ಪ್ರಮೋಷನ್‌ಗಿಂತ ಇದೇ ದೊಡ್ಡದು: ಅಮೆಜಾನ್ ಆಫೀಸ್‌ಗೆ ತಾಯಿಯನ್ನ ಕರೆ ತಂದ ಟೆಕ್ಕಿಯ ಭಾವುಕ ಪೋಸ್ಟ್ ವೈರಲ್
ತಮ್ಮ ಅಪ್ಪ- ಅಮ್ಮನನ್ನ ಅಥವಾ ಪೋಷಕರನ್ನಾ ಖುಷಿ ಪಡಿಸಬೇಕು. ಅವರು ಹೆಮ್ಮ ಪಡುವಂತೆ ಮಾಡಬೇಕು ಎಂದು ಜಗತ್ತಿನ ಎಲ್ಲಾ ಮಕ್ಕಳಿಗೂ ಒಂದು ದೊಡ್ಡ ಕನಸಿರುತ್ತದೆ. ಅದರಲ್ಲೂ ನಮ್ಮೆಲ್ಲ ಕಷ್ಟಗಳಿಗೆ ಹೆಗಲಾಗಿ ಪ್ರತಿದಿನ ಬೆಳಿಗ್ಗೆಯಿಂದ ರಾತ್ರಿ ಅಂದರೆ ಮಲಗುವವರೆಗೆ ಬಿಡುವಿಲ್ಲದೆ ತನ್ನವರಿಗಾಗಿ ದುಡಿಯುವ ಅಮ್ಮ ಎಂದರೆ ಎಲ್ಲರಿಗೂ ಸ್ಪೂರ್ತಿಯೇ ಸರಿ.
ಬೆಂಗಳೂರಿನಂತಹ ಮಹಾನಗರದಲ್ಲಿ ಕಷ್ಟಪಟ್ಟು ದುಡಿದು, ನಾವು ಗಳಿಸಿರುವ ಅಥವಾ ಬೆಳೆದು ನಿಂತಿರು ತಮ್ಮ ಸ್ಥಾನಕ್ಕೆ ತಮ್ಮ ಹೆತ್ತವರನ್ನು ಕರೆದುಕೊಂಡು ಹೋಗಿ ತೋರಿಸಿದಾಗ ಸಿಗುವ ಖುಷಿ ಯಾವ ಪ್ರಶಸ್ತಿ, ಪ್ರಮೋಷನ್‌ಗೂ ಸಮವಾಗಿರುವುದಿಲ್ಲ. ಇದೀಗ ಬೆಂಗಳೂರಿನ ಯುವತಿಯೊಬ್ಬರು ಇಂತಹದ್ದೇ ಒಂದು ಅದ್ಭುತ ಕ್ಷಣವನ್ನಾ ಕಣ್ತುಂಬಿಸಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಹೃದಯ ಗೆದ್ದಿದ್ದಾರೆ.

ಹೌದು, ಬೆಂಗಳೂರಿನಲ್ಲಿರುವ ಅಮೆಜಾನ್ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಸುಪರ್ಣಾ ಪಾಲ್ ಎಂಬ ಯುವತಿಯೇ ಈ ಭಾವುಕ ಕ್ಷಣವನ್ನು ಹಂಚಿಕೊಂಡವರು. ಇತ್ತೀಚೆಗಷ್ಟೇ ಅವರು ತಮ್ಮ ಅಮ್ಮನನ್ನ ಮೊದಲ ಬಾರಿಗೆ ತಾವು ಕೆಲಸ ಮಾಡುವ ಅಮೆಜಾನ್ ಆಫೀಸ್‌ಗೆ ಕರೆದುಕೊಂಡು ಬಂದಿದ್ದರು. ಕಚೇರಿಯ ವಿವಿಧ ಸ್ಥಳಗಳಲ್ಲಿ ತಾಯಿಯ ಜೊತೆ ನಿಂತು ತೆಗೆದು ಸಂಭ್ರಮಿಸಿದ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಸುಪರ್ಣಾ, ತಮ್ಮ ಯಶಸ್ಸಿನ ಹಿಂದೆ ಇರುವ ಅವರ ತಾಯಿಯ ತ್ಯಾಗವನ್ನು ಈ ಸಂದರ್ಭದಲ್ಲಿ ನೆನೆದಿದ್ದಾರೆ.
"ನನ್ನ ತಾಯಿ ಹೆಮ್ಮೆಪಡುವಂತೆ ಮಾಡಬೇಕು ಎಂದು ಕನಸು ಕಂಡಿದ್ದ ಆ ಪುಟ್ಟ ಹುಡುಗಿ, ಕೊನೆಗೂ ಇಂದು ತಾನು ಕೆಲಸ ಮಾಡುವ ಜಾಗವನ್ನು ತಾಯಿಗೆ ತೋರಿಸಿದ್ದಾಳೆ" ಎಂದು ಸುಪರ್ಣಾ ಪಾಲ್ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. "ಇಂದು ಮೊದಲ ಬಾರಿಗೆ ನನ್ನ ಅಮ್ಮ ನನ್ನ ಅಮೆಜಾನ್ ಕಚೇರಿಗೆ ಭೇಟಿ ನೀಡಿದ್ದಾಳೆ. ಇದು ನನ್ನ ಪಾಲಿಗೆ ಯಾವುದೇ ಪ್ರಮೋಷನ್ ಅಥವಾ ಸಾಧನೆಗಿಂತಲೂ ದೊಡ್ಡದು ಎಂಬುದು ಬಹುಶಃ ಅಮ್ಮನಿಗೆ ತಿಳಿದಿಲ್ಲ" ಎಂದು ಅತ್ಯಂತ ಭಾವುಕ ಸಾಲುಗಳನ್ನು ಬರೆದಿದ್ದಾರೆ. ಒಬ್ಬಳು ಉದ್ಯೋಗಿಯಾಗಿ ನಾನು ಪಡೆದ ಯಾವುದೇ ಪ್ರಶಸ್ತಿಗಿಂತ, ತನ್ನ ತಾಯಿ ತನ್ನ ಆಫೀಸ್‌ನಲ್ಲಿ ಓಡಾಡಿದ್ದೇ ತನಗೆ ಸಿಕ್ಕ ಅತಿದೊಡ್ಡ ಬಹುಮಾನ ಎಂಬುದು ಅವರ ಮಾತಿನ ಅರ್ಥ.
ಕಷ್ಟದ ದಿನಗಳಲ್ಲಿ ಬೆನ್ನೆಲುಬಾಗಿದ್ದ ತಾಯಿ
ಪ್ರತಿಯೊಬ್ಬರ ಯಶಸ್ಸಿನ ಹಿಂದೆಯೂ ಸಾಕಷ್ಟು ನೋವು, ಕಷ್ಟ ಎಲ್ಲಾ ಇದ್ದೇ ಇರುತ್ತದೆ. ಸುಪರ್ಣಾ ಪಾಲ್ ಕೂಡ ಇದಕ್ಕೇನು ಹೊರತಾಗಿರಲಿಲ್ಲ. ತಮ್ಮ ಕಾರ್ಪೊರೇಟ್ ಪಯಣದ ಬಗ್ಗೆ ಮಾತನಾಡುತ್ತಾ, "ನಾನು ಎದುರಿಸಿದ ಪ್ರತಿಯೊಂದು ಇಂಟರ್ವ್ಯೂ ಹಿಂದೆಯೂ, ನಾನು ಕಳೆದ ಪ್ರತಿಯೊಂದು ನಿದ್ದೆಯಿಲ್ಲದ ರಾತ್ರಿಗಳಲ್ಲಿಯೂ ನನ್ನ ತಾಯಿ ನನ್ನ ಜೊತೆ ಇದ್ದಳು. ಅವಳು ನನಗಾಗಿ ಪ್ರಾರ್ಥಿಸುತ್ತಿದ್ದಳು. ನನ್ನ ಮೇಲೆ ನಂಬಿಕೆ ಇಟ್ಟಿದ್ದಳು. ನಾನೇ ನನ್ನನ್ನ ಅನುಮಾನಿಸಿದಾಗಲೂ, ನೀನು ಇದನ್ನು ಸಾಧಿಸಬಲ್ಲೆ ಎಂದು ನನಗೆ ನೆನಪಿಸುತ್ತಿದ್ದಳು" ಎಂದು ತಾಯಿಯ ಪ್ರೋತ್ಸಾಹವನ್ನು ನೆನಪಿಕೊಂಡುದ್ದಾಳೆ.
'ಈ ಸಾಧನೆ ನನ್ನೊಬ್ಬಳದ್ದಲ್ಲ'
ತನ್ನ ವೃತ್ತಿಜೀವನದ ಏರಿಳಿತಗಳಲ್ಲಿ ತಾಯಿ ಹೇಗೆ ಜೊತೆಯಾಗಿದ್ದರು ಎಂಬುದನ್ನು ಸುಪರ್ಣಾ ವಿವರಿಸಿದ್ದು, " ಈಗ ಎಲ್ಲರೂ ಕೇವಲ ನನ್ನ ಸಾಧನೆಗಳನ್ನು ನೋಡುತ್ತಿದ್ದಾರೆ. ಆದರೆ ಆ ಸಾಧನೆಗಳನ್ನು ಮಾಡಲು ಸಹಕರಿಸಿದ ಮಹಿಳೆಯನ್ನು ನಾನು ಮಾತ್ರ ನೋಡುತ್ತೇನೆ. ಈ ಕನಸು ಎಂದಿಗೂ ನನ್ನೊಬ್ಬಳದ್ದಾಗಿರಲಿಲ್ಲ. ಇದು ಯಾವಾಗಲೂ ನಮ್ಮಿಬ್ಬರ ಕನಸಾಗಿತ್ತು" ಎಂದು ಸುಪರ್ಣಾ ಪಾಲ್ ಹೇಳಿದ್ದಾರೆ. ಈ ಸಾಲುಗಳು ಓದುಗರ ಮನಮುಟ್ಟುವಂತೆ ಮಾಡಿದೆ. ಭಾರತೀಯ ಸಂಸ್ಕೃತಿಯಲ್ಲಿ ಪೋಷಕರು ಮಕ್ಕಳ ಭವಿಷ್ಯಕ್ಕಾಗಿ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಡುತ್ತಾರೆ ಎಂಬುದಕ್ಕೆ ಇದೇ ಉದಾಹರಣೆ.


Click it and Unblock the Notifications
