Ration Card: "ಇಂದಿರಾ ಫುಡ್ ಕಿಟ್ ಇಲ್ಲ: ಈ ರೇಷನ್‌ಗೂ ಕೊಕ್ಕೆ ಹಾಕಿದ ಕರ್ನಾಟಕ ಕಾಂಗ್ರೆಸ್ ಸರ್ಕಾರ!"

Ration Card: ಕರ್ನಾಟಕದಲ್ಲಿ 75 ಮೇಲ್ಪಟ್ಟ ಹಿರಿಯರ ಮನೆ ಬಾಗಿಲಿಗೆ ರೇಷನ್ ತಲುಪಿಸುವ ಸುವಿಧಾ ಯೋಜನೆಗೆ ಗ್ರಹಣ ಹಿಡಿದಿದೆ. ಕರ್ನಾಟಕದಲ್ಲಿ ಅಂದಾಜು 50,000 ಸಾವಿರಕ್ಕೂ ಹೆಚ್ಚು 75 ಮೇಲ್ಪಟ್ಟ ಹಿರಿಯರು ಇದ್ದಾರೆ. ಅನ್ನ ಸುವಿಧಾ ಯೋಜನೆಯಲ್ಲಿ ಕೆಲ ತಾಂತ್ರಿಕ ಸಮಸ್ಯೆಗಳಿರುವ ಕಾರಣಕ್ಕೆ ಸಮಸ್ಯೆ ಆಗಿದೆ ಎಂದು ಹೇಳಲಾಗಿದೆ. ಆದರೆ ಇದಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್ ಅವರು, ಬರೀ ಹಸಿ ಸುಳ್ಳುಗಳು ಮತ್ತು ಪೊಳ್ಳು ಘೋಷಣೆಗಳೇ ಈ ಕಾಂಗ್ರೆಸ್ ಸರ್ಕಾರದ ಹೆಗ್ಗುರುತು. ಯೋಜನೆಗಳನ್ನು ಘೋಷಿಸುವಾಗ ಮಾಧ್ಯಮಗಳ ಮುಂದೆ ಅಬ್ಬರದ ಪ್ರಚಾರ ಗಿಟ್ಟಿಸಿಕೊಳ್ಳುವ ಈ ಡೋಂಗಿ ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಅವುಗಳನ್ನು ಅನುಷ್ಠಾನಕ್ಕೆ ತರುವ ಯೋಗ್ಯತೆಯೂ ಇಲ್ಲ, ಬದ್ಧತೆಯಂತೂ ಮೊದಲೇ ಇಲ್ಲ!. ಒಂದರ ಮೇಲೊಂದರಂತೆ ಯೋಜನೆಗಳನ್ನು ಘೋಷಿಸಿ, ನಂತರ ಜನರಿಗೆ ನಡುನೀರಲ್ಲಿ ಕೈಕೊಡುವುದು ಈ ಸರ್ಕಾರದ ಕಾಯಕವಾಗಿಬಿಟ್ಟಿದೆ. ಇವರ ವಂಚನೆಯ ಜಾಲ ಇಲ್ಲಿದೆ ನೋಡಿ:

Ration Card

ಕಾಂಗ್ರೆಸ್‌ನ ಸುಳ್ಳು ಮತ್ತು ವೈಫಲ್ಯಗಳ ಸರಪಳಿ:

ವಂಚನೆ 1: "ಅನ್ನ ಸುವಿಧಾ" ಹೆಸರಲ್ಲಿ ಹಿರಿಯ ನಾಗರಿಕರಿಗೆ ವಂಚನೆ!

75 ವರ್ಷ ದಾಟಿದ ವಯೋವೃದ್ಧರಿಗೆ ಮನೆ ಬಾಗಿಲಿಗೆ ಪಡಿತರ ತಲುಪಿಸುತ್ತೇವೆ ಎಂದು ವರ್ಷದ ಹಿಂದೆ ದೊಡ್ಡದಾಗಿ ಕೊಚ್ಚಿಕೊಂಡ ಈ ಸರ್ಕಾರ, ಈಗ 50 ಸಾವಿರಕ್ಕೂ ಹೆಚ್ಚು ಹಿರಿಯ ಜೀವಗಳನ್ನು ತುತ್ತು ಅನ್ನಕ್ಕಾಗಿ ಬೀದಿಗೆ ತಂದು ನಿಲ್ಲಿಸಿದೆ. ಕಳೆದ ನಾಲ್ಕು ತಿಂಗಳಿಂದ ವೃದ್ಧರ ಹಕ್ಕಿನ ಅಕ್ಕಿಯನ್ನು ವಿತರಿಸದೆ ಸತಾಯಿಸಲಾಗುತ್ತಿದೆ. ಬಿಸಿಲಿನಲ್ಲಿ ನಿಲ್ಲಲಾರದ ಹಿರಿಯ ತಂದೆ-ತಾಯಂದಿರು ಮತ್ತೆ ನ್ಯಾಯಬೆಲೆ ಅಂಗಡಿಗಳ ಮುಂದೆ ಕೈಯೊಡ್ಡಿ ನಿಲ್ಲುವಂತೆ ಮಾಡಿದ್ದೇ ಈ ಸರ್ಕಾರದ ಸಾಧನೆ!

ವಂಚನೆ 2: ಬಿಪಿಎಲ್ ಕುಟುಂಬಗಳ ಕೈಕೊಟ್ಟ 'ಇಂದಿರಾ ಫುಡ್ ಕಿಟ್'!

ಅನ್ನಭಾಗ್ಯದ ಅಕ್ಕಿಯ ಬದಲು ಬೇಳೆ, ಎಣ್ಣೆ, ಸಕ್ಕರೆ ಒಳಗೊಂಡ 'ಇಂದಿರಾ ಫುಡ್ ಕಿಟ್' ನೀಡುತ್ತೇವೆ ಎಂದು ಇಡೀ ರಾಜ್ಯದ ಬಿಪಿಎಲ್ ಕುಟುಂಬಗಳ ಮೂಗಿಗೆ ತುಪ್ಪ ಸವರಿತ್ತು. ಆದರೆ ವರ್ಷ ಕಳೆದರೂ ಈ ಇಂದಿರಾ ಕಿಟ್ ಜನಸಾಮಾನ್ಯರ ಕೈಸೇರಲೇ ಇಲ್ಲ. ಬಡವರ ಮನೆ ಸೇರಿಬೇಕಿದ್ದ ದಿನಸಿಯನ್ನೂ ನುಂಗಿ ನೀರು ಕುಡಿದಿರುವ ಇವರು ಕೇವಲ ಘೋಷಣೆಗಳ ರಾಜ ಮಹಾರಾಜರು!

ವಂಚನೆ 3: ಟೈಪ್-1 ಮಧುಮೇಹಿ ಬಡ ಮಕ್ಕಳ ಇನ್ಸುಲಿನ್‌ಗೂ ಕೊಕ್ಕೆ!

ಟೈಪ್-1 ಮಧುಮೇಹದಿಂದ ಬಳಲುವ ಬಡ ಮಕ್ಕಳಿಗೆ ಉಚಿತ ಇನ್ಸುಲಿನ್ ವಿತರಿಸುವ ಅತ್ಯಂತ ಸೂಕ್ಷ್ಮ ಹಾಗೂ ಅಗತ್ಯ ಯೋಜನೆಯನ್ನು ಘೋಷಿಸಿ ಕೈತೊಳೆದುಕೊಂಡರು. ಇಂದು ಇನ್ಸುಲಿನ್ ಸಿಗದೆ ಸಾವಿರಾರು ಬಡ ತಾಯಂದಿರು ಮಕ್ಕಳ ಜೀವ ಕೈಯಲ್ಲಿ ಹಿಡಿದು ಆಸ್ಪತ್ರೆಗಳ ಮುಂದೆ ಕಣ್ಣೀರಿಡುತ್ತಿದ್ದಾರೆ. ಮಕ್ಕಳ ಜೀವದ ಜೊತೆ ಆಟವಾಡುವ ಇವರಿಗೆ ಕೊಂಚವಾದರೂ ಮಾನವೀಯತೆ ಇದೆಯೇ ಎಂದು ಆರ್ ಅಶೋಕ್ ಅವರು ಪ್ರಶ್ನೆ ಮಾಡಿದ್ದಾರೆ.

ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೇ ಕೇವಲ ಒಂದು ದಿನದ ಹೆಡ್‌ಲೈನ್ಸ್‌ ಪಡೆಯುವುದಷ್ಟೇ ನಿಮ್ಮ ಸಾಧನೆಯೇ. ಮುಖ್ಯಮಂತ್ರಿಗಳೇ, ಬಡವರ ಬದುಕಿನ ಜೊತೆ ಈ ರೀತಿ ಪದೇ ಪದೇ ಚೆಲ್ಲಾಟವಾಡುವ ನಿಮಗೆ ಆ ಕುರ್ಚಿಯಲ್ಲಿ ಕೂರುವ ನೈತಿಕತೆ ಇದೆಯೇ ಸ್ವಾಮಿ ? ಬಡ ಮಕ್ಕಳಿಗೆ ಇನ್ಸುಲಿನ್ ಇಲ್ಲ, ಬಿಪಿಎಲ್ ಕುಟುಂಬಗಳಿಗೆ ಇಂದಿರಾ ಕಿಟ್ ಇಲ್ಲ, ವೃದ್ಧರ ಮನೆಗೆ ಪಡಿತರವೂ ತಲುಪುತ್ತಿಲ್ಲ. ಪ್ರಚಾರಕ್ಕಾಗಿ ಮಾತ್ರ ಯೋಜನೆಗಳನ್ನು ಘೋಷಿಸಿ, ನಂತರ ಯೋಜನೆಗಳನ್ನು ಏಕಾಏಕಿ ಕೈಬಿಡುವ ನಿಮ್ಮ ಈ ದಿವಾಳಿ ಆಡಳಿತಕ್ಕೆ ರಾಜ್ಯದ ಜನರೇ ತಕ್ಕ ಪಾಠ ಕಲಿಸಲಿದ್ದಾರೆ.

ಬಡವರ, ಮಕ್ಕಳ ಹಾಗೂ ಹಿರಿಯ ಜೀವಗಳ ಈ ಕಣ್ಣೀರಿನ ಶಾಪ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ. ನಿಮ್ಮ ಈ ಅಟ್ಟಹಾಸದ ಸಿಂಹಾಸನ ಧೂಳೀಪಟವಾಗುವ ದಿನ ಹತ್ತಿರದಲ್ಲಿದೆ. ನನ್ನ ನೇರ ಎಚ್ಚರಿಕೆ. ತಕ್ಷಣವೇ "ಅನ್ನ ಸುವಿಧಾ" ಯೋಜನೆಯ ಮೂಲಕ ಹಿರಿಯರಿಗೆ ಮನೆ ಬಾಗಿಲಿಗೆ ಪಡಿತರ ತಲುಪಿಸಿ. ಭರವಸೆ ನೀಡಿದಂತೆ ಇಂದಿರಾ ಫುಡ್ ಕಿಟ್ ಹಾಗೂ ಬಡ ಮಕ್ಕಳಿಗೆ ಉಚಿತ ಇನ್ಸುಲಿನ್ ತಲುಪಿಸುವ ಕೆಲಸ ತಕ್ಷಣ ಆರಂಭವಾಗಬೇಕು. ಇಲ್ಲದಿದ್ದರೆ ಈ ವಂಚಕ ಸರ್ಕಾರದ ವಿರುದ್ಧ ಬಿಜೆಪಿ ಬೀದಿಗಿಳಿದು ಅತ್ಯಂತ ಉಗ್ರವಾದ ಹೋರಾಟ ನಡೆಸಲಿದೆ ಎಂದೂ ಎಚ್ಚರಿಕೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+