ಕರ್ನಾಟಕದಲ್ಲಿ ಮಾತ್ರವಲ್ಲ, ಮಹಾರಾಷ್ಟ್ರ ಬಿಜೆಪಿ ಸರಕಾರದಲ್ಲೂ ಗೃಹಲಕ್ಷ್ಮಿ ರೀತಿ ಯೋಜನೆಯಿಂದ ಅನರ್ಹರು ಔಟ್
ಕರ್ನಾಟಕದ ಗೃಹಿಣಿಯರಿಗೆ ಮಾಸಿಕ 2 ಸಾವಿರ ನೀಡುವ ಗೃಹಲಕ್ಷ್ಮಿ ಯೋಜನೆ ತನ್ನದೇ ರೀತಿಯಲ್ಲಿ ಜನಪ್ರಿಯವಾಗಿದೆ. ಈ ಯೋಜನೆ ಸೇರಿ ಕಾಂಗ್ರೆಸ್ ಸರಕಾರ ಗ್ಯಾರಂಟಿ ಯೋಜನೆ ಘೋಷಿಸಿದಾಗ ಬಿಜೆಪಿ ವಿರೋಧ ವ್ಯಕ್ತಪಡಿಸಿತ್ತು. ಅಭಿವೃದ್ಧಿ ಕುಂಠಿತವಾಗುತ್ತದೆ ಎಂದು ಆರೋಪಿಸಿತ್ತು. ಏನೇ ಅಂದರೂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಚುನಾವಣೆ ಸಮಯದಲ್ಲಿ ಘೋಷಿಸಿದಂತೆ ಗೃಹಲಕ್ಷ್ಮಿ ಸೇರಿ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿತ್ತು.
ಡಿ.ಕಶಿವಕುಮಾರ್ ಅಧಿಕಾರಕ್ಕೆ ಬಂದಾಗ ಈ ಯೋಜನೆಯ ಅರ್ಹ ಫಲಾನುಭವಿಗಳನ್ನು ಗುರುತಿಸಲು ಕೆಲವು ಮಾರ್ಗಸೂಚಿಗಳನ್ನು ಜಾರಿಗೊಳಿಸಿತು. ಕೆವೈಸಿ ಮಾಡಿಸಲು ಹೊಸದಾಗಿ ಅರ್ಜಿ ಸಲ್ಲಿಸಲು ಸೂಚಿಸಿದ್ದರು. ಇದು ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸುತ್ತಿದೆ, ಸರಕಾರ ಯೋಜನೆ ಸ್ಥಗಿತಗೊಳಿಸಲು ಇಂಥ ಕಾರ್ಯಕ್ಕೆ ಮಂದಾಗಿದೆ ಎಂದೂ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿತ್ತು. ಕರ್ನಾಟಕದ ಈ ಯೋಜನೆಯಂತೆ ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನಾವೀಸ್ ನೇತೃತ್ವದ ಬಿಜೆಪಿ ಸರಕಾರವೂ ಮಹಿಳೆಯರಿಗೆ ಮಾಸಿಕ 1.5 ಸಾವಿರ ರು. ಹಣಕಾಸು ನೆರವು ನೀಡುವ 'ಮಾಝಿ ಲಡ್ಕಿ ಬಹಿನ್ ಯೋಜನೆ'ಯನ್ನು ಅನುಷ್ಠಾನಗೊಳಿಸಿತ್ತು. ಇದರಲ್ಲಿಯೂ ಅನರ್ಹರು ಲಾಭ ಪಡೆಯುವುದನ್ನು ತಪ್ಪಿಸಲು ಇದೀಗ ಸುಮಾರು 92 ಲಕ್ಷ ಫಲಾನುಭವಿಗಳನ್ನು ಕೈ ಬಿಡಲಾಗಿದೆ. ಇವರಲ್ಲಿ 14 ಸಾವಿರ ಪುರುಷರೂ ಇದ್ದರು. ಕರ್ನಾಟಕದಲ್ಲಿ ಅನರ್ಹರನ್ನು ಯೋಜನೆಯಿಂದ ಕೈ ಬಿಡಲು ತೆಗೆದುಕೊಂಡ ಕ್ರಮಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿತ್ತು. ಇದೀಗ ತನ್ನದೇ ಪಕ್ಷ ಅಧಿಕಾರದಲ್ಲಿರುವ ಮಹಾರಾಷ್ಟ್ರಾವೂ ಅಂಥದ್ದೇ ಕ್ರಮಕ್ಕೆ ಮುಂದಾಗಿದೆ.

2.4 ಕೋಟಿ ಫಲಾನುಭವಿಗಳಿದ್ದ ಮಹಾ ಯೋಜನೆ
ಮಹಾರಾಷ್ಟ್ರ ಸರಕಾರ ಜಾರಿಗೊಳಿಸಿದ 'ಮಾಝಿ ಲಡ್ಕಿ ಬಹಿನ್ ಯೋಜನೆ'ಯ ಆರಂಭದಲ್ಲಿ 2.4 ಕೋಟಿ ಫಲಾನುಭವಿಗಳಿದ್ದರು. ಯೋಜನೆ ಕುರಿತು ಪುನರ್ ಪರಿಶೀಲಿಸಿದಾಗ ಆದಾಯ ತೆರಿಗೆ ಪಾವತಿಸುತ್ತಿರುವವರು, ಅನರ್ಹರೂ ಯೋಜನೆಯ ಲಾಭ ಪಡೆಯುತ್ತಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕದಂತೆ ಮಹಾರಾಷ್ಟ್ರದಲ್ಲಿಯೂ ಹೊಸದಾಗಿ ಇ-ಕೆವೈಸಿ ಮಾಡಿಸಲಾಯಿತು. ಆಗ ಶೇ.38ರಷ್ಟು ಮಂದಿ ಈ ಯೋಜನೆಯಡಿಯಲ್ಲಿ ಅನರ್ಹರೆಂದು ಗುರುತಿಸಲಾಗಿದೆ.
ಸುಮಾರು 50 ರಿಂದ 55 ಲಕ್ಷ ನಾರಿಯರು ನಿಗದಿತ ಅವಧಿ (8 ತಿಂಗಳು)ಯೊಳಗೆ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳುವಲ್ಲಿ ವಿಫಲವಾಗಿದ್ದರೆ, 12 ಲಕ್ಷ ಮಂದಿ ತೆರಿಗೆ ವ್ಯಾಪ್ತಿಗೆ ಸೇರಿದವರಿದ್ದರು. ಅದೇ ರೀತಿ 4.5 ಲಕ್ಷ ಮಹಿಳೆಯರು 65 ವರ್ಷಕ್ಕಿಂತ ಹೆಚ್ಚಿನವರಾಗಿದ್ದರೆ, 14,000 ಮಂದಿ ಪುರುಷರೂ ಮಹಿಳೆಯರ ಹೆಸರಿನಲ್ಲಿ ಈ ಯೋಜನೆಯ ಲಾಭ ಪಡೆಯುತ್ತಿದ್ದರು. ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 28 ಲಕ್ಷ ಮಹಿಳೆಯರನ್ನು ಅನರ್ಹರೆಂದು ಘೋಷಿಸಲಾಗಿದೆ.
ಕರ್ನಾಟಕದಲ್ಲಿ ಮಾಡಿದ್ದೇನು?
ರಾಜ್ಯದಲ್ಲಿಯೂ ಯೋಜನೆ ಅರ್ಹರಿಗೆ ಸಿಗಬೇಕೆಂಬ ಕಾರಣದಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹೊಸ ಮಾರ್ಗಸೂಚಿ ಪ್ರಕಟಿಸಿತ್ತು. ಈ ಯೋಜನೆ ಆರಂಭವಾದಾಗಿನಿಂದ ಸುಮಾರು 72 ಸಾವಿರ ಕೋಟಿಗೂ ಅಧಿಕ ಮೊತ್ತದ ಹಣವನ್ನು ಅರ್ಹರಿಗೆ ಪಾವತಿಸಲಾಗಿತ್ತು. 50 ಸಾವಿರಕ್ಕೂ ಹೆಚ್ಚು ಆದಾಯ ತೆರಿಗೆ ಪಾವತಿಸುವವರೂ ಈ ಯೋಜನೆ ಲಾಭ ಪಡೆಯುತ್ತಿದ್ದರು. ಅಷ್ಟೇ ಅಲ್ಲ ಲಕ್ಷಕ್ಕೂ ಹೆಚ್ಚು ಮಂದಿ ಮೃತರಾದವರ ಹೆಸರೂ ಈ ಯೋಜನೆಯ ಫಲಾನುಭವಿಗಳು ಪಟ್ಟಿಯಲ್ಲಿತ್ತು. ಅನರ್ಹರು ಯೋಜನೆ ಲಾಭ ಪಡೆಯುವುದನ್ನು ತಪ್ಪಿಸಲು ಡಿಕೆಶಿ ನೇತೃತ್ವದ ಕರ್ನಾಟಕ ಸರಕಾರ ಹೊಸ ನವೀಕರಣ ಪ್ರಕ್ರಿಯೆ ನಡೆಸಿತ್ತು.
ಹೊಸ ಮಾರ್ಗಸೂಚಿಯಲ್ಲಿ ಏನಿತ್ತು?
ಒಂದು ವೇಳೆ ಈ ಹಿಂದೆ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಹಣ ಪಡೆಯುತ್ತಿದ್ದ ಅತ್ತೆ ಅಥವಾ ತಾಯಿ ನಿಧನರಾಗಿದ್ದರೆ, ನಂತರ ವಾರಸುದಾರರಾದ ಸೊಸೆ ಅಥವಾ ಮಗಳು ಈ ಯೋಜನೆ ಲಾಭ ಪಡೆಯಲು ಮುಕ್ತ ಅವಕಾಶ ಕಲ್ಪಿಸಲಾಯಿತು. ಆದರೆ, ಈ ಯೋಜನೆಗೆ ಅರ್ಹರಾಗಲು ವಾರಸುದಾದರ ಹೆಸರು ಕಡ್ಡಾಯವಾಗಿ ಅದೇ ರೇಷನ್ ಕಾರ್ಡಿನಲ್ಲಿರಬೇಕೆಂದು ನಿಯಮವಿದೆ. ಅರ್ಜಿ ಸಲ್ಲಿಸಲು ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್ ಸಹ ಇರಲೇ ಬೇಕು. ಆದಾಯ ತೆರಿಗೆ ಪಾವತಿಸುವವರು ಹಾಗೂ ಇದೇ ಕಾರಣದಿಂದ ಬಿಪಿಎಲ್ ಕಾರ್ಡ್‌ನಿಂದ ಎಪಿಎಲ್ ಕಾರ್ಡ್‌ಗೆ ವರ್ಗಾವಣೆಯಾದ ಕಾರ್ಡ್‌ದಾರರು ಈ ಯೋಜನೆಗೆ ಅನರ್ಹರಾಗಿರುತ್ತಾರೆ. ಇವರು ಹೊಸದಾಗಿ ಅರ್ಜಿ ಸಲ್ಲಿಸಿದರೂ ಅರ್ಹ ಫಲಾನುಭವಿಗಳೆಂದು ಪರಿಗಣಿಸಲಾಗುವುದಿಲ್ಲ.


Click it and Unblock the Notifications
