಟ್ಟಿದರೆ ಸಂಗೀತದ ಸ್ವರಗಳು ಕೇಳಿಬರುತ್ತವೆ.
ಹೊಯ್ಸಳೇಶ್ವರ ದೇವಸ್ಥಾನ, ಹಳೇಬೀಡು
ಶಿವನ ದೇವಸ್ಥಾನವಾಗಿದ್ದು, ಹೊಯ್ಸಳ ವಾಸ್ತುಶಿಲ್ಪಕ್ಕೆ ಉತ್ತಮ ಕುರುಹಾಗಿ ಗಮನ ಸೆಳೆಯುತ್ತದೆ. ಹಾಸನ ಜಿಲ್ಲೆಯಲ್ಲಿರುವ ಈ ದೇವಸ್ಥಾನವನ್ನು ಹನ್ನೆರಡನೇ ಶತಮಾನದ ಆರಂಭದಲ್ಲಿ ಬಳಪದ ಕಲ್ಲಿನಿಂದ ಕಟ್ಟಲಾಯಿತು. ಇದರಲ್ಲಿ ಪ್ರಾಚೀನ ದೇವತೆಗಳ ಶಿಲ್ಪಗಳು, ಪೌರಾಣಿಕ ಸನ್ನಿವೇಶಗಳು ಮತ್ತು ಶ್ರೀಮಂತ ಕೆತ್ತನೆಗಳಿವೆ. ಸುಂದರವಾದ ಕಂಬಗಳ ಸಾಲುಗಳು ಮತ್ತು ಕೆತ್ತನೆಗಳು ಮಧ್ಯಕಾಲೀನ ಭಾರತೀಯ ದೇವಸ್ಥಾನಗಳ ಶಿಲ್ಪಕಲೆಗೆ ಅದ್ಭುತ ಸಾಕ್ಷಿಯಾಗಿವೆ. ಇವು ರಾಮಾಯಣ, ಮಹಾಭಾರತ, ಭಾಗವತ, ಪುರಾಣ ಮತ್ತಿತರ ಶೈವ ಹಾಗೂ ವೈಷ್ಣವ ಪುರಾಣಗಳನ್ನು ಕಣ್ಣಿಗೆ ಕಟ್ಟುವಂತೆ ಬಿಂಬಿಸುತ್ತವೆ.
ಬಾದಾಮಿ ಗುಹಾಂತರ ದೇವಾಲಯಗಳು
ಬಾಗಲಕೋಟೆ ಜಿಲ್ಲೆಯಲ್ಲಿರುವ ಈ ಗುಹಾಂತರ ದೇವಾಲಯಗಳನ್ನು ಆರನೇ ಶತಮಾನದಲ್ಲಿ ಚಾಲುಕ್ಯ ರಾಜರು ಕಲ್ಲಿನಲ್ಲಿ ಕೊರೆದು ನಿರ್ಮಿಸಿದ್ದಾರೆ. ಬಾದಾಮಿಯ ಕೆಂಪು ಮರಳುಗಲ್ಲಿನ ಬೆಟ್ಟಗಳನ್ನು ಕೊರೆದು ಮಾಡಲಾದ ಈ ಗುಹೆಗಳಲ್ಲಿ ಶಿವ, ದುರ್ಗೆಯಂತಹ ದೇವತೆಗಳ ಜೊತೆಗೆ ಜೈನ ಮತ್ತು ಬೌದ್ಧ ಧರ್ಮದ ಶಿಲ್ಪಗಳಿವೆ. ಇಲ್ಲಿ ಒಟ್ಟು ನಾಲ್ಕು ಮುಖ್ಯ ಗುಹೆಗಳಿದ್ದು, ಪ್ರತಿಯೊಂದರಲ್ಲೂ ಕಲ್ಲಿನ ಕಂಬಗಳಿವೆ. ಈ ಗುಹೆಗಳ ಶೈಲಿಯು ನಾಗರ ಮತ್ತು ದ್ರಾವಿಡ ಎರಡೂ ವಾಸ್ತುಶಿಲ್ಪಗಳಿಂದ ಪ್ರಭಾವಿತವಾಗಿದೆ. ದಕ್ಷಿಣ ಭಾರತದಲ್ಲಿ ದೇವಸ್ಥಾನಗಳ ವಾಸ್ತುಶಿಲ್ಪ ಮತ್ತು ಗುಹಾಂತರ ಕಲೆ ಬೆಳೆದುಬಂದ ಬಗೆಯನ್ನು ತಿಳಿಯಲು ಈ ಗುಹೆಗಳ ಅಧ್ಯಯನ ಮಾಡಬಹುದು.
ಪಟ್ಟದಕಲ್ಲು ಸ್ಮಾರಕಗಳ ಗುಂಪು
ಇದು ಚಾಲುಕ್ಯ ವಂಶದ ಪವಿತ್ರ ಸ್ಥಳ ಮತ್ತು ರಾಜಧಾನಿಯಾಗಿತ್ತು. ನಾಗರ ಮತ್ತು ದ್ರಾವಿಡ ಶೈಲಿ ಮಿಶ್ರಿತ ವಾಸ್ತುಶಿಲ್ಪವಿರುವ ಈ ಜಾಗವನ್ನು ವಿಶ್ವ ಪರಂಪರೆಯ ತಾಣವೆಂದು ಘೋಷಿಸಲಾಗಿದೆ. ಈ ಸ್ಮಾರಕಗಳ ಗುಂಪಿನಲ್ಲಿ ಒಂಬತ್ತು ಹಿಂದೂ ದೇವಸ್ಥಾನಗಳು ಮತ್ತು ಒಂದು ಜೈನ ದೇವಸ್ಥಾನವಿದ್ದು, ಅವುಗಳಲ್ಲಿ ರಾಮಾಯಣ ಮತ್ತು ಮಹಾಭಾರತಗಳ ಕೆತ್ತನೆಗಳಿವೆ. ಇಲ್ಲಿರುವ ವಿರೂಪಾಕ್ಷ ಮತ್ತು ಮಲ್ಲಿಕಾರ್ಜುನ ದೇವಸ್ಥಾನಗಳು ಅತ್ಯಂತ ಸುಂದರವಾಗಿದ್ದು, ಮನಮೋಹಕವಾಗಿ ಕೆತ್ತಿದ ಕಂಬಗಳು ಮತ್ತು ಶಿಖರಗಳನ್ನು ಹೊಂದಿವೆ.
ಬರಹ: ಭವಾನಿ ಭಟ್














Click it and Unblock the Notifications